ಅವಮಾನಗಳ ಮೆಟ್ಟಿ ನಿಂತ ಗಟ್ಟಿ ವ್ಯಕ್ತಿ - ಮಂಜಮ್ಮ ಜೋಗತಿ

ಅವಮಾನಗಳ ಮೆಟ್ಟಿ ನಿಂತ ಗಟ್ಟಿ ವ್ಯಕ್ತಿ - ಮಂಜಮ್ಮ ಜೋಗತಿ

ಹುಟ್ಟುವಾಗ ಹುಡುಗನಾಗಿದ್ದವನು ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗಳಾಗಿ ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳ ಸರಮಾಲೆಯನ್ನೇ ಕಟ್ಟಿಕೊಂಡು ಬದುಕಿದ ದೀಮಂತ ವ್ಯಕ್ತಿಯೇ ಮಂಜಮ್ಮ ಜೋಗತಿ. ಇಂದು ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ. ಇತ್ತೀಚೆಗೆ ಭಾರತದ ಉನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯೂ ಆಗಿದ್ದಾರೆ. ಆದರೆ ಅವರು ಸಾಗಿ ಬಂದ ಹಾದಿ, ಆ ಹಾದಿಯ ಕಲ್ಲು, ಮುಳ್ಳುಗಳು ಎಲ್ಲವನ್ನೂ ಅವರ ಬಾಯಲ್ಲೇ ಕೇಳುವ. ಕಲ್ಲು ಮುಳ್ಳುಗಳಿದ್ದ ಬದುಕಿನ ದಾರಿಯನ್ನು ಹೂವಿನ ಹಾಸಿಗೆ ಮಾಡಿಕೊಂಡ ಅವರ ಸಾಹಸದ ಬದುಕು ನಮಗೆಲ್ಲಾ ಪಾಠವಾಗಲಿ..

ನಾನು ಹುಟ್ಟಿದ್ದು ೧೯೫೭ರಲ್ಲಿ ಎಂದು ನನ್ನ ಹೆತ್ತವರ ಅಂದಾಜು. ಹುಟ್ಟಿದ ದಿನಾಂಕ ನೆನಪಿಲ್ಲ. ನನ್ನ ಹುಟ್ಟೂರು ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಕುಗ್ರಾಮ. ನನ್ನ ತಂದೆ ಹನುಮಂತಯ್ಯ ಶೆಟ್ಟಿ ಮತ್ತು ತಾಯಿ ಜಯಲಕ್ಷ್ಮಿ. ನನ್ನ ಹೆತ್ತವರಿಗೆ ಬರೋಬ್ಬರಿ ೨೧ ಮಂದಿ ಮಕ್ಕಳು. ಮೊದಲೇ ಬಡ ಕುಟುಂಬ. ಅದರ ಮೇಲೆ ಸಾಲು ಸಾಲು ಮಕ್ಕಳು. ಬಡವರಿಗೆ ಕಷ್ಟಗಳು ಜಾಸ್ತಿ ಎನ್ನುತ್ತಾರಲ್ಲಾ ಹಾಗೆಯೇ ನಮ್ಮ ಕುಟುಂಬಕ್ಕೆ ಬಂದ ಸಂಕಷ್ಟಗಳೂ ಹಲವಾರು. ನನ್ನ ಸಹೋದರ- ಸಹೋದರಿಯರಲ್ಲಿ ಬದುಕಿ ಉಳಿದವರು ನಾಲ್ಕು ಮಂದಿ ಮಾತ್ರ. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಬದುಕಿದವರು. ನಾನು ಹುಟ್ಟುವಾಗ ಗಂಡು ಮಗುವಿನಂತೆಯೇ ಇದ್ದುದರಿಂದ ನನಗೆ ಮಂಜುನಾಥ ಶೆಟ್ಟಿ ಎಂದು ಹೆಸರಿಟ್ಟಿದ್ದರು. ನನ್ನ ಹೆತ್ತವರಿಗೂ ಗಂಡು ಮಗನಾದುದರಿಂದ ನನ್ನ ಮೇಲೆ ವಿಶೇಷ ಅಕ್ಕರೆಯೂ ಇತ್ತು. ಬಾಲ್ಯದಲ್ಲಿ ಹುಡುಗು ಬುದ್ಧಿಯನ್ನು ತೋರಿಸಿ ಎಲ್ಲರನ್ನೂ ಕೀಟಲೆ ಮಾಡುತ್ತಿದ್ದ ನನಗೆ ೧೨ ವರ್ಷ ವಯಸ್ಸಾಗುತ್ತಾ ನನ್ನಲ್ಲಿ ದೈಹಿಕ ಬದಲಾವಣೆಗಳಾದುವು.

