ಅಳಿವಿನಂಚಿನಲ್ಲಿವೆ ಕೊಟ್ಟಿಗೆಹಾರದ ಡ್ಯಾನ್ಸಿಂಗ್ ಫ್ರಾಗ್ಸ್
"ಈ ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಕೊಟ್ಟಿಗೆಹಾರ ಗ್ರಾಮದಲ್ಲಿ ಮೊದಲು ಗುರುತಿಸಿದ ಸ್ಮರಣಾರ್ಥ ಈ ಕಪ್ಪೆಗೆ ಕೊಟ್ಟಿಗೆಹಾರ ಎಂಬ ಹೆಸರನ್ನು ಸೇರಿಸಲಾಗಿದೆ. ಇದೀಗ ಕೊಟ್ಟಿಗೆಹಾರದ ಡ್ಯಾನ್ಸಿಂಗ್ ಫ್ರಾಗ್ಸ್ ಅಳಿವಿನಂಚಿನಲ್ಲಿವೆ " ಎನ್ನುವುದು ನನ್ನಂತೆ ಇಲ್ಲಿಯ ಹಲವಾರು ಸ್ಥಳೀಯರ ಅನಿಸಿಕೆ. ಈ ಡ್ಯಾನ್ಸಿಂಗ್ ಫ್ರಾಗ್ಸ್ ಬಗ್ಗೆ ಹೇಳುವುದಾದರೆ...
ವೈಜ್ಞಾನಿಕ ಹೆಸರು: Micrixalus kottigeharensis ( ಮಿಕ್ರಿಕ್ಸಾಲಸ್ ಕೊಟ್ಟಿಗೆಹಾರೆನ್ಸಿಸ್)
ಕುಟುಂಬ: Micrixalidae (ಮಿಕ್ರಿಕ್ಸಾಲಿಡೆ)
ಸ್ಥಳೀಯ ನಾಮಧೇಯ: Kottigehara Dancing Frog, (ಕೊಟ್ಟಿಗೆಹಾರದ ನೃತ್ಯಗಾರ ಕಪ್ಪೆ)
ಸಸ್ಯ ಶಾಸ್ತ್ರದ ವಿದ್ಯಾರ್ಥಿಯಾದ ನಾನು ಹೀಗೆ ಒಮ್ಮೆ ಸುಮ್ಮನೆ ಕುತೂಹಲದಿಂದ ನಮ್ಮ ಊರಾದ ಮೂಡಿಗೆರೆ ಮತ್ತು ಸುತ್ತಮುತ್ತಲ ಊರುಗಳ ಹೆಸರಲ್ಲಿ ಯಾವುದಾದರು ವಿಶೇಷವಾದ ಸಸ್ಯ ಪ್ರಭೇಧಗಳನ್ನು ಗುರುತಿಸಲಾಗಿದೆಯೇ ಎಂದು ಹುಡುಕುತ್ತಿದ್ದೆನು. ಆಗ ನನಗೆ ಯಾವುದೇ ಸಸ್ಯಗಳನ್ನು ನಮ್ಮ ಊರಿನ ಹೆಸರು ನೀಡಿ ಗುರುತಿಸಿರುವಂತಹ ಉದಾಹರಣೆಗಳು ದೊರೆಯದಿದ್ದರೂ ಕೆಲವು ಉಭಯವಾಸಿಗಳ ಉದಾಹರಣೆಗಳು ದೊರೆತವು. ಆ ದೊರೆತ ಉದಾಹರಣೆಗಳ ಪೈಕಿ ನನ್ನನ್ನು ಹೆಚ್ಚು ಆಕರ್ಷಿಸಿದ ಆ ಉಭಯವಾಸಿಯೇ ‘ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್’ ಅರ್ಥಾತ್ ಕೊಟ್ಟಿಗೆಹಾರದ ನೃತ್ಯಗಾರ ಕಪ್ಪೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಜುಳು ಜುಳು ಹರಿಯುವ ಸ್ವಚ್ಛಂದ ನೀರಿನ ಮೂಲಗಳಲ್ಲಿ ಮಾತ್ರ ವಾಸಿಸುವ ಈ ಕಪ್ಪೆಗಳ ಪ್ರಭೇಧವೊಂದರ ತುಣುಕನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದ ಗಂಧದಗುಡಿ ಸಾಕ್ಷ್ಯಚಿತ್ರದಲ್ಲೂ ಕೂಡ ಕಾಣಬಹುದು.
