ಅಳಿಯುವ ಮುನ್ನ ‘ಕದ್ರಿ’ ಮಾವು ತಿನ್ನಿ !

ಎರಡು -ಮೂರು ದಶಕಗಳ ಹಿಂದೆ ಮಂಗಳೂರಿನಲ್ಲಿ ಮಾವು, ಹಲಸು ಸೀಸನ್ ಆರಂಭವಾದೊಡನೆಯೇ ಮಾರುಕಟ್ಟೆಗೆ ಹಲವಾರು ಸ್ಥಳೀಯ, ಕಾಡು ತಳಿಯ ಮಾವಿನ ಹಣ್ಣುಗಳು ಬರುತ್ತಿದ್ದವು. ಸ್ಥಳೀಯವಾಗಿ ಬೆಳೆದ ನೆಕ್ಕರೆ, ಮುಂಡಪ್ಪ, ಬಾದಾಮಿ, ಬಳ್ಳಾರಿ ಅಥವಾ ಬೆಳ್ಳಾರಿ, ಕದ್ರಿ, ನೀಲಂ, ಕಾಳಪ್ಪಾಡಿ ಹೀಗೆ ಹತ್ತು ಹಲವು ತಳಿಯ ಮಾವಿನ ಹಣ್ಣುಗಳು ಸಿಗುತ್ತಿದ್ದವು. ಯಾವುದೇ ರಾಸಾಯನಿಕಗಳನ್ನು ಬಳಸದೇ ಹಣ್ಣು ಮಾಡಿರುತ್ತಿದ್ದ ಈ ಹಣ್ಣುಗಳ ಸ್ವಾದ ಮರೆಯಲಾರದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಮೇಲಿನ ಪಟ್ಟಿಯಲ್ಲಿರುವ ಬಹುತೇಕ ಮಾವಿನ ಹಣ್ಣಿನ ಮರಗಳು ನೇಪಥ್ಯಕ್ಕೆ ಸರಿದು ಹೋಗಿವೆ. ಅವುಗಳು ನಗರೀಕರಣದ ಭರಾಟೆಗೆ ಸಿಕ್ಕಿ ಕತ್ತರಿಸಲ್ಪಟ್ಟು, ಯಾರದ್ದೋ ಮನೆಯ ಟೇಬಲ್ ಆಗಿಯೋ, ಒಲೆಯ ಸೌದೆಯಾಗಿಯೋ ಉಪಯೋಗಿಸಲ್ಪಟ್ಟಿದೆ.
ಇದು ನಮ್ಮ ದೊಡ್ಡ ದುರಂತ. ನೂರಾರು ವರ್ಷಗಳ ಮರವೊಂದು ಕೇವಲ ರಸ್ತೆ ಅಗಲೀಕರಣ ಅಥವಾ ಕಟ್ಟಡ ನಿರ್ಮಾಣದಂತಹ ಕಾರಣಗಳಿಗಾಗಿ ಕಡಿದು ಮೂಲೆಗೆ ಸೇರುವುದು ಬಹುದೊಡ್ಡ ಅಪರಾಧ. ಜಪಾನ್ ಮುಂತಾದ ಹಲವು ದೇಶಗಳಲ್ಲಿ ಈ ರೀತಿಯಾಗಿ ವಿನಾ ಕಾರಣ ಮರವನ್ನು ಕಡಿದರೆ ಸಂಬಂಧ ಪಟ್ಟವರು ಜೈಲಿಗೆ ಹೋಗಬೇಕಾಗುತ್ತಿತ್ತು. ಅವರಿಗೆ ಪರಿಸರದ ಬಗ್ಗೆ ಅಷ್ಟು ಕಾಳಜಿ ಇದೆ. ಆದರೆ ನಮ್ಮವರಿಗೆ ಮರ ಎಂದರೆ ನಿರ್ಲಕ್ಷ್ಯ. ಸೆಖೆ, ಬಿಸಿಲು ಜೋರು ಅಂತ ಮಾತನಾಡಲು ಮಾತ್ರ ಯಾವುದೇ ಅಡ್ಡಿ ಇಲ್ಲ. ಒಂದು ಮರದ ನೆರಳು ನೀಡುವ ತಂಪು ಅನುಭವ ವಿಶ್ವದ ಯಾವುದೇ ಎಸಿ ನೀಡಲಾರದು.
