ಅಲ್ಪಾಯುಷಿ ಮಹಾನ್ ಸಾಧಕರು (ಭಾಗ ೨)

ಅಲ್ಪಾಯುಷಿ ಮಹಾನ್ ಸಾಧಕರು (ಭಾಗ ೨)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೊ. ಗೀತಾ ಶ್ರೀನಿವಾಸನ್ ಮತ್ತು ಕೃತ್ತಿಕಾ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೮೫.೦೦, ಮುದ್ರಣ: ಡಿಸೆಂಬರ್ ೨೦೧೭

ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೫ ಮಹನೀಯರ ಪರಿಚಯವನ್ನು ಈ ಪುಸ್ತಕದಲ್ಲಿ ಮಾಡಿಕೊಡಲಾಗಿದೆ. 

‘ಅನನ್ಯ’ ಬಳಗದ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ. ಆರ್ ವಿ ರಾಘವೇಂದ್ರ ಇವರು ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ನುಡಿಯಾದ ‘ಅಪರೂಪದ ದಾಖಲಾತಿ'ಯಲ್ಲಿ ಹೇಳುವುದು ಹೀಗೆ-

“ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಕುರಿತು ಆಯಾ ಕಾಲಘಟ್ಟದಲ್ಲಿ ದಾಖಲಿಸುವುದು ಅಮೂಲ್ಯವಾದ ಕಾರ್ಯ. ಯಾವುದೇ ಸಂದರ್ಭದಲ್ಲಿಯಾದರೂ ಈ ಪ್ರಕ್ರಿಯೆ ನಡೆಯದೆ ಹೋದರೆ ಸಾಧನೆಗಳು ಜನರ ಮನಸ್ಸಿಂದ ಸುಲಭವಾಗಿ ಮರೆಯಾಗಿ ಹೋಗುತ್ತವೆ. ಒಂದು ವ್ಯಕ್ತಿಯ ಸಾಧನೆಯನ್ನು ನೋಡುವ ಪರಿಯಲ್ಲಿಯೇ ಮತ್ತಷ್ಟು ವಿಷಯಗಳು ತಮಗೆ ತಾವೇ ತೆರೆದುಕೊಳ್ಳುತ್ತವೆ.

ಇದನ್ನೇ ಮುಂದುವರಿಸಿ, ಓದುಗರಿಗೆ ಬಹಳ ಪ್ರಿಯವಾಗುವ ಎರಡು ಬರವಣಿಗೆಗಳೆಂದರೆ ಮೈಸೂರು ವಾಸುದೇವಾಚಾರ್ಯರ 'ನಾ ಕಂಡ ಕಲಾವಿದರು' ಹಾಗೂ ಡಿವಿಜಿಯವರ 'ಕಲೋಪಾಸಕರು'. ಇವು ಓದುಗರ ಮುಂದೆ ಅಂದಿನ ಸನ್ನಿವೇಶದ ಚಿತ್ರಣವನ್ನು ನೀಡುತ್ತವೆ. ಇದೇ ದಿಕ್ಕಿನಲ್ಲಿ ಸಾಗುವ ಮತ್ತೊಂದು ಬರಹ ಪ್ರೊ. ಗೀತಾ ಶ್ರೀನಿವಾಸನ್ ಮತ್ತು ಕೃತ್ತಿಕಾರವರು ನೀಡುತ್ತಿರುವ ' ಅಲ್ಪಾಯುಷಿ ಮಹಾನ್ ಸಾಧಕರು-೨' ( ಸಂಗೀತ ಕ್ಷೇತ್ರದಲ್ಲಿ). ಮೈಸೂರು ವಾಸುದೇವಾಚಾರ್ಯರ ಹಾಗೂ ಡಿವಿಜಿ ಅವರ ಬರಹಗಳಲ್ಲಿ ಕಲಾವಿದರು ಸಮಯದ, ಘಟನೆಗಳ ಪಾತ್ರಧಾರಿಗಳಾಗುತ್ತಾ, ಸನ್ನಿವೇಶದೊಂದಿಗೆ ಕಲಾವಿದನ ಸಾಧನೆಗಳು ಓದುಗರಿಗೆ ಗೋಚರವಾಗುತ್ತಾ ಹೋಗುತ್ತವಾದರೆ, ಈ ಪುಸ್ತಕದಲ್ಲಿ ಲೇಖಕಿಯರು ಬಲ್ಲವರ ಹಾಗೂ ಲಭ್ಯವಿರುವ ಬರವಣಿಗೆಯ ಮೂಲಕ ನಮಗೆ ಸಾಧಕರನ್ನು ಹತ್ತಿರಕ್ಕೆ ತರುತ್ತಾರೆ. ಈ ಪುಸ್ತಕದಲ್ಲಿರುವವರು ಸಂಗೀತ ಕ್ಷೇತ್ರ ಕಂಡಿರುವ ದೈತ್ಯಪ್ರತಿಭೆಗಳು. ಇಲ್ಲಿ ಮನಮಿಡಿಯುವುದು, ಈ ಎಲ್ಲಾ ಸಾಧಕರು, ಶಿರೋನಾಮೆ ತಿಳಿಸುವಂತೆ ಅತಿ ಕಡಿಮೆ ಅವಧಿಯಲ್ಲಿ ಉತ್ತುಂಗಕ್ಕೇರಿ ನಮ್ಮನಗಲಿದವರು. ಎಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಸಾಧನೆ, ಜೀವನ ಚಿತ್ರಣ ಮತ್ತು ಅವರನ್ನು ರಸಿಕರ ಬಳಿ ಎಳೆದು ತಂದ ವಿಷಯಗಳನ್ನು ಲೇಖಕಿಯರು ಮುಂದಿಡುತ್ತಾರೆ.