ನನ್ನಲ್ಲಿ ಹೆಣ್ಣಿನಲ್ಲಾಗುವ ದೈಹಿಕ ಬದಲಾವಣೆಗಳಾದುವು. ಹೆಣ್ಣಿನಂತೆ ವರ್ತನೆ ಮಾಡಲು ಪ್ರಾರಂಬಿಸಿದೆ. ನನ್ನ ಮನೆಯವರಿಗೆ ಮುಜುಗರವಾಗಲು ಪ್ರಾರಂಭವಾಯಿತು. ಸಮಾಜಕ್ಕೆ ಹೇಗೆ ಮುಖ ತೋರಿಸುವುದು ಎಂಬ ದಿಗಿಲು ಅವರ ಮುಖದಲ್ಲಿ ಕಾಣತೊಡಗಿತು. ಆದರೆ ಕಾಲ ಯಾರಿಗೂ ಕಾಯುವುದಿಲ್ಲ. ನನ್ನಲ್ಲಿ ಹೆಣ್ಣಿನಲ್ಲಾಗುವ ಭಾವನೆಗಳು ಮೂಡಲಾರಂಬಿಸಿದವು. ಅವರಂತೆಯೇ ಶೃಂಗಾರ ಮಾಡಲಾರಂಭಿಸಿದೆ. ಕಡೆಗೊಮ್ಮೆ ನನಗೆ ಗೊತ್ತಾಯಿತು ನಾನು ಅವನಲ್ಲ ಅವಳು... ಎಂದು. ನಾನು ತೃತೀಯ ಲಿಂಗಿಯಾಗಿ ಬದಲಾಗಿದ್ದೆ. ಅತ್ತ ಗಂಡೂ ಅಲ್ಲ, ಇತ್ತ ಹೆಣ್ಣೂ ಅಲ್ಲ. ಮಂಗಳಮುಖಿಯಾದ ನನಗೆ ಸಮಾಜದಿಂದ ಸಿಕ್ಕ ಮೊದಲ ಬಹುಮಾನವೇ ತಿರಸ್ಕಾರ.

‘ಗಂಡಾಗಿದ್ದರೆ ಮದುವೆ ಮಾಡಿ ಸಾಂಸಾರ ಹೂಡಲು ಬೇರೆ ಮನೆ ಮಾಡಿಕೊಡುತ್ತಿದ್ದೆವು. ಹೆಣ್ಣಾಗಿದ್ದರೆ ಕಷ್ಟ ಪಟ್ಟಾದರೂ, ಸಾಲ ಮಾಡಿಯಾದರೂ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಿದ್ದೆವು. ಕಿವುಡನೋ, ಕುಂಟನೋ, ಕುರುಡನೋ ಆಗಿದ್ದರೆ ಮನೆಯಲ್ಲೇ ಕಷ್ಟ ಪಟ್ಟು ಸಾಕುತ್ತಿದ್ದೆವು. ಆದರೆ ಇವನು ಎಲ್ಲವನ್ನೂ ಮೀರಿದವನು. ಹೇಗೆ ಮನೆಯಲ್ಲಿಟ್ಟು ಸಾಕಲಿ' ಎಂದು ಹೆತ್ತವರು ನನ್ನ ಬಗ್ಗೆ ನುಡಿದ ಮಾತುಗಳು ನನ್ನಲ್ಲಿ ಬಹಳ ಬೇಸರವನ್ನುಂಟು ಮಾಡಿತು. ಅವರಿಗೋ ಲೋಕದ ಭಯ. ಎಲ್ಲ್ ಸಮಾಜದಿಂದ ತಮ್ಮನ್ನು ಬಹಿಷ್ಕಾರ ಹಾಗಿ ಬಿಡುತ್ತಾರೋ ಎಂಬ ಗಾಬರಿ. ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ತಿರಸ್ಕಾರ ಭಾವನೆಯಿಂದ ನೋಡುತ್ತಾರೆ ಎನ್ನುವ ಚಿಂತೆ. 

