ಅವಲಕ್ಕಿ ಪವಲಕ್ಕಿ

ಅವಲಕ್ಕಿ ಪವಲಕ್ಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಅಕ್ಷತಾರಾಜ್ ಪೆರ್ಲ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ.೧೮೦.೦೦, ಮುದ್ರಣ: ೨೦೨೨

ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕಿರುನೋಟ ಇಲ್ಲಿದೆ.

“ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ನೀಡುವ ದತ್ತಿ ಬಹುಮಾನವನ್ನು ಪಡೆದ ಲೇಖನ ಸಂಕಲನವಿದು. ಈ ದತ್ತಿ ಬಹುಮಾನವು ಹಿರಿಯ ಲೇಖಕಿ ಚಂದ್ರಭಾಗಿಯವರ ಸ್ಮರಣೆಯಲ್ಲಿ ನೀಡಲಾಗಿದೆ. ಈ ಹಿರಿಯ ಲೇಖಕಿಯ ಮಕ್ಕಳು ನೀಡಿದ ದತ್ತಿನಿಧಿಯು ಅಪ್ರಕಟಿತ ಅಂದರೆ ಹಸ್ತಪ್ರತಿ ರೂಪದ ಸಾಹಿತ್ಯವನ್ನು ಆಹ್ವಾನಿಸಿತ್ತು. ಬಹುಮಾನ ಗಳಿಸಿದ ಸಾಹಿತ್ಯ ಪ್ರಕಾರವು ಪ್ರಕಟಣೆಗೊಳ್ಳಲು ಇದು ಸಣ್ಣ ರೀತಿಯಲ್ಲಿ ಸಹಕರಿಸುತ್ತದೆ. ಉದಯೋನ್ಮುಖ ಲೇಖಕಿಯರನ್ನು ಗಮನದಲ್ಲಿರಿಸಿ ಈ ದತ್ತಿನಿಧಿಯನ್ನು ಪ್ರಾಯೋಜಿಸಲಾಗಿದೆ. 2023ರಲ್ಲಿ ಬಂದ ಹಸ್ತಪ್ರತಿಗಳಲ್ಲಿ ಅಕ್ಷತಾರಾಜ್ ಪೆರ್ಲ ಅವರ “ಅವಲಕ್ಕಿ-ಪವಲಕ್ಕಿ” ಎಂಬ ಲೇಖನ ಸಂಕಲನವು ಬಹುಮಾನಕ್ಕೆ ಆಯ್ಕೆಯಾಗಿದೆ. ಅವರಿಗೆ ಸಂಘದ ಎಲ್ಲಾ ಸದಸ್ಯೆಯರ ಪರವಾಗಿ ಮತ್ತು ದತ್ತಿನಿಧಿಯನ್ನು ಸ್ಥಾಪಿಸಿದ ಹಿರಿಯ ಲೇಖಕಿಯ ಬಂಧುಗಳ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಕ್ಷತಾರಾಜ್ ಪೆರ್ಲ ಕಾಸರಗೋಡಿನವರಾಗಿ ತುಳು, ಕನ್ನಡ, ಹವ್ಯಕ ಈ ಮೂರೂ ಭಾಷೆಗಳಲ್ಲಿ ಸಮರ್ಥರಾಗಿ ಸಾಹಿತ್ಯ ಕೃಷಿ ಮಾಡಬಲ್ಲವರು. ಕಾದಂಬರಿ, ಕತೆ, ಕವಿತೆ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅವರ ಸಾಹಿತ್ಯ ಪ್ರತಿಭೆ ಪ್ರಕಟವಾಗಿದೆ. ‘ಅವಲಕ್ಕಿ-ಪವಲಕ್ಕಿ” ಎಂಬ ಈ ಲೇಖನಗಳು ಕಾಸರಗೋಡಿನ ‘ಕಾರವಲ್’ ಎಂಬ ಪತ್ರಿಕೆಯಲ್ಲಿ ಅಂಕಣ ಬರಹವಾಗಿ ಪ್ರಕಟಗೊಂಡಿದೆ. ಈಗ ಈ ಸಂಕಲನಕ್ಕೆ ಚಂದ್ರಭಾಗಿ ರೈ ದತ್ತಿನಿಧಿ ಬಹುಮಾನವೂ ಲಭಿಸಿದ್ದರಿಂದ ಅದು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ತುಂಬಾ ಸಂತೋಷದ ವಿಷಯ.

