"ಅವಳು ಮತ್ತೊಬ್ಬಳು" ಕೃತಿ ಬಿಡುಗಡೆಗೆ ಆಮಂತ್ರಣ

"ಅವಳು ಮತ್ತೊಬ್ಬಳು" ಕೃತಿ ಬಿಡುಗಡೆಗೆ ಆಮಂತ್ರಣ

ಗೆಳೆಯರೇ ಮತ್ತೆ ಬಂದಿದ್ದೀನಿ. ಒಂದಷ್ಟು ದಿನ ಸಂಪದದಿಂದ ದೂರವಿದ್ದರೂ ಸಂಪದ ಯಾವತ್ತೂ ನನ್ನ ನೆಚ್ಚಿನ ತಾಣವೇ. ಯಾಕೆ ಅಂತೀರಾ? ನೀವೇ ಓದ್ಕೊಳ್ಳಿ...

ಚೆನ್ನೈನ ಎಸಿ ರೂಮಲ್ಲಿ ಕುಳಿತು ಗೂಗಲ್ ಮಾಡುತ್ತಿರುವಾಗ ಅಚಾನಕ್ ಆಗಿ ಸಿಕ್ಕದ ತಾಣವೇ ಸಂಪದ. ಅಲ್ಲಿಯವರೆಗೆ ಬ್ಲಾಗ್್ನಲ್ಲಿ ಗೀಚುತ್ತಿದ್ದು, ಕೊನೆಗೊಂದು ದಿನ ಕಚೇರಿಯಲ್ಲಿ ಬ್ಲಾಗ್್ಗೆ ನಿರ್ಬಂಧ ಹೇರಲಾಯಿತು. ತೋಚಿದ್ದನ್ನೆಲ್ಲಾ ಗೀಚಲು ಇರುವ ಅವಕಾಶವೆಲ್ಲಾ ಹೋಯ್ತಲ್ಲಾ ಎಂದು ಕೀಲಿಮಣೆ ಕುಟ್ಟುತ್ತಿರುವಾಗ ಆಶಾಕಿರಣವಾಗಿ ಮೂಡಿದ್ದು ಸಂಪದ. ಸಂಪದದ ಅಂತರಂಗವೇ ಅಂಥದ್ದು...ಓದುತ್ತಾ ಹೋದಂತೆ ಓದಿಸುತ್ತಾ ಹೋಗುತ್ತದೆ. ಅಬ್ಬಾ ಕೊನೆಗೊಂದು ತಾಣ ಸಿಕ್ಕಿತಲ್ಲಾ ಎಂದು ಸಂಪದದಲ್ಲಿ ಬರೆಯತೊಡಗಿದೆ. ಉತ್ತಮ ಪ್ರತಿಕ್ರಿಯೆಗಳು ಬರತೊಡಗಿದಾಗ ಖುಷಿಯಾತು. ವಿಶೇಷ ಲೇಖನವಾಗಿ ಆಯ್ಕೆಯಾದಾಗಂತೂ ಮತ್ತೂ ಮತ್ತೂ ಬರೆಯಬೇಕೆಂಬ ಹುಮ್ಮಸ್ಸು. ನನಗೆ ಸಂಪದವೆಂದರೆ ಕೇವಲ ಬ್ಲಾಗ್ ತಾಣವಲ್ಲ. ನನ್ನ ಭಾವನೆಗಳನ್ನೆಲ್ಲಾ ಬರೆದು ಮನಸ್ಸು ಹಗುರಾಗಿಸುವ ಜಾಗ ಅದು. ಅಲ್ಲಿ ನಾನು ನನ್ನ ಜೀವನದ ಬಗ್ಗೆ ಬರೆದದ್ದೇ ಹೆಚ್ಚು ಅನಿಸುತ್ತದೆ. ಬರವಣಿಗೆಯ ಬಾಲಪಾಠ ಕಲಿಯಲು ಹಲಗೆಯಾಗಿ ನಾನಿದನ್ನು ಬಳಸಿಕೊಂಡಿದ್ದೆ ಎಂದು ಹೇಳಲೇಬೇಕು. ಇಲ್ಲಿ ಹಲವಾರು ಜನರು ನನ್ನ ಬರವಣಿಗೆಯನ್ನು ತಿದ್ದಿದರು. ಇದರ ಫಲವಾಗಿ ನಾನು ಪತ್ರಿಕೆಗಳಲ್ಲಿ ಬರೆಯುವಂತಾಯಿತು.

