ಅವನೇ ಗಜಕಾಳಿಂಗ...!

ಅವನೇ ಗಜಕಾಳಿಂಗ...!

ಶ್ರೀ ರಮೇಶ್ ಬೇಗಾರ್ ಇವರು ಬರೆದ ದಿ.ಕಾಳಿಂಗ ನಾವಡರ ಕುರಿತಾದ ಈ ಲೇಖನವೊಂದು ವಾಟ್ಸಾಪ್ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕಾಳಿಂಗ ನಾವಡರ ಜೊತೆ ಒಡನಾಟವಿದ್ದ ಲೇಖಕರು, ನಾವಡರ ಸೊಗಸಾದ ಪರಿಚಯವನ್ನು ತಮ್ಮದೇ ಮಾತುಗಳಲ್ಲಿ ವರ್ಣಿಸಿದ್ದಾರೆ. ಶ್ರೀ ರಮೇಶ್ ಬೇಗಾರ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಓದುವ ಖುಷಿ ನಿಮ್ಮದಾಗಲಿ....

***

*ರವೀಂದ್ರ ಕಲಾಕ್ಷೇತ್ರದಲ್ಲಿ ನಾಗಶ್ರೀ ಆಟ ಪ್ರದರ್ಶನ . ಟಿಕೇಟ್ ಖಾಲಿ . ಹೊರಗೆ ಟಿಕೇಟ್ ಸಿಗದ ನೂರಾರು ಜನ. ಗಲಾಟೆ. ಲಾಟಿಚಾರ್ಜ್. !

*ಉಡುಪಿಯ ಜನಾರ್ಧನ ಹೋಟೆಲ್ ನಲ್ಲಿ ಸಾಲಿಗ್ರಾಮ ಮೇಳದ ಕ್ಯಾಂಪ್ ಬುಕಿಂಗ್.   ರೂಮಿನಲ್ಲಿ ಜನವೋ ಜನ. ಒಂದೇ ಊರಿಂದ ಐದು - ಆರು ಕಂಟ್ರಾಕ್ಟ್ ದಾರರು. ಅವರಲ್ಲೇ ಜಿದ್ದಾಜಿದ್ದಿ...?!

*ಸಾಲಿಗ್ರಾಮ ಮೇಳದ ಆಟ. 6 ಘಂಟೆಗೆ ಆಟ ಕೈದಾದರೂ  ಚೌಕಿಯಲ್ಲಿ 7 ಘಂಟೆ ವರೆಗೂ ಜನಸಂದಣಿ.  ಕೆಲವೊಮ್ಮೆ ಅವರನ್ನು ಮಾತಾನಾಡಿಸಲು ಅಲ್ಲೇ ಏರ್ಪಡುತ್ತಿದ್ದ ಕ್ಯೂ...?!

*ನಾಗಶ್ರೀ - ಚಲುವೆ ಚಿತ್ರಾವತಿ ಆಟ.  10 ಗಂಟೆಗೇ ಟೆಂಟ್ ಓಪನ್ . ಇದರ ಸರಾಸರಿ 65 ಪರ್ಸೆಂಟ್. 

*ಆ ಪ್ರಸಂಗಕ್ಕೆ ಅವರ ಭಾಗವತಿಕೆ.  ವಾಹನ ವ್ಯತ್ಯಯದಿಂದ ಬರುವುದು ತಡವಾಗುತ್ತದೆ. ಬೇರೆ ಭಾಗವತರು ಮುಂದುವರೆಸಲು ಕಿಕ್ಕಿರಿದ ಪ್ರೇಕ್ಷಕರ ಆಕ್ಷೇಪ.  ಅವರು ಬರುವವರೆಗೂ ಆಟ ಸ್ಥಗಿತ.

