ಅಲ್ಪಾನ್ಸೋ ಮಾವು ಬೆಳೆಸೋ ನೋವು
ಹವಾಮಾನ ಬದಲಾವಣೆಯ ಗಾಢ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ವರುಷ (2023) ಬೇಸಗೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣತೆ 40 ಡಿಗ್ರಿ “ಸಿ” ಆಸುಪಾಸಿನಲ್ಲಿದೆ ಎಂಬುದೇ ಇದಕ್ಕೊಂದು ಪುರಾವೆ.
ಇಂತಹ ಪರಿಸ್ಥಿತಿಯಲ್ಲಿ , ಜನಪ್ರಿಯ ಅಲ್ಪಾನ್ಸೋ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕಿರುನೋಟ ಇಲ್ಲಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಅಲ್ಪಾನ್ಸೋ ಮಾವು ಬೆಳೆಗಾರರಿಗೆ ಕಳೆದೊಂದು ದಶಕದ ವಿಪರೀತ ವಾತಾವರಣ ಬದಲಾವಣೆಯಿಂದ ಆಗಿರುವ ಫಸಲು ಹಾಗೂ ಆದಾಯ ನಷ್ಟ ಅಸಾಧಾರಣ. “ಮಾವುಗಳ ರಾಜ” ಎಂದು ಹೆಸರುವಾಸಿಯಾಗಿರುವ ಅಲ್ಪಾನ್ಸೋದ ಬಹುಪಾಲು ಫಸಲು ಸಿಗುವುದು ರತ್ನಗಿರಿಯ 65,000 ಹೆಕ್ಟೇರು ತೋಟಗಳಿಂದ. ಆದರೆ ಕಳೆದ ಒಂದು ದಶಕದಲ್ಲಿ ವಾತಾವರಣ ಬದಲಾವಣೆ ಮತ್ತು ಸಸ್ಯಪ್ರಚೋದಕ ರಾಸಾಯನಿಕಗಳ ಸಿಂಪಡಣೆ ಅಲ್ಲಿನ ಮಾವಿನ ಫಸಲಿಗೆ ನೀಡಿರುವ ಹೊಡೆತ ದೊಡ್ದದು.
ಅಲ್ಲಿನ ಉಷ್ಣತೆಯ ಏರುಪೇರಿನ ಪರಿಣಾಮ ಪವಾಸ್ ಗ್ರಾಮದ ಬೆಳೆಗಾರರೂ ಅಲ್ಪಾನ್ಸೋ ಮಾವಿನ ಪ್ರಧಾನ ರಫ್ತುದಾರರೂ ಆಗಿರುವ ಆನಂದ ದೇಸಾಯಿ ಅವರ ಮಾತಿನಲ್ಲಿ: “ಅತಿ ಬಿಸಿ ಅಥವಾ ಅತಿ ತಂಪಿನ ಹವಾಮಾನದಿಂದ ಅಲ್ಪಾನ್ಸೋ ಮಾವಿನ ಮರಗಳ ಹೂಬಿಡುವಿಕೆಗೆ ತೊಂದರೆ. ಅದರಿಂದಾಗಿ ಇಳುವರಿಗೂ ತೊಂದರೆ. ಮುಂಚೆ ಉಷ್ಣತೆಯ ಏರುಪೇರು ಅಪರೂಪ. 2008ರಿಂದೀಚೆಗೆ ಪ್ರತೀ ವರುಷ ಹೀಗಾಗುತ್ತಿದೆ.”
