ಅವರು ಮತ್ತು ನಾವು
ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಡೆಮಾಕ್ರಟ್ ಪಕ್ಷದ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ನಡುವೆ ಹಣಾಹಣಿ. ಒಬಾಮಾ ಎರಡನೇ ಬಾರಿ ಶ್ವೇತ ಭವನದಲ್ಲಿ ಸಮಯ ಕಳೆಯಲು ಬಯಸಿದರೆ ಮಿಟ್ ರಾಮ್ನಿ ಆ ಆಸೆಗೆ ತಣ್ಣೀರೆರೆಚಲು ಏನೆಲ್ಲಾ ಮಾಡಬೇಕೋ ಅವನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ. ಅಮೆರಿಕೆಯಲ್ಲಿ ಇವರಿಬ್ಬರ ಗೆಲ್ಲುವ ಸಾಧ್ಯತೆ ಬಗ್ಗೆ punditry, ಹಾಗೆಯೇ ದಿನವೂ ಇವರಿಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಅಂಕಿ ಅಂಶಗಳ ಮಹಾಪೂರ. ತೈಲ ಅಥವಾ ಚಿನ್ನದ ಬೆಲೆ ಏರಿಳಿತದಂತೆ ದಿನವೂ ಅಂಕಿ ಅಂಶಗಳು ಏರು ಪೇರು. ಒಂದು ದಿನ ಒಬಾಮ ಮುಂದಿದ್ದರೆ, ಮತ್ತೊಂದು ದಿನ ರಾಮ್ನಿ. ರಾಜಕೀಯ ಪಂಡಿತರ ಲೆಕ್ಕಾಚಾರ ಮತ್ತು ಅಂಕಿ ಅಂಶಗಳ ಜೊತೆ ಇವರಿಬ್ಬರೂ ನಡೆಸಿದ ಬಹಿರಂಗ ಚರ್ಚೆಗಳು ಯಾರು ಅಧ್ಯಕ್ಷ ಪದವಿಗೆ ಹೆಚ್ಚು ಅರ್ಹ ಎಂದು ನಿರ್ಣಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಇದುವರೆಗೆ ಒಬಾಮಾ ಮತ್ತು ರಾಮ್ನಿ ನಡುವೆ ಮೂರು ಚರ್ಚೆಗಳು ನಡೆದಿವೆ. ಮೊದಲ ಚರ್ಚೆಯಲ್ಲಿ ಆಚ್ಚರಿದಾಯಕವಾಗಿ ಒಬಾಮಾ killer instinct ಪ್ರದರ್ಶಿಸದೆ ಸುಲಭವಾಗಿ ರಾಮ್ನಿಗೆ ಶರಣಾಗಿ ತಮ್ಮ ಪಕ್ಷದ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದರೆ, ಎರಡನೇ ಚರ್ಚೆಯಲ್ಲಿ ಚೇತರಿಸಿಕೊಂಡ ಒಬಾಮಾ, ಅಸಾಧಾರಣ ವಾಕ್ಪಟುತ್ವ ಮೆರೆಯದೆ ಇದ್ದರೂ ಮೇಲುಗೈಯಂತೂ ಸಾಧಿಸಿ ತಮ್ಮ ಅಭಿಮಾನಿಗಳಲ್ಲಿ ಆವೇಶ ತುಂಬಿದರು. ಮೊನ್ನೆ ನಡೆದ ಮೂರನೇ ಚರ್ಚೆಯಲ್ಲಿ ಒಬಾಮ ತನ್ನ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಿ ರಾಮ್ನಿಗೆ ಚಳ್ಳೆ ಹಣ್ಣು ತಿನ್ನಿಸಿದರು. 'ಬೋಕಾ ರೇಟೋನ್' ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಚರ್ಚೆಯಲ್ಲಿ ಒಬಾಮ ವಿಜಯೀ ಎಂದು ಮಾಧ್ಯಮಗಳ ವರದಿ.
