ಅಳಿವಿನ ಅಂಚಿನಿಂದ ಆಕಾಶಕ್ಕೇರಿದ ಗಿಡುಗ
“ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು ಮನುಷ್ಯನಿಗೆ ಸವಾಲೊಡ್ದುವ ಬೋಳು ತಲೆ ಗಿಡುಗ ಐದು ದಶಕಗಳ ಮುಂಚೆ ಅವಸಾನದ ಅಂಚು ತಲಪಿತ್ತು. “ಇನ್ನೇನು, ಅಳಿದೇ ಹೋಯಿತು” ಎಂಬ ಆತಂಕದಿಂದ ಪಕ್ಷಿ ಪ್ರೇಮಿಗಳೆಲ್ಲ ಗಿಡುಗವನ್ನುಳಿಸುವ ಕಾಯಕಕ್ಕೆ ಕೈಜೋಡಿಸಿದರು. ಅಂತೂ 2017ರ ಹೊತ್ತಿಗೆ “ಅಳಿವಿನಂಚಿನ ಪಕ್ಷಿಗಳ ಪಟ್ಟಿ"ಯಿಂದ ಬೋಳು ತಲೆ ಗಿಡುಗ ಹೊರಕ್ಕೆ “ಹಾರುವ" ಹೊತ್ತು ಬಂತು.
ಇದೆಲ್ಲ ರೋಚಕ ಕತೆ. 1782ರಲ್ಲಿ ಅಮೇರಿಕದ ಯುಎಸ್ಎ ದೇಶದ ಎರಡನೆಯ ಕಾಂಟಿನೆಂಟಲ್ ಕಾಂಗ್ರೆಸ್ ನಿರ್ಧಾರವೊಂದನ್ನು ಘೋಷಿಸಿತು: "ಅಪ್ರತಿಮ ಶಕ್ತಿ ಮತ್ತು ಅಧಿಕಾರದ ಸಂಕೇತವಾಗಿ ಬೋಳು ತಲೆ ಗಿಡುಗವನ್ನು ರಾಷ್ಟ್ರದ ಲಾಂಛನದಲ್ಲಿ ಸೇರ್ಪಡೆಗೊಳಿಸಲಾಗಿದೆ.”
ಇಂತಹ ಗಿಡುಗಕ್ಕೆ ಒಂದು ಶತಮಾನದಲ್ಲೇ ಕಾದಿತ್ತು ಕುತ್ತು. ಬಾನಿನ ವಿಸ್ತಾರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಾರಾಡುತ್ತಿದ್ದ ಗಿಡುಗಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ. 1950ರ ಹೊತ್ತಿಗೆ ಕೇವಲ 10 ಸಾವಿರ ಗಿಡುಗಗಳ ಜೋಡಿಗಳು (ಗಂಡು - ಹೆಣ್ಣು) ಉಳಿದಿವೆಯೆಂಬ ಅಂದಾಜು. ಬೇಟೆ, ಅರಣ್ಯ ನಾಶ ಮತ್ತು ರಾಸಾಯನಿಕ ವಿಷಗಳಿಗೆ ಸಾವಿರಾರು ಗಿಡುಗಗಳ ಬಲಿ. ತೋಳಗಳು ಹಾಗೂ ಇತರ ಪ್ರಾಣಿಗಳ ಪ್ರಾಣ ತೆಗೆಯಲು ಹಿಡುವಳಿದಾರರು ಇರಿಸಿದ ವಿಷದ ಮಾಂಸದ ತುಂಡು ತಿಂದು ಗಿಡುಗಗಳ ಸಾವು.
