ಅಷ್ಟದಾರಿಯ ಅಚ್ಚರಿ !

ಅಷ್ಟದಾರಿಯ ಅಚ್ಚರಿ !

ಒಂದಾನೊಂದು ಕಾಲದಲ್ಲಿದ್ದ ದೊಡ್ಡ ದೊಡ್ಡ ಬಾವಿಗಳೆಲ್ಲಾ ಸಣ್ಣದಾದ ಬಾವಿಗಳಾಗಿ, ನಂತರದ ದಿನಗಳಲ್ಲಿ ಬೋರ್ ವೆಲ್ ಗಳಾಗಿ ಬದಲಾದದ್ದು ನೀವೆಲ್ಲಾ ನೋಡಿಯೇ ಇರುತ್ತೀರಿ. ಮೊದಲೆಲ್ಲಾ ಎಕರೆಗಟ್ಟಲೆ ಹೊಲ, ತೋಟಗಳು ಸಾಮಾನ್ಯ ಸಂಗತಿಯಾಗಿದ್ದವು. ಆಗೆಲ್ಲಾ ಹೊಲಕ್ಕೆ ನೀರುಣಿಸಲು ಮತ್ತು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ದೊಡ್ಡದಾದ ಕೆರೆಯೋ, ಬಾವಿಯೋ ಆಸರೆಯಾಗಿರುತ್ತಿತ್ತು. ಕ್ರಮೇಣ ನಗರೀಕರಣದ ಪ್ರಭಾವಕ್ಕೆ ಒಳಗಾದ ಕಾರಣ ದೊಡ್ಡ ದೊಡ್ಡ ಬಾವಿಗಳು ಮಾಯವಾಗಿ ಪುಟ್ಟ ಪುಟ್ಟ ಬಾವಿಗಳು ಕಂಡು ಬರತೊಡಗಿದವು. ನಂತರ ಅದಕ್ಕೂ ಸ್ಥಳವಿಲ್ಲದೇ ಬೋರ್ ವೆಲ್ ಗಳು ಬಂದವು. 

ಹಲವಾರು ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ಕಂಡು ಬರುತ್ತಿದ್ದ ಬಾವಿಗಳಿಗೆ ಇಳಿಯಲು ಮೆಟ್ಟಿಲುಗಳಿದ್ದವು. ಅಂತಹ ಹಲವು ನಿರ್ಮಾಣಗಳನ್ನು ನಾವು ಈಗಲೂ ನೋಡಬಹುದಾಗಿದೆ. ಕೆಲವು ಬಾವಿಗಳಿಗೆ ಎರಡು ಜೊತೆ ಮೆಟ್ಟಿಲುಗಳೂ ಇದ್ದವು. ಆದರೆ ನೀವು ಎಂಟು ಮೆಟ್ಟಿಲುಗಳ ದಾರಿಯ ಬಾವಿಯನ್ನು ನೋಡಿರುವಿರಾ? ಈ ಅಪರೂಪದ ಬಾವಿ ಕಂಡು ಬರುವುದು ಮಹಾರಾಷ್ಟ್ರ ರಾಜ್ಯದ ಪರಭಾನಿ ಎಂಬ ಜಿಲ್ಲೆಯ ಸೆಲು ತಾಲೂಕಿನ ವಾಲೂರು ಗ್ರಾಮದಲ್ಲಿ. ಈ ಚಿತ್ರದಲ್ಲಿ ನೀವು ಗಮನಿಸಿದರೆ ಎಂಟು ವಿವಿಧ ದಾರಿಗಳ ಮೆಟ್ಟಿಲುಗಳಿವೆ. ಆದರೆ ಎಲ್ಲಾ ಮೆಟ್ಟಿಲುಗಳು ಬಾವಿಯ ಆಳಕ್ಕೇ ತಲುಪುತ್ತಿವೆ. ಸುಮಾರು ೧೦೦೦ -೧೫೦೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರಬಹುದಾದ ಈ ಬಾರಿಯು ಬಹಳಷ್ಟು ಶಿಥಿಲಾವಸ್ಥೆಯಲ್ಲಿದೆ. 

ಸುರುಳಿಯಾಕಾರದ (Helical Stepwell) ವ್ಯವಸ್ಥೆಯ ೮ ದಾರಿಗಳ ಈ ಬಾವಿಗೆ ಇಳಿಯುವ ಮೆಟ್ಟಿಲುಗಳು ಈಗ ಕಾಲನ ಹೊಡೆತಕ್ಕೆ ಸಿಕ್ಕು ಮತ್ತು ನಿರ್ವಹಣೆಯ ಸಮಸ್ಯೆಯಿಂದಾಗಿ ಹಾಳಾಗಿದೆ. ಬಹಳಷ್ಟು ಕಲ್ಲುಗಳು ಕಳಚಿ ಹೋಗಿವೆ. ಈ ಸುಂದರ ಬಾವಿಯು ಇನ್ನಷ್ಟು ಹಾಳಾಗುವ ಮೊದಲು ಎಚ್ಚೆತ್ತ ಸ್ಥಳೀಯರು ಇದನ್ನು ಈಗ ತಕ್ಕಮಟ್ಟಿಗೆ ದುರಸ್ತಿಗೊಳಿಸಿದ್ದಾರೆ. ಬಾವಿಯ ಸುತ್ತ ಬೆಳೆದಿದ್ದ ಪೊದೆಗಳು, ಕಸ ಕಡ್ಡಿಗಳನ್ನು ನಿವಾರಿಸಿದ್ದಾರೆ. ಇದರಿಂದ ಮತ್ತೆ ಈ ಬಾವಿಗೆ ಹಳೆಯ ಸೌಂದರ್ಯ ಮರುಕಳಿಸಿದೆ ಎನ್ನಬಹುದು. ಬಾವಿಯ ಒಳಗೆ ಇದ್ದ ಕೊಳಕು ಅನಾವಶ್ಯಕ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿರುವುದು ಶ್ಲಾಘನೀಯ ಕಾರ್ಯ. ಇದರಿಂದ ಈ ಬಾವಿಯು ತನ್ನ ಮೊದಲಿನ ವೈಭವಕ್ಕೆ ಮರಳಿದೆ. ಆದರೂ ಇನ್ನಷ್ಟು ದುರಸ್ತಿ ಕಾರ್ಯಗಳು ನಡೆದು, ಇದನ್ನು ಸಂರಕ್ಷಿಸುವ ಕಾರ್ಯ ಆಗಬೇಕಾಗಿದೆ. ಸರಕಾರ ಈ ಬಗ್ಗೆ ಗಮನವಹಿಸಿ ಇದನ್ನು ಸ್ಮಾರಕದ ರೀತಿಯಲ್ಲಿ ಸಂರಕ್ಷಿಸಿದರೆ ಮುಂದಿನ ಜನಾಂಗಕ್ಕೂ ಈ ಸುಂದರ ವಾಸ್ತು ಶಿಲ್ಪ ಕಲೆಯನ್ನು ಪರಿಚಯಿಸಿದಂತಾಗುತ್ತದೆ. ಭಾರತದ ದೇಶದ ಅತ್ಯಮೂಲ್ಯ ಸಂಸ್ಕೃತಿಯನ್ನು ಉಳಿಸಿದಂತೆಯೂ ಆಗುತ್ತದೆ.

ಸುಳಿವು: ‘ಅಮರದೇವ’ ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