ಅವಿಸ್ಮರಣೀಯ ಮಧುರ ಮಿಲನ, ಮುತ್ತು ಉದುರುವ ಸಮಯದ ಸಾರ್ಥಕತೆ
ಕಾಸರಗೋಡು ಚಿನ್ನಾ ಅವರು ಆಯೋಜನೆ ಮಾಡುವ ಯಾವುದೇ ಕಾರ್ಯಕ್ರಮವಾದರೂ, ಅದು ಹತ್ತರೊಂದಿಗೆ ಹನ್ನೊಂದಾಗಿರುವುದಿಲ್ಲ. ಅದಕ್ಕೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆ ಇದ್ದೇ ಇರುತ್ತದೆ. ಚಿನ್ನಾರವರು ಆಯೋಜಿಸುವ ಕಾರ್ಯಕ್ರಮದಲ್ಲಿನ ವಿಶಿಷ್ಟತೆಯನ್ನು ಮೊತ್ತಮೊದಲು ನಾನು ಕಣ್ಣಾರೆ ಕಂಡದ್ದು, ಅನುಭವಿಸಿದ್ದು ಅಂದಾಜು ಎರಡೂವರೆ ದಶಕದ ಹಿಂದೆ. ಅಂದು ಅವರು "ತಪಸ್ಯಾ" ದ ಮೂಲಕ ಕಾಸರಗೋಡಿನ ತೆಂಗಿನತೋಟದ ನಡುವೆ ಬಹುಭಾಷಾ ಕವಿಗೋಷ್ಟಿಯನ್ನು ಆಯೋಜಿಸಿದ್ದರು. ನಾನು ಹವೀಕ ಭಾಷೆಯ ಸ್ವರಚಿತ ಕವನವನ್ನು ವಾಚಿಸಿದ್ದೆ. ಅಂದಿನ ಆ ಕಾರ್ಯಕ್ರಮ ಇಂದಿಗೂ ನನ್ನ ಮನದಲ್ಲಿ ಅವಿಸ್ಮರಣೀಯವಾಗಿ ಉಳಿದಿರುವುದೇ ಚಿನ್ನಾರವರ ಕಾರ್ಯಕ್ರಮದ ವೈಶಿಷ್ಟ್ಯತೆಗೆ ಸಾಕ್ಷಿ.
ಕಳೆದ ಆದಿತ್ಯವಾರ (11/09/2022)ದ ಕಾರ್ಯಕ್ರಮವೂ ನನ್ನ ಜೀವನ ಪಯಣದಲ್ಲಿ ಹಲವು ಕಾರಣಗಳಿಗಾಗಿ ಅವಿಸ್ಮರಣೀಯ ದಿನವಾಗಿ ದಾಖಲಾಗಲು ಕಾರಣವಾಯಿತು. ಚಿನ್ನಾರವರ ಕಾಸರಗೋಡಿನ ಕರಂದಕ್ಕಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ತೆಂಗಿನ ತೋಟದ ನಡುವೆ ಇರುವ ಮನೆಯೇ "ಪದ್ಮಗಿರಿ". ಪದ್ಮಗಿರಿಯ ಟೆರೇಸನ್ನೇ ಚಿನ್ನಾ ಆಕರ್ಷಕವಾಗಿಯೂ, ಅಪೂರ್ವವಾಗಿಯೂ "ಕಲಾ ಕುಟೀರ"ವನ್ನಾಗಿಸಿದ್ದಾರೆ. ಕುಟೀರದ ಹೊರಗಡೆ ಕಲಾತ್ಮಕ ರಚನೆಗಳಿದ್ದರೆ, ಒಳಗಡೆ ಸುತ್ತಲೂ ಕವಿ - ಕಲಾವಿದರ ಭಾವಚಿತ್ರಗಳು ಮತ್ತು ಸ್ಮರಣಿಕೆಗಳ ಸಾಲು ಇಡೀ ಸಾಹಿತ್ಯಿಕ ವಾತಾವರಣದ ನೆಲೆಯಾಗಲು ಕಾರಣವಾಗಿದೆ. ಕೆಲ ವರ್ಷ ಹಿಂದೆ "ನಾಡಪ್ರೇಮಿ" ಎಂ. ವಿ. ಬಳ್ಳುಳ್ಳಾಯರು ನಿಧನರಾದಾಗ ಚಿನ್ನಾ ಇಲ್ಲಿ ಆಯೋಜಿಸಿದ "ನುಡಿ ನಮನ"ದಲ್ಲಿ ಭಾಗಿಯಾಗಿದ್ದು, ಕಲಾ ಕುಟೀರಕ್ಕೆ ನನ್ನ ಮೊದಲ ಪ್ರವೇಶವಾಗಿತ್ತು. ಎರಡನೇ ಪ್ರವೇಶವೇ ಮೊನ್ನೆ ಆದಿತ್ಯವಾರ ಇಲ್ಲಿ ನಡೆದ "ಮುತ್ತು ಉದುರುವ ಸಮಯ..."