ಇವೆಲ್ಲದರ ಪರಿಣಾಮವಾಗಿ ಯುಎಸ್ಎ ದೇಶದ ಕಾಂಗ್ರೆಸಿನಿಂದ 1940ರಲ್ಲಿ ಬೋಳು ತಲೆ ಗಿಡುಗದ ರಕ್ಷಣಾ ಕಾಯಿದೆ ಜ್ಯಾರಿ. ಏಳಡಿ ಅಗಲಿಸಿದ ರೆಕ್ಕೆಗಳುಳ್ಳ ರಾಷ್ಟ್ರಪಕ್ಷಿಗಳನ್ನು ಯಾಕೆ ಉಳಿಸಲೇಬೇಕೆಂದು ವಿವರಿಸುತ್ತ, ಅದರ ವೈಜ್ನಾನಿಕ ಹಾಗೂ ರಾಜಕೀಯ ಕಾರಣಗಳನ್ನು ಈ ಕಾಯಿದೆ ಎತ್ತಿ ಹಿಡಿಯಿತು. “ಬೋಳು ತಲೆಯ ಗಿಡುಗ ಕೇವಲ ಜೀವಶಾಸ್ತ್ರೀಯ ಆಸಕ್ತಿಯ ಪಕ್ಷಿಯಾಗಿ ಉಳಿದಿಲ್ಲ. ಅದು ಅಮೇರಿಕದ ಸ್ವಾತಂತ್ರ್ಯದ ಆದರ್ಶಗಳ ಸಂಕೇತ” ಎಂಬುದು ಕಾಯಿದೆಯ ಘೋಷಣೆ. ಯಾವುದೇ ಕಾರಣಕ್ಕಾಗಿ ಬೋಳು ತಲೆ ಗಿಡುಗಗಳನ್ನು ಕೊಲ್ಲುವುದನ್ನು ಈ ಕಾಯಿದೆ ನಿಷೇಧಿಸಿತು.
ಆದರೆ, 1945ರಲ್ಲಿ ಬಳಕೆಗೆ ಬಂದ ಡಿಡಿಟಿ (ಡೈಕ್ಲೋರೋ ಡೈಫಿನೈಲ್ ಟ್ರೈಕ್ಲೋರೋ ಇಥೇನ್) ಈ ಗಿಡುಗಗಳಿಗೆ ಮರಣಾಂತಿಕ ಹೊಡೆತ ನೀಡಿತು. ಸೊಳ್ಳೆಗಳನ್ನು ಮತ್ತು ಹೊಲದ ಬೆಳೆಗಳ ಕೀಟಗಳನ್ನು ಕೊಲ್ಲಲಿಕ್ಕಾಗಿ ಸಿಕ್ಕಸಿಕ್ಕಂತೆ ಚೆಲ್ಲಲಾದ ಡಿಡಿಟಿ ಆಹಾರ ಸರಪಳಿಯೊಳಗೆ ನುಸುಳಿದ ಬಗೆ ಹೀಗೆ: ಡಿಡಿಟಿ ವಿಷದಿಂದ ಸತ್ತಕೀಟಗಳು ಮೀನುಗಳಿಗೆ ಆಹಾರ. ಈ ವಿಷಭರಿತ ಮೀನುಗಳು ಗಿಡುಗಗಳಿಗೂ ಇತರ ಪಕ್ಷಿಗಳಿಗೂ ಆಹಾರ. ಇದರಿಂದಾಗಿ ಆ ಪಕ್ಷಿಗಳ ಮೊಟ್ಟೆಗಳ ಚಿಪ್ಪು ಎಷ್ಟು ತೆಳುವಾಯಿತೆಂದರೆ, ಕಾವು ಕೊಡಲು ತಾಯಿ ಪಕ್ಷಿ ಕೂತಾಗ ಮೊಟ್ಟೆಗಳು ಚೂರುಚೂರು. ಮೊಟ್ಟೆಗಳ ನಾಶದಿಂದಾಗಿ ಸಂತತಿ ಅಳಿಯುತ್ತಾ 1963ರಲ್ಲಿ ಯುಎಸ್ಎ ದೇಶದ ದಕ್ಷಿಣದ 48 ಪ್ರಾಂತ್ಯಗಳಲ್ಲಿ ಉಳಿದದ್ದು ಕೇವಲ 417 ಬೋಳು ತಲೆ ಗಿಡುಗದ ಜೋಡಿಗಳು!