ಆದರೆ ಮೊದಲ ಇಂಪ್ರೆಷನ್ ಬೆಸ್ಟ್ ಇಂಪ್ರೆಷನ್ ಅಂತೆ. ರಾಮ್ನಿ ವಿಜಯಿ ಯಾಗಬಹುದು ಎಂದು ಈಗ ಹೆಚ್ಚಿನವರ ಊಹೆ. ಈ ಚರ್ಚೆಗಳು ಯಾವ ರೀತಿ ಮತದಾರನ ಮೇಲೆ ಪ್ರಭಾವ ಬೀರುತ್ತವೆ, ಮತ್ತು ಈ ಪ್ರಭಾವ ಮತಗಟ್ಟೆ ಯವರೆಗೂ ಪ್ರಯಾಣಿಸ ಬಹುದೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ. ದೇಶವನ್ನು ಕಾಡುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕೆಯ ಪ್ರಭಾವ ಮುಂತಾದ ಹತ್ತು ಹಲವು ವಿಷಯಗಳ ಬಗ್ಗೆ ಇವರೀರ್ವರ ನಿಲುವುಗಳನ್ನು ಅಮೇರಿಕಾ ಮಾತ್ರವಲ್ಲ ವಿಶ್ವವೇ ಬಹು ಆಸ್ಥೆಯಿಂದ ಆಲಿಸಿತು. ಅಂತಾರಾಷ್ಟ್ರೀಯವಾಗಿ ಅಮೆರಿಕೆಯ ಪ್ರಭಾವದ ಬಗ್ಗೆ ಬಹು ಜೋರಾದ ಧಾಳಿ, ಪ್ರತಿ ಧಾಳಿಗಳು ನಡೆದವು ಒಬಾಮಾ ರಾಮ್ನಿ ನಡುವೆ. ಬಾಗ್ದಾದ್ ಬೀದಿಗಳಲ್ಲಿ, ಕಂದಹಾರದ ಗುಡ್ಡಗಾಡು ಗಳಲ್ಲಿ ನಡೆಯುವ ಗುಂಡಿನ ಚಕಮಕಿಗಿಂತ ಬಿರುಸೇ ಎನ್ನಬಹುದಾದ sniping. ಸೌದಿ ಅರೇಬಿಯಾ, ಇರಾಕ್ ಇರಾನ್, ಲಿಬ್ಯ, ಇಸ್ರೇಲ್ ಹೀಗೆ ಹಲವು ದೇಶಗಳ ಬಗ್ಗೆ ಚರ್ಚೆ ನಂತರ ಏಷ್ಯಾದ ಕಡೆಗೂ ಹರಿಯಿತು ಗಮನ. ಚೀನಾದ ಪ್ರಭಾವದ ಬಗ್ಗೆ ಕೂಡಾ ಹರಿಯಿತು ಒಬಾಮಾ, ರಾಮ್ನಿ ಯವರ ಗಮನ. ಏಷ್ಯಾ ಎಂದರೆ ಚೀನಾ ಎನ್ನುವಷ್ಟರ ಮಟ್ಟಿಗೆ ಚೀನಾ ಬೆಳೆದು ಬಿಟ್ಟಿದೆ. ಸರಿ, ಸರಿ, ಈ ಚರ್ಚೆಗಳಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಸ್ಟೇಟಸ್ ಏನು?.........ನಮ್ಮ ಸ್ಟೇಟಸ್ಸೋ? ಅದೇ ಹಳೆಯ ಸ್ಟೇಟಸ್ಸು, ಆರಕ್ಕೆ ಯೇರ್ಲಿಲ್ಲ, ಮೂರಕ್ಕೆ ಇಳೀಲಿಲ್ಲ ಎನ್ನುವ ಸ್ಟೇಟಸ್. ವೆಬ್ ತಾಣಗಳಲ್ಲಿ ಉತ್ಸಾಹದಿಂದ ಸೇರಿಕೊಂಡು ಸ್ಟೇಟಸ್ ಅಪ್ಡೇಟ್ ಮಾಡದೆ ಸೋಮಾರಿತನ, ಜಡತ್ವ ಪ್ರದರ್ಶಿಸುವವರ ರೀತಿ ಅಮೇರಿಕಾ ನಮ್ಮ ಬಗ್ಗೆ ಅಸಾಧಾರಣ, ಆದರೂ ನಿರೀಕ್ಷಿತ, ಅಸಡ್ಡೆ ತೋರಿಸಿ ನಾವು ಗ್ಲೋಬಲ್ ಪ್ಲೇಯರ್ ಅಲ್ಲ ಎಂದು ಕೇಳದೆಯೇ ಪ್ರಮಾಣ ಪತ್ರ ದಯಪಾಲಿಸಿತು. ಅಮೆರಿಕೆಯ ಈ ಅಸಡ್ಡೆ, ಉಡಾಫೆಯ ಬಗ್ಗೆ ಹೆಚ್ಚು ಹೇಳಿದರೆ anti american ಪಟ್ಟ ಗ್ಯಾರಂಟಿ ನನಗೆ. ಆದರೂ ಒಂದನ್ನಂತೂ ಹೇಳಲೇಬೇಕು. ಅಮೆರಿಕೆಗೆ ನಾವು ಒಂದು invoice ಥರ. ಬರೀ ಒಬ್ಬ ಗಿರಾಕಿ. ವಾಲ್ ಮಾರ್ಟ್ ಮಳಿಗೆ ಮುಂದೆ ಡಿಸ್ಕೌಂಟ್ ಸೇಲ್ ಗಾಗಿ ಹಲ್ಲು ಕಿರಿಯುತ್ತಾ, ಕತ್ತು ಉದ್ದ ಮಾಡಿ ನಿಲ್ಲುವ ಗಿರಾಕಿ.
