ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ...

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ...

ಕವನ

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ


ಸುತ್ತುವರಿಯುತ ಅವಳ ಕಾಣಿಸುವುದು


ಅವಳೆದುರು ಬಂದಾಗ ಮಾತಿರದೆ ಮೌನದಲಿ


ಕಣ್ಣ ನೀಲಿಯೇ ನನ್ನ ಮೀಯಿಸುವುದು


 


ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ


ಮರೆತು ಹೋಗುವುದೆನ್ನ ಕನಸ ಬುತ್ತಿ


ಬೇಸರವೇ ಜಾರುವುದು ಅವಳ ಸಾಮೀಪ್ಯದಲಿ


ಮತ್ತೆ ಬರುವುದು ಕನಸು ಸುತ್ತಿ ಸುತ್ತಿ


 


ನಿಜವಾದ ಚೆಲುವನ್ನು ಹೊಗಳಲಾರದೆ ನಾನು


ಮರುಗುವೆನು ಅವಳಿರುವ ಎಲ್ಲಾ ಕ್ಷಣವು


ಜಲದ ನಾದದ ದನಿಯು ನನ್ನೆದುರು ಕುಣಿವಾಗ


ಎಲ್ಲಿಯೋ ಅಡಗುವುದು ನನ್ನ ಸ್ವರವು


 


ಹಾದಿಯಲಿ ನಡೆವಾಗ ಅವಳ ಹೆಜ್ಜೆಯ ಹುಡುಕಿ


ಹೋಗುವುದು ಅವಳಿರದ ವೇಳೆಯಲ್ಲಿ


ಜೊತೆಯಲ್ಲಿ ಇರುವಾಗ ಹೇಗೆ ನಡೆಯಲಿ ನಾನು


ಹಿಂದೆ ನಡೆವೆನು ಸೋತ ಭಾವದಲ್ಲಿII


 


Ishwara Bhat (Kirana)