ಅವಳ ಅರಿವು

ಅವಳ ಅರಿವು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗೀತಾ ವಸಂತ
ಪ್ರಕಾಶಕರು
ಜನ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು ಇವರು ತಮ್ಮ ಬೆನ್ನುಡಿಯಲ್ಲಿ " ಡಾ. ಗೀತಾ ವಸಂತ ಇವರು ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಗಂಭೀರ ವಿಶ್ಲೇಷಕಿ ಮತ್ತು ಕವಿಯಾಗಿ ಸಾಕಷ್ಟು ಗಮನೀಯರಾಗಿದ್ದಾರೆ. ಅವರು ಕವಿತೆ ಬರೆಯಲಿ ಅಥವಾ ಗದ್ಯ ಬರಹ ರಚಿಸಲಿ ಅಲ್ಲಿ ಅವರದೇ ಆದ ಒಂದು ವಿಶಿಷ್ಟ ನಿರೂಪಣಾ ಶೈಲಿ ಇರುತ್ತದೆ. ಅವರು ಸಹಜವೆಂಬಂತೆ ಬಳಸುವ ಭಾಷೆಯ ಬೆಡಗು ಮತ್ತೊಂದು ವಿಶೇಷ. ಗೀತಾ ಅವರ ಸಾಹಿತ್ಯ ಭಾಷೆಯಲ್ಲಿ ಹುರಿಗೊಂಡ ಹೃದಯವೇ ಮಾತನಾಡುತ್ತದೆ. ಕೆಲವೊಮ್ಮೆ ಹುರಿಕೊಂಡ ಭಾಷೆಯು ಉರಿಗೊಂಡದ್ದು ಆಗುತ್ತದೆ. ಆದರೆ ಈ ಉರಿಯು ಅನ್ಯರನ್ನು ಸುಟ್ಟುಬಿಡುವ ಬೆಂಕಿಯಲ್ಲ. ತನ್ನನ್ನು ತಾನೇ ಸುಟ್ಟುಕೊಳ್ಳುವ ಭಾವ.

ಗೀತಾ ವಸಂತ ಅವರ ಈ ಕೃತಿಯ ಓದು ನನ್ನನ್ನು ಕಲಕಿದೆ, ಕಾಡಿಸಿದೆ, ವಿಶೇಷವಾಗಿ ಹೆಣ್ಣಿನ ಬದುಕು ಬವಣೆಗಳನ್ನು ಕುರಿತ ಬರಹಗಳು ಗೀತಾ ವಸಂತ ಅವರ ಅತ್ಯಂತ ಪ್ರಾಮಾಣಿಕ ಹೃದಯಾಕ್ಷರ ರೂಪಗಳಾಗಿ ಮೂಡಿ ಬಂದಿವೆ. ಕಾವ್ಯಾತ್ಮಕ ಗದ್ಯವನ್ನು ಕಟ್ಟುವ ಕಲೆ, ಗೀತಾ ಅವರ ಬರವಣಿಗೆಯ ಒಂದು ವಿಶಿಷ್ಟ ಗುಣಲಕ್ಷಣವಾಗಿದೆ. 'ಅವಳ ಅರಿವು' ನಮ್ಮೆಲ್ಲರ ಅರಿವಾಗುವಂತೆ ಮಾಡುವ ಬರಹಗಳಿಂದ ಸ್ತ್ರೀ ಸಂವೇದನೆಯ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆಯುವ ಒಂದು ಕೃತಿಯನ್ನು ಗೀತಾ ಅವರು ಕಟ್ಟಿಕೊಟ್ಟಿದ್ದಾರೆ. ಕಟ್ಟನ್ನು ಬಿಚ್ಚಿ ಬಯಲಾಗಿಸಿಯೂ ಇದ್ದಾರೆ, ಗಂಭೀರ ಚಿಂತನೆಗೆ ಆಹ್ವಾನಿಸುವ ಕೃತಿ ಕೊಟ್ಟ ಗೀತಾ ಅವರಿಗೆ ಅಭಿನಂದನೆಗಳು" ಎಂದಿದ್ದಾರೆ.