ಈ ಸಂಕಲನದಲ್ಲಿ 55 ಲೇಖನಗಳಿವೆ. ಅವುಗಳಲ್ಲಿರುವ ವಿಷಯ ವೈವಿಧ್ಯವು ಗಮನಾರ್ಹವಾಗಿದೆ. ಈ ನೆಲದಲ್ಲಿ ಬದುಕುವ ಮನುಷ್ಯನ ಕಣ್ಣಿಗೆ ಕಾಣುವ, ಮನಸ್ಸಿಗೆ ತಟ್ಟುವ, ಹೃದಯಕ್ಕೆ ಮುಟ್ಟುವ ಎಲ್ಲಾ ವಿಷಯಗಳೂ ಲೇಖನಗಳಾಗಿ ರೂಪುಗೊಂಡಿವೆ. ಅದು ಅಡುಗೆ ಮನೆಯಿಂದ ತೊಡಗಿ ಅಂತರ್ಜಾಲದ ವರೆಗೂ ವಿಸ್ತರಿಸಿದ ವೈಖರಿಯೇ ಮನ ಸೆಳಯುತ್ತದೆ. ಯಾವ ಲೇಖನಗಳೂ ಪ್ರವಚನಕಾರನಂತೆ ಉಪದೇಶ ನೀಡುವುದಿಲ್ಲ. ನಮ್ಮ ನಮ್ಮ ಅಂತರಂಗವನ್ನೊಮ್ಮೆ ಇಣುಕಿ ನೋಡುವಂತೆ ಮಾಡುತ್ತದೆ. ಯುವ ಸಮುದಾಯದ ತಲ್ಲಣಗಳಿಗೆ, ಕ್ಷೋಭೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವಿದೆ.

ಲೇಖನಗಳ ಆಶಯವು ನಮ್ಮ ಮನಸ್ಸಿನಲ್ಲೊಂದು ಸಣ್ಣ ಭಾವದಲೆಯನ್ನು ಹುಟ್ಟಿಸುತ್ತದೆ. ತುಟಿಯಂಚಿನಲ್ಲಿ ಮುಗುಳ್ನಗುವನ್ನುಂಟು ಮಾಡುತ್ತದೆ. ಸಮಾಜವು ಈಗ ಸಾಗುತ್ತಿರುವ ದಿಕ್ಕು ದೆಸೆ ಆರ್ದ್ರತೆಯನ್ನು ಕಳೆದುಕೊಳ್ಳುತ್ತಿರುವ ಭಾವಲಹರಿ, ಹೊಸ ಕಾಣ್ಕೆಗಾಗಿ ಕಾಯುತ್ತಿರುವ ಹೃದಯಗಳ ತುಡಿತಗಳು ಹಲವಾರು ಲೇಖನಗಳಲ್ಲಿ ಅಭಿವ್ಯಕ್ತಗೊಂಡಿವೆ. ಈ ಲೇಖನಗಳು ಬರಿಯ ಪದಗಳ ಜಾಲಗಳಾಗದೆ ಭಾವನೆಗಳ ಮಧುರಯಾನದಂತೆ ಭಾಸವಾಗುತ್ತದೆ. ಆನಂದವನ್ನು ಕೊಡುವ ಮೂಲಗಳಲ್ಲಿ ಸಾಹಿತ್ಯದ ಪಾತ್ರದೊಡ್ಡದು. ಖ್ಯಾತ ಲೇಖಕ ಜೆ. ಪಿ. ರಾಜರತ್ನಂ ಅವರು “ಸಾಹಿತ್ಯವು ಸಾರ್ಥಕವಾಗಬೇಕಾದರೆ ಸಾಹಿತಿಯ ಹೊಣೆಯಷ್ಟೇ ಓದುಗನ ಹೊಣೆಯೂ ಇದೆ” ಎನ್ನುತ್ತಾರೆ. ಸ್ಪಂದಿಸುವ ಸಹೃದಯವುಳ್ಳ ಓದುಗ ವರ್ಗವು ಹೆಚ್ಚಿದಂತೆಲ್ಲಾ ಲೇಖಕರಿಗೆ ಇನ್ನಷ್ಟು ಬರೆಯುವ ಸ್ಫೂರ್ತಿ ಲಭಿಸುತ್ತದೆ. ಕರಾವಳಿ ಲೇಖಕಿಯರ ಸಂಘವು ವಾಚಕಿಯರನ್ನು ಸೇರಿಸಿಕೊಂಡೇ ಬಂದಿರುವುದು ಅದೇ ಕಾರಣದಿಂದ. ಒಳ್ಳೆಯ ಓದುಗನೇ ನಾಳೆ ಲೇಖಕನಾಗುವ ಸಾಧ್ಯತೆಯಿದೆ ಅಲ್ಲವೇ?