*** 

ಹೌದು, ಅವನೇ...ಅವನೇ ಆ ಕಾಳಿಂಗ .  ಬರಿ ಕಾಳಿಂಗ ಅಲ್ಲ " ಗಜಕಾಳಿಂಗ " 

ಇದೆಲ್ಲಾ ಅರ್ಥ ಆಗ ಬೇಕಾದರೆ ನಮ್ಮ ಮನೆಯಲ್ಲಿರುವ 15 , 16 , 20 ರ ಹರೆಯದ ಆ ಹುಡುಗರನ್ನು ಜ್ಞಾಪಕ ಮಾಡಿಕೊಳ್ಳಿ ಮತ್ತು ಕಾಳಿಂಗ ನಾವಡರ ಬದುಕ ತಿಳಿಯಿರಿ.

16 ರ ಹರೆಯಕ್ಕೇ  ಮಹಾಗುರು ಉಪ್ಪೂರರ ಪಕ್ಕ ಕುಳಿತು ಈತ ಹಾಡುತ್ತಿದ್ದ. ಹಾಗೆ ಹಾಡುತ್ತಿದ್ದ ಪದ್ಯಗಳೂ ಸರ್ವ ತಂತ್ರ ಸ್ವತಂತ್ರ ಶೈಲಿಯವು. ಅವು ಅಪ್ಪ - ಗುರು ಉಪ್ಪೂರರಿಂದ  ಮೂರ್ತಗೊಂಡವು. ಆ ಎರಕದ ಕುಲುಮೆಯಲ್ಲಿ ನೆಗೆದೆದ್ದ ನಿಗಿ ನಿಗಿ ಕೆಂಡದಂಥ ಹೊಳಪಿನವು. 18-19 ರ ವರ್ಷಗಳಲ್ಲೇ  ಜನರ ಕಾತರತೆಯ ಮಿಂಚಾಗಿ ಬಿಟ್ಟಿದ್ದ. ಓದಿದ್ದು ಪ್ರಾಥಮಿಕ ಶಾಲೆ. 20 ರ ಹರೆಯಕ್ಕೆ ಪ್ರಸಂಗ ಬರೆದಿದ್ದ. ಆದೇ ಏಜ್ ಗ್ರೂಪ್ ನಲ್ಲೇ ಮೇಳವೊಂದರ ( ಶ್ರೀ ಪೆರ್ಡೂರು ) ಪ್ರಧಾನ ಭಾಗವತನಾಗುವುದು, ತನಗಿಂಥ ದೊಡ್ಡ ಕಲಾವಿದರಿಗೆಲ್ಲಾ ನಿಜಾರ್ಥದ ನಿರ್ದೇಶನ ನೀಡುವುದು.  ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ.  

ಈ ಎಲ್ಲಾ ಅಘಟಿತ ಘಟನಾವಳಿಗಳು  ಅವನ ಕಾಲದಲ್ಲಿ ಘಟಿಸಿತು ಮತ್ತು ಅವನಿಂದ ಅಲ್ಲಲ್ಲಾ, ಆ ಒಬ್ಬ ಅವನಿಂದ ಮಾತ್ರವೇ ನಿರ್ಮಿತವಾದ "ಇತಿಹಾಸ " ಅದು. ಕಥೆಯಲ್ಲ - ದಂತಕಥೆಯದು.

ಆತನ ಕುರಿತು ಆಡುವುದಕ್ಕೆ ನಿಮಗೆ ಸಾವಿರ ಆಕ್ಷೇಪಗಳಿರಬಹುದು.  ಕೊನೆಗೆ ಅವನ ಪ್ರತಿಭೆಯೆಂಬ ಸಾವಿರದ ಒಂದನೆಯ  ಪ್ರಭೆ ಸೂರ್ಯಕೋಟಿ ಸಮತೇಜದ್ದಾಗಿ  ಅವನಿಗೇ ಜೈ ಎನ್ನುವಿರಿ - ಅವನಿಗೇ ಸೈ ಎನ್ನುವಿರಿ.

***

ಇದು ನಾನು ನೋಡಿದ ಕಾಳಿಂಗ ನಾವಡ ಎಂಬ ದೃವತಾರೆಯ  ಆ ದಿನಗಳು. ನೂರುಜನರ ನಡುವೆ  ಅವರೇ ಮುಖ್ಯವಾಗಿಬಿಡುವ ಆ ವ್ಯಕ್ತಿತ್ವವನ್ನು ದಕ್ಕಿಸಿಕೊಳ್ಳುವುದಿದೆಯಲ್ಲಾ ಅದಕ್ಕೆ ಯೋಗ್ಯತೆ ಬೇಕು. ಯೋಗ್ಯತೆಯೇ ಯೋಗ ವಾಗಿಬಿಟ್ಟ ಚಮತ್ಕಾರ ನಾವಡರ ಕಲಾಜೀವನ.

