ಅಳಿಲು ಸೇವೆ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ...

ಅಳಿಲು ಸೇವೆ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ...

ಈ ಕ್ಷಣದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ರಾಸಾಯನಿಕ ಅಸ್ತ್ರಗಳ ಪ್ರಯೋಗದ ಮಾತುಗಳು ಕೇಳಿಬರುತ್ತಿದೆ. ರಷ್ಯಾದ ಹತಾಶೆ ಉಕ್ರೇನ್ ನ ಪ್ರತಿರೋಧ ನ್ಯಾಟೋದ ಅಸಹನೆ ಹೆಚ್ಚಾಗುತ್ತಿದೆ. ಈ ಭಾವನೆಗಳು ನಿಧಾನವಾಗಿ ವಿವಿಧ ರೂಪ ಪಡೆಯಲು ಪ್ರಾರಂಭಿಸಿವೆ. ಲಕ್ಷ ಲಕ್ಷ ಜನಗಳು  ವಲಸೆ ಹೋಗುತ್ತಿದ್ದಾರೆ. ಬಹುಶಃ ಯುದ್ದ ಇನ್ನಷ್ಟು ದಿನಗಳು ನಡೆದರೆ ನ್ಯಾಟೋ ನೇರವಾಗಿಯೇ ರಷ್ಯಾದ ಮೇಲೆ ಯುದ್ದ ಸಾರಬಹುದು. ಆಗ ರಷ್ಯಾ ಅಣು ಬಾಂಬಿನ ಪ್ರಯೋಗಕ್ಕೆ ಮುಂದಾಗಬಹುದು. ಅದಕ್ಕೆ ಪ್ರತಿಯಾಗಿ ರಷ್ಯಾ ಸಹ ಪರಮಾಣು ಬಾಂಬಿನ ದಾಳಿಗೆ ಒಳಗಾಗಬಹುದು.

ಆಗಬಹುದು ಎಂಬ ಊಹೆ ತುಂಬಾ ದೂರವಿಲ್ಲ. ಒಂದೊಂದೇ ಆಗುತ್ತಿದೆ. ಈಗ ನಾವುಗಳು ಮೌನವಾಗಿದ್ದರೆ ಯುದ್ಧದ ದುಷ್ಪರಿಣಾಮಗಳು ಬೇಗ ನಮ್ಮನ್ನು ಆವರಿಸಬಹುದು. ವಿಶ್ವಸಂಸ್ಥೆಯೋ ಅಥವಾ ಯಾವುದೋ ದೇಶದ ನಾಯಕರೋ ಯುದ್ದ ನಿಲ್ಲಿಸಬಹುದು ಎಂದು ಕಾಯುತ್ತಾ ಕುಳಿತರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಈ ಭೂಮಿಯ ಮೇಲೆ ಅಂದಾಜು ಸುಮಾರು 750 ಕೋಟಿ ಮನುಷ್ಯ ಪ್ರಾಣಿಗಳು ವಾಸಿಸುತ್ತಿದ್ದಾರೆ. ಈ ಭೂಮಿಗೆ ಲಕ್ಷಾಂತರ ವರ್ಷಗಳ  ಇತಿಹಾಸವಿದೆ. ಮನುಷ್ಯ ಜೀವಿಗೆ ಸಾವಿರಾರು ವರ್ಷಗಳ ಅನುಭವವೂ ಇದೆ. ಒಳ್ಳೆಯದು ಕೆಟ್ಟದ್ದು ವಿನಾಶಕಾರಿಯಾದದ್ದು ಎಲ್ಲದರ ಅರಿವೂ ಇದೆ. ಎರಡು ಮಹಾಯುದ್ಧಗಳು ಮತ್ತು ಅದು ಮಾಡಿದ ಅನಾಹುತಗಳ ನೆನಪು ಇದೆ.

