ಅವರೊಂದಿಗೆ ನಮ್ಮ ಕಾಳಜಿ, ಜವಾಬ್ದಾರಿ ಇರಲಿ

ಅವರೊಂದಿಗೆ ನಮ್ಮ ಕಾಳಜಿ, ಜವಾಬ್ದಾರಿ ಇರಲಿ

ಕೆಲವು ಆತ್ಮಹತ್ಯೆ ವಾರ್ತೆಗಳನ್ನು ನಾವು ಗಮನಿಸಿರುತ್ತೇವೆ. ಇಂತಿಂತಹ ಕಾರಣಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿವರಣೆಯೂ ಜೊತೆಗಿರುತ್ತವೆ. ಅಫ್ ಕೋರ್ಸ್, ಖಿನ್ನತೆಯು ಸಾವಿನ ಮನೆಗೆ ದೂಡುವಂತಹ ಮಾನಸಿಕ ಸ್ಥಿತಿ ಅಥವಾ ಕಾಯಿಲೆ. ದು:ಖವು ದೀರ್ಘಕಾಲ ಮನಸ್ಸನ್ನು ಆವರಿಸುತ್ತಾ ಇದ್ದರೆ ಅದುವೇ ಖಿನ್ನತೆ. "ಈ ಕಾರಣಕ್ಕೆ ತನಗೆ ದು:ಖ ಮರೆಯಾಗ್ತಾ ಇಲ್ಲ" ಎನ್ನುವಂತಿದ್ದರೆ ಅದು 'ವ್ಯಕ್ತ ಖಿನ್ನತೆ' ಹಾಗೂ ಕಾರಣ ತಿಳಿಯದೇ ಬೇಸರ, ಮನಸಿಗೆ ಸಂಕಟ ಕಾಡುತ್ತಾ ಇದ್ದರೆ ಅದು 'ಅವ್ಯಕ್ತ ಖಿನ್ನತೆ' ಎಂದು ಮನಶಾಸ್ತ್ರವು ಹೇಳುತ್ತದೆ.

ಹಾಗಂತ, ಖಿನ್ನತೆಗೆ ನಿರ್ದಿಷ್ಟವಾದ ಗುಣಲಕ್ಷಣಗಳಿಲ್ಲ ಎಂದೂ ಮನಶಾಸ್ತ್ರ ಹೇಳುತ್ತದೆ. ಉದಾಹರಣೆಗೆ ಖಿನ್ನತೆ ಇರುವ ಒಬ್ಬ ವ್ಯಕ್ತಿ ತನ್ನ ಇಡೀ ದಿನವನ್ನು ನಿದ್ರಿಸಿಯೇ ಕಳೆಯಬಹುದು. ಕೆಲವರಿಗೆ ನಿದ್ರೆನೇ ಇರಲ್ಲ. ಕೆಲವರು ಎಲ್ಲರೊಡನಿರುವಾಗ ಸಂತಸವಾಗಿ ಇರುವಂತೆಯೇ ಕಾಣಬಹುದು. ಅವರ ದು:ಖದ ಹೆಬ್ಬಾಗಿಲು ತೆರೆದುಕೊಳ್ಳುವುದು ಏಕಾಂತವಾಗಿರುವಾಗ ಅಥವಾ ನಿದ್ರೆಗಾಗಿ ಮಲಗಿದಾಗ‌. ಕೆಲವರು ಶಾಂತವಾಗಿದ್ದರೆ ಕೆಲವರು ಅತಿರೇಕ ಎನ್ನುವಂತೆ ವರ್ತಿಸಬಹುದು. ಕೆಲವರು ಅತಿಯಾಗಿ ತಿನ್ನುತ್ತಿದ್ದರೆ ಕೆಲವರು ತಿನ್ನೋದನ್ನು ಕಡಿಮೆ ಮಾಡಿ ನಿಶಕ್ತನಾಗಿ ಬಿಡಬಹುದು. ಖಿನ್ನತೆಗೆ ಒಳಗಾಗಿರುವ ಇಬ್ಬರನ್ನು ಗಮನಿಸಿದರೆ  ಪರಸ್ಪರ ತದ್ವಿರುದ್ದ ಗುಣಲಕ್ಷಣಗಳನ್ನು ಪ್ರದರ್ಶಿಸುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಒಬ್ಬರಿಗೆ ಖಿನ್ನತೆ ಇದೆ ಅಥವಾ ಇಲ್ಲ ಎಂಬ ತೀರ್ಮಾನಕ್ಕೆ ಸುಲಭವಾಗಿ ಬರಲಾಗದು. 