ಈ ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಕೊಟ್ಟಿಗೆಹಾರ ಗ್ರಾಮದಲ್ಲಿ ಮೊದಲು ಗುರುತಿಸಿದ ಸ್ಮರಣಾರ್ಥ ಈ ಕಪ್ಪೆಗೆ ಕೊಟ್ಟಿಗೆಹಾರ ಎಂಬ ಹೆಸರನ್ನು ಸೇರಿಸಲಾಗಿದೆ. ಅಂತೆಯೇ ತಮ್ಮ ಸಂವಹನದ ಕಾರಣಕ್ಕಾಗಿ ಹಿಂಗಾಲನ್ನು ಎತ್ತಿ ಬೀಸುವ ಸ್ವಭಾವದಿಂದಾಗಿ ಡ್ಯಾನ್ಸಿಂಗ್ ಫ್ರಾಗ್ ಎಂದು ಇವುಗಳನ್ನು ಕರೆಯಲಾಗಿದೆ. ಈ ಕಪ್ಪೆಗಳು ಪಶ್ಚಿಮ ಘಟ್ಟದ ಸ್ವಚ್ಛಂದವಾಗಿ ಹರಿಯುವ ಹೊಳೆ, ಝರಿಗಳಲ್ಲಿ ಮಾತ್ರ ಕಂಡು ಬರುವ ಸ್ಥಳೀಯ (ಎಂಡೆಮಿಕ್) ಪ್ರಭೇಧಗಳಾಗಿದ್ದು, Micrixalidae (ಮಿಕ್ರಿಕ್ಸಾಲಿಡೆ) ಕುಟುಂಬಕ್ಕೆ ಸೇರಿರುತ್ತವೆ ಮತ್ತು Micrixalus kottigeharensis ( ಮಿಕ್ರಿಕ್ಸಾಲಸ್ ಕೊಟ್ಟಿಗೆಹಾರೆನ್ಸಿಸ್) ಎಂಬ ವೈಜ್ಞಾನಿಕ ನಾಮಧೇಯವನ್ನು ಹೊಂದಿವೆ.
ಮೊದಲೇ ಹೇಳಿದಂತೆ ಹೆಣ್ಣು ಸಂಗಾತಿಯನ್ನು ಆಕರ್ಷಿಸಲು ಇತರೆ ಕಪ್ಪೆಗಳಂತೆ ಕೇವಲ ವಟರ್ ವಟರ್ ಎಂಬ ಸದ್ದನಷ್ಟೇ ಅಲ್ಲದೇ ತಮ್ಮ ಹಿಂಭಾಗದ ಕಾಲನ್ನು ಬೀಸಿ ಆಕರ್ಷಿಸುವ ಈ ಕಪ್ಪೆಗಳು, ತನಗೆ ಸವಾಲೆಸೆಯಬಲ್ಲ ಗಂಡು ಕಪ್ಪೆಗಳನ್ನು ಒದ್ದೋಡಿಸಲು ಕೂಡ ಇದೇ ವಿಧಾನವನ್ನು ಬಳಸುತ್ತವೆ. 2.5 - 3.5 ಸೆಂ. ಮೀ. ನಷ್ಟು ಬೆಳೆಯುವ ಇವುಗಳ ಪೈಕಿ ಗಂಡಿಗಿಂತ ಹೆಣ್ಣು ಕಪ್ಪೆ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಕಂದು ಬಣ್ಣದ ನಯವಾದ ಮೇಲ್ಮೈಯ ಮೇಲೆ ಕಂಡು ಬರುವ ಗಾಢ ಕಂದು ಬಣ್ಣದ ಮಚ್ಚೆಗಳು, ಕುತ್ತಿಗೆಯ ಬಳಿ ಇರುವ ಬಿಳಿಯ ಬಣ್ಣದ ಗಾಯನ ಸಂಚಿ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನೀಳವಾದ ಹಿಂಗಾಲುಗಳು ಇವುಗಳ ಬಾಹ್ಯ ಶಾರೀರಿಕ ರಚನೆಯ ಪ್ರಮುಖ ಭಾಗಗಳಾಗಿವೆ.