ಸುಲಭವಾಗಿ ಓದಿಕೊಳ್ಳುವ, ಸರಳ ಭಾಷೆಯಲ್ಲಿ ಪ್ರಸ್ತುತಗೊಂಡಿರುವ, ಈ ಪುಸ್ತಕವು ಲೇಖಕರು ಹೇಳುವಂತೆ ' ಸಾಧನೆಯಿಂದ ಅಮರರಾದ ಕೆಲವು ಸಂಗೀತಗಾರರಿಗೆ' ಸಲ್ಲಲೇ ಬೇಕಾದ ನಮನ. ಅಚ್ಚುಕಟ್ಟಾಗಿ ಕೆಲಸವನ್ನು ನಿರ್ವಹಿಸಿರುವ. ಪ್ರೊ. ಗೀತಾ ಶ್ರೀನಿವಾಸನ್ ಮತ್ತು ಕೃತ್ತಿಕಾರವರು ಅಭಿನಂದನಾರ್ಹರು. ಕಡಿಮೆ ಅವಧಿಯಲ್ಲಿ ಬೃಹತ್ ಸಾಧನೆ ಮಾಡಿದ ಸಂಗೀತ ಕ್ಷೇತ್ರದ ನಕ್ಷತ್ರಗಳಿಗೆ ಸಲ್ಲಿಸಿರುವ ನುಡಿನಮನವು, ಬೆರಗು ಹುಟ್ಟಿಸುವಂತೆ ಮಾಡುವ, ಕಣ್ಣಂಚಿನಲ್ಲಿ ಹನಿ ಕಾಣುವಂತೆ ಮಾಡುವ ಗುಣಗಳನ್ನು ಹೊಂದಿ ಸಾಧನೆಯ ಹಾದಿಯಲ್ಲಿ ಇರುವವರನ್ನು ಸಾಧನೆ ಮಾಡಲು ಪ್ರೇರೇಪಿಸುತ್ತದೆ." ಎಂದಿದ್ದಾರೆ.