ನಾನಾದರೂ ಏನು ಮಾಡಲಿ? ನನ್ನ ದೈಹಿಕ ಸಮಸ್ಯೆಗಳನ್ನು, ಆಗುತ್ತಿರುವ ಬದಲಾವಣೆಗಳನ್ನು ನಿಲ್ಲಿಸುವ ಅಥವಾ ಬದಲಾಯಿಸುವ ಶಕ್ತಿ ನನ್ನಲ್ಲಿ ಇರಲಿಲ್ಲ. ವೈದ್ಯರೂ ಕೈಚಿಲ್ಲಿದಾಗ ಹೆತ್ತವರೇ ನನ್ನನ್ನು ಮನೆಯಿಂದ ಹೊರಗೆ ಹಾಕುವ ಯೋಜನೆ ಮಾಡಿದರು. ಒಮ್ಮೆ ನನ್ನ ಹೆತ್ತವರೇ ನನ್ನನ್ನು ಹೊಸಪೇಟೆಯ ಹುಲುಗಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ಮುತ್ತು ಕಟ್ಟಿಸಿದರು (ಜೋಗತಿಯನ್ನಾಗಿ ಮಾಡುವುದು). ನನ್ನ ಸೊಂಟದಲ್ಲಿದ್ದ ಉಡುದಾರವನ್ನು ಕತ್ತರಿಸಿ ಹಾಕಿದಾಗ ನನಗೆ ಕರುಳೇ ಕಿತ್ತಂತಾಯಿತು. ಆದರೆ ನಾನು ಅಸಹಾಯಕನಾಗಿದ್ದೆ. ನನಗಿಂತಲೂ ನನ್ನ ಹೆತ್ತವರು ಅಸಹಾಯಕರಾಗಿದ್ದರು. ನನ್ನ ಅಮ್ಮನ ಮನಸ್ಸು ಎಷ್ಟು ಅತ್ತಿರಬಹುದು? ಎಂಬುದನ್ನು ಯೋಚಿಸುವಾಗ ನನಗೆ ಈಗಲೂ ಅಳು ಬರುತ್ತದೆ.

ನಂತರದ ನನ್ನ ದಿನಗಳು ಬಹಳ ಘೋರವಾಗಿದ್ದವು. ಮಂಜುನಾಥ ಶೆಟ್ಟಿ ಎಂಬ ಹೆಸರಿನವನಾಗಿದ್ದ ನಾನು ‘ಮಂಜಮ್ಮ’ ಎಂಬ ಹೆಸರನ್ನು ಪಡೆದುಕೊಂಡೆ. ಆ ಕಾಲಘಟ್ಟದಲ್ಲಿ ಮಂಗಳಮುಖಿಯವರು ಮಾಡ ಬಹುದಾಗಿದ್ದ ಏಕೈಕ ಕಸುಬೆಂದರೆ ಕೈ ತಟ್ಟಿ ಭಿಕ್ಷೆ ಬೇಡುವುದು. ನಾನೂ ಇದನ್ನೇ ಮಾಡಿದೆ. ಒಂದು ದಿನ ಈ ಬದುಕಿನಿಂದ ರೋಸಿ ಹೋದ ನಾನು ಅಂದು ಭಿಕ್ಷೆಯಲ್ಲಿ ಸಿಕ್ಕ ಹಣದಿಂದ ವಿಷ ತಂದು ಕುಡಿದೇ ಬಿಟ್ಟೆ. ಆದರೆ ಗಟ್ಟಿ ಜೀವ. ನಾನು ಸಾಯಲಿಲ್ಲ. ಬದುಕಿದೆ.  ಅಂದೇ ನಾನು ನಿರ್ಧಾರ ಮಾಡಿದೆ. ಬದುಕನ್ನು ಬೇರೆಯವರು ಹೇಳಿದಂತೆ, ಆಡಿಸಿದಂತೆ ಬದುಕಲಾರೆ, ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳುವೆ ಎಂದು. 