ಉದಾಹರಣೆಗೆ, ಮುಂಚೆ ಜನವರಿಯಲ್ಲಿ ಅಲ್ಲಿನ ಕನಿಷ್ಠ ಉಷ್ಣತೆ 18 ಡಿಗ್ರಿ “ಸಿ”ಯಿಂದ 20 ಡಿಗ್ರಿ “ಸಿ”. ಈಗ ಅದು 14 ಡಿಗ್ರಿ “ಸಿ”ಯಿಂದ 15 ಡಿಗ್ರಿ “ಸಿ”ಗೆ ಕುಸಿದಿದೆ (ಮಾವಿನ ಮರಗಳು ಅತ್ಯಧಿಕ ಹೂ ಬಿಡುವುದು ಜನವರಿಯಲ್ಲಿ). ಈ ಕಾರಣದಿಂದಾಗಿ ಹೂ ಮೂಡುವುದು ಬಂಪರ್. ಆದರೆ ಬಹುಪಾಲು ಹೂಗಳು ಉದುರಿಹೋಗಿ ಮಾವಿನ ಮರಗಳಲ್ಲಿ ಹಣ್ಣುಗಳು ಬೆಳೆಯೋದಿಲ್ಲ ಎನ್ನುತ್ತಾರೆ ದೇಸಾಯಿ. ಈ ದುಷ್ಪರಿಣಾಮಗಳನ್ನು ರತ್ನಗಿರಿಯ ದಾಪೋಲಿಯ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಮುಖ್ಯಸ್ಥರಾದ ಪಿ.ಎಂ. ಹಲದನಕರ್ ಒಪ್ಪುತ್ತಾರೆ,
ಬೇಸಗೆಯಲ್ಲಿ ರತ್ನಗಿರಿಯಲ್ಲಿ ಉಷ್ಣತೆ 30 ಡಿಗ್ರಿ “ಸಿ” ದಾಟುತ್ತಿರಲಿಲ್ಲ. ಆದರೆ ಈಗ ಫೆಬ್ರವರಿ – ಮಾರ್ಚ್ ತಿಂಗಳುಗಳಲ್ಲೇ ಉಷ್ಣತೆ 33 ಡಿಗ್ರಿ “ಸಿ”ಗಿಂತ ಅಧಿಕ ಎನ್ನುತ್ತಾರೆ ಹಲದನಕರ್. ಫೆಬ್ರವರಿ ಕೊನೆಯಲ್ಲಿ ಉಷ್ಣತೆ 35 ಡಿಗ್ರಿ “ಸಿ” ದಾಟಿದರೆ, ಅದರಿಂದ 2ನೇ ಸುತ್ತಿನ ಹೂ ಬಿಡುವಿಕೆಗೆ ತೊಂದರೆ; ಅದಲ್ಲದೆ ಮೊದಲ ಸುತ್ತಿನ ಹೂಗಳಿಂದ ಮೂಡಿದ ಮಾವಿನ ಮಿಡಿಗಳೆಲ್ಲ ಉದುರುತ್ತವೆ.
ಪೂರ್ಣಘಡ ಗ್ರಾಮದ ಶ್ರೀರಾಮ ಫಡ್ಕೆ ಪ್ರಕಾರ, ಹೆಚ್ಚಿನ ಉಷ್ಣತೆಯಿಂದಾಗಿ ಹಣ್ಣುಗಳಲ್ಲಿ ಕಪ್ಪು ಕಲೆಗಳು ಮೂಡುತ್ತವೆ. ಅಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣತೆಗಳ ಅಂತರ ಹೆಚ್ಚುತ್ತಿದೆ. ಮಾತ್ರವಲ್ಲ, ದಿನದಿಂದ ದಿನಕ್ಕೆ ಉಷ್ಣತೆಯ ಏರಿಳಿತ ವಿಪರೀತ. ಸ್ಥಳೀಯ ಹವಾಮಾನ ಇಲಾಖೆಯ ಎಸ್.ಪಿ. ಭಟ್ಕರ್ ಹೇಳುವಂತೆ, ಕಳೆದ ಎರಡು ವರುಷಗಳಲ್ಲಿ ದಿನದಿಂದ ದಿನಕ್ಕೆ 2ರಿಂದ 4 ಡಿಗ್ರಿ “ಸಿ” ಉಷ್ಣತೆಯ ಏರಿಕೆ ಕಂಡುಬಂದಿದೆ.
ಇವೆಲ್ಲದರ ಒಟ್ಟು ಪರಿಣಾಮ ಕೀಟಗಳ ದಾಳಿ. ಇದು ಕೆಲವು ದಶಕಗಳ ಮುಂಚೆ ಕಂಡುಕೇಳರಿಯದ ವಿದ್ಯಮಾನ. ಉದಾಹರಣೆಗೆ, ಫೆಬ್ರವರಿಯಲ್ಲಿ ಮಾವಿನ ಜಿಗಿ ಹುಳದ ದಾಳಿಯಿಂದಾಗಿ ರತ್ನಗಿರಿ ಜಿಲ್ಲೆಯಲ್ಲಿ ಮಾವಿನ ಮರಗಳ ಹೂಗೊಂಚಲುಗಳೆಲ್ಲ ಕಪ್ಪಾಗುವ ವಿದ್ಯಮಾನ. ಜೊತೆಗೆ, ಮಾವಿನ ಹಣ್ಣುಗಳಿಗೆ ಥ್ರಿಪ್ಸ್ ಕೀಟ ದಾಳಿ. ಇವೆರಡು ಕೀಟ ದಾಳಿಯಿಂದಾಗಿ ಮಾವಿನ ಬೆಳೆ ನೆಲ ಕಚ್ಚುತ್ತದೆ ಎನ್ನುತ್ತಾರೆ ಆನಂದ ದೇಸಾಯಿ. “ನನ್ನ 12,000 ಮಾವಿನ ಮರಗಳಿಂದ ಪ್ರತಿ ವರುಷ 400 ಟನ್ ಫಸಲು ಸಿಗುತ್ತಿತ್ತು. ಕಳೆದ ದಶಕದಲ್ಲಿ ಅದು 200 ಟನ್ನಿಗೆ ಕುಸಿದಿದೆ” ಎಂಬ ನೋವು ಅವರದು.