ನಾನು ಮೂಡುಬೆಳ್ಳೆಯಿಂದ ಹೊರಟು ಕಾಸರಗೋಡಿನ ಕಲಾ ಕುಟೀರಕ್ಕೆ ಕಾಲಿಡುವಾಗ ಮುತ್ತು ಉದುರಲು ಆರಂಭವಾಗಿತ್ತು. ಹೊರಗಡೆ ಕ್ಯಾಟರಿಂಗ್ ನಿರ್ವಹಿಸುತ್ತಿದ್ದ ಬೀದರ್ ನ ಯುವಕ, "ತಿಂಡಿ ಇದೆ, ತಿಂದು ಹೋಗಿ" ಅಂದ. ಎರಡಿಡ್ಲಿ ಮತ್ತು ಕ್ಷೀರ ಪ್ಲೇಟ್ ಗೆ ಹಾಕಿ ಕೊಟ್ಟ. ಮತ್ತೆರಡಿಡ್ಲಿ, ಕ್ಷೀರ ನಾನೇ ಹಾಕಿಸಿಕೊಂಡು ತಿಂದೆ. ನನ್ನ ಹಿಂದೆಯೇ ಬಂದಿದ್ದ ಗುರು - ಶಿಷ್ಯರಾದ ಡಾ. ಯು. ಮಹೇಶ್ವರಿ, ಡಾ. ರಾಧಾಕೃಷ್ಣ ಬೆಳ್ಳೂರು, ತಾಯಿ - ಮಗಳು ರಾಜಶ್ರೀ ಟಿ ರೈ ಪೆರ್ಲ, ಸನ್ನಿಧಿ ಇವರು ನನಗಿಂತ ಮೊದಲೇ ಕಲಾಕುಟೀರದಲ್ಲಿ ಆಸೀನರಾಗಲು ಪದ್ಮಗಿರಿಯ ಮೆಟ್ಟಿಲು ಹತ್ತಿಯಾಗಿತ್ತು.
ಕಲಾ ಕುಟೀರ ಪ್ರವೇಶಿಸಿದಾಗ ಮೂರ್ನಾಲ್ಕು ಚಯರ್ ಬಿಟ್ಟರೆ ಉಳಿದದ್ದೆಲ್ಲವೂ ಭರ್ತಿಯಾಗಿತ್ತು. ಮುತ್ತು ಉದುರಲು ಅದಾಗಲೇ ಆರಂಭವಾಗಿತ್ತು. ಡಾ. ಬಿ. ಎ. ವಿವೇಕ ರೈಗಳು ಉದುರಿಸುವ ಮುತ್ತುಗಳನ್ನು ಕೇಳುವ ನನ್ನ ಆಸೆ ಈಡೇರಲಿಲ್ಲ. ಅದಕ್ಕಾಗಿ ಸಂಜೆಯವರೆಗೆ ಕಾಯಬೇಕಾಗಿ ಬಂತು. ಅವರ ಮಾತುಗಳಲ್ಲಿ ಮೂರು ಮುಖ್ಯ ಮುತ್ತುಗಳಿರುವುದನ್ನು ನಾನು ಹಿಂದೆಯೇ ಗಮನಿಸಿದ್ದೆ. ಇತಿಹಾಸ, ಸಂಸ್ಕೃತಿ, ಪರಂಪರೆಯ ಮಾತುಗಳೊಂದಿಗೆ ಹೊಸ ಹೊಸ ಹೊಳಹುಗಳನ್ನು ಸೂಕ್ಷ್ಮವಾಗಿ, ಸ್ಪಟಿಕದಂತೆ ಅನಾವರಣಗೊಳಿಸುವುದು ನನ್ನಂಥ ಕೇಳುಗರಿಗಾಗುವ ಬಹುದೊಡ್ಡ ಲಾಭ. ಬೆಳಗ್ಗೆ ಆಗಬಹುದಾಗಿದ್ದ ಲಾಭ ನಷ್ಟವಾಗಿ ಹೋಗಿತ್ತು. ನನಗಾದ ಈ ನಷ್ಟಕ್ಕೆ ಯಾರನ್ನಾದರೂ ದೂರಬೇಕಾದರೆ ನಾನು ದೂರುವುದು, ಮನೆಯಿಂದ ಹೊರಡಬೇಕಾದ ಹೊತ್ತಿಗೆ ಒಂದೇ ಸಮನೆ ಬೀಳುತ್ತಿದ್ದ ಮಳೆಯನ್ನೆ.