ಖಿನ್ನತೆ ಯಾರ ಮನಸ್ಸನ್ನೂ ಪ್ರವೇಶಿಸಬಹುದು. ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೆ, ಸಾಮಾನ್ಯ ಮನುಷ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯಾರನ್ನು ಬೇಕಾದರೂ ಅದು ಕಾಡಬಹುದು. ಕೆಲವೊಮ್ಮೆ ಕಾರಣ ಇದ್ದೇ ಖಿನ್ನತೆ ಬರಬಹುದಾದರೆ ಕೆಲವೊಮ್ಮೆ ಕಾರಣಗಳೇ ಬೇಕಾಗಿಲ್ಲ. ಖಿನ್ನತೆ ಇರುವಾಗ ಮನಸು ಸದಾ ದುಖ ಪಡುತ್ತಾ, ಯಾವುದೇ ಸಂತೋಷನ್ನು ಅನುಭವಿಸದಂತೆ ಮಾಡುತ್ತದೆ. ಕೆಲವೊಂದು ಖಿನ್ನತೆಯು ಅದೆಷ್ಟು ಪ್ರಭಾವಶಾಲಿಯೆಂದರೆ ಹಲವರನ್ನು ಆತ್ಮಹತ್ಯೆ ಮಾಡಿಸಿದೆ. ಬದುಕಲಾರದಷ್ಟು ಕಠಿಣ ನಿಮಿಷಗಳನ್ನು ಖಿನ್ನತೆಯಿಂದಾಗಿ‌ ಪಡೆಯುವ ನತದೃಷ್ಟರ  ಜೀವನವು ಅಸ್ತವ್ಯಸ್ತ ವಾಗುತ್ತದೆ. ಅಂತಹವರಲ್ಲಿ‌ ಕೆಲವರು ಅವರ ಜೀವನಕ್ಕೇ ವಿದಾಯ ಹೇಳುತ್ತಾರೆ.   ಹಲವು ಕೋಟಿಗಳ ಒಡೆಯರೂ ಖಿನ್ನತೆಯ ಕಾರಣಕ್ಕಾಗಿ ಸಾವಿನ‌ ಮನೆಗೆ  ನಡೆದವರಿದ್ದಾರೆ.

ಖಿನ್ನತೆಯು ಗಂಭೀರ ಕಾರಣಗಳಿಂದಾನೇ ಬರೋದಲ್ಲ. ಕ್ಷುಲ್ಲಕ ಕಾರಣಕ್ಕೆ ಖಿನ್ನತೆಯಿಂದ ನರಳುತ್ತಿರುವ ಅದೆಷ್ಟೋ ಮಂದಿ ನಮ್ಮ ಸುತ್ತಮುತ್ತ ಇರಬಹುದು. ಎಲ್ಲ ಇದ್ದೂ ಗಂಡ ಇಲ್ಲದ ನಲವತ್ತರ ನಂತರದ ಮಹಿಳೆಯರಿಗೆ ಸಣ್ಣದಾಗಿ ಖಿನ್ನತೆ ಕಾಡುತ್ತದಂತೆ. ಇನ್ನಿತರ ಕಾರಣಗಳಿಂದಾನೂ ಖಿನ್ನತೆಯು ಆವರಿಸಬಹುದು‌. ಪ್ರಸ್ತುತ ಕೊರೋನಾ ರೋಗಕ್ಕಿಂತಲೂ ಆ ಕಾರಣದ  ಖಿನ್ನತೆಯಿಂದಾಗಿ ನಷ್ಟ ಆಗಿದ್ದು ಹೆಚ್ಚು. ಕೆಲವು ಸಂದರ್ಭಗಳಲ್ಲಿ ತನ್ನದು ಖಿನ್ನತೆಯಾಗಿದೆಯೆಂಬ ಅರಿವು ಇರಲಿಕ್ಕಿಲ್ಲ. ಯಾವುದೇ ನೆಪ ಹಿಡಿದು ದು:ಖ ಪಡುತ್ತಾ, ಆಲೋಚನೆಯಲ್ಲಿ ಅಸ್ತವ್ಯಸ್ತವಾಗುತ್ತಾ ಇರಬಹುದು.  ಜಗಳ, ಹಗೆಯ ಮೂಲಕ ಅವರು ಅದನ್ನು ವ್ಯಕ್ತಪಡಿಸುತ್ತಾನೂ ಇರಬಹುದು.