ಬಿಟಿಎಂ ಕಲ್ಚರಲ್ ಅಕಾಡೆಮಿ ಇದರ ಅಧ್ಯಕ್ಷರಾದ ಅನಂತರಾಮ್ ಕೆ ಎನ್ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಪುಸ್ತಕದ ಲೇಖಕಿಯರಲ್ಲಿ ಓರ್ವರಾದ ಗೀತಾ ಶ್ರೀನಿವಾಸನ್ ಇವರು ತಮ್ಮ ಮಾತಾದ ' ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ...' ಇಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇವರು ಹೇಳುವ ಹಾಗೆ. " ಈ ಜೀವನವೆಂಬ ಪಯಣ ಅತ್ಯಂತ ರೋಮಾಂಚಕಾರಿಯಾದದ್ದು. ಇಲ್ಲಿಂದ ಬಹುಬೇಗ ನಿರ್ಗಮಿಸಿರುವ ಜನ ಹಲವರು. ಅಂಥವರಲ್ಲಿ ಕಲಾವಿದರ, ಅದರಲ್ಲೂ ಸಂಗೀತಗಾರರ ಅಲ್ಪಾಯುಷಿ ಜೀವನ ಮನಮಿಡಿಯುವಂತೆ ಮಾಡುತ್ತದೆ. ಪ್ರಸ್ತುತ ಸಂಗ್ರಹದಲ್ಲಿ ಅಲ್ಪಾಯುಷಿ ಎಂದರೆ ಕೇವಲ ೪೫ ವರ್ಷಗಳು ಅಥವಾ ಅದಕ್ಕಿಂತ ಕಮ್ಮಿ ಬದುಕಿ ಬಾಳಿದ ಸಂಗೀತಕಾರರ ಬಗ್ಗೆ ಬರೆದಿದ್ದೇನೆ. ಇಲ್ಲಿ ಸಂಗೀತಕಾರರು ಎಂಬ ಪದವನ್ನು ಸ್ಥೂಲವಾಗಿ ಉಪಯೋಗಿಸಿದ್ದೇನೆ. ಇಲ್ಲಿ ಹಾಡುಗಾರರು, ವಾದ್ಯಗಳನ್ನು ನುಡಿಸುವವರು, ವಾಗ್ಗೇಯಕಾರರು, ಯೋಗಿಗಳು ಹಾಗೂ ದಾಸಕೂಟದಲ್ಲಿದ್ದು ಯತಿಗಳಾಗಿ, ಹರಿದಾಸರಾಗಿ ಕೀರ್ತನೆಗಳನ್ನು ರಚಿಸಿದವರು, ಹರಿಭಕ್ತರು, ಶಿವಭಕ್ತಿಯರು ಸೇರಿದ್ದಾರೆ. ಇಲ್ಲಿ ಇಂತಹ ತಮ್ಮ ಸಾಧನೆಯಿಂದ ಅಮರರಾದ ಕೆಲವು ಸಂಗೀತಗಾರರನ್ನು ನೆನಪಿಸಿಕೊಂಡು ಅವರಿಗೆ ನನ್ನ ನಮನವನ್ನು ಅರ್ಪಿಸುತ್ತಿದ್ದೇನೆ." ಎಂದಿದ್ದಾರೆ.

ಪುಸ್ತಕದ ಪರಿವಿಡಿಯಲ್ಲಿ ಅಕ್ಕಮಹಾದೇವಿ, ಗೋಪಾಲನಾಯಕ, ನರಸರಾಜ ಒಡೆಯರ್, ಗೋಪಾಲದಾಸರು, ಮೋಹನದಾಸರು, ದೊರೆಸ್ವಾಮಿ ಅಯ್ಯರ್, ಶಿವಯೋಗಿ ಸ್ವಾಮಿಗಳು, ವಡಿವೇಲು, ಸ್ವಾತಿ ತಿರುನಾಳ್, ಚಿನ್ನ ದೇವುಡು, ಅಣ್ಣಾಮಲೈ ರೆಡ್ಡಿಯಾರ್, ಶರಭ ಶಾಸ್ತ್ರಿ, ನಾರಾಯಣಸ್ವಾಮಿ ನಾಯ್ಡು, ವೈದ್ಯನಾಥ ಅಯ್ಯರ್, ಪುಷ್ಪವನಮ್ ಅಯ್ಯರ್, ಅಂಬಾಬಾಯಿ, ಬೆಳಗೆರೆ ಜಾನಕಮ್ಮ, ವಸಂತ ಕೋಕಿಲಂ, ಜಾನ್ ಹಿಗಿನ್ಸ್ ಭಾಗವತರ್, ಬಿ ಎನ್ ಸುರೇಶ್, ಜಿ ಹರಿಶಂಕರ್, ಜಿ ವಿ ಅತ್ರಿ, ಯು ಶ್ರೀನಿವಾಸ, ರಾಜು ಅನಂತಸ್ವಾಮಿ, ರಂಜನಿ ಹೆಬ್ಬಾರ್ ಮೊದಲಾದ ಪ್ರತಿಭಾವಂತ ೨೫ ಅಲ್ಪಾಯುಷಿಗಳು ಸಾಧನೆಗಳ ವಿವರಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ೧೧೪ ಪುಟಗಳ ಈ ಪುಸ್ತಕವು ಮಾಹಿತಿಪೂರ್ಣ ಹಾಗೂ ಸಂಗ್ರಹಯೋಗ್ಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.