ಅಲೋಕ (6) - ಭೋಜನ
ಅಲೋಕ (6) - ಭೋಜನ
ಕತೆ : ಅಲೋಕ
ಬಟ್ಟೆಗಳನ್ನು ಒಳತಂದು ಸಾಲು ಸಾಲಾಗಿ ಜೋಡಿಸುವಾಗಲೆ ಅವನು ಪುನಃ ನನ್ನ ಹಿಂದೆ ಕಾಣಿಸಿದ. ಅವನ ಮುಖದಲ್ಲಿ ಮೆಚ್ಚುಗೆಯ ನಗೆ ನೆಲೆಸಿರುವಂತೆ ಕಾಣಿಸಿತು. ನಾನು ಎಲ್ಲ ಬಟ್ಟೆಗಳನ್ನು ಜೋಡಿಸುವ ತನಕ ಅವನು ನನ್ನ ಜೊತೆ ನಿಂತಿದ್ದ.
ನಂತರ
‘ನಿಮ್ಮ ಈ ದಿನದ ಭೋಜನ ಬರುತ್ತಲಿದೆ , ಬನ್ನಿ ಹೋಗೋಣ’ ಎಂದ
ನನಗೆ ಒಂದು ರೀತಿ ಆಶ್ಚರ್ಯವೆನಿಸಿತು. ಅಲ್ಲ ಭೋಜನಕ್ಕೆ ಬನ್ನಿ ಎಂದರೆ ಒಂದು ತರ ಸರಿಯಾಯಿತು. ಆದರೆ ಇವನಾದರೊ ಭೋಜನ ಬರುತ್ತಿದೆ ಬನ್ನಿ ಅನ್ನುತ್ತಿದ್ದಾನಲ್ಲ.
ಬರುತ್ತಿದೆ ಅಂದರೆ ಎಲ್ಲಿಂದ ?. ನನಗೆ ಅರ್ಥವಾಗಲಿಲ್ಲ. ‘ಸರಿ’ ಎಂದುಕೊಳ್ಳುತ್ತ ಅವನ ಹಿಂದೆ ಹೊರಟೆ.
ನನಗೆ ಸಾಕಷ್ಟು ಆಯಾಸ ಅನ್ನಿಸುತ್ತ ಇತ್ತು. ಬೆಳಗಿನಿಂದ ಅಷ್ಟೊಂದು ಜನರ ಕಾಲು ಒತ್ತುತ್ತ ಸೇವೆ ಮಾಡುತ್ತ ಇದ್ದದ್ದು, ನಂತರ ಅಷ್ಟೊಂದು ಬಟ್ಟೆಗಳನ್ನು ಒಗೆದು ಅಯಾಸಪಟ್ಟಿದ್ದೆ. ಈಗ ಎಂತದೋ ಭೋಜನವಂತೆ ನೋಡೋಣ.
ಮಾರ್ಗಮದ್ಯದಲ್ಲಿ ಅವನು ನುಡಿದ
‘ಈ ರೀತಿ ಮೊದಲ ದಿನವೆ ಬಟ್ಟೆಗಳನ್ನೆಲ್ಲ ಶುಭ್ರಗೊಳಿಸಿದವರು ಈಚಿನ ದಿನಗಳಲ್ಲಿ ಯಾರು ಇಲ್ಲ. ಬಟ್ಟೆಗಳ ರಾಶಿ ನೋಡುವಾಗಲೆ ಕಂಗೆಡುತ್ತಿದ್ದರು. ನಂತರ ಹೊರಗೆ ವೈತರಣೀ ನದಿಯ ಮಲಿನ ನೀರನ್ನು ಕಾಣುವಾಗಲೇ ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದರು. ನೀವು ಮೊದಲ ದಿನವೇ ಪೂರೈಸಿದ ಕಾರ್ಯಗಳನ್ನು ಕಂಡು ಪಿತೃಗಳೆಲ್ಲ ಸಂತಸಗೊಂಡಿದ್ದಾರೆ ‘ ಎಂದು ತಿಳಿಸಿದ.