ಇಂತಹ ಸನ್ನಿವೇಶದಲ್ಲಿ ಮಾವಿನ ಬೆಳೆಗಾರರು ಏನು ಮಾಡಬೇಕು? ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿ ಹಲದನಕರ್ ಅವರ ಉತ್ತರ ಹೀಗಿದೆ, “ಮಾವಿನ ಬೆಳೆಗಾರರು ಅನುಸರಿಸಬೇಕಾದ ನಿರ್ದಿಷ್ಟ ಕೃಷಿಕ್ರಮಗಳನ್ನು ಸೂಚಿಸಿದ್ದೇವೆ. ಮರಗಳ ರೆಂಬೆಗಳನ್ನು ಕತ್ತರಿಸುವುದು (ಪ್ರೂನಿಂಗ್), ಸಸ್ಯಬೆಳವಣಿಗೆ ನಿಯಂತ್ರಕ ಪಾಕ್ಲೋಪುಟ್ರಜೋಲ್ ಸಿಂಪಡಣೆ, ಗೊಬ್ಬರ ಒದಗಿಸುವಿಕೆ, ಕೀಟ ಮತ್ತು ರೋಗಗಳ ನಿಯಂತ್ರಣ.” ಇವನ್ನು ಪಾಲಿಸುವ ಬೆಳೆಗಾರರ ಬೆಳೆ ನಷ್ಟ ಇತರರ ಬೆಳೆನಷ್ಟಕ್ಕಿಂತ ಕಡಿಮೆ ಎಂದು ತಮ್ಮ ಶಿಫಾರಸನ್ನು ಅವರು ಸಮರ್ಥಿಸುತ್ತಾರೆ.
ಆದರೆ, ಬೆಳೆಗಾರರ ಪ್ರಕಾರ ಈ ಕೃಷಿಕ್ರಮಗಳು ಪರಿಣಾಮಕಾರಿಯಲ್ಲ. ಹಿರಿಯ ಕೃಷಿಕ ಅಪ್ಪಾ ಪಾತ್ರೆ ಕೇಳುತ್ತಾರೆ, “ಎಷ್ಟು ವರುಷ ಇವನ್ನೆಲ್ಲ ಮಾಡಲು ನಮಗೆ ಸಾಧ್ಯ? ಪ್ರತಿ ವರುಷ ಏನಾದರೊಂದು ಹೊಸ ಸಮಸ್ಯೆ. ಅದರ ಪರಿಹಾರಕ್ಕಾಗಿ ಹೆಚ್ಚು ಖರ್ಚು. ಥ್ರಿಪ್ಸಿಗೆ ಸ್ಪ್ರೇ ಮಾಡಲಿಕ್ಕಾಗಿ 90,000 ರೂಪಾಯಿ ಕಳೆದುಕೊಂಡೆ. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಮಾವಿನ ಇಳುವರಿಯೂ ಸಿಗಲಿಲ್ಲ.”
ಅಲ್ಪಾನ್ಸೋ ಮಾವಿನ ಬೆಳೆಗಾರರಿಗೆ ಇದರ ಕೃಷಿ ಲಾಭದಾಯಕವಲ್ಲ ಎಂದು ತೋರುತ್ತಿದೆ. ಕಳೆದ 10 ವರುಷಗಳಲ್ಲಿ ಅಲ್ಪಾನ್ಸೋದ ವ್ಯವಸಾಯ ವೆಚ್ಚದಲ್ಲಿ ಆಗಿರುವ ಹೆಚ್ಚಳ ಶೇಕಡಾ 40. ಆದರೆ ಅಲ್ಪಾನ್ಸೋ ಮಾವಿನ ಬೆಲೆ ಗಣನೀಯವಾಗಿ ಹೆಚ್ಚಾಗಿಲ್ಲ. ಈಗ ಅವರಿಗೆ ಎರಡು ಆಯ್ಕೆಗಳಿವೆ: ತಮ್ಮ ಪಾರಂಪರಿಕ ಕೃಷಿಪದ್ಧತಿಯಲ್ಲಿ ಅಲ್ಪಾನ್ಸೋ ತೋಟಗಳ ನಿರ್ವಹಣೆ. ಅಥವಾ, ಅಲ್ಪಾನ್ಸೋ ಮಾವಿನ ಕೃಷಿ ಕೈಬಿಟ್ಟು, ಬೇರೊಂದು ಸೂಕ್ತ ಬೆಳೆಯ ಕೃಷಿ ಕೈಗೆತ್ತಿಕೊಳ್ಳುವುದು. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುತ್ತಾರೆ. ಆದರೆ ಕೃಷಿಯಲ್ಲಿ ಪ್ರಕೃತಿ ಎಲ್ಲವನ್ನೂ ನಿರ್ಧರಿಸುತ್ತದೆ, ಅಲ್ಲವೇ?