ತನ್ನ 33 ನೇ ವರ್ಷದೊಳಗೇ ಬದುಕಿನ ಅತ್ಯುನ್ನತ ಗೌರೀಶಂಕರದಲ್ಲಿ ರಾರಾಜಿಸಿದ ವರ್ಣರಂಜಿತ ಬದುಕು ಅದು.

ಸ್ಪುರದ್ರೂಪಿ ತರುಣ. ಒಂದಷ್ಟು ವರ್ಷ ಒಂದು ಲ್ಯಾಮಿನೇಟ್ ಸ್ಕೂಟರ್. ನಂತರ ಯೆಸ್ಡಿ ಬೈಕು. ರಂಗಸ್ಥಳದಲ್ಲಿ ಮಾತ್ರ ಶ್ವೇತ ವಸ್ತ್ರಧಾರಿ. ಬೈಕ್ ಏರಿದರೆ ಸಿನಿಮಾ ಸ್ಟಾರ್ ಒಬ್ಬನಂತೇ ದುಬಾರಿ ಜರ್ಕಿ, ಬೂಡ್ಸ್ ನಂತಿರುವ ಕಪ್ಪು ಚರ್ಮದ  ಪಾದರಕ್ಷೆ ,  ಇನ್ ಶರ್ಟ್ ಮಾಡಿದ ಪ್ಯಾಂಟ್, ಗುಂಗುರು ಕೂದಲು, ಸಣ್ಣ ಕಣ್ಣು - ದಪ್ಪಮೀಸೆ .....ಚಂದಕಿಂಥ ಚಂದ ನೀನೇ ಸುಂದರ.... ಹಾಗೆಂದು ಬರೇ ಅಲಂಕಾರಿಕದ ಬಿಲ್ಡಪ್ ಮನುಷ್ಯ ಅಂದುಕೊಂಡು ಬಿಟ್ಟೀರಾ.

ರಂಗಸ್ಥಳದ ಮೊದಲ ವೇಷದ ನಿರ್ದೇಶನದ ಸ್ಥಾನ ವನ್ನು ಅದರ ಎಲ್ಲಾ ಘನತೆಯೊಂದಿಗೆ ರಕ್ಷಿಸಿದ ಅಪ್ಪಟ ಪ್ರತಿಭಾಸಂಪನ್ನ. 60 ವರ್ಷದ ಕಲಾವಿದನನ್ನೂ ತನ್ನ ನಿರ್ದೇಶನದ ಅಂಕೆಯಲ್ಲಿಟ್ಟುಕೊಳ್ಳುತ್ತಿದ್ದ ಭಾಗವತ ಶ್ರೇಷ್ಠ. ಕಂಸವಧೆ,

ಭೀಷ್ಮವಿಜಯ, ಚಂದ್ರಹಾಸದಂತ ಪ್ರಸಂಗದ ನಡೆಯನ್ನು ಸಾವಿರಾರು ವರ್ಷ ಇತಿಹಾಸದ ಯಕ್ಷ ಪರಂಪರೆಯಲ್ಲಿ   ನಿರ್ಧರಿಸಿ ದಾರಿಹಾಕಿ ಕೊಟ್ಟವರು ಅವರು. ನಾಗಶ್ರೀ ಯಂತ " ಸಾಮಾಜಿಕ ಪ್ರಸಂಗಗಳ ಎಪಿಕ್ " ಕೊಟ್ಟವರು. 

