ಅಶ್ರುತರ್ಪಣ

ಅಶ್ರುತರ್ಪಣ

ಕವನ

ಬಾಳ ಪಯಣದಲ್ಲಿ ಹಾದಿ ತೋರಿಸುತ

ಜೀವನ ಪೂರ್ತಿ ಜೀವವನು ಸವೆಸಿದಳು

ಕಷ್ಟಕಾಲದಲ್ಲಿ ಕೈ ಹಿಡಿದು ನಗುನಗುತಲಿ

ಬಾಳ ರಥವನು ಗಜದಂತೆ ಎಳೆದಳು

 

ಕೂಲಿನಾಲಿಯ ಮಾಡುತ ಬದುಕಿ

ಬೇಕು ಬೇಡವನು ಕೊಡಿಸಿದಳು

ಗಂಜಿಯ ಕುಡಿದರು ಅಮೃತದಂತೆ

ನುಡಿಯನಾಡಿ ನನ್ನ ಬೆಳೆಸಿದಳು

 

ಹಣ್ಣಕ್ಕಿಂತ ದುಡ್ಡಿಗೆ ಬೆಲೆ ಕೊಡುವ

ಕಾಲದಲ್ಲಿ ಗುಣಕ್ಕಾಗಿ ಬದುಕಿದವಳು

ಬಡತನದಲ್ಲಿ ನನ್ನನ್ನು ಪುಟಕ್ಕಿಟ್ಟ

ಸುವರ್ಣವಾಗಿಸಿ ಹೋದವಳು

 

ಹಳೆಯ ನೆನಪುಗಳ ಬಚ್ಚಿಟ್ಟು

ನೋವನ್ನು ಮನದಿ ನುಂಗಿದವಳು

ಸುತರ ಸಲುವಾಗಿ ತ್ಯಾಗಬುದ್ದಿಯಲಿ

ದೇವನನ್ನು ಮೀರಿಸಿ ನಿಂದವಳು

 

ರೋಗರುಜಿನದಲು ನಗುನಗುತ

ನನ್ನನ್ನು ಹರಸಿ ಹಾರೈಸುವೆ

ಮಾಸಿದ ಆ ಸೀರೆಯೆಲ್ಲೂ ರಾಣಿಯಾಗಿ

ಕಂಗಳಿಗೆ ದೇವತೆಯಾಗಿ ಕಾಣಿಸುವೆ

 

ಕಣ್ಣಿಗೆ ಕಾಣುವ ದೇವರಾಗಿ ಕಣ್ಣ

ಮುಂದೆಯೆ ಮರೆಯಾದೆ ನೀನು

ಅಮ್ಮ ನಿನ್ನ ಚಿನ್ನದ ನೆನಪುಗಳ

ನೆನೆಸಿ ಒಂಟಿಯಾಗಿ ಕುಳಿತೆನಾನು

 

ಹಗಲಿರುಳು ಒಡಲ ದುಃಖದಲಿ

ನೊಂದು ಬೆಂದು ಹೋಗುವೆ

ಕರುಣೆ ಕಡಲಲ್ಲಿ ಜನನಿ ನಿನಗೆ

ದಿನವು ಅಶ್ರುತರ್ಪಣ ನೀಡುವೆ

-ಶಂಕರಾನಂದ ಹೆಬ್ಬಾಳ 

 

ಚಿತ್ರ್