ಆ ಹೊತ್ತಿಗೆ ರಶೇಲ್ ಕಾರ್ಸನ್ ಅವರ “ಸೈಲೆಂಟ್ ಸ್ಪ್ರಿಂಗ್” ಪುಸ್ತಕದಿಂದಾಗಿ ಪೀಡೆನಾಶಕಗಳ ಮಾರಕ ಪರಿಣಾಮಗಳ ಬಗ್ಗೆ ಜಗತ್ತಿನಲ್ಲೆಲ್ಲ ಆಕ್ರೋಶ. ಜೀವಸಂಕುಲಕ್ಕೆಲ್ಲ ಡಿಡಿಟಿ ಮೃತ್ಯುದೂತನೆಂದು ಆ ಪುಸ್ತಕ ನಿಸ್ಸಂದೇಹವಾಗಿ ಸಾರಿತ್ತು. ಇದರಿಂದಾಗಿ ಅದರ ನಿಷೇಧದ ಬೇಡಿಕೆ ಭುಗಿಲೆದ್ದು, ಕೊನೆಗೂ ಯುಎಸ್ಎ ದೇಶದಲ್ಲಿ ಡಿಡಿಟಿ ಬಳಕೆಗೆ ನಿಷೇಧ. ಬೇಟೆಯ ನಿಷೇಧ ಮತ್ತು ರಾಸಾಯನಿಕ ವಿಷಗಳ ನಿಷೇಧ - ಇವಿಷ್ಟೇ ಬೋಳು ತಲೆ ಗಿಡುಗದ ಸಂತತಿ ಸಂರಕ್ಷಣೆಗೆ ಸಾಕಾಗುತ್ತಿರಲಿಲ್ಲ. “ಅಳಿವಿನಂಚಿನ ಜೀವ ಪ್ರಭೇದಗಳ ಕಾಯಿದೆ" ಗಿಡುಗಗಳ ವಾಸಸ್ಥಾನಗಳ ರಕ್ಷಣೆಯನ್ನು ಕಡ್ಡಾಯ ಮಾಡಿದ್ದರಿಂದಾಗಿ ಗಿಡುಗಗಳ ಸಂತತಿ ಬಚಾವ್.
ಶುದ್ಧ ನೀರಿನ ಕಾಯಿದೆಯಿಂದಲೂ ಅವುಗಳ ರಕ್ಷಣೆಗೆ ಸಹಾಯವಾಯಿತು. ಈ ಕಾಯಿದೆಯ ಅನುಸಾರ, ಪೂರ್ವ ತೀರದ ಚೆಡಾಪೆಕೆ ಕೊಲ್ಲಿಯ ಕಲುಷಿತ ನೀರಿನ ಶುದ್ಧೀಕರಣಕ್ಕೆ ಚಾಲನೆ. ಇದರಿಂದಾಗಿ ಗಿಡುಗಗಳು ಆಹಾರ ಪಡೆಯುವ ಪ್ರದೇಶಗಳಲ್ಲಿ ಹಾನಿಕಾರಕ ಮಾಲಿನ್ಯ ವಸ್ತುಗಳ ಪ್ರಮಾಣದಲ್ಲಿ ಇಳಿಕೆ. ಅಷ್ಟರ ಮಟ್ಟಿಗೆ ಗಿಡುಗಗಳ ಆಹಾರ ಸುರಕ್ಷಿತ.
ಬೋಳು ತಲೆ ಗಿಡುಗಗಳ ಬಗ್ಗೆ ಜನರ ಪ್ರೀತಿಯದ್ದೂ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ. ಗಿಡುಗಪ್ರಿಯರು ತಮ್ಮ ಪಕ್ಷಿಪ್ರೀತಿ ತೋರಿಸಿದ್ದು ಹೇಗಂತೀರಾ? ಗೂಡುಗಳನ್ನು ಕಣ್ಣಿಟ್ಟು ಕಾಯುವ, ಜನಸಾಮಾನ್ಯರಿಗೆ ಗಿಡುಗಗಳ ಉಳಿವಿನ ತುರ್ತಿನ ಬಗ್ಗೆ ಮಾಹಿತಿ ನೀಡುವ ಮತ್ತು ತಾಯಿ ಗಿಡುಗ ಮೊಟ್ಟೆಯಿಡುವ ಅವಧಿಯಲ್ಲಿ ಗೂಡು ಕಟ್ಟುವ ಪ್ರದೇಶಗಳನ್ನು ರಕ್ಷಿಸುವ ಮೂಲಕ.
ಅದಲ್ಲದೆ, ನೀರು ಕೋಳಿಗಳನ್ನು ಕೋವಿಯಿಂದ ಹೊಡೆದುರುಳಿಸಲು ಬಳಸುವ ಸೀಸದ ಬುಲೆಟುಗಳನ್ನು ಯುಎಸ್ಎ ದೇಶದ “ಮೀನು ಮತ್ತು ವನ್ಯಜೀವಿ ಮಂಡಳಿ” ನಿಷೇಧಿಸಿತು. ಯಾಕೆಂದರೆ, ಆ ನೀರು ಕೋಳಿಗಳನ್ನು ತಿನ್ನುವ ಗಿಡುಗ ಹಾಗೂ ಇತರ ಪಕ್ಷಿಗಳಿಗೆ ಸೀಸದ ವಿಷ ತಗಲಿದರೆ ಅಪಾಯ. ಇವೆಲ್ಲ ಪಕ್ಷಿಪ್ರೀತಿಯ ಕೆಲಸಗಳ ಸಂಭ್ರಮದ ನಡುವೆ, ಬೋಳು ತಲೆಯ ಗಿಡುಗಗಳೂ ಸಾವಿನಂಚಿನಿಂದ ಪಾರಾಗುವ ಉಪಾಯ ಕಲಿತವು. ಮನುಷ್ಯರ ವಾಸಸ್ಥಳಗಳಿಗೆ ಹತ್ತಿರದಲ್ಲೇ ಗೂಡು ಕಟ್ಟಲು ಶುರು ಮಾಡಿದವು.