ಮಂಗಳೂರಿನ ಕದ್ರಿ ಎನ್ನುವ ಪರಿಸರದಲ್ಲಿ ಒಂದು ಕಾಲದಲ್ಲಿ ಈ ಕದ್ರಿ ತಳಿಯ ಮಾವಿನ ಮರಗಳು ಹೇರಳವಾಗಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. ಈ ಕಾರಣದಿಂದಲೇ ಆ ತಳಿಗೆ ಕದ್ರಿ ಎನ್ನುವ ಹೆಸರು ಬಂದಿರಬಹುದೇನೋ? ಈ ಕದ್ರಿ ಪ್ರದೇಶದಲ್ಲಿಯೇ ಇತಿಹಾಸ ಪ್ರಸಿದ್ಧ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವಿದೆ. ಜೋಗಿ ಮಠ, ಪಾಂಡವರ ಗುಹೆ, ಸೀತಾ ಬಾವಿ, ಕದ್ರಿ ಉದ್ಯಾನವನ ಎಲ್ಲವೂ ಇದೆ. ಈಗ ಕದ್ರಿ ಪರಿಸರದಲ್ಲಿ ಈ ಮಾವಿನ ಮರಗಳು ತುಂಬಾ ಕಡಿಮೆಯಾಗಿವೆ. ಮುಗಿಲೆತ್ತರಕ್ಕೆ ಬೆಳೆದ ಮರಗಳಲ್ಲಾಗುವ ಮಾವಿನ ಕಾಯಿಗಳನ್ನು ಬೇಡಿಕೆ ಇದ್ದರೂ ಕೊಯ್ಯುವವರು ಇಲ್ಲ. ಹೆಚ್ಚಿನ ಮಜೂರಿ ಕೊಟ್ಟು ಮಾವಿನ ಹಣ್ಣುಗಳನ್ನು ತೆಗೆದು ಮಾರುಕಟ್ಟೆಗೆ ಮಾರಲು ಒಯ್ದಾಗ ದರ ತುಂಬಾ ಜಾಸ್ತಿ ಎನ್ನುವ ತಕರಾರು. ಎಲ್ಲೋ ಬೆಳೆದ, ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿದ ಮಾವಿನ ಹಣ್ಣುಗಳಿಗೆ ಸಾವಿರಾರು ರೂಪಾಯಿ ನೀಡಲು ಸಿದ್ಧವಿರುವ ಮಂದಿ ನಮ್ಮ ಊರಲ್ಲೇ ಬೆಳೆದ, ನಮ್ಮವರೇ ಮಾರುವ ಮಾವಿನ ಹಣ್ಣುಗಳನ್ನು ಕೊಳ್ಳುವುದಿಲ್ಲ ಅದೇ ದುರಂತ. ಜಪಾನ್ ಮೂಲದ ಮಿಯಾಜಾಕಿ ಎನ್ನುವ ಮಾವಿನ ಹಣ್ಣಿಗೆ ಕೆಜಿಗೆ ೨.೫ ರಿಂದ ೩ಲಕ್ಷ ಕೊಡಲು ತಯಾರಿರುವ ಮಂದಿ ಸ್ಥಳೀಯ ಮಾವಿನ ಹಣ್ಣಿಗೆ ಯಾವುದೇ ಬೆಲೆ ಕೊಡುವುದಿಲ್ಲ.