ನಮ್ಮನ್ನು ಇತರರು ಗೌರವದಿಂದ ಕಾಣಬೇಕು ಅನ್ನುವ ಬಯಕೆ ಆಕಾಂಕ್ಷೆ ನಮಗೆ ಇದ್ದರೆ ಮೊದಲು ನಾವು ನಮ್ಮನ್ನು ಗೌರವಿಸಿಕೊಳ್ಳಬೇಕು. ಇದು ನಿಯಮ. ಸದ್ಯಕ್ಕೆ ಆ ಆಸೆ ಈಡೇರಿಸುವ ಸರದಾರ ಅಥವಾ ಸರಾದರಿಣಿ ಇನ್ನೂ ಜನ್ಮ ಎತ್ತಿಲ್ಲ ನಮ್ಮ ದೇಶದಲ್ಲಿ. ಅಲ್ಲಿಯವರೆಗೂ ಏಷ್ಯಾ ಎಂದರೆ ಚೀನಾ, ಜಪಾನ್, ಮಲೇಷ್ಯಾ ಕೊನೆಗೆ ಬಾಂಗ್ಲಾದೇಶ. ನಾವು ಗೈರು ಹಾಜರು.
ಈಗ ಎಂಟರ್ ಅವರ್ ಮಹಾನ್ ಭಾರತ. ಋಷಿ ಪುಂಗವರು, ಸಾಧು ಸಂತರು, ಪೀರ್, ಸೂಫಿಗಳು, ನೆಮ್ಮದಿ ಕಂಡ, ಮುಕ್ತ ಕಂಠದಿಂದ ಕೊಂಡಾಡಿದ ಈ ಸೊಗಸಾದ ದೇಶಕ್ಕೆ ದೇವರು ಒಳ್ಳೆಯ, ದಕ್ಷ, ಪ್ರಾಮಾಣಿಕ ಆಡಳಿತಗಾರರನ್ನು ದಯಪಾಲಿಸದೆ ಸ್ಪಷ್ಟ ರಾಜಕಾರಣ ತೋರಿಸಿದ್ದಾನೆ ಎಂದು ಯಾರಾದರೂ ದೂರಿದರೆ ಅವರ ದೂರು "ಕಂಪ್ಲೀಟ್ಲಿ ವ್ಯಾಲಿಡ್". ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶೀ ಧಾಳಿಕೋರರು ನಮ್ಮನ್ನು ಆಳಿದರೆ, ಸ್ವಾತಂತ್ರ್ಯಾ ನಂತರ ಸ್ವದೇಶೀ ಧಾಳಿಕೋರರ ಸರತಿ. ಯಾರು ಹಿತವರು ಇವರೀರ್ವರಲ್ಲಿ? ನಿಮ್ಮ ದೃಷ್ಟಿ ಸಾಗರದಾಚೆ ಓಡಿದರೆ ಅದು ಕ್ಷಮಾರ್ಹವಾದ ದೃಷ್ಟಿಯೇ. ಭಿಕ್ಷುಕನ ತಟ್ಟೆಗೂ ಕನ್ನ ಹಾಕುವವರನ್ನು ನಾವಿಂದು ಆರಿಸಿ ಕಳಿಸುತ್ತಿದ್ದೇವೆ. ನಮ್ಮ ದೇಶ ಎಷ್ಟು ಭ್ರಷ್ಟ ಎಂದು ನಮಗೆ ತಿಳಿಹೇಳಲು ಯಾವುದೇ ಅಂಕಿ ಅಂಶಗಳು ಬೇಕಿಲ್ಲ. ಗಡ್ಕಾರೀ ತನ್ನ ಕಂಪೆನಿಗಳ ಮೂಲಕ ಎಷ್ಟು ಸಂಪತ್ತು ದೋಚಿ ಗಡದ್ದಾಗಿದ್ದಾರೆ ಎಂದು ಕಾಂಗ್ರೆಸ್ ಹಿಂದೆ ಬಿದ್ದಿದ್ದರೆ, ಕೇಜರಿವಾಲ ನಲ್ಲಿ ಎಷ್ಟು ಕೇಸರಿ ತುಂಬಿಕೊಂಡಿದೆ ಎಂದು ಸೆಕ್ಯುಲರ್ ವಾದಿಗಳು ದುರ್ಬೀನು ಹಿಡಿಯುತ್ತಿದ್ದಾರೆ. ಅಣ್ಣಾ ಹಜಾರೆಯ ನಿಯ್ಯತ್ತಿನ ಬಗ್ಗೆ ಕೆಲವರು ಅಪಸ್ವರ ಎತ್ತಿದರೆ ಮತ್ತೊಬ್ಬ ಸೋನಿಯಾರ ಸೆರಗು