ಇವೆಲ್ಲದರ ಫಲಿತಾಂಶ: ಬೋಳು ತಲೆ ಗಿಡುಗಗಳ ಸಂಖ್ಯೆಯಲ್ಲಿ ಹೆಚ್ಚಳ. ಆದ್ದರಿಂದ 1995ರಲ್ಲಿ ವನ್ಯಜೀವಿ ಅಧಿಕಾರಿಗಳು ಗಿಡುಗಗಳ ವರ್ಗೀಕರಣ ಬದಲಾಯಿಸಿದರು. ಅಳಿವಿನಂಚಿನ ವರ್ಗದಿಂದ ಅಳಿವಿನ ಅಪಾಯದ ವರ್ಗಕ್ಕೆ. ಆ ಕ್ಷಣ ವನ್ಯ ಜೀವಿಗಳ ಸಂರಕ್ಷಣೆಯ ಚರಿತ್ರೆಯಲ್ಲೇ ಅತ್ಯಪೂರ್ವ ಕ್ಷಣ. ಯಾಕೆಂದರೆ, ಯುಎಸ್ಎ ದೇಶದ ದಕ್ಷಿಣದ 48 ಪ್ರಾಂತ್ಯಗಳಲ್ಲಿ ಇರುವ ಬೋಳು ತಲೆ ಗಿಡುಗಗಳ ಜೋಡಿಗಳ ಸಂಖ್ಯೆ 7,678ಕ್ಕೆ ಏರಿಕೆ.
ಇದು ಯುಎಸ್ಎ ದೇಶದ ರಾಷ್ಟ್ರಪಕ್ಷಿಯ ಸಂರಕ್ಷಣೆಯ ಕತೆ. ಭಾರತದ ಪರಿಸ್ಥಿತಿ ಹೇಗಿದೆ? ನಮ್ಮ ರಾಷ್ಟ್ರಪಕ್ಷಿ ನವಿಲು. ಹತ್ತಾರು ನವಿಲುಗಳು ಸತ್ತ ಸುದ್ದಿ ಹಲವು ಬಾರಿ ವರದಿಯಾಗಿದೆ. ನವಿಲುಗಳ ಈ ಸಾಮೂಹಿಕ ಸಾವಿಗೆ ಕಾರಣ ಅವುಗಳಿಗೆ ವಿಷ ಉಣಿಸಿದ್ದು. ನಾವೇನು ಮಾಡಿದ್ದೇವೆ?
"ನಾನೊಬ್ಬನೇ ಏನು ಮಾಡಲಾದೀತು?” ಎಂದು ಕೈಚೆಲ್ಲಿದ್ದೇವೆ. ಅದರ ಬದಲಾಗಿ, ನಾನೊಬ್ಬನೇ ಏನು ಮಾಡಲಾದೀತೆಂದು ಯೋಚಿಸಿದ್ದರೆ, ಹಲವು ದಾರಿಗಳು ಹೊಳೆಯುತ್ತಿದ್ದವು. ಉದಾಹರಣೆಗೆ, ಬೇಸಗೆಯಲ್ಲಿ ಪಕ್ಷಿಗಳಿಗೆ ತಟ್ಟೆಯಲ್ಲಿ ನೀರಿಡುವುದು. ಪಕ್ಷಿಗಳು ತಿನ್ನುವ ಹಣ್ಣು (ಚೆರಿ, ಅತ್ತಿ ಇತ್ಯಾದಿ) ಬಿಡುವ ಗಿಡಗಳನ್ನು ನೆಟ್ಟು ಬೆಳೆಸುವುದು. ಹಕ್ಕಿಗಳು ಗೂಡು ಕಟ್ಟಲು ಪೆಟ್ಟಿಗೆಗಳನ್ನಿಡುವುದು ಇತ್ಯಾದಿ. ಇನ್ನಾದರೂ ನಮ್ಮೂರಿನ ಹಕ್ಕಿಗಳ ಉಳಿವಿಗೆ ನಮ್ಮಿಂದಾದದ್ದನ್ನು ಮಾಡೋಣ. ಇಲ್ಲವಾದರೆ, "ನಮ್ಮೂರ ಹಕ್ಕಿಗಳು ಹೇಗೆ ಕಳೆದು ಹೋದವು?" ಎಂದು ಮಕ್ಕಳು-ಮೊಮ್ಮಕ್ಕಳು ಪ್ರಶ್ನಿಸಿದಾಗ ಉತ್ತರಿಸಲು ಸಾಧ್ಯವೇ?