ಈ ಪ್ರಭೇದದ ಕಪ್ಪೆಗಳು ಸಂಯೋಗಕ್ಕಿಂತ ಮೊದಲು ಗಂಡು ಮತ್ತು ಹೆಣ್ಣುಗಳೆರೆಡೂ ಭಿನ್ನವಾದ ತಮ್ಮದೇ ಶೈಲಿಯಲ್ಲಿ ಹಿಂಗಾಲಿನ ಚಲನೆಗಳ ಮೂಲಕ ಸಂಭಾಷಿಸುತ್ತವೆ. ಮತ್ತು ನೃತ್ಯವನ್ನು ಮಾಡುತ್ತವೆ. ಸಂಯೋಗದ ನಂತರ ಫಲಿತ ಅಂಡಾಣುಗಳನ್ನು ನಿಸರ್ಗವೇ ಪೋಷಿಸಲು ಸೂಕ್ತವಾದ ಜಾಗವನ್ನು ಹುಡುಕುವ ಹೆಣ್ಣು ಕಪ್ಪೆಯು ಸುಮಾರು 6-8 ಸೆಂ. ಮೀ. ಗಳಷ್ಟು ಆಳದ ಗುಂಡಿಯನ್ನು ನದಿ ನೀರಿನಲ್ಲಿ ಕೊಳೆಯುತ್ತಿರುವ ಎಲೆಗಳ ಹಾಸಿನಲ್ಲಿ ತೋಡುತ್ತವೆ. ಇಂತಹ ಅಂಡಾಣುಗಳು ಪ್ರಕೃತಿಯ ಹಸ್ತಕ್ಷೇಪ, ಮಾನವ ಹಸ್ತಕ್ಷೇಪ, ಪರಭಕ್ಷಕ ಜೀವಿಗಳ ಬೇಟೆ ಮುಂತಾದ ಸವಾಲುಗಳನ್ನು ಎದುರಿಸಿ ಮುಂದೆ ಗೊದ ಮೊಟ್ಟೆಗಳಾಗಿ ನಂತರ ಕಿರು ಬಾಲವುಳ್ಳ ಕಪ್ಪೆಗಳಾಗಿ ನಂತರ ವಯಸ್ಕ ಕಪ್ಪೆಗಳಾಗಿ ಬೆಳೆಯುತ್ತವೆ.
ಪಶ್ಚಿಮಘಟ್ಟದ ಮಳೆಕಾಡುಗಳ ಶುಭ್ರ ನೀರಿನ ಮೂಲಗಳಲ್ಲಿ ಮಾತ್ರ ಕಾಣಸಿಗುವ ಈ ಕಪ್ಪೆಗಳು ಕಾಡಿನ ಮೇಲಿನ ಹೆಚ್ಚಿನ ಮಾನವ ಹಸ್ತಕ್ಷೇಪದಿಂದಾಗಿ ತಮ್ಮ ವಾಸಸ್ಥಳವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಈಗಾಗಲೇ ತೀವ್ರ ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು IUCN ಕೆಂಪು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದ್ದರಿಂದ ಈ ಕಪ್ಪೆಯೊಂದೇ ಅಲ್ಲದೇ ಎಲ್ಲಾ ಜೀವ-ಜಂತುಗಳ ಆವಾಸ ಸ್ಥಾನವನ್ನು ರಕ್ಷಿಸಬೇಕಾದ ದೊಡ್ಡ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.
-ಅನುರಾಗ್ ಆರ್ ಗೌಡ, ಮೂಡಿಗೆರೆ