ಅಳಿವಿನ ಅಪಾಯದಿಂದ ಪಾರಾದ ಬೊಸ್ತಮಿ ಆಮೆ

ಅಳಿವಿನ ಅಪಾಯದಿಂದ ಪಾರಾದ ಬೊಸ್ತಮಿ ಆಮೆ

ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ.

ಯಾಕೆಂದರೆ, ಹತ್ತು ವರುಷಗಳ ನಂತರ, ಈ ವರುಷ ೨೦೧೫ರ ಜೂನ್ ಮೊದಲ ವಾರದಲ್ಲಿ ಬೊಸ್ತಮಿ ಆಮೆಗಳು ಮೊಟ್ಟೆಯಿಟ್ಟವು – ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ೫೫ ಕಿಮೀ ದೂರದ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಸರೋವರದಲ್ಲಿ. ಅನಂತರ, ಭಾರೀ ಮಳೆ ಸುರಿದ ದಿನ, ಹತ್ತು ವರುಷಗಳ ನಂತರ ಮೊದಲ ಬಾರಿಗೆ ಹತ್ತು ಆಮೆ ಮರಿಗಳು ರಾಷ್ಟ್ರೀಯ ಹೆದ್ದಾರಿ ೪೪ಎಯಲ್ಲಿ ಕಾಣಿಸಿಕೊಂಡವು. ಸುಮಾರು ೧೬೩ ಮೊಟ್ಟೆಗಳು ಒಡೆದು ಹೊರಬಂದ ಆಮೆ ಮರಿಗಳಲ್ಲಿ ಇವು ಕೆಲವು.

ಬೊಸ್ತಮಿ ಆಮೆಗಳನ್ನು ಆ ಪರಿತ್ರ ಸರೋವರಕ್ಕೆ ತಂದದ್ದು ತ್ರಿಪುರಾದ ರಾಜನಾಗಿದ್ದ ಮಾಣಿಕ್ಯ ರಾಜ ಎಂದು ಪ್ರತೀತಿ. ದಕ್ಷಿಣ ಬಾಂಗ್ಲಾ ದೇಶದ ಚಿತ್ತಗಾಂಗ್ ಗುಡ್ಡಗಳಿಂದ ಪವಿತ್ರತೆಯ ಸಂಕೇತವಾಗಿ ಆತ ಆಮೆಗಳನ್ನು ತಂದನಂತೆ. ತ್ರಿಪುರೇಶ್ವರಿ ದೇವಸ್ಥಾನ ಭಾರತದ ೫೧ ಶಕ್ತಿ ಪೀಠಗಳಲ್ಲೊಂದು. ಅದು ರಾಜಾ ಧನ್ಯಮಾಣಿಕ್ಯ ೧೫ನೇ ಶತಮಾನದಲ್ಲಿ ಕಟ್ಟಿಸಿದ ದೇವಸ್ಥಾನ.

ಆ ದೇವಸ್ಥಾನದ ೧.೧೧ ಹೆಕ್ಟೇರ್ ವಿಸ್ತೀರ್ಣದ ಸರೋವರ ಕಳೆದ ೬೦೦ ವರುಷಗಳಿಂದ ಬೊಸ್ತಮಿ ಆಮೆಗಳ ಆವಾಸಸ್ಥಾನ. ಅವು ಸರೋವರದ ಆಳದಿಂದ ತೀರಕ್ಕೆ ಬರುತ್ತಿದ್ದವು – ಭಕ್ತರು ಎಸೆದ ಆಹಾರ ಹುಡುಕುತ್ತಾ. ಆಮೆಗಳಿಗಾಗಿ ಅಕ್ಕಿ ಮತ್ತು ಬಿಸ್ಕಿಟ್ ಸರೋವರದ ಕಟ್ಟೆಯಲ್ಲಿ ಇರಿಸುವುದೂ ಅಲ್ಲಿನ ಭಕ್ತರ ಪೂಜಾವಿಧಿಯ ಅಂಗ.

