ಅವಧಾನ

ಅವಧಾನ

ಮೇಧಾತಿತಿ ಎನ್ನುವ ಋಷಿ ಇದ್ದನು. ಈತನಿಗೆ ಪತ್ನಿ, ಒಬ್ಬ ಮಗನಿದ್ದನು. ಮೇಧಾತಿತಿ ಮತ್ತು ಪತ್ನಿಗೆ ಅತಿ ಪ್ರೀತಿಯ ಮಗ ಈತನ ಹೆಸರು ಚಿರಕಾರಿ. ಚಿರಕಾರಿ ಎಂದರೆ ಸಾವಕಾಶವಾಗಿ ಮಾಡುವವನು ಎಂದರ್ಥ. ಹಿಂದಿನವರು ಎಷ್ಟು ಅರ್ಥಪೂರ್ಣ ಹೆಸರನ್ನು ಇಡುತ್ತಿದ್ದರು ಅಲ್ಲವೇ. ಏನೇ ಮಾಡಿದರು ನಿಧಾನವಾಗಿ, ಆಲೋಚಿಸಿ ಮಾಡುತ್ತಿದ್ದನು. ಆದ್ದರಿಂದ ಆತ ಅತಿ ಬುದ್ಧಿವಂತನಾಗಿದ್ದನು. ಹೀಗಿರಬೇಕಾದರೆ ಒಂದು ಘಟನೆ ನಡೆಯಿತು. ತಂದೆ ಋಷಿ, ಕೆಲಸ ಮಾಡಿಕೊಂಡು ಹಸಿವೆಯಿಂದ ತನ್ನ ಕುಟೀರಕ್ಕೆ ಬಂದು, ಪತ್ನಿಯಲ್ಲಿ ಊಟ ಕೇಳಿದನು. ಅಡುಗೆ ಆಗಿರಲಿಲ್ಲ. ತಕ್ಷಣ ಮೇಧಾತಿತಿ ಮಗನನ್ನು ಕರೆದು, ನಿನ್ನ ತಾಯಿಯನ್ನು ಮುಗಿಸಿಬಿಡು ಎಂದು ಆಜ್ಞೆ ಮಾಡಿದ. ನಂತರ ಸಿಟ್ಟಿನಿಂದ ಸರಸರನೆ ತೋಟದ ಕಡೆ ಹೋದನು. ಮಗ ಚಿರಕಾರಿ ಕೈಯಲ್ಲಿ ಕೊಡಲಿ ಹಿಡಿದುಕೊಂಡು ವಿಚಾರ ಮಾಡಲು ಶುರು ಮಾಡಿದ. ತಾನು ತಾಯಿಯನ್ನು ಕೊಂದರೆ ಅದು ಮಹಾ ಪಾಪ. ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ ಅದು ಮಹಾ ಪಾಪ. ಏನೇ ಮಾಡಿದರು ಮಹಾಪಾಪ. ಮತ್ತೆ ತಾಯಿಯನ್ನು ಕೊಂದರೆ ತಂದೆಯ ಪರಿಸ್ಥಿತಿ ಏನಾದೀತು...? ನನ್ನ ಪರಿಸ್ಥಿತಿ ಏನಾದೀತು...? ತಾಯಿ ಕೊಲ್ಲದಿದ್ದರೆ ಆಕೆಯ ಪರಿಸ್ಥಿತಿ ಏನಾದೀತು...? ಎಂಬುದಾಗಿ ವಿಚಾರ ಮಾಡುತ್ತಾ ನಿಂತಿದ್ದನು. ತಂದೆ ಸಿಟ್ಟಿನಿಂದ ತೋಟಕ್ಕೆ ನಡೆದುಕೊಂಡು ಹೋಗುತ್ತಿರಬೇಕಾದರೆ ಮತ್ತು ನಿಸರ್ಗದ ಮಡಿಲಲ್ಲಿ ಇದ್ದಾಗ ಸಿಟ್ಟು ಇಳಿದು ಹೋಯಿತು. ಯೋಚಿಸಿದ ನಾನೇನು ಮಾಡಿದೆ...? ಪತ್ನಿ ಮಾಡಿದ ಮಹಾಪರಾಧವಾದರೇನು? ಅಡುಗೆ ಮಾಡುವುದು ಸ್ವಲ್ಪ ತಡವಾಗಿದೆ. ಅದಕ್ಕೆ ಈ ಶಿಕ್ಷೆ. ಗಾಬರಿಯಾಗಿ ಮನೆ ಕಡೆ ಓಡಿದ. ಅಲ್ಲಿದ್ದವರೆಲ್ಲ ಕೇಳಿದರು. ಏಕೆ ಓಡುತ್ತಿರುವೆ ಎಂದು. ಏನು ಉತ್ತರ ಕೊಡುವ ಸ್ಥಿತಿಯಲ್ಲಿ ಋಷಿ ಇರಲಿಲ್ಲ. ಧಾವಿಸಿ ಮನೆಗೆ ಬಂದನು. ಚಿರಕಾರಿ ಕೈಯಲ್ಲಿ ಕೊಡಲಿ ಹಿಡಿದು ವಿಚಾರ ಮಾಡುತ್ತ ನಿಂತಿದ್ದ, ಕೊಂದಿರಲಿಲ್ಲ. ಪರಶುರಾಮನಾಗಿದ್ದರೆ ಮುಂದೆ ಏನಾಗುತ್ತೋ ಅಂತ ಚಿಂತಿಸದೆ ಕೊಂದೇ ಬಿಡುತ್ತಿದ್ದನು. ಅದೇ ಪರಿಸ್ಥಿತಿ ಚಿರಕಾರಿಗೂ ಇದ್ದರೂ, ಆತ ದುಡುಕದೆ ವಿಚಾರ ಮಾಡುತ್ತಿದ್ದನು. ಮೇಧಾತಿತಿ ನೋಡಿದ, ಪತ್ನಿ ಕುಳಿತಿದ್ದಳು. ಬಂದವನೇ ಮಗನನ್ನು ತಬ್ಬಿಕೊಂಡು ಹೇಳಿದ. ಹೆಸರಿಗೆ ತಕ್ಕ ಮಗ ನೀನು. ಆಗ ಚಿರಕಾರಿ ಹೇಳಿದ, ಸಿಟ್ಟಿನಿಂದ ಮಾಡಿದ ಆಜ್ಞೆ ಪಾಲಿಸಬೇಕೋ, ಬೇಡವೋ. ಸಿಟ್ಟು ಇಳಿದ ನಂತರವೂ ಅದೇ ಆಜ್ಞೆ ಇದ್ದರೆ. ಆಗ ಅದನ್ನು ಪಾಲಿಸಬೇಕಾಗುತ್ತದೆ ಎಂದನು. ತಂದೆ ಮಗನಿಗೆ ಹೇಳುತ್ತಾನೆ. "ನಾನು ಋಷಿ, ದೊಡ್ಡ ಮನುಷ್ಯ, ಬುದ್ಧಿವಂತ ಎಂದು ಎಲ್ಲರೂ ತಿಳಿದಿದ್ದಾರೆ. ಒಮ್ಮೊಮ್ಮೆ ನನ್ನಿಂದಲೂ ತಪ್ಪು ನಿರ್ಧಾರವಾಗುತ್ತದೆ. ಆದರೆ ನೀನು ತಪ್ಪಲಿಲ್ಲವಲ್ಲ. ಮನೆ ದೇಶ ಉದ್ಧಾರವಾಗಬೇಕಾದರೆ ನಿನ್ನಂತಹ ಮಕ್ಕಳಿರಬೇಕು ಎಂದು.