ಎಡನೀರು ಮಠದ ಸಚ್ಛಿದಾನಂದ ಭಾರತೀ ಸ್ವಾಮೀಜಿಯವರ ಆಶಿರ್ವಚನದ ಮುಕ್ತಾಯ ಹಂತದಿಂದ, ಕಾರ್ಯಕ್ರಮದ ಕಟ್ಟಕಡೆಯ ಗೀತ ಗಾಯನದ ವರೆಗೂ ನಾನು ಉಪಸ್ಥಿತನಿದ್ದು, ಕನ್ನಡದ ಖ್ಯಾತನಾಮರ ಕವನ, ಕತೆ, ಹಾಸ್ಯ, ಸಂಗೀತ ಇತ್ಯಾದಿಗಳ ರಸದೌತಣವನ್ನು ದಿನವಿಡೀ ಬಹುತೇಕ ಮೌನವಾಗಿದ್ದುಕೊಂಡು ಮನಃಪೂರ್ವಕವಾಗಿ ಸವಿದೆ.
ಕಾಸರಗೋಡು ಚಿನ್ನಾ ನೇತೃತ್ವದ "ರಂಗ ಚಿನ್ನಾರಿ" ಆಯೋಜಿಸಿದ್ದ (ಸಹಯೋಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು) ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕರೂ, ಖ್ಯಾತ ಗಾಯಕರೂ ಆದ ವೈ. ಕೆ. ಮುದ್ದುಕೃಷ್ಣ ಕೇಂದ್ರಬಿಂದುವಾಗಿ ಮಿಂಚಿದರು, ಮೆರೆದರು. ಮುದ್ದುಕೃಷ್ಣರ "ಹಾಡು ಹಿಡಿದ ಜಾಡು" ಆತ್ಮ ಕಥನ ಕೃತಿಯ ಬಿಡುಗಡೆ ಬೆಳಗ್ಗೆ ಆರಂಭದಲ್ಲಿ ನಡೆದಿತ್ತು. ಕಾರ್ಯಕ್ರಮದ ನಡುನಡುವೆ ಮುದ್ದುಕೃಷ್ಣರ ಮಾತುಗಳೊಂದಿಗೆ ಸುಗಮ ಸಂಗೀತವೂ ಹರಿದುಬರುತ್ತಿತ್ತು.
ಇಲಾಖೆಯ ನಿರ್ದೇಶಕರಾಗಿದ್ದಾಗ ಸುಗಮ ಸಂಗೀತ ಕ್ಷೇತ್ರಕ್ಕೆ ಒಂದು ಮಹತ್ತರ ಸ್ಥಾನ ಮಾನ, ಮಾನ್ಯತೆ ತಂದುಕೊಡುವಲ್ಲಿ ಮುದ್ದುಕೃಷ್ಣರ ತೊಡಗುವಿಕೆ ಅದೊಂದು ಚಳುವಳಿಯೋಪಾದಿಯಲ್ಲೇ ನಡೆದದ್ದು ಇತಿಹಾಸ. ಕಾರ್ಯಕ್ರಮದ ಕೊನೆಗೆ ಚಿನ್ನಾರನ್ನು ಸುಗಮ ಸಂಗೀತ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಂಚಾಲಕರನ್ನಾಗಿ ನಿಯುಕ್ತಿ ಮಾಡಿ ಸುಗಮ ಸಂಗೀತಗಾರರನ್ನು ಒಗ್ಗೂಡಿಸುವ, ಪರಿಷತ್ತಿನ ಘಟಕ ರಚಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಸುಗಮ ಸಂಗೀತ - ಗಾರರ ರಾಜ್ಯ ಸಮ್ಮೇಳನವನ್ನೂ ಕಾಸರಗೋಡಿನಲ್ಲಿ ಆಯೋಜನೆ ಮಾಡುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದು, ಮಲೆಯಾಳದ ಕೇರಳದಲ್ಲಿರುವ ಕನ್ನಡದ ಕಾಸರಗೋಡಿಗೆ ಸಾಂಸ್ಕೃತಿಕವಾಗಿ ಅಮೃತ ಸಿಂಚನ ನೀಡುವ ಭರವಸೆಯಂತೆ ನನಗೆ ಕಂಡಿತು.
