ಅವಾರ್ಡ್ ವೈರಾಗ್ಯ

ಅವಾರ್ಡ್ ವೈರಾಗ್ಯ

 
"ಏನಾದರೂ ಮಾಡಿ ಒಂದು ಅವಾರ್ಡ್ ಪಡೆದುಕೊಳ್ಳಿ ಎಂದು ನಿಮಗೆ ಹೇಳಿದ್ದೆ" ಎಂದು ಹೆಂಡತಿ ಪೇಪರ್ ಓದಿ ಮುಗಿಸಿ ನನಗೆ ಹೇಳಿದಳು.
"ನನಗೆ ಯಾರೇ ಅವಾರ್ಡ್ ಕೊಡ್ತಾರೆ?" ಎಂದೆ.
"ಅದು ನನಗೂ ಗೊತ್ತು. ಅದಕ್ಕೇ ಪಡೆದುಕೊಳ್ಳಿ ಎಂದಿದ್ದು."
"ಹೇಗೆ?"
"ಈಗ ಅನೇಕರು ಮಾಡಿಲ್ಲವೆ? ಮಾಡ್ತಿಲ್ಲವೆ? ಮಾಡೊಲ್ವೆ? ಹಾಗೆ."
"ಏನು ಮಾಡೋದು?"
"ಅಪ್ಲೈ ಮಾಡೋದು."
"ಅಪ್ಲೈ ಮಾಡೋದಕ್ಕೆ ಅದೇನು ಕೆಲಸ ಅರ್ಜಿಯೇ?"
"ಅವಾರ್ಡು ಪಡೆದುಕೊಳ್ಳೋದೂ ಒಂದು ಕೆಲಸ ತಾನೆ?"
"ಛೆ! ಹಾಗಲ್ಲ."
"ಹೋಗ್ಲಿ ನಿಮ್ಮ ಬಯೊಡ್ಯಾಟ ಹಿಡಿದು ಆಯ್ಕೆ ಸಮಿತಿ ಸದಸ್ಯರನ್ನ ಭೇಟಿ ಮಾಡಬೇಕಿತ್ತು."
"ಅದೂ ಒಂದು ತರಹ ಅಪ್ಲೈ ಮಾಡೋದು ತಾನೆ?"
"ಅಲ್ಲ. ಇದು ಯಾರಾದರೂ ಪ್ರಭಾವಶಾಲಿಗಳನ್ನ ಹಿಡಿದು ಅವರ ಮುಖಾಂತರ ಆಯ್ಕೆ ಸಮಿತಿ ಸದಸ್ಯರಿಗೆ ತಲುಪಿಸೋದು."
"ನನಗೆ ಯಾರೂ ಪ್ರಭಾವಶಾಲಿಗಳು ಗೊತ್ತಿಲ್ಲವಲ್ಲ..."
"ನಿಮಗೆ ಪಕ್ಕದ ಮನೆಯವರೇ ಸರಿಯಾಗಿ ಗೊತ್ತಿಲ್ಲ..."
"ಅದ್ಸರಿ ಅನ್ನು."
"ಅದಕ್ಕೇ ಹೇಳಿದ್ದು. ಪ್ರಭಾವಶಾಲಿಯವರು ಗೊತ್ತಿರೋರನ್ನ ಮೊದಲು ಹಿಡಿದು ಅವರ ಮೂಲಕ ಪ್ರಭಾವಶಾಲಿಯವರನ್ನ ತಲುಪಿ ಬಯೋಡ್ಯಾಟ ಆಯ್ಕೆ ಸಮಿತಿಯವರಿಗೆ ತಲುಪುವಂತೆ ಮಾಡಬೇಕು."
"ಹಾಗೆಷ್ಟು ಜನ ಮಾಡ್ತಾರೋ ಯಾರಿಗೆ ಗೊತ್ತು."
"ಅವರಲ್ಲಿ ನೀವೂ ಒಬ್ಬರಾಗಬಹಿದಿತ್ತಲ್ವೆ? ನಿಮ್ಮ ಜಾತಿ ಅವರ ಜಾತಿ ತಾಳೆ ಆಗಿದ್ದರೆ...?"
"ಜಾತಿ ಆಧಾರದ ಮೇಲೆ ಅವಾರ್ಡು!?"
"ಮತ್ತಿನ್ನೇನು? ಪ್ರತಿ ಸಲ ಅವಾರ್ಡು ಲಿಸ್ಟ್ ಹೊರಬಿದ್ದಾಗಲೂ ಅಂತಹ ಹೆಸರು ಇರೋದಿಲ್ವೆ?"
"ಹೌದೌದು. ನಾನೂ ಗಮನಿಸಿದ್ದೆ."
"ಮತ್ತೆ ನೀವೂ ಟ್ರೈ ಮಾಡಬಹುದಿತ್ತಲ್ವೆ?"
"ಹೋಗ್ಲಿ ಬಿಡು."
"ಅದಕ್ಕೇ ನಿಮ್ಮ ಹೆಸರು ಬಿಟ್ಟಿರೋದು. ಈಗ ಅನುಭವಿಸಿ."
"ಏನು ಅನುಭವಿಸೋದು?"
"ಅದೇ, ಅವಾರ್ಡ್ ರಹಿತರ ಪಟ್ಟಿಯಲ್ಲಿ ಶಾಶ್ವತವಾಗಿ ಇರೋದನ್ನು."