ಅಕ್ಷತಾರಾಜ್ ಪೆರ್ಲ ಅವರು ಕರಾವಳಿಯ ಕಾಸರಗೋಡು ಮತ್ತು ಅವಿಭಜಿತ ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳಲ್ಲಿ ಒಂದು ಒಳ್ಳೆಯ ಓದುಗ ವರ್ಗವನ್ನು ಸೃಷ್ಟಿಸಿದ್ದಾರೆ. ಒಳ್ಳೆಯ ಓದುಗರು ಲಭಿಸಿದ್ದರಿಂದ ಇನ್ನಷ್ಟು ಎಚ್ಚರದಿಂದ ಮುಂದಿನ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾಸರಗೋಡಿನ ಓದುಗರು ಅವರನ್ನು ಪ್ರೀತಿಯಿಂದ ಹರಸಿದ್ದಾರೆ. ಮಂಗಳೂರಿನ ಸಹೃದಯ ಓದುಗರು ಕೂಡಾ ಅವರ ‘ಅವಲಕ್ಕಿ-ಪವಲಕ್ಕಿ’ ಸಂಕಲನವನ್ನು ಇನ್ನೂ ಹೆಚ್ಚಿನ ಪ್ರೀತಿಯಿಂದ ಹರಸಿದ್ದಲ್ಲದೆ ದತ್ತಿನಿಧಿಯ ಬಹುಮಾನವನ್ನು ನೀಡಿ ಕೊಂಡಾಡಿದ್ದಾರೆ. ಪೆರ್ಲದ ಊರು ಅನೇಕ ಖ್ಯಾತ ಸಾಹಿತಿಗಳ ತವರೂರು. ಅಕ್ಷತಾರಾಜ್ ಪೆರ್ಲ ಅವರೂ ಕೂಡಾ ತನ್ನ ಸಾಹಿತ್ಯ ಸಾಧನೆಯ ಪಥದಲ್ಲಿ ಅನೇಕ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ. ‘ಅವಲಕ್ಕಿ-ಪವಲಕ್ಕಿ’ ಸಂಕಲನವು ಸಾಹಿತ್ಯ ಪ್ರೇಮಿಗಳಿಗೆ ಆನಂದವನ್ನು ನೀಡುತ್ತದೆಯೆಂದು ನಾನು ನಂಬಿದ್ದೇನೆ. ಮುಂದಿನ ಅವರ ಸಾಹಿತ್ಯ ಕೃಷಿಯನ್ನು ಕರಾವಳಿಯ ಕನ್ನಡಿಗರು ಬಹಳ ಕಾತರದಿಂದ ಕಾಯುತ್ತಾರೆ. ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರುವಂತಾಗಲಿ. ಕನ್ನಡನಾಡು ಅವರ ಸಾಹಿತ್ಯ ಸಾಧನೆಯನ್ನು ಮೆಚ್ಚಿ ಕೊಂಡಾಡುವಂತಾಗಲಿ ಎಂದು ನಾನು ತುಂಬು ಹೃದಯದಿಂದ ಹರಸುತ್ತೇನೆ.”

ಲೇಖನಗಳು ತುಂಬಾ ದೀರ್ಘವಾಗಿರದೇ ಇರುವುದರಿಂದ ಸಿಕ್ಕ ಕಿರು ಬಿಡುವಿನಲ್ಲೂ ಓದಿ ಮುಗಿಸಬಹುದಾದ ಕೃತಿ ಇದು.