ಹಸಿರು ಹೊರಮೈ, ಹಳದಿ ತಿರುಳು: ಈ ಕದ್ರಿ ತಳಿಯ ಮಾವಿನ ಹಣ್ಣಿಗೆ ಬೇರೆ ಯಾವ ಹೆಸರು ಇರುವುದು ನನಗೆ ತಿಳಿಯದು. ಈ ಮಾವಿನ ಕಾಯಿ ಮಾಗಿದರೂ ಹೊರ ಮೈ ಹಳದಿಯಾಗುವುದಿಲ್ಲ. ಈ ಕಾರಣದಿಂದ ಕದ್ರಿ ಮಾವಿನ ಹಣ್ಣಿನ ಹೊರ ನೋಟ ಆಕರ್ಷಕವಾಗಿ ಕಾಣಿಸುವುದಿಲ್ಲ. ಇದರ ಆಕಾರ ಬೇರೆ ತಳಿಗಳ ಮಾವಿನ ಹಣ್ಣಿನಂತಿರದೇ ವಿಭಿನ್ನವಾಗಿರುತ್ತದೆ. ಈ ಮಾವಿನ ಕಾಯಿ ಹಣ್ಣಾದಾಗ ಇದರ ದಟ್ಟ ಹಸಿರು ಬಣ್ಣದ ಹೊರಮೈ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಉತ್ತಮ ಸುವಾಸನೆ ಇರುತ್ತದೆ. ಕತ್ತರಿಸಿದಾಗ ಹಳದಿ ಬಣ್ಣದ ತಿರುಳು. ಚೆನ್ನಾಗಿ ಹಣ್ಣಾದ ಕದ್ರಿ ಮಾವಿನ ಹಣ್ಣನ್ನು ತಿನ್ನುವುದೇ ಒಂದು ಮಹದಾನಂದ. ಈ ಹಣ್ಣಿನ ಸಿಪ್ಪೆಯೂ ಸಿಹಿಯಾಗಿರುವುದರಿಂದ ಅದನ್ನೂ ತಿನ್ನಬಹುದು. ಕೆಲವು ಮಾವಿನ ಹಣ್ಣಿನ ತೊಟ್ಟಿನ ಸುತ್ತಲು ತಿಳಿ ಕೆಂಪು ಬಣ್ಣ ಮೂಡಿರುತ್ತದೆ. ಇಲ್ಲವಾದಲ್ಲಿ ಇದು ಗಾಢವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ. ರುಚಿ ಮಾತ್ರ ಸ್ವರ್ಗ ಸುಖವನ್ನು ಸವಿದ ಅನುಭವವನ್ನು ಕೊಡುತ್ತದೆ.
ಕದ್ರಿ ಮಾವಿನ ಹಣ್ಣು ಅಪರೂಪಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುತ್ತದೆ. ಸಿಕ್ಕಿದಾಗ ಕೂಡಲೇ ಖರೀದಿಸಿಬಿಡಿ. ಈ ವರ್ಷ ಇದರ ದರ ಕೆ ಜಿಗೆ ೧೬೦-೧೮೦ರೂ ಇದೆ. ಮುಂದಿನ ವರ್ಷ ಇನ್ನಷ್ಟು ಹೆಚ್ಚಾಗಬಹುದು. ಮುಂದಿನ ವರ್ಷಗಳಲ್ಲಿ ಹೆಚ್ಚು ಹಣ ಕೊಟ್ಟರೂ ಕದ್ರಿ ಮಾವಿನ ಹಣ್ಣು ಸಿಗಲಾರದು ಎನ್ನುವ ಪರಿಸ್ಥಿತಿಯೂ ಬರಬಹುದು. ನರ್ಸರಿಯವರು ಈ ಹಣ್ಣಿನ ಗಿಡಗಳನ್ನು ಕಸಿ ಕಟ್ಟಿ ಮಾರಾಟ ಮಾಡಿದರೆ ಇನ್ನಷ್ಟು ಮಂದಿಯ ತೋಟದಲ್ಲಿ ಈ ಮಾವಿನ ಹಣ್ಣು ಬೆಳೆದೀತು. ಈಗಾಗಲೇ ಸ್ಥಳೀಯ ನೆಕ್ಕರೆ, ಕಾಟು ಮಾವಿನ ಹಣ್ಣುಗಳು, ಮುಂಡಪ್ಪ ಮಾವಿನಹಣ್ಣುಗಳು ಅಳಿಯುತ್ತಾ ಬಂದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳೀಯ ತಳಿಗಳು ಕಾಣೆಯಾಗುವ ಸಾಧ್ಯತೆ ಇವೆ. ಬನ್ನಿ, ಕದ್ರಿ ಮಾವಿನ ಹಣ್ಣನ್ನು ಮುಂದಿನ ಜನಾಂಗಕ್ಕೆ ಉಳಿಸುವ…