ಅವ್ವ

ಅವ್ವ

ಬರಹ

ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
ಇರೋ ನನ್ನವ್ವ
ಅಂಥಾ ಗಂಡನ್ನ ಕಟಗೊಂಡು
ಪಡಬಾರದ್ದ ಪಟ್ಟು
ಏಗಬಾರದ್ದ ಏಗಿ
ಊರಾಗ ನಾಲ್ಕು ಮಂದಿ
ಹೌದು ಹೌದು ಅನ್ನೋಹಾಂಗ
ಬಾಳೆ ಮಾಡಿದಾಕೆ.

ಅಂಥಾ ಎಡಾ ಹೊಲದಾಗ
ದುಮು ದುಮು ಬಿಸಲಾಗ
ಬಂಗಾರ ಬೆಳಿತೇನಿ ಅಂತ ಹೋದಾಕಿ.
ಬಂಗಾರ ಇಲ್ದ ಬೆಳ್ಳಿ ಇಲ್ದ
ಬರೆ ಎರಡು ಸೀರ್ಯಾಗ
ಜೀವನಾ ಕಂಡಾಕಿ.

ಹೊಲ್ದಾನ ಹ್ವಾರೆನೂ ಮಾಡಿ
ಮನ್ಯಾಂದೂ ನೋಡಿ
ಯಾವಾಗ್ಲೂ ಮಾರಿ ದುಮು ದುಮು ಉರಿಸ್ಕೋಂತ
ಮನ್ಯಾಗ ಕುತ್ಗೊಂಡು ತಿನ್ನೊ ಗಂಡನ್ನೂ ಸಂಭಾಳಿಸಿ
ಹಾಡ ಹಾಡತಾ ಹಾಡಾದಕಿ.

ಇಂಥಾ ಗಂಡನ್ನ ಕಟಗೊಂಡ ಮ್ಯಾಲೆ
ಮಕ್ಕಳ್ನ ಹಂತೇಕ ಇಟಗೊಂಡು
ಜ್ವಾಪಾನ ಮಾಡಲಾರದ
ದೈನೇಸಿಪಟಗೊಂಡು
ಬ್ಯಾರೆದವರ ಹತ್ರ ಇಟ್ಟು
ವಿಲ ವಿಲ ಅಂತ ಒದ್ದಾಡಿದಕಿ

ಮಕ್ಕಳು ಕೈಗೆ ಬಂದ ಮ್ಯಾಲೆ
ಅವರಂತ್ಹ್ಯಾಕಿದ್ದು ಜೀವನದ ಸುಖ ಕಾಣತೇನಿ
ಅಂತ ಆಸೆ ಪಟ್ಟಾಕಿ.
ಕಟಗೊಂಡ ಗಂಡ ತನ್ನ ಜೊತಿ ಮಕ್ಕಳ್ಹಂತ್ಯಾಕ ಇರಲಾರದಕ
ಬಿಡಲಾರದ ಕರ್ಮ ಅನ್ಕೊಂಡು
ಹೊಳ್ಳಿ ಊರಿಗೆ ಹೋದಾಕಿ.

ಬರೆ ಬಿಸಲಾಗ ದುಡ್ಕೋಂತ
ಬಿಸಲುಂಡು ಬೆಳದಿಂಗಳ ನಗಿ ನಕ್ಕು
ಬೆಳಕು ಹರಿಸಿದಾಕಿ.
ಮಣ್ಣಾಗ ಹುಟ್ಟಿ
ಮಣ್ಣಾಗ ಬೆಳೆದು
ಮಣ್ಣಾಗಿ ಹೋದಾಕಿ!

-ಉದಯ ಇಟಗಿ