ಸಣ್ಣಮಗು ತನ್ನ ನಂತರದ ಮಗುವಿಗೆ ತನ್ನ ಹೆತ್ತವರು ತೋರುತ್ತಿರುವ ಪ್ರೀತಿಯನ್ನು ಕಂಡು ತಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವೆನೆಂದು ಬಗೆದು ಖಿನ್ನತೆಗೆ ಜಾರಬಹುದು. ಅದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಗಂಭೀರ ಅಡ್ಡಿ ಮಾಡುವುದರಲ್ಲಿ ಸಂಶಯವಿಲ್ಲ. ದು:ಖ ಬೇರೆ, ಖಿನ್ನತೆ ಬೇರೆ. ಖಿನ್ನತೆಯು ಮಾನಸಿಕ‌ ಕಾಯಿಲೆ ಎನಿಸಿಕೊಂಡಿದೆ. ಮಧುಮೇಹಿಯೊಬ್ಬ ತನ್ನನ್ನು ಕಾಡುತ್ತಿರುವ ರೋಗವನ್ನು ನೆನೆನೆನೆದು ಖಿನ್ನತೆಗೆ ಒಳಗಾಗಿ ತಾನು ಬದುಕಲು ಅನರ್ಹ ಎಂದು ಬಗೆದು ತನ್ನ ರೋಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಂಭವವಿದೆ. ಮುಪ್ಪು ಆವರಿಸಿರುವ ವ್ಯಕ್ತಿ ಸಾವನ್ನು ನೆನೆದು ಖಿನ್ನತೆಗೆ ಒಳಗಾಗಲೂಬಹುದು. ಸಹಿಸಲಾಗದಷ್ಟು ಅದು ಪ್ರಭಾವ ಹೊಂದಿದಾಗ  ಆತ್ಮಹತ್ಯೆಯ ದಾರಿ ತುಳಿಯುತ್ತಾರೆ. ಕೆಲವು ಖಿನ್ನತೆ ತಾತ್ಕಾಲಿಕ, ಗಂಭೀರ ಸ್ವರೂಪವಲ್ಲದ್ದು. ಕೆಲವು ತಾತ್ಕಾಲಿಕವಾದರೂ ಗಂಭೀರವಾಗಿರಬಹುದು. ಕೆಲವು ದೀರ್ಘಕಾಲಿಕ. ಹೀಗೆಲ್ಲ ಮನೋವೈದ್ಯರು ವಿಶ್ಲೇಷಣೆ ಮಾಡುತ್ತಾರೆ.

ನಾವು ಖಿನ್ನತೆಗೆ ಒಳಗಾಗುವುದನ್ನು ತಡೆಯಲು ಅದೆಷ್ಟೋ ಮಾರ್ಗಗಳು ಇವೆಯಾದರೂ ನಮಗೆ ಅರಿವಿಲ್ಲದೆ ನಮ್ಮನ್ನು ಆವರಿಸುವ,  ನಮ್ಮನ್ನೇ ನುಂಗಿಬಿಡಬಲ್ಲ ಖಿನ್ನತೆಯನ್ನು ತಡೆಯುವಲ್ಲಿ ನಾವು‌ ಕೆಲವೊಮ್ಮೆ ವಿಫಲರಾಗುವ ಸಂಭವವೇ ಹೆಚ್ಚು. ನಮ್ಮ ಆಸುಪಾಸಿನ ಜನರು ಖಿನ್ನತೆಗೊಳಗಾದರೆ ನಮ್ಮ ಪ್ರೀತಿ, ಕಾಳಜಿ ತೋರಿಸಿ ಅಗತ್ಯ ಉಪದೇಶ, ಸೆಕ್ಯುರಿಟಿ ಫೀಲು ಕೊಟ್ಟು ಅವರನ್ನು ಆ ಹಂತದಿಂದ ಪಾರು ಮಾಡುವ  ಪ್ರಯತ್ನ ನಮ್ಮದಾಗಬೇಕು.

ಅಗತ್ಯವಾದರೆ ಮನೋವೈದ್ಯರಿಗೆ ತೋರಿಸಬೇಕು. ಅವರನ್ನೊಪ್ಪಿಸುವ ಜಾಣತನ ನಮಗೆ ಬಿಟ್ಟದ್ದು. ಇಷ್ಟಕ್ಕೂ ಮನೋವೈದ್ಯರ ಅವಶ್ಯ ಇರುವುದು ಹುಚ್ಚರಿಗೆ ಮಾತ್ರವಲ್ಲ. ಮನೋವೈದ್ಯರನ್ನು ಕಂಡರೆ ಅದು ಕೀಳರಿಮೆಗೆ ಕಾರಣವಾಗಬೇಕಿಲ್ಲ. ಈ ಸತ್ಯ ಗೊತ್ತಿಲ್ಲದವರಾದರೆ ಅವರಿಗೆ ಅರ್ಥ ಮಾಡಿ ಕೊಡುವುದು ಅಗತ್ಯ. 