ನದಿ ನಿಧಾನವಾಗಿ, ಶಾಂತವಾಗಿ ಹರಿಯುತ್ತದೆ. ಹೀಗೆ ನಿಧಾನವಾಗಿ ಹರಿಯುವಾಗ ತನ್ನ ಅಕ್ಕಪಕ್ಕದ ಗಿಡಗಳಿಗೆ ನೀರುಣಿಸುತ್ತದೆ. ಭೂಮಿಗೆ ನೀರುಣಿಸುತ್ತದೆ. ಇದರಿಂದ ನದಿ ಅಕ್ಕಪಕ್ಕ ಸುಂದರ ಗಿಡಮರಗಳ ವನ ನಿರ್ಮಾಣವಾಗುತ್ತದೆ. ಲಕ್ಷಾಂತರ ಪ್ರಾಣಿ ಪಕ್ಷಿಗಳಿಗೆ ವಾಸಸ್ಥಾನ, ಆಹಾರ ಮತ್ತು ಸೌಂದರ್ಯ ದೊರಕುತ್ತದೆ. ಪ್ರವಾಹ ಸುನಾಮಿ ಇದು ಶೀಘ್ರವಾಗಿ ಧಾವಿಸಿಕೊಂಡು ಬರುತ್ತದೆ. ಇದು ಅಕ್ಕ ಪಕ್ಕದಲ್ಲಿರುವುದೆಲ್ಲವನ್ನು ಮುಳುಗಿಸಿ, ಕೊಚ್ಚಿಕೊಂಡು ನಾಶ ಮಾಡಿ ಹೋಗುತ್ತದೆ. ಪ್ರವಾಹ ಸುನಾಮಿಗಳು ಮೇಧಾತಿತಿ ಕೋಪದಲ್ಲಿ ಕೈಗೊಂಡ ನಿರ್ಧಾರದಂತೆ. ಶಾಂತವಾಗಿ ಹರಿಯುವ ನದಿ, ಚಿರಕಾರಿ ನಿಧಾನವಾಗಿ ಆಲೋಚಿಸಿದಂತೆ.

ಬದುಕು ನಿಧಾನವಾಗಿ, ಶಾಂತವಾಗಿ ಸಾಗಬೇಕು. ಯಾವುದೇ ಗಿಡ ಒಂದೇ ದಿನ ಬೆಳೆದು ಫಲ ಪುಷ್ಪ ನೀಡುವುದಿಲ್ಲ. ನಮ್ಮ ದೇಹವು ನಿಧಾನವಾಗಿ ಸಾವಕಾಶವಾಗಿ ಬೆಳೆಯುತ್ತದೆ. ಆದರೆ ಕ್ಯಾನ್ಸರ್ ಗಡ್ಡೆ ವೇಗವಾಗಿ ಬೆಳೆದು ನಮ್ಮನ್ನು ನಾಶ ಮಾಡುತ್ತದೆ. ಆದ್ದರಿಂದ ನಾವು ಸಾವಧಾನದಿಂದ ವಿಚಾರ ಮಾಡುತ್ತಾ ಬದುಕೋಣ ಅಲ್ಲವೇ ಮಕ್ಕಳೇ.

-ಎಂ.ಪಿ. ಜ್ಞಾನೇಶ್. ಬಂಟ್ವಾಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