ಸೂಕ್ಷವಾಗಿ ಗಮನಿಸೋಣ. ಅವರ ಜೀವಿತಾವಧಿಯಲ್ಲಿ ತಂತ್ರಜ್ಞಾನ ಇಷ್ಟು ಬೆಳೆದಿರಲಿಲ್ಲ. ಮಾಹಿತಿ ತಂತ್ರಜ್ಞಾನ , ಜಾಲತಾಣಗಳಿಲ್ಲದ ಆ ಆಫ್ ಲೈನ್ ಯುಗದಲ್ಲೇ ಅವರು ಹತ್ತಾರು ಯಕ್ಷಗಾನ ಜಿಲ್ಲೆಗಳು, ಹೊರರಾಜ್ಯ - ಹೊರದೇಶಗಳಲ್ಲಿ ಲೋಕ ವಿಖ್ಯಾತರಾಗಿದ್ದರು. ಧ್ವನಿ ವರ್ಧಕವೂ ಅಷ್ಟೇ . ಚಿಕ್ಕ ಚಿಕ್ಕ ಹಾರ್ನ್ ಗಳ ಕಾಲ ಅದು. ಎಕೋ ಮೈಕ್ ಸಿಸ್ಟಮ್ ಇರಲಿಲ್ಲ. ಮೌತ್ ಪೀಸ್ ಗಳೂ ಸಾಮಾನ್ಯದವು. ಈಗಿನ ಸೌಲಭ್ಯಗಳ ಪಾತಳಿಯಲ್ಲೊಮ್ಮೆ ಕಾಳಿಂಗ ನಾವಡರ ಕಲ್ಪಿಸಿಕೊಳ್ಳಿ. ಆ ಕಾಲದಲ್ಲೇ ಅವರ ಜನಪ್ರಿಯತೆಯ ವೇಗವನ್ನೂ ಕಲ್ಪಿಸಿಕೊಳ್ಳಿ. ಅವರು ಯಾಕೆ ಸ್ಟಾರ್ ಆದರೆಂಬುದಕ್ಕೆ ಅಲ್ಲೇ ಉತ್ತರ ಸಿಕ್ಕಿಬಿಡುತ್ತದೆ. 

 

ಇತ್ತೀಚೆಗೆ ನಮ್ಮ ಯಕ್ಷಗಾನ ಅಕಾಡೆಮಿಯ ಫೇಸ್ ಬುಕ್ ಲೈವ್ ನಲ್ಲಿ ನಾನು ಒಂದಷ್ಟು ಕಲಾವಿದರ ಸಂದರ್ಶನ ನಡೆಸಿದ್ದೆ.   ಆ 100 ಕಾರ್ಯಕ್ರಮಗಳ ಮಧ್ಯೆ ಕಾಳಿಂಗ ನಾವಡರ ವಿಷಯ ಬರದೇ ಯಾವ ಮಾತುಕತೆಯೂ ಪೂರ್ಣಗೊಂಡಿದ್ದಿಲ್ಲ. ಖ್ಯಾತನಾಮ ಕಲಾವಿದರೆಲ್ಲಾ ಅವರ ರಂಗತಂತ್ರ , ಮೇಳದ ಶಿಸ್ತು , ಪ್ರದರ್ಶನವೊಂದರ ಮೇಲೆ ಅವರಿಗಿರುವ ಸಂಪೂರ್ಣ ಹಿಡಿತ , ಆಟವನ್ನು ಕಳೆಗಟ್ಟಿಸುವ ಅವರ ಪರಿಕಲ್ಪನೆ ...ಮುಂತಾದವುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಅವರು ತನ್ನ ಹುಟ್ಟಿನ 3 ದಶಕಗಳ ಅವಧಿಯಲ್ಲೇ ಸಾಧಿಸಿದ್ದಾದರೂ ಹೇಗೆ .....? ಇದು ಯಕ್ಷಲೋಕದ  " ಯಕ್ಷ ಪ್ರಶ್ನೆ " . ಚಿರಕಾಲದ " ಚಿದಂಬರ ರಹಸ್ಯ ".