ಈಗ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಹೀಗೆ ಮುಂದುವರೆದರೆ ಯಾವ ಪರಿಣಾಮ ಬೀರಬಹುದು ಎಂಬ ಮುನ್ಸೂಚನೆಯೂ ಇದೆ. ಆದರೂ ನಾವುಗಳು ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಅಥವಾ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಮೌನವಾಗಿದ್ದೇವೆ. ಇದು ಯಾರೋ  ಸರ್ಕಾರದ ಮಟ್ಟದ ನಾಯಕರು ಮಾಡಬೇಕಾದ ಕೆಲಸ ಎಂದು ನಿರ್ಲಕ್ಷಿಸಿದ್ದೇವೆ.

" ಯುದ್ದ ಒಂದು ಅಪರಾಧ " ( War is a crime ) ಅಂಥ ಒಂದು ಅಪರಾಧ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವಾಗ ನಾವು ಮೌನವಾಗಿರುವುದು ಸಹ ಒಂದು ಅಪರಾಧ. ಈ ಅಪರಾಧಕ್ಕೆ ಬಹುದೊಡ್ಡ ಶಿಕ್ಷೆ ಅನುಭವಿಸಬೇಕಾಗಬಹುದು ಎಚ್ಚರ. ಬಹುಶಃ ನನ್ನ ನಿರೀಕ್ಷೆಯ ಪ್ರಕಾರ ಈಗಾಗಲೇ ರಷ್ಯಾ ಮತ್ತು ಉಕ್ರೇನ್ ನ ಬಹುತೇಕ ಜನ ಯುದ್ಧದ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ಧ್ವನಿ ಎತ್ತಬೇಕಾಗಿತ್ತು. ಅಲ್ಲಿನ ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗಿತ್ತು. ಅದಕ್ಕೆ ಭಾರತ ಅಮೆರಿಕ ಯೂರೋಪ್ ಆಫ್ರಿಕಾ ಆಸ್ಟ್ರೇಲಿಯಾ ಸೇರಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಜನರು ಧ್ವನಿಗೂಡಿಸಬೇಕಾಗಿತ್ತು.

ಆದರೆ ಏಕೋ ಶಾಂತಿಯ ಧ್ವನಿಗಳು ಅಡಗಿವೆ. ಹಿಂಸೆ ದ್ವೇಷದ ಮನಸ್ಸುಗಳು ಕೂಗಾಡುತ್ತಿವೆ. ದೌರ್ಜನ್ಯಕ್ಕೆ ಒಳಗಾದ ಜನರು ದೇಶ ಬಿಟ್ಟು ಓಡುತ್ತಿದ್ದಾರೆ. ಬಂದೂಕು ಬಾಂಬು ಮಿಸೈಲುಗಳು ನಗರಗಳಲ್ಲಿ ಮೊಳಗುತ್ತಿವೆ. ಗಾಯಾಳುಗಳು ರಸ್ತೆಗಳಲ್ಲಿ ನರಳುತ್ತಿದ್ದಾರೆ. ನಕ್ಕು ನಲಿದು ಜೀವಿಸ ಬೇಕಾಗಿದ್ದ ಮನುಷ್ಯ ಪ್ರಾಣಿಗಳು ಕಣ್ಣ ಮುಂದೆಯೇ ಶವವಾಗುತ್ತಿವೆ. ಒಮ್ಮೆ ಯೋಚಿಸಿ ನೋಡಿ… ಇಂದಲ್ಲಾ ನಾಳೆ ಯುದ್ದ ನಿಲ್ಲುತ್ತದೆ. ಈ ಕ್ಷಣದಲ್ಲಿ ಇರುವ ಸಾಮರ್ಥ್ಯ ಗಮನಿಸಿದರೆ ಉಕ್ರೇನ್ ಸೋತು ಶರಣಾಗಬಹುದು ಅಥವಾ ಮೂರನೇ ಮಹಾಯುದ್ಧ ಸಂಭವಿಸಿದರೆ ರಷ್ಯಾ ಸಹ ಸೋಲಬಹುದು. ಆದರೆ ಅದಕ್ಕೆ ಮೊದಲು ಆಗಬಹುದಾದ ಅನಾಹುತ ಎಷ್ಟು?