ನನ್ನ ಮೇಲೂ ಲೈಂಗಿಕ ದೌರ್ಜನ್ಯಗಳು ಆಗಿವೆ. ಕಾಮ ಪಿಪಾಸುಗಳಿಗೆ ಹುಡುಗಿಯರೇ ಬೇಕೆಂದು ಇಲ್ಲ, ಅವರ ಕಾಮನೆಯನ್ನು ತೀರಿಸಲು ನಮ್ಮಂಥಹ ಮಂಗಳಮುಖಿಯರೂ ಸಾಕಾಗುತ್ತಾರೆ. ಈಗಲೂ ಈ ಅನಿಷ್ಟ ಮುಂದುವರೆದಿದೆ. ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಸಮಾಜವೂ ಕಣ್ಣು ಮುಚ್ಚಿ ಕುಳಿತಿದೆ. ಇದೆಲ್ಲಾ ಬದಲಾಗಬೇಕೆಂದು ನನ್ನ ಮನಸ್ಸು ಯಾವಾಗಲೂ ಯೋಚಿಸುವುದಿದೆ. 

ನನ್ನ ಅದೃಷ್ಟ ದೊಡ್ದದಿತ್ತು. ನನಗೆ ಮೊದಲ ಗುರುವಾಗಿ ದೊರೆತವರು ಮತ್ತಿಕಲ್ ಬಸಪ್ಪ. ನಂತರ ಗುರುವಾಗಿ ನನ್ನ ಜೀವನದಲ್ಲಿ ಬಂದವರು ಕಾಳವ್ವ ಜೋಗತಿ. ಇವರು ನನಗೆ ಬಣ್ಣ ಹಚ್ಚಿ, ನೃತ್ಯ ಮಾಡುವುದನ್ನು ಹೇಳಿಕೊಟ್ಟರು. ನನ್ನ ಮೈಬಣ್ಣ ಕಪ್ಪಗೆ ಇದ್ದುದರಿಂದ ರಂಗಸ್ಥಳಕ್ಕೆ ಹತ್ತುವಾಗ ಮುಖಕ್ಕೆ ಸೊಗಸಾಗಿ ಬಣ್ಣ ಹಚ್ಚಿಕೊಳ್ಳುತ್ತಿದ್ದೆ. ನನ್ನನ್ನು ನಾನೇ ಕನ್ನಡಿಯಲ್ಲಿ ನೋಡಿ ನನ್ನ ಅಲಂಕಾರವನ್ನು ನಾನೇ ಮೆಚ್ಚಿ ಕೊಳ್ಳುತ್ತಿದ್ದೆ. ಆ ಸಮಯದಲ್ಲಿ ನಾ ಕಲಿತ ಜಾನಪದ ಕಲೆಯೇ ನನ್ನ ಮುಂದಿನ ಜೀವನದ ಪಯಣಕ್ಕೆ ಬುನಾದಿ ಎಂದು ನಾನು ಮನಸ್ಸಲ್ಲಿ ಗಟ್ಟಿ ಮಾಡಿಕೊಂಡೆ. ಹೀಗೆ ನನ್ನ ಜಾನಪದ ಕಲಾ ಜೀವನ ಪ್ರಾರಂಭವಾಯಿತು. ಎಲ್ಲಮ್ಮನ ಬಗ್ಗೆ ಕಥೆ ಇರುವ ನಾಟಕದಲ್ಲಿ ನಾನು ಅನೇಕ ಬಾರಿ ನಟಿಸಿದ್ದೇನೆ. ಜೋಗತಿ ನೃತ್ಯ ಮಾಡುವುದನ್ನು ನನ್ನ ಎರಡನೇ ಗುರುಗಳಾದ ಕಾಳವ್ವ ಜೋಗತಿಯವರು ಕಲಿಸಿಕೊಟ್ಟರು. ಅವರಿಗೆ ನಾನು ನನ್ನ ಜೀವನ ಪರ್ಯಂತ ಕೃತಜ್ಞಳಾಗಿರುವೆ. ಅವರ ಸಹಕಾರದಿಂದಲೇ ನಾನು ಈ ಎಲ್ಲಾ ಅಪಮಾನಗಳನ್ನು ಮೆಟ್ಟಿ ಗಟ್ಟಿ ನಿಲ್ಲುವಂತಾಯಿತು. ನನ್ನದೇ ಆದ ಒಂದು ಸ್ಥಾನವನ್ನು ಈ ಸಮಾಜದಲ್ಲಿ ಸ್ಥಾಪಿಸುವಂತಾಯಿತು. 