ದಿನವಿಡೀ ಕವನಗಳ ಅಪೂರ್ವ ಯಾನ. ಚುಟುಕುಗಳ - ಹಾಸ್ಯ ರಸಾಯನ, ಕಿಶೋರ್ ಪೆರ್ಲ, ಬಿ. ಪಿ. ಗೋಪಾಲಕೃಷ್ಣ, ಮೈಮ್ ರಾಮದಾಸ್ ಮೊದಲಾದವರ ಗೀತ ಗಾಯನ. ಚಿನ್ನಾರವರ ಹಾಸ್ಯ ಮಿಶ್ರಿತ ಮಾತು - ಭಾವಗಳ ನೇರ ನಿಷ್ಟುರ ನಿರೂಪಣೆಯ ಸೋಪಾನ. ಮಧ್ಯಾಹ್ನ ಇತ್ತು ಎಲ್ಲರಿಗೂ ಮೃಷ್ಟಾನ್ನ ಭೋಜನ. ಇವುಗಳೆಲ್ಲದರಿಂದಾಗಿ ಸಮಯ ಉರುಳಿದ್ದೇ ಗೊತ್ತಾಗದಂತೆ ನಡೆದಿತ್ತು ಮುತ್ತುಗಳ ಪಯಣ.
ಸುಬ್ರಾಯ ಚೊಕ್ಕಾಡಿ, ಪಿ. ಎಸ್. ಪುಣಿಂಚಿತ್ತಾಯ, ರಾಮಚಂದ್ರ ಬೈಕಂಪಾಡಿ, ಟಿ. ಎ. ಶ್ರೀನಿವಾಸ್, ಡಾ. ನಾ. ದಾ. ಶೆಟ್ಟಿ, ಹೆಚ್. ದುಂಡಿರಾಜ್, ಪೂರ್ಣಿಮಾ ಗಾಂವ್ಕರ್ ಅಂಕೋಲೆ, ಬಿ. ನರಸಿಂಗ ರಾವ್, ಬಾ. ನಾ. ಸುಬ್ರಹ್ಮಣ್ಯ ಮೊದಲಾದ ಕನ್ನಡದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ವಕ್ತಾರರ ಉಪಸ್ಥಿತಿ ಮತ್ತು ಇವರು ಸುರಿಸಿದ ಮುತ್ತುಗಳು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತ್ತು. ಮಾತಾಡಿ ಪರಿಚಿತರಾಗಿದ್ದರೂ ಕಣ್ಣಾರೆ ನೋಡದೆ ಅಪರಿಚಿತರಾಗಿದ್ದ ಕೆಲವರೊಂದಿಗಿನ ಮೊದಲ ಮುಖಾಮುಖಿ, ಹತ್ತು ಇಪ್ಪತ್ತು ಮೂವತ್ತು ವರ್ಷಗಳ ಬಳಿಕ ಆದ ಭೇಟಿ, ಮಾತುಕತೆ, ಕೆಲವು ಮಂದಿ ನಿಜ ಸಾಧಕರನ್ನು ನೋಡುವ, ಅವರ ಮಾತುಗಳನ್ನು ಕೇಳುವ ಅವಕಾಶ ಇತ್ಯಾದಿಗಳು ನನಗಾದ ಲಾಭ.