ಜಗ್ಗುತ್ತಾನೆ ತಮ್ಮ ಅಳಿಯಂದಿರ ವಹಿವಾಟುಗಳ ಕರ್ಮಕಾಂಡದ ತನಿಖೆಗಾಗಿ. ಕೆಸರೋ ಕೆಸರು. ಅಲ್ಲಿ ಅಮೆರಿಕೆಯಲ್ಲಿ ಚರ್ಚೆಯೋ ಚರ್ಚೆ. ಇಲ್ಲಿ ಕೆಸರೋ ಕೆಸರು. ಅಮೆರಿಕೆಯಲ್ಲಿ ಆರೋಗ್ಯ ವಿಮಾ ಪದ್ಧತಿಯ ಬಗ್ಗೆ ವಿವಾದ, ನಿರುದ್ಯೋಗದ ಬಗ್ಗೆ ಚರ್ಚೆ, ಸಲಿಂಗಿಗಳ ಹಕ್ಕುಗಳ ಬಗ್ಗೆ ವಾಗ್ಯುದ್ಧ, ಕಾಲೇಜಿಗೆ ಹೋಗುವ ತರುಣ ತರುಣಿಯರಿಗೆ ಕಾಂಡೋಮ್ ನ ಖರ್ಚು ಸರಕಾರ ಭರಿಸಬೇಕೆ ಎನ್ನುವ ಜಿಜ್ಞಾಸೆ, ಕಂಪೆನಿಗಳನ್ನು ಸಾಲ ಮುಕ್ತ ರನ್ನಾಗಿಸಬೇಕೋ ಬೇಡವೋ ಎನ್ನುವುದರ ಡಿಬೇಟ್, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಎಷ್ಟು ಆಳ ಮೂಗು ತೋರಿಸಬೇಕು ಎನ್ನುವುದರ ಮೇಲೆ ವಾಗ್ಯುದ್ಧ...ಆದರೆ ನಮ್ಮಲ್ಲಿ? ಬಡವರ ಹತಾಶೆ ಯಾವ ಮಟ್ಟಕೆ ಮುಟ್ಟಿದೆ ಎಂದು ಹೇಳಿ ತೀರದು. ರಾಜಸ್ಥಾನದಲ್ಲಿ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಹಸುಳೆಯನ್ನು ಬಟ್ಟೆಯಲ್ಲಿ ಸುತ್ತಿ ತನ್ನ ಕೊರಳಿಗೆ ಕಟ್ಟಿ ಕೊಂಡು ಸೈಕಲ್ ರಿಕ್ಷಾ ಚಲಾಯಿಸುತ್ತಾನೆ ಬಡ ತಂದೆ. ಈ ವರದಿ ಬಿ.ಬಿ.ಸೀ ಯಲ್ಲಿ ಬಂದ ನಂತರವೇ ರಾಜಸ್ಥಾನದ ಸರಕಾರ ಸಹಾಯ ಹಸ್ತ ನೀಡಿದ್ದು. ಒಂದು ಕಡೆ ಈ ತೆರನಾದ ಅಸಹಾಯಕತೆ ನಮಗೆ ನೋಡಲು ಸಿಕ್ಕಿದರೆ ಮತ್ತೊಂದು ಕಡೆ ನಮ್ಮನ್ನು ನಿರ್ದಾಕ್ಷಿಣ್ಯವಾಗಿ ದೋಚಿದವರ ತೀರದ ಅಟ್ಟಹಾಸ. ದೋಚಿದ ಸಂಪತ್ತಿನಲ್ಲಿ ಬಂಗಲೆ ಕಟ್ಟಿ ಕೊಂಡು, ದೊಡ್ಡ ದೊಡ್ಡ ಕಾರುಗಳಲ್ಲಿ ಹಸಿದವನ, ನಿರ್ಗತಿಕನ ಮುಂದೆಯೇ ಓಡಾಡುತ್ತಾರೆ ಯಾವ ಸಂಕೋಚವೂ ಇಲ್ಲದೆ. ಹಗಲೂ ರಾತ್ರಿಯೆನ್ನದೆ, ಪಕ್ಷ ಬೇಧವಿಲ್ಲದೆ ದೋಚಿದ ನಂತರ ನಾವು ಹಿಂದುಳಿದ ದೇಶ, ಮುಂದಕ್ಕೆ ತರಲು ನನನ್ನು ಆರಿಸಿ ಎಂದು ನಿರ್ಭಿಡೆಯಿಂದ ನಮ್ಮ ಮತ ಸಹ ಕೇಳುತ್ತಾನೆ ರಾಜಕಾರಣಿ.