ಅವರು ಗತಿಸಿದ 3 ದಶಕಗಳ ನಂತರವೂ ಅವರ ನೆನಪು ಜನಮಾನಸದಲ್ಲಿ ಅಚ್ಚಳಿಯದೇ ನಿಂತಿರುವುದೇ ಅವರ ಶ್ರೇಷ್ಠತೆಗೆ ರೂಪಕ. ಮಾತ್ರವಲ್ಲ ಮತ್ತೊಂದು ನನ್ನ ಬೆರಗಿನ ಗ್ರಹಿಕೆ ಎಂದರೆ " ಅವರನ್ನು ಕಣ್ಣಾರೆ ನೋಡದ - ಅವರು ಗತಿಸಿದ ನಂತರ ಹುಟ್ಟಿದ ಈ ಕಾಲದ ಯುವಜನರೂ ಅವರನ್ನು ಆರಾಧಿಸುವುದು "

ಅವರು ಗತಿಸಿದಾಗ ಜಾತಿ ಲಿಂಗ ಬೇಧವಿಲ್ಲದೇ ಜನ ಎದೆಯೊಡೆದು ಅತ್ತಿದ್ದಾರೆ.  ಅವರ ಭಾವಚಿತ್ರವನ್ನು ದೇವರಕೋಣೆಯಲ್ಲಿಟ್ಟು ಪೂಜಿಸುವವರಿದ್ದಾರೆ. ಅವರ ಹೆಸರು , ಅವರ ಶೈಲಿ ದೇಶ ಕಾಲಗಳ ಮೀರಿದೆ. ಬೇರೆ ಯಾವ ಕಲಾಪ್ರಕಾರದ ಯಾವುದೇ ವ್ಯಕ್ತಿಗೆ ಸುಲಭದಲ್ಲಿ ದೊರೆಯದ ಮನ್ನಣೆಯಿದು. ಅವರಿದ್ದಾಗಲೂ ಅಷ್ಟೇ. ಹೊಸ ಪ್ರೇಕ್ಷಕರನ್ನು, ಯುವ ನೋಡುಗರನ್ನು ಸೃಷ್ಟಿಸಿ ಯಕ್ಷಗಾನ ಕ್ಷೇತ್ರದ ಸೀಮೆ ವಿಸ್ತರಿಸಿದವರು. ಅದನ್ನು ಅವರು ಕಾಲಾನಂತರವೂ ಸಾಧಿಸುತ್ತಿದ್ದಾರೆಂದರೆ , ನಮ್ಮ ನಡುವೆ ಅವರು ಈಗಲೂ ಜೀವಿಸುತ್ತಿರುವ " ಚಿರಂಜೀವಿ ".  " ನಡುವೆ ಸುಳಿವಾತ್ಮ ". 

***

ಸಾಲಿಗ್ರಾಮ ಮೇಳದ ಆಟದ ಆ ಒಂದುರಾತ್ರಿ.....

12 ಘಂಟೆ ಆಗುತ್ತಿದ್ದಂತೆ , ಟೆಂಟಿನೊಳಗೆ ಕುಳಿತ ಜನ ಆಟನೋಡುತ್ತಿರುವಾಗಲೂ ತಮ್ಮ ಕಿವಿಯ ಒಂದಂಶವನ್ನು ಹೊರಗೆ, ಯೆಸ್ಡಿ ಬೈಕ್ ನ ಸೌಂಡ್ ಎಷ್ಟು ಹೊತ್ತಿಗೆ ಕೇಳುತ್ತದೆ ಎಂಬುದೇ ನಿರೀಕ್ಷೆ. ಸರಿಯಾಗಿ ಒಂದು ಘಂಟೆಗೆ ಅವರ ರಂಗಸ್ಥಳ ಆಗಮನ. ಈ ಸಮಯವನ್ನು ಎಂದೂ ಮೀರಿದ್ದಿಲ್ಲ. ಅಲ್ಲಿಗೆ ಪ್ರತೀ ದಿನ ಅಂದಾಜು 5 ತಾಸು ಒಬ್ಬರೇ ಯಕ್ಷಮಾತೆಯ ಸೇವೆ ಗೈದಿದ್ದಾರೆ. ಈಗಿನ ಕಾಲಕ್ಕೆ ಇದನ್ನು ಹೋಲಿಸಿ ನೋಡಿ. ವ್ಯತ್ಯಾಸ ಥಟ್ಟನೇ ತಿಳಿಯುತ್ತದೆ. ಆ ಪ್ರವೇಶವೇ ಒಂದು ರೋಮಾಂಚಕ ಘಳಿಗೆ , ಅಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ. ನಂತರ ಬೆಳಗ್ಗಿನವರೆಗೆ ಗಾನಗಂಧರ್ವನ  ರಸ ಸಾಮ್ರಾಜ್ಯವದು.  