ಕಾರ್ಯಕ್ರಮದ ಆರಂಭದಲ್ಲಿ ವೈಕೆಎಂ ಅವರ ಪುಸ್ತಕ ಬಿಡುಗಡೆಯಾದ ಬಗ್ಗೆ ಬರೆದಿದ್ದೆ. ಕಾರ್ಯಕ್ರಮದ ಕೊನೆಗೂ ಒಂದು ಪುಸ್ತಕ ಬಿಡುಗಡೆಯಾಯಿತು. ಡಾ. ನಾ. ದಾ. ಶೆಟ್ಟಿಯವರು ಮಲೆಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಕಾದಂಬರಿ "ಅಶ್ವಥ್ಥಾಮ" ಬಿಡುಗಡೆಗೊಂಡಿತು. ಬಿಡುಗಡೆ ಮಾಡುವುದು ಯಾರು ? ಇದರಲ್ಲೂ ಚಿನ್ನಾರದ್ದು ಒಂದು ವೈಶಿಷ್ಟ್ಯತೆ. ಸಭಾಂಗಣದಲ್ಲಿದ್ದವರ ಹೆಸರು ಬರೆದ ಚೀಟಿಗಳನ್ನು ಪೆಟ್ಟಿಗೆಗೆ ಹಾಕಿದ ಚಿನ್ನಾ, ಬಾಲಕನೊಬ್ಬನಿಂದ ಚೀಟಿ ಎತ್ತಿಸಿದರು. ಚೀಟಿ ಮೂಲಕ ಆಯ್ಕೆಯಾದ ಚಿದಾನಂದ ಭಂಡಾರಿ ಕುಮಟಾ ಅವರು ಅಶ್ವಾಥ್ಥಾಮನನ್ನು ಬಿಡುಗಡೆಗೊಳಿಸಿದರು. ಕೆಲ ವರ್ಷಗಳ ಹಿಂದೆಯೇ ಈ ಕಾದಂಬರಿ ಬಿಡುಗಡೆಯಾಗಿತ್ತು. ಪ್ರತಿಗಳೂ ಅದಾಗಲೇ ಮಾರಾಟವಾಗಿ ಮುಗಿದಿತ್ತು. ಎರಡನೇ ಮುದ್ರಣ ಕಾರ್ಯಕ್ರಮದಲ್ಲಿ ವಿಶೇಷ ರೀತಿಯಲ್ಲಿ ಬಿಡುಗಡೆಯಾಯಿತು.
"ಮುತ್ತೈದೆ"ಯರಿಗೆ ಕೆಲವು ಶುಭ ಸಮಾರಂಭಗಳಲ್ಲಿ ವಿಶೇಷ ಗೌರವ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ವಿವಾಹಿತ ಮಹಿಳೆಯರನ್ನೇ ಇದಕ್ಕೆ ಆಯ್ಕೆ ಮಾಡಲಾಗುತ್ತಿದ್ದುದನ್ನು ನಾನು ಗಮನಿಸಿದ್ದೆ. ಬಿ. ಎ. ವಿವೇಕ ರೈಗಳು ತಮ್ಮ ಸಂಜೆಯ ಮಾತಿನಲ್ಲಿ, ಮುತ್ತೈದೆಯರೆಂದರೆ ವಾಸ್ತವವಾಗಿ ವಿವಾಹಿತರೆಂದು ಅರ್ಥವಲ್ಲ, ಅವಿವಾಹಿತ ಮಹಿಳೆಯರೂ ಮುತ್ತೈದೆಯರೇ. ಪ್ರಾಯ ಪ್ರಬುದ್ಧರನ್ನು ಹಿಂದೆ ಮುತ್ತೈದೆಯರಾಗಿದ್ದರು. ಬಳಿಕ ಜನರು ತಪ್ಪಾಗಿ ಅರ್ಥೈಸಿಕೊಂಡರು ಎಂಬ ಮಹತ್ವದ ವಿಷಯವನ್ನು ತಿಳಿಸಿದರು. ಒಬ್ಬರ ಮಾತುಗಳು ಇನ್ನೊಬ್ಬರ, ಕೇಳುಗರ ಜ್ಞಾನ ಸಂಪತ್ತನ್ನು ವೃದ್ಧಿಸುವಂತಿರಬೇಕು ಎಂಬುದಕ್ಕೆ ರೈಗಳು ನನ್ನ ಪಾಲಿಗೆ ಮತ್ತೆ ಉದಾಹರಣೆಯಾದರು.
ಇಂಥ ಮಧುರ ಮಿಲನದ ಕಾರ್ಯಕ್ರಮಗಳನ್ನು ಪ್ರತೀ ವರ್ಷವೂ ಆಯೋಜಿಸಬೇಕೆಂದು ಕೆಲವರು ಮುಕ್ತ ಮನಸ್ಸಿನಿಂದ "ಶ್ರೀಪಾದ ರಾವ್ ವೇದಿಕೆ"ಯಿಂದಲೇ ಚಿನ್ನಾರನ್ನು ಕೋರಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲರ ಮನದಿಂಗಿತವೂ ಅದೇ ಆಗಿತ್ತು ಎನ್ನುವುದೇ ಮುತ್ತು ಉದುರುವ ಸಮಯದ ಸಾರ್ಥಕತೆಯಾಗಿತ್ತು.
~ ಶ್ರೀರಾಮ ದಿವಾಣ, ಉಡುಪಿ