ನನಗೆ ಬಹಳ ಹೆಸರು ತಂದುಕೊಟ್ಟದ್ದು ‘ಜೋಗತಿ ನೃತ್ಯ' ಮತ್ತು ‘ಚೌಡಕಿ ಪದ'. ಈ ಜೋಗತಿ ನೃತ್ಯವನ್ನು ಪ್ರಪ್ರಥಮ ಬಾರಿಗೆ ವೇದಿಕೆಗೆ ತಂದದ್ದೇ ನಾನು ಹಾಗೂ ನನ್ನ ಗುರುಗಳಾದ ಕಾಳವ್ವ ಜೋಗತಿಯವರು ಎಂಬುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುವೆ. ಇದಕ್ಕೂ ಮೊದಲು ಯಾರೂ ವೇದಿಕೆಗಳಲ್ಲಿ ಜೋಗತಿ ನೃತ್ಯ ಪ್ರದರ್ಶನ ಮಾಡಿದ್ದೇ ಇಲ್ಲ. ನಾನು ಕಲಿತ ಕಲೆ ನನ್ನನ್ನು ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಪ್ರಯಾಣ ಮಾಡುವಂತೆ ಬೆಳೆಸಿತು. ಶಾಲಾ, ಕಾಲೇಜುಗಳಲ್ಲೂ ಬೇರೆ ಬೇರೆ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ರೀತಿಯಲ್ಲೇ ಜಾನಪದಗಳ ಒಂದು ಪ್ರಕಾರವಾದ ಜೋಗತಿ ನೃತ್ಯಕ್ಕೂ ಬೆಂಬಲ ನೀಡಬೇಕು. ಮಕ್ಕಳು ಬೇರೆ ಕಲೆಗಳಂತೆ ಇದನ್ನೂ ಕಲಿಯಬೇಕು ಎನ್ನುವುದು ನನ್ನ ಹೆಬ್ಬಯಕೆ. ಹಲವಾರು ತೆರೆಯ ಮರೆಯಲ್ಲಿರುವ ಜಾನಪದ ಕಲಾವಿದರು ಮುನ್ನಲೆಗೆ ಬರಬೇಕು. ಅವರಿಗೂ ವೇದಿಕೆ ಸಿಗಬೇಕು, ಅವರ ಬಾಳೂ ಹಸನಾಗಬೇಕು ಎಂಬ ಕನಸು ನನ್ನದು.