ಫೋಟೋ 1 ಮತ್ತು 2: ಬೋಳು ತಲೆ ಗಿಡುಗ
ಫೋಟೋ 3: ರಶೇಲ್ ಕಾರ್ಸನ್ …. ಫೋಟೋ ಕೃಪೆ: ಷಟರ್ ಸ್ಟಾಕ್.ಕೋಮ್
ಫೋಟೋ 4: ಅವರ ಜಗತ್ಪ್ರಸಿದ್ಧ ಪುಸ್ತಕ: ಸೈಲೆಂಟ್ ಸ್ಪ್ರಿಂಗ್ (ಮೌನ ವಸಂತ)
Comments
ನಿಜಕ್ಕೂ ಕಣ್ಣು ತೆರೆಸುವ…
ನಿಜಕ್ಕೂ ಕಣ್ಣು ತೆರೆಸುವ ಮಾಹಿತಿಪೂರ್ಣ ಲೇಖನ
ಅಳಿವಿನಂಚಿನಲ್ಲಿದ್ದ ಬೋಳು ತಲೆಯ ಗಿಡುಗವನ್ನು ರಕ್ಷಿಸಲು ಕೈಗೊಂಡ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಯಾವುದೇ ಜೀವಿ ಒಮ್ಮೆ ಅಳಿದು ಹೋದರೆ ಅದು ಮತ್ತೆ ಖಂಡಿತವಾಗಿಯೂ ಹುಟ್ಟಿ ಬರುವುದಿಲ್ಲ. ಈಗಾಗಲೇ ಸಹಸ್ರಾರು ಪ್ರಾಣಿ-ಪಕ್ಷಿಗಳು ಅಳಿದು ಹೋಗಿವೆ. ಇವುಗಳನ್ನು ನಾವು ಈಗ ಚಲನ ಚಿತ್ರಗಳಲ್ಲಿ ನೋಡಿ ಖುಷಿ ಪಡುತ್ತೇವೆ. ಮುಂದೊಂದು ದಿನ ನಾವಿಂದು ನೋಡುತ್ತಿರುವ ಹುಲಿ, ಸಿಂಹ, ಖಡ್ಗಮೃಗ, ಚಿರತೆ, ಅಪರೂಪದ ಹಕ್ಕಿಗಳು ಎಲ್ಲವನ್ನೂ ನಮ್ಮ ಮುಂದಿನ ಜನಾಂಗ ಕೇವಲ ಚಿತ್ರಗಳಲ್ಲಿ ನೋಡುವ ಕಾಲ ಬಂದೀತು . ಜೋಕೆ. ನಾವು ಈಗಲೇ ವನ್ಯ ಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನುಮುಖವಾಗಬೇಕಾಗಿದೆ. ಕಾಡು ಉಳಿದರೆ ಖಂಡಿತವಾಗಿಯೂ ಜೀವ ಸಂಕುಲಗಳೂ ಉಳಿದಾವು. ಕಾಡಿನಲ್ಲಿ ಪಕ್ಷಿಗಳಿಗೆ ಬೇಕಾದ ಹಣ್ಣು, ಸಸ್ಯಹಾರಿ ಪ್ರಾಣಿಗಳಿಗೆ ಬೇಕಾದ ಹುಲ್ಲು, ಮಾಂಸಹಾರಿ ಪ್ರಾಣಿಗಳಿಗೆ ಬೇಕಾಗುವ ಜೀವಿಗಳು ಎಲ್ಲವೂ ಅಗತ್ಯ.
ಈ ಲೇಖನ ಬರೆದ 'ಅಡ್ಡೂರು' ಇವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಅಪರೂಪದ ಲೇಖನಗಳು ಮೂಡಿಬರಲಿ ಎನ್ನುವುದೇ ನನ್ನ ಹಾರೈಕೆ.