ಆ ಅನಾಹುತದ ನಂತರ ಯುದ್ದ ನಿಂತರೆ ಪ್ರಯೋಜನವೇನು. ಅದಕ್ಕೆ ಮೊದಲೇ ಒಂದಷ್ಟು ಹೊಂದಾಣಿಕೆ ಪ್ರದರ್ಶಿಸಿ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಬಹುದಲ್ಲವೇ? ಈ ಭೂಮಿಯ ಮೇಲೆ ವಾಸಿಸುತ್ತಿರುವುದು ಮನುಷ್ಯರೋ ರಾಕ್ಷಸರೋ ಅರ್ಥವಾಗುತ್ತಿಲ್ಲ. ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಜೀವ ಸಂಕುಲಕ್ಕೂ ಕಂಟಕ ಪ್ರಾಯವಾಗಿದ್ದಾರೆ. ವೈರಸ್ಗೆ ಹೆದರಿ ಲಾಕ್ ಡೌನ್ ಮಾಡಿಕೊಳ್ಳುವ ಮೂರ್ಖರು ಬಾಂಬು ಬಂದೂಕು ಹಿಡಿದು ಒಬ್ಬರಿಗೊಬ್ಬರು ಕೊಂದುಕೊಳ್ಳುತ್ತಾರೆ. ಇದು ತುಂಬಾ ಹಾಸ್ಯಾಸ್ಪದ. ದಯವಿಟ್ಟು ಈ ಸಮೂಹ ಸಂಪರ್ಕ ಕ್ರಾಂತಿಯ ಸಮಯದಲ್ಲಿ ನಾವುಗಳು ಯುದ್ಧ ನಿಲ್ಲಿಸಲು ಏನು ಮಾಡಬಹುದು ಯೋಚಿಸಿ. ವಿಶ್ವದ ಸಾಕಷ್ಟು ಜನರನ್ನು ಯಾವ ರೀತಿ ಸಂಪರ್ಕಿಸಿ ಎಲ್ಲರೂ ಒಟ್ಟಾಗಿ ಯುದ್ಧ ವಿರೋಧಿ ಪ್ರತಿಭಟನೆ ಅಥವಾ ಪ್ರದರ್ಶನಗಳ ಮುಖಾಂತರ ಆಡಳಿತಗಾರ ಮೇಲೆ ಒತ್ತಡ ಹೇರುವ ಸಾಧ್ಯತೆ ಪರಿಶೀಲಿಸಿ. ಬಹುದೊಡ್ಡ ಆಘಾತ ಈ ಭೂಮಿಯ ಮೇಲೆ ನಡೆಯುವ ಮುನ್ನ ಅದನ್ನು ತಡೆಯಲು ಪ್ರಯತ್ನಿಸೋಣ…

ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಖಂಡಿತ. ನಮ್ಮ ಮಕ್ಕಳು ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ. ಒಳ್ಳೆಯತನ ಎಂಬುದು ಕೇವಲ ತಿಳಿವಳಿಕೆಯಲ್ಲ ಅದು ನಡವಳಿಕೆ. ಧರ್ಮ ಎಂಬುದು ಭೌತಿಕ ಆಚರಣೆಯಲ್ಲ ಅದು ಜೀವನ ವಿಧಾನ. ಜೀವ ತೆಗೆಯಲು ಒಂದು ಪರಮಾಣುವಿಗೆ ಸಾಧ್ಯವಾಗುವುದಾದರೆ ಜೀವ ಉಳಿಸಲು ಒಬ್ಬ ಮನುಷ್ಯನಿಗೆ ಸಾಧ್ಯವಿಲ್ಲವೇ? ರಾಮಾಯಣ ಗ್ರಂಥದಲ್ಲಿ ಪ್ರಸ್ತಾಪವಾಗಿರುವ ಅಳಿಲಿನ ಸೇವೆಯನ್ನು ನೆನಪು ಮಾಡಿಕೊಳ್ಳುತ್ತಾ,  ಏನನ್ನಾದರೂ ಮಾಡುವ ಯೋಚನೆಯಲ್ಲಿ…

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