ಇಷ್ಟು ಮಾತ್ರವಲ್ಲ ಬೆಂಗಳೂರಿನ ಮಹಾನಗರದಲ್ಲಿ ನನಗೆ ಗೆಳೆಯರು ಸಿಕ್ಕಿದ್ದೂ ಸಂಪದದಿಂದಲೇ. ಬರವಣಿಗೆಯಿಂದಲೇ ಪರಿಚಯವಾದ ಈ ಗೆಳೆಯರು ಇಂದಿಗೂ ನನ್ನ ಆತ್ಮೀಯರಾಗಿ ಉಳಿದಿರುವುದಕ್ಕೆ ಸಂಪದಕ್ಕೆ ಧನ್ಯವಾದ ಹೇಳಲೇ ಬೇಕು. ಕೆಲಸದ ಒತ್ತಡದಿಂದಾಗಿ ಸಂಪದದಲ್ಲಿ ಬರೆಯಲು ಸಾಧ್ಯವಾಗದೇ ಇದ್ದರೂ ಸಂಪದಿಗರು ಮಾತಿಗೆ ಸಿಕ್ಕಾಗ ಖುಷಿಯಾಗುತ್ತದೆ. ಇಷ್ಟೆಲ್ಲಾ ಹೇಳಿದರೂ ಸಂಪದದ ಬಗ್ಗೆ ಇನ್ನೂ ಹೇಳುವುದು ಸಾಕಷ್ಟು ಇದೆ...

 

ಹೂಂ...ನಾನು ಹೇಳಲು ಹೊರಟಿರುವ ವಿಷಯವೇ ಬೇರೆ...ಅದೇನಂತೀರಾ?

 

ಇದೇ ಭಾನುವಾರ ಅಂದರೆ ಡಿಸೆಂಬರ್ 9, ಬೆಳಗ್ಗೆ 10.30ಕ್ಕೆ, ಕನ್ನಡ ಸಾಹಿತ್ಯ ಪರಿಷತ್ತು , ಚಾಮರಾಜಪೇಟೆ ಇಲ್ಲಿ ನನ್ನ "ಅವಳು ಮತ್ತೊಬ್ಬಳು"ಕೃತಿ ಲೋಕಾರ್ಪಣೆಯಾಗಲಿದೆ. 2 ವರ್ಷಗಳ ಹಿಂದೆ ಕನ್ನಡಪ್ರಭ ಚುಕ್ಕಿ ಪುರವಣಿಯಲ್ಲಿ ಸಾಧಕಿಯರ ಬಗ್ಗೆ ಲೇಖನ ಬರೆದಿದ್ದೆ. ಆ ಲೇಖನಗಳ ಸಂಕಲನವೇ "ಅವಳು ಮತ್ತೊಬ್ಬಳು".

 

ಈ ಕಾರ್ಯಕ್ರಮಕ್ಕೆ ಸಂಪದಿಗರೆಲ್ಲೂ ಬರಲೇ ಬೇಕು....ಸಂಪದಿಗರು ಎಂಬ ಪ್ರೀತಿಯಿಂದಲೇ ಆಮಂತ್ರಿಸುತ್ತಿದ್ದೇನೆ. ನೀವು ಬಂದೇ ಬರುತ್ತೀರಿ ಎಂದು ನನಗೆ ಗೊತ್ತುಂಟು!

 

-ರಶ್ಮಿ ಕಾಸರಗೋಡು