ಆಮೆಗಳಿಗೆ ಗಂಡಾಂತರ ಶುರುವಾದದ್ದೇ ೧೯೯೮ರಲ್ಲಿ – ತ್ರಿಪುರಾ ರಾಜ್ಯ ಸರಕಾರ ಆ ಸರೋವರವನ್ನು ನೀರಿನ ಟ್ಯಾಂಕ್ ಆಗಿ ಬಳಸಲು ನಿರ್ಧರಿಸಿದಾಗ. ಅದಕ್ಕಾಗಿ ಸರೋವರದ ಕಟ್ಟೆಗಳನ್ನು ಸಿಮೆಂಟಿನಿಂದ ಕಟ್ಟಲಾಯಿತು. ಪರಿಸರವಾದಿಗಳೂ ನಾಗರಿಕರ ಸಂಘಟನೆಗಳೂ ಇದನ್ನು ವಿರೋಧಿಸಿದ್ದರು. ಆದರೆ ಸರಕಾರಿ ಅಧಿಕಾರಿಗಳು ಜನಾಭಿಪ್ರಾಯಕ್ಕೆ ಬೆಲೆ ಕೊಡಲಿಲ್ಲ. ಬದಲಾಗಿ, ಆಮೆಗಳ ಸಾವಿಗೆ ಪ್ರವಾಸಿಗಳೂ ಭಕ್ತರೂ ಸರೋವರಕ್ಕೆ ಎಸೆಯುವ ಪ್ಲಾಸ್ಟಿಕ್ ಬ್ಯಾಗುಗಳು ಕಾರಣ ಎಂದಿದ್ದರು! ಅದಾಗಿ ಒಂದೇ ವರುಷದಲ್ಲಿ ಆಮೆಗಳ ಸಾವಿನ ಸುದ್ದಿ ಹರಡಿತು. ಮಾರ್ಚ್ ೨೦೦೨ರಿಂದ ಜನವರಿ ೨೦೦೩ರ ಅವಧಿಯಲ್ಲಿ ಏಳು ದೊಡ್ಡ ಆಮೆಗಳು ಸತ್ತ ವರದಿ.
 
ಅನಂತರ ೨೦೧೪ರಲ್ಲಿ ಆಮೆಗಳಿಗೆ ಒದಗಿದ ಅಪಾಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ. ಸರಕಾರದ ಅವೈಜ್ನಾನಿಕ ಕ್ರಮಕ್ಕೆ ಜನರ ತೀವ್ರ ವಿರೋಧ. ಇದರಿಂದಾಗಿ ತ್ರಿಪುರಾ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಮೀನುಗಾರಿಕೆ ಮತ್ತು ಪ್ರಾಣಿಶಾಸ್ತ್ರ ಪರಿಣತರಿಂದ ದೇವಸ್ಥಾನದ ಸರೋವರದ ಪರಿಸರದ ಪರಿಶೀಲನೆ. ಸರೊವರದ ಸಿಮೆಂಟಿನ ಕಟ್ಟೆಗಳನ್ನು ಒಡೆದು ಹಾಕಬೇಕೆಂಬುದು ಅವರೆಲ್ಲರ ಶಿಫಾರಸ್. ಆಮೆಗಳ ದಿನನಿತ್ಯದ ಚಟುವಟಿಕೆಗಳಲ್ಲಿ ಮುಖ್ಯವಾದದ್ದು ಬಿಸಿಲಿಗೆ ಒಡ್ಡಿಕೊಳ್ಳುವುದು; ಅದಕ್ಕೆ ಮರಳಿನ ದಂಡೆಗಳು ಬೇಕೇ ಬೇಕು. ಆದರೆ ಸರೋವರಕ್ಕೆ ಸಿಮೆಂಟಿನ ಕಟ್ಟೆ ಕಟ್ಟಿದ ಕಾರಣ ಮರಳಿನ ದಂಡೆಗಳೇ ಇಲ್ಲವಾದವು ಎಂದು ಬೊಟ್ಟು ಮಾಡುತ್ತಾರೆ ವನ್ಯಜೀವಿ ಅಧಿಕಾರಿ ಪ್ರಸನ್ಜಿತ್ ಬಿಸ್ವಾಸ್. ಅದರಿಂದಾಗಿ, ಸೂರ್ಯನ ಬಿಸಿಲಿಗೆ ಮೈಯೊಡ್ಡಿ ವಿಟಮಿನ್-ಡಿ೩ ಪಡೆಯಲು ಮತ್ತು ಚಿಪ್ಪಿನ ಮೇಲೆ ಬೆಳೆದ ಫಂಗಸ್ ಕಳೆದುಕೊಳ್ಳಲು ಆಮೆಗಳಿಗೆ ಅವಕಾಶವೇ ಇಲ್ಲ. ಅದಲ್ಲದೆ, ಆಮೆಗಳ ಸಂತಾನೋತ್ಪತ್ತಿಗೆ ಅತ್ಯಗತ್ಯವಾದ ಸೂರ್ಯನ ಶಾಖವೂ ಅವಕ್ಕೆ ಸಿಕ್ಕದಂತಾಯಿತು.

