ಅಲ್ಲಿ ಇಲ್ಲಿ ಹೆಕ್ಕಿ ತಂದ ಕಥೆಗಳು..

ಅಲ್ಲಿ ಇಲ್ಲಿ ಹೆಕ್ಕಿ ತಂದ ಕಥೆಗಳು..

ಕನಸಿನಲ್ಲಿ ಮೃತರಾದ ಮಕ್ಕಳು

ಬೆಸ್ತ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ನಂತರ ಮಗನು ಜನಿಸಿದನು. ಹುಡುಗನು ತಂದೆ-ತಾಯಿಯರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿದ್ದನು. ಒಂದು ದಿನ ಅವನು ತೀವ್ರವಾದ ಕಾಯಿಲೆಗೆ ಗುರಿಯಾಗಿ, ಸಾಕಷ್ಟು ಹಣವನ್ನು ಔಷಧಿಗಾಗಿ ಖರ್ಚು ಮಾಡಿದರೂ ಮೃತನಾದನು. 

ತಾಯಿಯ ಹೃದಯ ಒಡೆದು ಹೋಯಿತು. ತಂದೆಯ ಕಣ್ಣು ಮಾತ್ರ ತೇವವಾಗಲಿಲ್ಲ. ಅವನಿಗೆ ದುಃಖವಾಗದುದನ್ನು ಗಮನಿಸಿ ಪತ್ನಿಯು ನಿಂದಿಸಿದಳು. ಆಗ ಬೆಸ್ತನು ‘ನಾನು  ಏಕೆ ಅಳುತ್ತಿಲ್ಲವೆಂದು ಹೇಳುತ್ತೇನೆ ಕೇಳು. ನಿನ್ನೆ ರಾತ್ರಿ ಕನಸಿನಲ್ಲಿ ನಾನು ರಾಜನಾಗಿದ್ದೆ ಮತ್ತು ಎಂಟು ಬಲಿಷ್ಟ ಮಕ್ಕಳ ತಂದೆಯಾಗಿದ್ದೆ. ಆಗ ಇದ್ದಕ್ಕಿದ್ದಂತೆ ನನಗೆ ಎಚ್ಚರವಾಯಿತು. ಈಗ ನನಗೆ ಆ ಎಂಟು ಮಕ್ಕಳಿಗಾಗಿ ಅಳಬೇಕೋ ಅಥವಾ ಈ ಮಗನಿಗೋ ಎಂದು ಗೊಂದಲವಾಗಿದೆ' ಎಂದನು.

***

ಗುರುವಿನ ಬೆಕ್ಕು

ಗುರುವು ತನ್ನ ಶಿಷ್ಯರೊಂದಿಗೆ ಪೂಜೆಗೆ ಕುಳಿತಾಗಲೆಲ್ಲಾ ಅಶ್ರಮದ ಬೆಕ್ಕು ಬಂದು ಅವರ ಏಕಾಗ್ರತೆಗೆ ಭಂಗ ತರುತ್ತಿತ್ತು. ಆದ್ದರಿಂದ ಆಶ್ರಮದಲ್ಲಿ ಪ್ರಾರ್ಥನೆ ನಡೆಯುವಾಗ ಅದನ್ನು ಕಟ್ಟಿ ಹಾಕಲು ಆಜ್ಞಾಪಿಸಿದನು.

ಗುರುವು ಸತ್ತ ಬಳಿಕವೂ ಪೂಜಾ ಸಮಯದಲ್ಲಿ ಬೆಕ್ಕನ್ನು ಕಟ್ಟುವುದನ್ನು ಮುಂದುವರೆಸಲಾಯಿತು. ಆ ಬೆಕ್ಕು ಸತ್ತ ಬಳಿಕ ಮತ್ತೊಂದು ಬೆಕ್ಕನ್ನು ಆಶ್ರಮಕ್ಕೆ ಕರೆತಂದರು. ಹೀಗೆ ಪೂಜಾ ಕಾಲದಲ್ಲಿ ಗುರುವಿನ ಆಜ್ಞೆಯನ್ನು ವಿಧೇಯತೆಯಿಂದ ಪಾಲಿಸುವುದನ್ನು ಧೃಢಪಡಿಸಿದರು.