ನಮ್ಮ ಪ್ರೀತಿಪಾತ್ರರಿಗೆ, ಹತ್ತಿರದವರಿಗೆ ಒಮ್ಮೆಯೂ ಕೂಡ "ನಾನು ನಿರ್ಲಕ್ಷಕ್ಕೆ ಒಳಗಾಗಿದ್ದೇನೆ" ಎಂಬ ಭಾವ ಬರದಂತೆ ನೋಡಿಕೊಂಡರೆ ಖಿನ್ನತೆ ಪ್ರಕರಣಗಳ ಸಂಖ್ಯೆಯನ್ನು ಮತ್ತು ಆತ್ಮಹತ್ಯೆಗಳನ್ನೂ ತಗ್ಗಿಸಬಹುದು. ಭಗವಂತನ ಕೃಪೆಗೆ ಪಾತ್ರವಾಗಲು ನಮಗೆ ಇರುವ ದೊಡ್ಡ ಅವಕಾಶಗಳಿವು. ನಮಗೆ ಗೊತ್ತಿರಲಿ, ಯಥೇಚ್ಛ ಪ್ರೀತಿ ಅನುಭವಿಸುತ್ತಿರುವವರು ಖಿನ್ನತೆಗೆ ಜಾರುವ ಅವಕಾಶ ತೀರಾ ಕಡಿಮೆ. ಅದಾಗಿಯೂ ಖಿನ್ನತೆಗೆ ಒಳಗಾಗಿರುವವರಿಗೆ ವೈದ್ಯಕೀಯ ಸಹಾಯ ಕೊಡಿಸಲೇಬೇಕು.

ನಮ್ಮ ಸುತ್ತಮುತ್ತ ಖಿನ್ನತೆಯಿಂದ ಬಳಲುವರು ಇದ್ದರೆ ಅವರನ್ನು ಜೀವನಕ್ಕೆ ಹಿಂದಿರುಗುವಂತೆ ಮಾಡಲು ಪಣ ತೊಡಬೇಕು. ಆಗ ಅವರ ವರ್ತನೆ, ಮಾತುಗಳು ನಮಗೆ ಪರಿಗಣನೆಗೆ ಅರ್ಹ, ಸರಿಯಾಗಿಯೇ ಇದೆ ಎಂದೆಲ್ಲ ಅನ್ನಿಸುವಂತೆ ಇರದಿರಲೂ ಬಹುದು. ಅದನ್ನೇ ನೆಪವಾಗಿಟ್ಟು ದೂರ ಮಾಡೋದು ನಮ್ಮ ಹೃದಯಹೀನತೆ ಮತ್ತು ಪಲಾಯನವಾದ ಆಗುತ್ತದೆ‌. ನಮ್ಮ ಸುತ್ತಮುತ್ತ ಇರುವ ಯಾರಿಗಾದರೂ ನಮ್ಮಿಂದ 'ಮಾನಸಿಕ ನೆರವು'  ಸಿಕ್ಕಿದ್ದೇ ಆದಲ್ಲಿ  ನಮ್ಮ ಪುಣ್ಯದ ಖಜಾನೆ ತುಂಬುವುದರಲ್ಲಿ ಸಂಶಯವಿಲ್ಲ. ಮೂರು ದಿನಗಳ ಬದುಕಿನಾಚೆಗಿನ ಪಾರತ್ರಿಕ ಲೋಕದ ವಿಶ್ವಾಸಿಗಳು‌ ನಾವು. ಹಾಗಿರುವಾಗ ಅಲ್ಲಿಗೆ ಒಂದಷ್ಟು ಸಂಪಾದಿಸಲು ಇಂತಹ ಮನೋಭಾವ ನಮ್ಮದಾಗಲಿ. ಒಂಟಿತನ ಅಸಹನೀಯವಾದಾಗ, ಅದು ಅಪಾಯಕಾರಿ ಹಂತ ತಲುಪಿದ ಯಾರಿಗಾದರೂ "ನಾನಿದ್ದೇನೆ!" ಎನ್ನಲು, ಆ ನಂಬಿಕೆ ಬರಿಸಲು ನಾವು ಎಂದೂ ತಯಾರಾಗಿರೋಣ.

--ಪಿ ಎಂ ಇಕ್ಬಾಲ್ ಕೈರಂಗಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