ಪ್ರತೀ ಒಂದು ತಾಸಿಗೆ ಏರುವ ಶೃತಿ , ಕಳೆಗಟ್ಟುತ್ತಾ ಸಾಗುವ ಆಟ. ನಿದ್ರೆಯೆಂಬುದು ಸುಳಿಯದ ಜಾಗರಣೆ . ಯಕ್ಷ ಲೋಕವೆಂಬ ಫ್ಯಾಂಟಸಿಯ ಜಗತ್ತು ನಾದ ನಿನಾದದಲ್ಲಿ ಅದ್ವೈತವಾಗಿಬಿಡುವ ಸೊಬಗದು - ಬೆರಗದು. ಅನೂಹ್ಯ ಲೋಕದ ಗಾನಯಾನವದು.

ನಾನೊಮ್ಮೆ ಖುದ್ದು ಪರೀಕ್ಷಿಸಿದ್ದೆ. ರಂಗಸ್ಥಳದ ಹಿಂದಿನಿಂದ. ನಾವುಡರು ರಂಗದಲ್ಲಿ ಇರುವಷ್ಟು ಹೊತ್ತು  ಪ್ರೇಕ್ಷಕರ ಕಣ್ಣಿನ ಶೇಖಡಾವಾರು ನೋಟ ನಾವಡರ ಕಡೆಗೇ ಹೆಚ್ಚು. ಮುಮ್ಮೇಳದ ಸಕಲಾಕರ್ಷಣೆಗಳ ಆಚೆಯೂ ತೆರೆದುಕೊಳ್ಳುವ " ನಾವಡಾಕರ್ಷಣೆ " ಅದು.

ಹನ್ನೆರಡು ಐವತ್ತಕ್ಕೆಲ್ಲಾ ಒಮ್ಮೆ ಚೌಕಿಗೆ ಹೋಗುವುದು , ಅವರು ಏಳುವ ತನಕ ಕಾಯುವುದೂ , ಆ ಕಾಯುವಿಕೆಯ ಹಿತದಲ್ಲಿ " ದೇವ್ರೇ ಇವತ್ತು ನಾವಡರಿಗೆ ಮಾತಾಡುವ ಮೂಡಿರಲಿ ಪ್ಲೀಸ್ " ಎಂದು ಹಲುಬುವುದೂ .... ಮರೆಯಲಾರದ ದಿನಗಳು.

ಚೌಕಿಯಲ್ಲಿ  ಅವರಿಗೆಂದೇ ಪುಟ್ಟದೊಂದು ಚೇಂಬರ್ ಇರುತ್ತಿತ್ತು. ಎದ್ದಕೂಡಲೆ ಒಂದು ಸಾದಾ ಬೀಡಿ , ಒಂದುಕಪ್ ಚಹಾ...... ನಂತರ ದಿವಿನಾದ ಆದರೆ ಸರಳವಾದ ಮುಖಾಲಂಕಾರ.  ಮೂಡ್ ಸರಿ ಇದ್ದರೆ ಒಂದಷ್ಟು ಮಾತು , ತಮಾಷೇ , ನಗು..... ಇಲ್ಲದಿದ್ದರೆ ವಾತಾವರಣ ಬಿಗು... ನಾನು ಎಲ್ಲಾ ಥರದ್ದನ್ನೂ ಅನುಭವಿಸಿದ್ದೇನೆ. ಅವರ ಸಾಂಗತ್ಯದ ಆ ಸೊಗಸಾದ ಕ್ಷಣ ಈಗಲೂ ಮೈ ನವಿರೇಳಿಸುವ ನೆನಪಿನ ನಿಧಿ. ಅವರ ಜೊತೆಗೆ ಮಾತಾಡಬೇಕು , ಅವರು ನಮ್ಮನ್ನು ಗಮನಿಸಬೇಕು, ಅವರ ಕಿರುನಗೆಯೊಂದು ನಮ್ಮ ಕಡೆಗೆ ಸುಳಿಯಬೇಕು ಎಂದು ಹರಕೆ ಹೊತ್ತವರೂ ಇದ್ದರೆಂದರೆ ನೀವು ನಂಬಲೇ ಬೇಕು. 