ಅಮೆರಿಕೆಯಲ್ಲಿ ಅಭ್ಯರ್ಥಿಗಳ ನಡುವೆ ನಡೆಯುತ್ತಿರುವ ಚರ್ಚೆ ರೀತಿ ನಮ್ಮ ದೇಶದಲ್ಲೂ ಯಾಕೆ ಮುಖಾ ಮುಖಿ ರಾಜಕಾರಣಿ ಗಳು ಕೂರೋಲ್ಲ? ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಅಥವಾ ನಾಯಕಿ ಏಕೆ ಚರ್ಚೆಯಲ್ಲಿ ಎದುರು ಬದುರಾಗೋಲ್ಲ? ಏಕೆಂದರೆ ಇಬ್ಬರೂ ಅದೇ ವರ್ಗಕ್ಕೆ ಸೇರಿದವರು. ದೋಚುವ ವರ್ಗಕ್ಕೆ ಸೇರಿದವರು. ಉರ್ದು ಭಾಷೆಯಲ್ಲಿ ಮಾತೊಂದಿದೆ, "ಏಕ್ ಹಮ್ಮಾಮ್ ಕೆ ದೋ ನ್ಹಂಗೆ" ಅಂತ. ಅಂದರೆ 'ಒಂದೇ ಬಚ್ಚಲಿನ ಇಬ್ಬರು ನಗ್ನರು'. ಈ ಪರಿಸ್ಥಿತಿ ಎದುರಾಗಬಹುದು ಎನ್ನುವ ಭೀತಿ. ಮುಚ್ಚಲು ಏನೂ ಇರುವುದಿಲ್ಲ, ನಾಚಿಕೆ ಪಡಬೇಕಾದ ತಾಪತ್ರಯವೂ ಇಲ್ಲ. ಇದೇ ಪರಿಸ್ಥಿತಿ ಎದುರಾಗುತ್ತದೆ ಆಳುವವ ಮತ್ತು ವಿರೋಧ ಪಕ್ಷದವ ಮುಖಾ ಮುಖಿಯಾದಾಗ. ನೂರಾರು ಪಕ್ಷಗಳಿವೆ ನಮ್ಮ ದೇಶದಲ್ಲಿ, ಒಂದೇ ಒಂದು ಪಕ್ಷಕ್ಕಾದರೂ ತಾನು ಸಾಚಾ ಎಂದು ಎಡೆ ತಟ್ಟಿ ಹೇಳುವ ವಿಶ್ವಾಸ, ಸ್ಥೈರ್ಯ ಇದೆಯೇ? ಆ ಸ್ಥೈರ್ಯ, ವಿಶ್ವಾಸ ಮೊದಲೂ ಮೂಡಲಿ ನಮ್ಮ ಪಕ್ಷಗಳಲ್ಲಿ, ಆಗ ಉದಯವಾಗಲಿ ಸಶಕ್ತ, ಅಭಿಮಾನೀ ಭಾರತ. ಅಲ್ಲಿಯವರೆಗೆ ನಾನು ನೀವು ಒಂದು ಚಾತಕ ಪಕ್ಷಿ.
Comments
ನಿಮ್ಮ ಲೇಖನ ವಸ್ತು ಸ್ಥಿತಿಗೆ