ಅಂತೂ ಸಪ್ಟಂಬರ್ ೨೦೧೪ರಲ್ಲಿ ಆಮೆಗಳ ರಕ್ಷಣೆಗೆ ಮೊದಲ ಕಾರ್ಯಾಚರಣೆ: ಪರಿಣತರ ಸಮಿತಿಯ ಸಲಹೆಯ ಪ್ರಕಾರ ಸರೋವರದ ಪೂರ್ವ ದಿಕ್ಕಿನ ಸಿಮೆಂಟಿನ ಕಟ್ಟೆಗಳನ್ನು ಒಡೆದದ್ದು. ಇದರಿಂದಾಗಿ ಆಮೆಗಳಿಗೆ ಗೂಡು ಕಟ್ಟಲು ಅವಕಾಶ ಒದಗಿತು.
ಈ ನಡುವೆ, ಜೂನ್ ೨೦೧೪ರಲ್ಲಿ ಪರಿಸರವಾದಿಗಳು ಹೈಕೋರ್ಟಿನ ಬಾಗಿಲು ತಟ್ಟಿದರು – ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸುವ ಮೂಲಕ. ಸರೋವರದ ಸಿಮೆಂಟಿನ ಕಟ್ಟೆಗಳಿಂದಾಗಿ ನೀರಿನ ಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬುದೇ ದಾವೆಯ ಅಹವಾಲು. ೨೫ ಜೂನ್ ೨೦೧೫ರಂದು ತ್ರಿಪುರಾ ಹೈಕೋರ್ಟಿನ ಡಿವಿಜನ್ ಬೆಂಚಿನ ಆದೇಶದ ಅನುಸಾರ ೨ನೇ ಕಾರ್ಯಾಚರಣೆ: ಜಿಲ್ಲಾಡಳಿತದಿಂದ ಸರೋವರದ ಇನ್ನೊಂದು ಬದಿಯ ಸಿಮೆಂಟಿನ ಕಟ್ಟೆಗಳ ನಾಶ. ಜೊತೆಗೆ, ಸರೋವರದ ನೀರಿನ ಜೀವಿಗಳಿಗೆ ಆಮ್ಲಜನಕ ಒದಗಿಸಲಿಕ್ಕಾಗಿ ಹನ್ನೆರಡು ಏರೇಟರುಗಳ ಸ್ಥಾಪನೆ. ಆಮೆಗಳಿಗೆ ಮತ್ತು ದೊಡ್ಡ ಮೀನುಗಳಿಗೆ ಒದಗಿಸುವ ಆಹಾರದಲ್ಲೂ ಬದಲಾವಣೆ. ಈಗ ಪ್ರತಿದಿನ ಸರೋವರಕ್ಕೆ ಹಾಕುವ ಆಹಾರದ ಪ್ರಮಾಣ ಕನಿಷ್ಠ ೧೦ ಕಿಗ್ರಾ ಮೀನು ಆಹಾರ ಮತ್ತು ೬ ಕಿಗ್ರಾ ಮಾಂಸ.

ಇವೆಲ್ಲ ಕಾರ್ಯಾಚರಣೆಗಳಿಂದಾಗಿ ಬೊಸ್ತಮಿ ಆಮೆಗಳಿಗೆ ಜೀವದಾನ. ಇನ್ನಷ್ಟು ಕಾರ್ಯಾಚರಣೆ ನಡೆಸಬೇಕೆಂದು ಪರಿಣತರ ಸಮಿತಿ ಸಲಹೆ ನೀಡಿದೆ: ದೇವಸ್ಥಾನದ ಸರೋವರದ ಇನ್ನಷ್ಟು ಸಿಮೆಂಟ್ ಕಟ್ಟೆಗಳನ್ನು ಒಡೆದು ಹಾಕುವುದು. ಸರೋವರದ ಪಕ್ಕದ ಜಾಗ ವಶಕ್ಕೆ ಪಡೆದು ಆಮೆಗಳು ನಿರಾತಂಕವಾಗಿ ಮೊಟ್ಟೆಯಿಡಲು ಅವಕಾಶ ಕಲ್ಪಿಸುವುದು.

ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ, ೧೯೭೨ರಲ್ಲಿ ಪಟ್ಟಿ ಮಾಡಲಾಗಿರುವ ನೀರಿನ ಜೀವಿ ಬೊಸ್ತಮಿ ಆಮೆ. ಇದನ್ನು ಉಳಿಸಿದ ಈ ಪ್ರಕರಣವು ಇಂತಹ ಆಂದೋಲನಗಳ ಕಾರ್ಯಕರ್ತರಿಗೆ ಹೋರಾಟದ ಒಂದು ಮಾದರಿ.
ಚಿತ್ರ: By Rohan Uddin Fahad - Own work, CC BY-SA 3.0,