ನಾನಂತೂ ಅವರು ಮೂತ್ರಶಂಕೆಗೆಂದು ರಂಗಸ್ಥಳದಿಂದ ಇಳಿದಾಗಲೂ ಅವರ ಬೆನ್ನು ಹತ್ತುತ್ತಿದ್ದೆ.  ಆ ಸಂದರ್ಭದಲ್ಲೇ ಅವರು ನನ್ನ ಜೊತೆ ತುಂಬ ಖಾಸಗಿಯಾಗಿ ಮಾತಾಡುತ್ತಿದುದು ಹೆಚ್ಚು.ಇದು ಅವರ ಅಭಿಮಾನಿ ಮತ್ತು ಆತ್ಮೀಯರಲ್ಲಿ  ನನಗೆ ಮಾತ್ರ ಗೊತ್ತಿದ್ದ  ಮತ್ತು  ನನ್ನ - ಅವರ " ಯಾಂಟಿ ಚೇಂಬರ್ " 

ಒಮ್ಮೆ ಹಾಗೇ ಆಯ್ತು. ಯಾರೋ ನಾವಡರಿಗೆ ಕಾಂಪಿಟೇಟರ್ ಹುಟ್ಟಿಕೊಳ್ತಿದಾರೆ ಅಂದ್ರಂತೆ.  ಆ ಚರ್ಚೆ ನಡೆಯುತ್ತಿರುವುದು ಅವರೂ ಗಮನಿಸದೇ ಇರಲಿಲ್ಲ. ಆದರೆ ಆ ಬಗ್ಗೆ ಯಾವ ಉದ್ವೇಗದ ಪ್ರತಿಕ್ರಿಯೆಯನ್ನು ಕೊಡುತ್ತಲೂ ಇರಲಿಲ್ಲ. ಇದೇ ಸಂದರ್ಭ.ಎಂದಿನಂತೆ ಶೃಂಗೇರಿಯಲ್ಲಿ ಆಟ..... ಯಥಾಪ್ರಕಾರ ಅವರ ಮೂತ್ರಶಂಕೆಯ ಬಿಡುವಲ್ಲಿ  ನನ್ನನೊಮ್ಮೆ ನೋಡಿದರು. ಏನನ್ನಿಸಿತೋ.... " ಯಾವತ್ತಿದ್ರೂ ನಂಬರ್ ಒನ್ ನಾನೇ.... " ಎಂದು ಕಣ್ಣು ಮಿಟುಕಿಸಿ ನಕ್ಕು ರಂಗಸ್ಥಳಕ್ಕೆ ಹೋದರು.

“ಕಪ್ಪು ಮೂರರ ಶೃತಿಯಲ್ಲಿ ಅಣ್ಣಯ್ಯ ಬಯ್ಯದಿರು... " ಎಂಬಪದ್ಯ. ಚೈತ್ರ ಪಲ್ಲವಿ ಪ್ರಸಂಗ . ನೆರೆದ ಜನಸ್ತೋಮ. ಪ್ರಯೋಗಶೀಲತೆಯಲ್ಲೂ ಪರಂಪರೆಯ ಎಚ್ಚರದ ವಿಚಾರದಲ್ಲಿ ಅವರದ್ದೇ ವಿಶೇಷತೆ. ಅದೇ ದಾರಿ , ಅದೇ ನಡೆ , ಆನೆ ನಡೆದದ್ದೇ ......... ಎಂಬಂತೆ..... ಆ ನಂಬರ್ ಒನ್........ಒಂದೇ.... ಒಬ್ಬರೇ.....

ಅವನೇ " ಗಜಕಾಳಿಂಗ "

-ರಮೇಶ್ ಬೇಗಾರ್