"ಮಸಲಾ ಒಂದು ಅವಾರ್ಡ್ ಸಿಕ್ಕಿತು ಅಂದುಕೊ."
"ಅಂದುಕೊಬೇಕು ಅಷ್ಟೆ"
"ಅದಕ್ಕೇ ನಾನು ಹೇಳಿದ್ದು. ನಾನೇನು ಇನ್ನೊಂದು ಪುಸ್ತಕ ಬರೀತಿದ್ನೆ? ಒಂದಕ್ಕೇ ರಿಟೈರ್ಡ್ ಹರ್ಟ್. ಇರಲಿ. ನಿನ್ನ ಹರಕೆ ಬಯಕೆ ಕೈಗೂಡಿ ಒಂದು ಅವಾರ್ಡ್ ಬಂತೂ ಅಂತಿಟ್ಕೊ..."
"ಅಂತಿಟ್ಕೊಳೋದಾದರೆ ಮೂರು ಲಕ್ಷಾನೇ ಇರಲಿ ಬಿಡಿ."
"ಓಕೆ. ಐದು ಲಕ್ಷದ್ದು ಯಾವುದೂ ಇದ್ದಂತಿಲ್ಲ. ಆ ಹಣಾನ ಏನು ಮಾಡ್ತಿ?"
"ಏನು ಮಾಡ್ತೀನಿ...? ಹಾ! ಒಂದು ಡೈಮಂಡ್ ನೆಕ್ಲೇಸ್, ಒಂದು ಜತೆ ಡೈಮಂಡ್ ಬಳೆ, ವಜ್ರದ ಓಲೆ... ತಾಳಿ...ತಾಳಿ... 3 ಲಕ್ಷ ಸಾಕಾಗುತ್ತಾ?"
"ಗೊತ್ತಿಲ್ಲ. ಸಾಕಾಗುತ್ತೆ ಅಂತಿಟ್ಕೊ. ಆರು ತಿಂಗಳು, ಒಂದು ವರ್ಷದ ನಂತರ ನನ್ನ ಮನಸ್ಸನ್ನು ಕದಡುವಂತಹ ಘಟನೆ ನಡೆದು ನಾನು ಆ ಅವಾರ್ಡ್ ವಾಪಸ್ ಮಾಡಲು ಡಿಸೈಡ್ ಮಾಡ್ತೀನಿ. ಆಗ?"
"ಮಾಡಿ, ನಿಮ್ಮ ಹೆಸರೆಲ್ಲಾ ಪೇಪರ್‍ನಲ್ಲಿ ಬರಿತ್ತೆ. ಚಾನೆಲ್ಲೋರೂ ಚರ್ಚೆಗೆ ಕರೀತಾರೆ."
"ಆದರೆ ಆ ಒಡವೆ ಎಲ್ಲಾ ವಾಪಸ್ ಮಾಡ್ತೀಯಾ?"
""ಅದನ್ಯಾಕೆ ವಾಪಸ್ ಮಾಡಬೇಕು?"
"ಮತ್ತೆ ಅದು ಪ್ರಶಸ್ತಿ ಮೊತ್ತದಲ್ಲಿ ಕೊಂಡದ್ದು ತಾನೆ? ಇಲ್ಲದಿದ್ದರೆ ಪ್ರಶಸ್ತಿ ಇಟ್ಕೊಂಡು ಪತ್ರ ವಾಪಸ್ ಮಾಡಿದ ಅಂತ ಚಾನೆಲ್‍ನಲ್ಲಿ ಕೇಳ್ತಾರೆ. ಆಗ...?"
"ನೊ ನೊ. ಇಂಪಾಸಿಬಲ್."
"ಅದಕ್ಕೇ ನಾನು ಅವಾರ್ಡಿಗೆ ಪ್ರಯತ್ನ ಪಡ್ತಿಲ್ಲ. ಗೊತ್ತಾಯ್ತ?"
"ಒಳ್ಳೇದಾಯ್ತು ಬಿಡಿ, ನಾನೆಲ್ಲೋ ಆ ಸರ್ಟಿಫಿಕೇಟ್ ವಾಪಸ್ ಮಡಿದರೆ ಸಾಕು ಅಂತ ಅಂದುಕೊಂಡಿದ್ದೆ. ಒಡವೇ ಎಲ್ಲಾ ವಾಪಸ್ ಮಾಡಿದ ಮೇಲೆ ನಾನು ಫಂಕ್ಷನ್‍ಗಳಿಗೆ ಹೇಗೆ ಹೋಗಲಿ?"
"ಕರೆಕ್ಟ್."
 
ಮಿಗಿಸುವ ಮುನ್ನ": ಇನ್ನು ಮುಂದೆ ಅವಾರ್ಡ್ ಕೊಡೋವ್ರು ಪ್ರಶಸ್ತಿ ಪತ್ರದ ಕೆಳಗೆ "ಟರ್ಮ್ ಅಂಡ್ ಕಂಡೀಷನ್‍ನಲ್ಲಿ 'ಇದನ್ನು ಯಾವುದೇ ಕಾರಣಕ್ಕೂ ವಾಪಸ್ ಮಾಡುವಂತಿಲ್ಲ/ಪಡೆಯಲಾಗುವುದಿಲ್ಲ' ಎಂದು ನಮೂನಿಸಿದರೆ ಹೇಗೆ?