ನನಗೂ ಹೆಮ್ಮೆ ಹಾಗು ಸಮಾದಾನ ಅನ್ನಿಸಿತು.
ಒಂದು ವಿಶಾಲವಾದ ಭವನ ತಲುಪಿದೆವು. ನಾನು ಊಟಕ್ಕೆ ತುಂಬಾ ಜನ ಇರ್ತಾರೇನೊ ಅಂದುಕೊಂಡಿದ್ದೆ, ನೋಡಿದರೆ ಪೂರ್ಣವಾದ ಭವನದಲ್ಲಿ ನಾನೊಬ್ಬನೆ ಇದ್ದೆ . ಮತ್ಯಾರು ಕಾಣಿಸಲಿಲ್ಲ. ಅವನು ನನಗೊಂದು ಆಸನ ತೋರಿಸಿದ, ಅದರಲ್ಲಿ ಕುಳಿತುಕೊಳ್ಳಿ ಎಂದು ತಿಳಿಸಿ ಹೊರಟುಹೋದ.
ನನಗೆ ವಿಸ್ಮಯ ಅನ್ನಿಸಿತು. ಅಲ್ಲ ಇದೆಂತದು ಭೋಜನ ಅನ್ನುತ್ತ ಕೂಡಿಸಿಹೋದ, ಇಲ್ಲಿಯಾದರೋ ಬಡಿಸುವವರು ಇಲ್ಲ , ಅಡುಗೆ ಮಾಡಿದ ಲಕ್ಷಣವೇ ಇಲ್ಲವಲ್ಲ ಅನ್ನಿಸಿತು. ಕುಳಿತ ಜಾಗದಲ್ಲಿಯೆ ನನಗೆಂತದೋ ಜೊಂಪು. ಅಂತಹುದೆ ತೂಕಡಿಕೆಯಲ್ಲಿ ನನಗೆ ಅದೇನೊ ಇಲ್ಲಿ ನನ್ನೊಬ್ಬನೇ ಅಲ್ಲವೇನೊ ಮತ್ತೆ ಕೆಲವರು ಇರಬಹುದಾ ಅನ್ನಿಸಿತು.
ಯಾವುದೋ ದ್ವನಿ ಕೇಳಿಸುತ್ತ ಇತ್ತು. ಏನದು ? ಗಮನವಿಟ್ಟು ಕೇಳಿದೆ. ಯಾರೋ ಜೋರಾಗಿ ಹೇಳುತ್ತಿದ್ದ ಹಾಗಿತ್ತು..ಅದೇನು..
ಪಿತಾಮಹ ಕೃಷ್ಣಪ್ಪ ಶರ್ಮಾಣಾಂ …
... .... ... ...
……. ... .... ..... ...
ಪ್ರಪಿತಾಮಹ ಲಕ್ಷ್ಮೀನಾರಯಣಪ್ಪ ಶರ್ಮಾಣಾಂ……
…
ಇದೇನಿದು, ಇದ್ಯಾವ ಮಂತ್ರೋತ್ಚಾರಣೆ ನನಗೇಕೆ ಕೇಳಿಸುತ್ತಿದೆ , ಅಷ್ಟಕ್ಕೂ ಈ ಹೆಸರುಗಳೆಲ್ಲ ಕೇಳಿರುವಂತಿದೆಯಲ್ಲ..
ತಕ್ಷಣ ಮನಸಿಗೆ ಹೊಳೆದುಬಿಟ್ಟಿತು.
‘ಓಹೋ ಇದು ನನಗಾಗಿ ಭೂಮಿಯಲ್ಲಿ ಮಾಡುತ್ತಿರುವ ಶ್ರಾದ್ಧ !!!! ತಿಥಿ !!!