ನನ್ನ ಕೆಲಸವನ್ನು ಮೆಚ್ಚಿ, ನಾನು ಜಾನಪದ ಲೋಕಕ್ಕೆ ಏನಾದರೂ ಮಾಡಬಲ್ಲೆ ಎಂದು ನನ್ನ ಮೇಲೆ ನಂಬಿಕೆಯಿರಿಸಿ ಮುಖ್ಯಮಂತ್ರಿಗಳು ನನ್ನನ್ನು ಕರ್ನಾಟಕ ಜಾನಪದ ಅಕಾಡೆಮಿಗೆ ಅಧ್ಯಕ್ಷರನಾಗಿ ಮಾಡಿದ್ದಾರೆ. ನನ್ನ ಮೇಲೆ ಹೊರಿಸಿದ ದೊಡ್ದ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂಬ ನಂಬಿಕೆ ನನಗಿದೆ. ಬಹಳ ಹಿಂದೆ ತುಮಕೂರಿನಲ್ಲಿ ನಡೆದ ‘ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳ’ನದಲ್ಲಿ ಮೊದಲ ಬಾರಿಗೆ ಜೋಗತಿ ನೃತ್ಯ ಮಾಡಲು ವೇದಿಕೆ ಏರಿದೆ. ನಂತರದ ದಿನಗಳಲ್ಲಿ ಅಸಂಖ್ಯಾತ ಬಾರಿ ವೇದಿಕೆ ಹತ್ತಿರುವೆ. ಹಂಪಿ ಉತ್ಸವ, ಬೀದರ ಉತ್ಸವ, ಜಾನಪದ ಉತ್ಸವಗಳಲ್ಲೆಲ್ಲಾ ನನ್ನ ಕಲಾ ಪ್ರತಿಭೆಯ ಅನಾವರಣ ಮಾಡಿರುವೆ. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನನಗೆ ಬಂತು. ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ನನಗೆ ಬಂದಿವೆ. ನನಗೆ ಖುಷಿಕೊಡುವ ಸಂಗತಿಯೆಂದರೆ ನಾ ಕಲಿತ ಜಾನಪದ ಕಲೆ ನನ್ನಂತಹ ಮಂಗಳಮುಖಿಯರೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿತಲ್ಲಾ ಎನ್ನುವುದು. ಕೆಲವು ದಿನಗಳ ಹಿಂದೆ ಭಾರತ ಸರಕಾರವೂ ನನ್ನ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪುರಸ್ಜಾರ ಫೋಷಣೆ ಮಾಡಿದೆ. ಇದರೊಂದಿಗೆ ನನ್ನ ಜವಾಬ್ದಾರಿಗಳೂ ಹೆಚ್ಚಾಗಿವೆ. ಜಾನಪದ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಾಗೂ ಸಾಧಕರನ್ನು ಗುರುತಿಸುವ ಶಕ್ತಿ ನನಗೆ ನೀಡು ಭಗವಂತ ಎಂದು ನಾನು ಕೇಳಿಕೊಳ್ಳುವೆ. 

***

ಮಂಜಮ್ಮ ಜೋಗತಿಯವರ ಸಾಧನೆ ನೋಡಿ ಬೆರಗಾದಿರಾ? ಅವಮಾನವನ್ನು ಮೆಟ್ಟಿ ಇಂತ ಇವರು ಸಾಧಿಸಿದ್ದು ಬಹಳ. ಅಪರೂಪದ ಜೋಗತಿ ನೃತ್ಯ ಕಲೆಗೆ ರಾಷ್ಟ್ರದಾದ್ಯಂತ ಮಾನ್ಯತೆ ನೀಡಿದ ಕೀರ್ತಿ ಇವರದ್ದು. ಇವರ ಸಾಧನೆ ಇವರಂತಹ ಸಾವಿರಾರು ಮಂಗಳಮುಖಿಯರಿಗೆ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಹಾರೈಕೆ.    

ಚಿತ್ರ ಕೃಪೆ: ಅಂತರ್ಜಾಲ ತಾಣ