ಅವಳು ನೂರು ಗ್ರಾಮಿನ ಹುಡುಗಿ...

ಅವಳು ನೂರು ಗ್ರಾಮಿನ ಹುಡುಗಿ...

ಕವನ

ಅದೆಷ್ಟು ಭಾರವಿರಬಹುದು...?

ಚಿವುಟಿದಾಗಲೆಲ್ಲ ಚಿಗುರುವ

ಹೂವಿನಷ್ಟೆ

ಹೂವಿನ ಎಸಳಿನಷ್ಟೆ

ಇಲ್ಲಾ....

ಅವಳು ಬೀರುತ್ತಿರುವ ಪರಿಮಳದಷ್ಟೆ...!

ಅವಳು ನೂರು ಗ್ರಾಮಿನ ಹುಡುಗಿ…

 

ಇವರಿಗೋ

ಪದಗಳ ಲೆಕ್ಕದಲ್ಲಿ ಎಲ್ಲಿ

ಜಾರಿಬಿಡುತ್ತಾಳೋ ಎಂಬ ಭಯ...

ರಣ ಚಂಡಿಯೊಬ್ಬಳ ಹಿಡಿದು

ಕಟ್ಟುವುದಾದರೂ ಹೇಗೆ?

ಅಕ್ಷರ ಸಹ ಯಕ್ಷ ಪ್ರಶ್ನೆ...!

ಅವಳು ನೂರು ಗ್ರಾಮಿನ ಹುಡುಗಿ..

 

ನಡು ರಸ್ತೆಯಲ್ಲಿ

ಎಳೆದವರ ಕುತ್ತಿಗೆಯ ಮೇಲೆ

ಕೈಯಿತ್ತು..

ಎದೆ ಮೇಲೆ ಅಂಗಾಲು

ಮಡಗಿಯಾಗಿತ್ತು...

ಇನ್ನೇನು ಜೀವ ಬಿಗಿಯುವ ಹೊತ್ತು...

 

ಇರುಳು ಕಳೆದು

ಹಗಲು ಮೂಡುವ ಮುನ್ನ ಚಿತ್ತಾದಳು..

ಕಂಬನಿಯಲ್ಲಿ ತೊಯ್ದು ಮುತ್ತಾದಳು...

ಅವಳು ನೂರು ಗ್ರಾಮಿನ ಹುಡುಗಿ..

 

ಅವ್ವ ಕುಡಿಸಿದ ಎದೆಹಾಲು...

ಇಲ್ಲಾ

ನಿನ್ನ ಕಂಗಳಿಂದ ಜಾರಿದ ಕಂಬನಿ...

ಇನ್ನೂ ಹೆಚ್ಚೆoದರೆ

ಮಮ್ಮಲ ಮರುಗಿದಾಗಿನ ನಿನ್ನ ನಿಟ್ಟುಸಿರು......!!

ಇರ್ಬೇಕೆನೋ ಈ ನೂರು ಗ್ರಾಂ...!!!

ಅವಳು ಬರೀ ನೂರು ಗ್ರಾಮಿನ ಹುಡುಗಿ...

-ದೇವರಾಜ್ ಹುಣಸಿಕಟ್ಟಿ 

 

ಚಿತ್ರ್