ಶತ-ಶತಮಾನಗಳು ಉರುಳಿದವು. ಪೂಜೆ ಮಾಡುವಾಗ ಬೆಕ್ಕನ್ನು ಕಟ್ಟುತ್ತಿದ್ದ ಆರಾಧನಾ ವಿಧಿಯ ಮಹತ್ವದ ಬಗ್ಗೆ ಗುರುವಿನ ಮೇಧಾವಿ ಶಿಷ್ಯರು ಮಹಾನ್ ಗ್ರಂಥಗಳನ್ನು ರಚಿಸಿದರು.

(ಮೇಲಿನ ಎರಡೂ ಕಥೆಗಳನ್ನು ಆಂಗ್ಲ ಆಧ್ಯಾತ್ಮಿಕ ಬರಹಗಾರ ಆಂಥೋನಿ ಡಿಮೆಲ್ಲೋ ಎಸ್. ಜೆ. ‘ದಿ ಸಾಂಗ್ ಆಫ್ ದಿ ಬರ್ಡ್' ಕೃತಿಯಿಂದ ಆಯ್ದುಕೊಳ್ಳಲಾಗಿದೆ.)

*** 

ಇಲ್ಲಿರುವುದು ನಮ್ಮನೆ, ಅಲ್ಲಿ ಹೋಗುವುದು ಸುಮ್ಮನೆ…

ಆತ, ಇದ್ದ ಸ್ಥಳದಿಂದ ಕದಲಿದವನಲ್ಲ. ಹೆಚ್ಚೆಂದರೆ, ಪ್ರತೀ ಸಂಜೆ ಗಾವುದ ದೂರದ ನದೀದಡಕ್ಕೆ ಹೋಗುತ್ತಾನೆ. ಒಮ್ಮೆಯೂ ನದಿಯನ್ನು ಉತ್ತರಿಸಿದವನಲ್ಲ. ಉತ್ತರಿಸಬೇಕೆಂದು ಅನ್ನಿಸಿದ್ದೂ ಇಲ್ಲ. ಗುಡ್ಡ ಹತ್ತಿಳಿದದ್ದಂತೂ ಇಲ್ಲವೇ ಇಲ್ಲ. ನದಿಯ ಆಚೆ ಕಡೆ ನಡೆಯುವ ಸಂತೆಗೆ ಹೋದವರು ಮರಳಿ ಬರುತ್ತ ಇವನೊಂದಿಗೆ ಮಾತಿಗೆ ನಿಂತರೂ ನಿಂತಾರು. ‘ಹೇಗಿದೆ ಪೇಟೆಧಾರಣೆ' ಎಂದೆಲ್ಲ ಮಾತು ಬಂದರೂ ಬಂದೀತು.

ಒಮ್ಮೆ ಒಬ್ಬಾತ ಅವನಲ್ಲಿ ಕೇಳುತ್ತಾನೆ “ ನಿನಗೆ ನದಿಯ ಆಚೆದಡಕ್ಕೆ ಹೋಗುವ ಆಶೆಯಿಲ್ಲವೇ?’

“ಇಲ್ಲ, ಎಲ್ಲವೂ ಇವೆಯಲ್ಲ - ಇಲ್ಲಿಯೇ”

“ಹಾಗೆಂದರೆ?”

“ಇಲ್ಲಿರುವುದೇ ಅಲ್ಲಿರುವುದು, ಅಲ್ಲಿರುವುದೇ ಇಲ್ಲಿರುವುದು! ಹಕ್ಕಿ ಮರಗಿಡ, ಗಾಳಿ ಆಕಾಶ ಎಲ್ಲವೂ” 

ಮತ್ತೆ ಮಾತು ಮುಂದುವರೆಯಲಿಲ್ಲ. 

(ಮೇಲಿನ ಝೆನ್ ಕಥೆಯನ್ನು ತುಷಾರ ಪತ್ರಿಕೆಯಿಂದ ಸಂಗ್ರಹಿಸಲಾಗಿದೆ)

***

ಚಿತ್ರ ಕೃಪೆ: ಅಂತರ್ಜಾಲ ತಾಣ