ಮತ್ತೆ ಗಮನವಿಟ್ಟು ಕೇಳಿದಂತೆ ಸುತ್ತಲ ಬೆಳಕು ಸಹಾ ಜಾಸ್ತಿ ಆಗುತ್ತಿದೆ ಅನ್ನಿಸಿತು.
‘ಹೌದು ನನ್ನ ಮೊದಲ ವರ್ಷದ ಶ್ರಾದ್ಧ ನಡೆಯುತ್ತಿದೆ, ಹಾಗು ಈಗ ಬ್ರಾಹ್ಮಣಭೋಜನ ನಡೆಯುತ್ತಿದೆ..’
ನನಗೆ ಇಲ್ಲಿ ಒಂದು ದಿನ ಕಳೆದ ಭಾವನೆ ಮೂಡಿದ್ದರೆ ಅಲ್ಲಿ ಭೂಮಿಯಲ್ಲಿ ಒಂದು ವರ್ಷವೇ ಕಳೆದುಹೋಗಿರುವಂತಿದೆ. ನಾನೀಗ ಯೋಚನಾಶೂನ್ಯನಾಗಿ ಸುಮ್ಮನೆ ಕುಳಿತೆ. ಅಲ್ಲಿ ವೈಧೀಕದ ಕಾರ್ಯಗಳು ಮುಗಿಯುತ್ತ ಇರುವಂತೆ ನನ್ನಲ್ಲಿ ಶಕ್ತಿ ಸಂಚಯವಾಗುತ್ತಿರುವಂತೆ ಅನ್ನಿಸಿತು. ತೀವ್ರವಾಗಿ ಅನ್ನಿಸುತ್ತಿದ್ದ ಬಾಯರಿಕೆ ಸಹ ಮಾಯವಾಗಿತ್ತು. ದೇಹ ಹಗುರವಾಗಿ, ನಿದ್ದೆ ಎಳೆದಂತಾಗಿ ಮನ ವಿಶ್ರಾಂತಿ ಬಯಸುತ್ತಿತ್ತು. ಕುಳಿತಂತೆ ಆಸನದಲ್ಲಿ ಹಾಗೆ ಹಿಂದಕ್ಕೆ ಒರಗಿದೆ.
ನಿದ್ದೆ ನನ್ನನ್ನು ಆವರಿಸಿತು.
ಮುಂದುವರೆಗಿದೆ...
Comments
ಉ: ಅಲೋಕ (6) - ಭೋಜನ
ಸೊಗಸಾದ ತಿರುವು / ಕಲ್ಪನೆ - ಶ್ರಾದ್ದದ ಪಿಂಡಾರ್ಪಣೆಯ ನಂಬಿಕೆಯನ್ನು ಆತ್ಮದ ಭೋಜನವಾಗಿ ಬಳಸಿಕೊಂಡ ರೀತಿ - ಭಲೆ ಕ್ರಿಯೇಟೀವ್ ಐಡಿಯಾ :-)
ಉ: ಅಲೋಕ (6) - ಭೋಜನ
ಪಾರ್ಥಸಾರಥಿಗಳಿಗೆ ವಂದನೆಗಳು
ಅಲೋಕದ ಭೋಜನ ರೀತಿಯನ್ನು ನವಿರಾಗಿ ಬೆರಗಾಗುವಂತೆ ನಿರೂಪಿಸಿದ್ದೀರಿ ಜೊತೆಗೆ ಭೂಮಿಯ ಮೇಲಿನ ನಮ್ಮ ಕರ್ಮಾನುಷ್ಟಾನಗಳನ್ನು ಆಯಾ ಸಂದರ್ಬಕ್ಕೆ ತಕ್ಕಂತೆ ಉದಾಹರಿಸುತ್ತ ಸಾಗುವ ಅನನ್ಯ, ಬರಹ ಖುಷಿ ನೀಡಿತು ಧನ್ಯವಾದಗಳು.
ಉ: ಅಲೋಕ (6) - ಭೋಜನ
ಕುತೂಹಲಕರವಾಗಿದೆ. ಮುಂದುವರೆಯಲಿ.