ಅವಳ ಹೆಜ್ಜೆ ಗುರುತು

ಅವಳ ಹೆಜ್ಜೆ ಗುರುತು

ಪುಸ್ತಕದ ಲೇಖಕ/ಕವಿಯ ಹೆಸರು
ಸೌಮ್ಯ ಕಾಶಿ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ: ೨೦೨೪

ಕಥಾ ಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ ಪುಟದಲ್ಲಿ ಕೇವಲ ಸಣ್ಣದೊಂದು ಪಾತ್ರ ಮಾತ್ರವಾಗದೇ ಬದುಕನ್ನು ಕಲಿಸಿಕೊಟ್ಟವರಾಗುತ್ತಾರೆ. ಹಾಗಾಗೇ ಈ ಪುಸ್ತಕದ ಹೆಸರು “ಅವಳ ಹೆಜ್ಜೆ ಗುರುತು”!

ಈ ಕಥಾ ಸಂಕಲನದ ಲೇಖಕಿ ಸೌಮ್ಯ ಕಾಶಿಯವರು ತಮ್ಮ ಮುನ್ನುಡಿಯಲ್ಲಿ “ಆಗೊಮ್ಮೆ ಈಗೊಮ್ಮೆ ಕವಿತೆಗಳನ್ನು, ಬಹಳಾ ಅಪರೂಪಕ್ಕೆ ಒಂದೆರಡು ಕತೆಗಳನ್ನು ಬರೆದು ಕೆಲವನ್ನು ಅಲ್ಲಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದವಳು ಇಷ್ಟು ಗಂಭೀರವಾಗಿ ಕುಳಿತು ಈ ಎಲ್ಲ ಕತೆಗಳನ್ನು ಬರೆದಿದ್ದೇನೆ ಎನ್ನುವ ವಿಷಯವೇ ನನಗಿನ್ನೂ ಅಚ್ಚರಿಯ ಸಂಗತಿ.

ಈ ಪುಸ್ತಕ ಬರೆಯುವಾಗ ಕೆಲವೊಮ್ಮೆ ಕಷ್ಟಪಟ್ಟು ಇದನ್ನೇ ಬರೆಯಬೇಕು ಎಂದು ಕುಳಿತವಳು ಇನ್ನೇನನ್ನೋ ಬರೆದ ಪ್ರಸಂಗಗಳಿವೆ. ಮತ್ತೆ ಕೆಲವೊಮ್ಮೆ ಏನೆಲ್ಲಾ ಬರೆಯಬೇಕು ಎನಿಸಿ ಶಿಸ್ತಿನಲ್ಲಿ ಹಾಳೆಯ ಮುಂದೆ ಕುಳಿತಾಗ ಏನೂ ಬರೆಯದೆ ಹಾಳೆಯ ತುಂಬ ಅಡ್ಡ ಗೆರೆಗಳನ್ನೋ, ಹೂವಿನ ಚಿತ್ರವನ್ನೋ, ಚುಕ್ಕಿ ರಂಗೋಲಿಯನ್ನೋ ಬರೆದ ದಾಖಲೆಯಿದೆ. ಇದೇ ಕಾರಣಕ್ಕೋ ಏನೋ ಈ ಎಲ್ಲ ಕತೆಗಳನ್ನು ಬರೆಯುವ ಮುಂಚೆ 'ಹೀಗೇ ಏನಾದರೂ ಬರೆಯಬೇಕು' ಎಂದು ಹೇಳಿಕೊಂಡು ಓಡಾಡುತ್ತಿದ್ದ ನನಗೆ ಯಾರಾದರೂ "ಯಾವ ವಿಷಯದ ಬಗ್ಗೆ ಬರೀತೀಯಾ?” ಎಂದು ಕೇಳಿದರೆ “ಗೊತ್ತಿಲ್ಲ” ಎಂದೇ ಹೇಳುತ್ತಿದ್ದೆ. ಇದು ಅವರ ಪ್ರಶ್ನೆಯಿಂದ ಜಾರಿಕೊಳ್ಳಲು ಹೇಳುತ್ತಿದ್ದ ಮಾತಲ್ಲ. ನಿಜಕ್ಕೂ ನಾನು ಖಾಲಿ ಹಾಳೆಯ ಮುಂದೆ ಪೆನ್ ಹಿಡಿದು ಕೂರುವವರೆಗೂ ನಾನು ಯಾವ ಕತೆಯನ್ನು ಬರೆಯುತ್ತೇನೆ ಎನ್ನುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಹಾಗಾಗಿ, ನಾನು ಈ ಎಲ್ಲ ಕತೆಯನ್ನು ಬರೆದಿದ್ದೇನೆ ಎನ್ನುವುದಕ್ಕಿಂತಾ ಈ ಎಲ್ಲ ಕತೆಗಳೇ ನನ್ನ ಕೈಯಲ್ಲಿ ಬರೆಸಿಕೊಂಡಿವೆ ಎಂದು ಬರವಣಿಗೆಯ ಭಾರವನ್ನೂ ಕತೆಯ ಮೇಲೆ ಹಾಕಿಬಿಡುತ್ತೇನೆ.

ಇನ್ನು, ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆದ್ದರಿಂದ "ಅವಳ ಹೆಜ್ಜೆ ಗುರುತು" ಎಂಬ ಕತೆಗಳ ಗುಚ್ಛ ನನ್ನ ಒಂದು ಪ್ರಾಮಾಣಿಕ ಪ್ರಯತ್ನವಷ್ಟೇ. ಈ ಪುಸ್ತಕದಲ್ಲಿ ಅಲ್ಲಲ್ಲಿ ನಾನಿದ್ದೇನೆ. ಅಲ್ಲಲ್ಲಿ ನೀವೂ ಇದ್ದೀರಿ, ನಾನು ಕಂಡವರಿದ್ದಾರೆ,

ನೀವು ಕಾಣದವರೂ ಇದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಪುಸ್ತಕದಲ್ಲಿ ನಮ್ಮನಿಮ್ಮಂತೆಯೇ ಭಾವಜೀವಿಗಳಿದ್ದಾರೆ. ಕತೆಯಲ್ಲಿನ ಭಾವಜೀವಿಗಳಂತೆಯೇ ನನ್ನ ಜೀವನದಲ್ಲೂ ಒಂದಷ್ಟು ಭಾವಜೀವಿಗಳಿದ್ದಾರೆ. ಅವರಿಂದಲೇ ಇವತ್ತು ಈ ಪುಸ್ತಕ ಸಾಧ್ಯವಾಗಿದ್ದು. ನಾನು ಅವರಿಗೆಲ್ಲ ಧನ್ಯವಾದ ಹೇಳದೇ ಹೋದರೆ ಅದು ನನ್ನ ತಪ್ಪಾಗುತ್ತದೆ.” ಎಂದಿದ್ದಾರೆ. ಸುಮಾರು ೧೧೫ ಪುಟಗಳ ಈ ಕಥಾ ಸಂಕಲನದ ಎಲ್ಲಾ ಕಥೆಗಳು ಓದಲು ಹಿತವಾಗಿವೆ.