ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?

‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದು ಹುದಿದುಂಬಿಸಿದ್ದಾರೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ. ಅಗಲಿದ ತನ್ನ ಅಪ್ಪ ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿಯಾಗಿರುವ ದೀಕ್ಷಿತ್ ನಾಯರ್ ಎಂಬ ಹುಡುಗನ ಬಗ್ಗೆ ಅವರು ಬರೆದಿರುವುದು ಹೀಗೆ…
“ಈ ಪುಸ್ತಕವಿದೆಯಲ್ಲಾ ಹೆಸರೇ ಹೇಳುವಂತೆ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಅದರ ಅರ್ಥವೇ ಎಂಥ ಚೆಂದ ರೀ ! ಇದಕ್ಕೊಂದು ಬೆನ್ನುಡಿ ಬೇಕೇ? ಹೌದು ಮುನ್ನುಡಿ ಇದ್ದ ಮೇಲೆ ಬೆನ್ನುಡಿಯು ಇರಲೇ ಬೇಕಲ್ಲವೇ? ‘ಬರಿ ಬರಿ ಬರೆದದ್ದನ್ನು ಹರಿ’ ತಮ್ಮ ಬಳಿಗೆ ಬಂದಿದ್ದ ಉದಯೋನ್ಮುಖ ಲೇಖಕನೊಬ್ಬನಿಗೆ ಬೇಂದ್ರೆ ಅಜ್ಜ ಹೇಳಿದ ಮಾತುಗಳಿವು. ಇದನ್ನು ಅಕ್ಷರಶಃ ಪಾಲಿಸಿದವನು ಈ ಹೊತ್ತಿಗೆಗೆ ಜನ್ಮ ನೀಡಿದ ದೀಕ್ಷಿತ್ ನಾಯರ್. ಅಪ್ಪನ ಅಪ್ಪಟ ಅಭಿಮಾನಿ. ಅಪ್ಪನಿಗೆ ಮತ್ತೊಂದು ಮಗುವಾಗಿ, ಅಪ್ಪನ ಜೊತೆ ಹತ್ತು-ಹನ್ನೆರಡು ಬಾರಿ ಫೋನಿನಲ್ಲಿ ಮಾತನಾಡಿದ್ದು ಬಿಟ್ಟರೆ ಒಮ್ಮೆಯೂ ಅವರನ್ನು ಮುಖತಃ ಭೇಟಿಯಾಗಲಿಲ್ಲ.
೨೦೨೦ ನವೆಂಬರ್ ೧೩ ನಮ್ಮ ಕುಟುಂಬಕ್ಕೆ ಮತ್ತು ಅಪ್ಪನ ಅಭಿಮಾನಿ ಬಳಗಕ್ಕೆ ಸಿಡಿಲಾಘಾತವಾದ ಕರಾಳ ದಿನ. ಅಪ್ಪನೆಂಬೋ ಅಕ್ಷರ ಗಾರುಡಿಗ ಇಹಲೋಕ ತ್ಯಜಿಸಿದ ದಿನ. ಇಂಥ ನವೆಂಬರ್ ೧೩ರಂದು ದೀಕ್ಷಿತ್ ನಿಷ್ಟೆಯಿಂದ ಅಪ್ಪನಿಗೊಂದು ಎಡೆ ಇಡುತ್ತಾನೆ. ಅದು ಅವನ ಪಾಲಿನ ಅಪ್ಪನ ಆರಾಧನೆ. ಇನ್ನೂ ಇಪ್ಪತ್ಮೂರರ ವಸಂತಗಳನ್ನು ಕಳೆಯದ ಈ ಹುಡುಗ ‘ಹಾಯ್’ ಅಂಕಣಕಾರ. ವಾರೆನೋಟ ಎಂಬ ಹೆಸರಿನ ಅಂಕಣಕ್ಕೆ ಇವನೇ ವಾರಸುದಾರ. ಇದೀಗ ಇವನು ಬರೆದ ಅಂಕಣಗಳಲ್ಲಿರುವ ‘ಮುತ್ತುಗಳನ್ನು ಪೋಣಿಸಿ’ ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ? ಎಂಬ ಪುಸ್ತಕವೊಂದನ್ನು ಹೊರ ತರುತ್ತಿದ್ದಾನೆ. ನಿಜಕ್ಕೂ ಈ ಹುಡುಗ ಭವಿಷ್ಯದಲ್ಲಿ ಒಳ್ಳೆಯ ಲೇಖಕನಾಗಿ ಹೊರಹೊಮ್ಮಲಿದ್ದಾನೆ. ನೇರ ನೋಟಕ್ಕೆ ಸಿಲುಕದ ಅದೆಷ್ಟೋ ವಿಷಯಗಳು ಇವನ ಲೇಖನಗಳಲ್ಲಿವೆ. ಓದದೇ ಇದ್ದವರ ದುರಾದೃಷ್ಟ ಎನ್ನಬಹುದು.”
ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಬರಹಗಾರ್ತಿ ಎಂ ಆರ್ ಕಮಲ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ…” ಇಲ್ಲಿ ಎಷ್ಟೊಂದು ಜನರು ಸದ್ದಿರದೆ ಚಂದ್ರನಂತೆ ಸಾಗುತ್ತಿದ್ದಾರೆ. ನಮ್ಮ ಕತ್ತಲ ಬದುಕಿನ ದಾರಿಗೆ ದೊಂದಿ ಹಿಡಿದಿದ್ದಾರೆ. ಅತ್ಯಂತ ಸಾಮಾನ್ಯರಂತೆ ಕಾಣುವ ಈ ವ್ಯಕ್ತಿಗಳು ಊಹಿಸಲೂ ಆಗದಷ್ಟು ಅಸಾಮಾನ್ಯರಾಗಿದ್ದಾರೆ. ಒಡೆದ ಮನಸ್ಸುಗಳ ನಡುವೆ ಸೇತುವೆಯನ್ನು ಕಟ್ಟುತ್ತಿದ್ದಾರೆ. ಹೊತ್ತಿರುವ ದ್ವೇಷದ ಬೆಂಕಿಯನ್ನು ನಂದಿಸುತ್ತಿದ್ದಾರೆ. ಸುತ್ತಲಿನ ಅಮಾನವೀಯ ಪರಿಸರದಲ್ಲಿ ಮಾನವೀಯ ಎಳೆಗಳನ್ನು ಹುಡುಕಿ, ತೆಗೆದು ನಮಗಾಗಿ ಚಂದದ ಬಟ್ಟೆ(ದಾರಿ)ಯೊಂದನ್ನು ನೇಯುತ್ತಿದ್ದಾರೆ. ಅಂತಹವರ ಅನುಭವಗಳು ಮತ್ತೊಬ್ಬರಿಗೆ ಸ್ಫೂರ್ತಿಯಾಗಬಹುದು, ಮಾರ್ಗದರ್ಶನವನ್ನು ನೀಡಬಹುದು, ಜೀವನದ ಪಾಠಗಳಾಗಬಹುದು. ಈ ವಿಚಾರದ ಬಗೆಗಿನ ದೀಕ್ಷಿತ್ ಅವರ ಕುತೂಹಲ, ಬೆರಗು, ಹುಡುಕಾಟಗಳು ಇಲ್ಲಿನ ಲೇಖನಗಳಾಗಿ ಒಡಮೂಡಿವೆ. ಜೀವಪರ ಕಾಳಜಿಯ, ನಿಸ್ವಾರ್ಥ ಸೇವೆಯ, ಪ್ರಚಾರ ಪ್ರಸಿದ್ಧಿಗಳಿಂದ ದೂರವಾಗಿ ಕಾಯಕದಲ್ಲಿ ನಿರತರಾದ ಅನೇಕರ ವ್ಯಕ್ತಿತ್ವಗಳನ್ನು ಈ ಲೇಖನಗಳು ಸಮರ್ಥವಾಗಿ ಪರಿಚಯಿಸುತ್ತವೆ. ಸ್ಮಶಾನದಲ್ಲಿ ಗುಂಡಿ ತೋಡುವ ಗಟ್ಟಿಗಿತ್ತಿಯಾಗಿರಬಹುದು, ಶವಾಗಾರದ ಸಿದ್ಧಯೋಗಿಯಾಗಿರಬಹುದು, ವೈದ್ಯನೋ, ಪುಸ್ತಕ ಪ್ರೇಮಿಯೋ, ಹಾಡುಗಾರನೋ ಮತ್ತೊಂದೋ ಆಗಿರಬಹುದು. ದಾರಿ ಬೇರೆಯಾದರೂ ಇವರೆಲ್ಲರ ಗುರಿ ಒಂದೇ. `ಕೊಟ್ಟ ಕುದುರೆಯನ್ನೇರಿ' ಆತ್ಮ ತೃಪ್ತಿಯಾಗುವಂತೆ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುವುದು. ಆ ಮೂಲಕ ಬದುಕಿನ ಸಾರ್ಥಕತೆಯನ್ನು ಬಿಂಬಿಸುವುದು. ಪರೋಕ್ಷವಾಗಿ ಇತರ ಜೀವಿಗಳಿಗೆ ಸ್ಥೈರ್ಯ, ಸಾಂತ್ವನ, ಬೆಳಕನ್ನು ನೀಡುವುದು.
ಇದರೊಂದಿಗೆ ದೀಕ್ಷಿತ್ ಅವರು ಅನಾಥ ಪ್ರಜ್ಞೆ, ವಿಸ್ಮೃತಿ, ವೃದ್ಧಾಪ್ಯ, ಒಂಟಿತನದಂತಹ ಪ್ರಚಲಿತ ಸಮಸ್ಯೆಗಳ ಬಗ್ಗೆ ಕೂಡ ಬರೆದಿದ್ದಾರೆ. ಪ್ರೀತಿ, ಭರವಸೆ, ಸಾಂತ್ವನ ನೀಡುವ ಲೇಖನಗಳು ಇಲ್ಲಿವೆ. ಭಾಷಣಕಾರರಾಗಿ ಪ್ರಸಿದ್ಧಿ ಪಡೆದಿರುವ ದೀಕ್ಷಿತ್ ಅವರ ಭಾಷೆಯಲ್ಲಿ ಯೌವನಿಗನೊಬ್ಬನ ಹುರುಪು, ಉತ್ಸಾಹ, ಚೈತನ್ಯ ಸಹಜವಾಗಿಯೇ ಇದೆ. ತಮ್ಮ ಬದುಕಿಗೆ ದಾರಿದೀಪವಾದವರು ಇತರರಿಗೂ ಆಗಲೆಂಬ ಮಹದಾಸೆಯಿದೆ. `ಕೆಲವಂ ಬಲ್ಲವರಿಂದ ಕಲ್ತು' ಎಂಬ ಪುಲಿಗೆರೆಯ ಸೋಮೇಶ್ವರನ ಶತಕದ ಸಾಲಿಗೆ ಮನಸೋತಿರುವ ದೀಕ್ಷಿತ್ ಅವರಿಗೆ ಸದ್ಯಕ್ಕೆ ದಕ್ಕಿರುವ ಈ `ಹಲವು ಹಳ್ಳಗಳು' ಸಮುದ್ರವಾಗಲಿ ಎಂದು ಹಾರೈಸುತ್ತೇನೆ.”