ಅಸಂಗತತೆ..!
ಕರಿ ಬಯಲಾಗಿದೆ ಎಲ್ಲಾ
ಚಿಂಕರ ತಾತಾ
ಇರಬೇಕಿತ್ತಲ್ಲಾ ಹಸಿರು..
ಕಪ್ಪುಬಿಳಿ ಗಡ್ಡದ ತೊಗಲಡಿ
ಭಾವಗಳ ಬಸಿರು?
ನಕ್ಕು ಮಿಂಚಿದ ಹಲ್ಲಿಗು ಬೆಳಕು
ಏನೆಲ್ಲಾ ಥಳಕೂ ಬಳಕು
ಇಷ್ಟೆ ಅಗಲ ಇಷ್ಟೆ ಉದ್ದಕೆ
ತುಟಿ ಮುಚ್ಚೊ ಬಿಚ್ಚೊ ಲೆಕ್ಕಾಚಾರ
ತಾತಾ ಯಾಕೊ ಅಸಂಗತ!
ಜ್ವರ ಬೆಚ್ಚಿಸಿದ ಮೈಯನು ಮುಟ್ಟಿ
ಹೋರಾಡಿದ ಶರೀರದ ಜಟ್ಟಿಗೆ
ಯುದ್ಧ ಮಾಡಲು ಬಿಡದೆ ಮಂಜು
ಸುರಿದಾಗಿಸೊ ತಣ್ಣನೆ ಪಂಜಿಗೆ
ಅಸಂಕರ ತಾತಾ ಚಿಂಕರ..!
ಗುಡಿಸಲ ಹೊಟ್ಟೆ ಸೋಮಾರಿಯಾಗಿ
ಭವ್ಯ ಕಟ್ಟಡಗಳೆ ಬುಗುಬುಗುರಿ ಚಿಗುರಿ
ಕೊಳಚೆ ಕಮಲವೆಂದೆ ನಗುವ ಚಿತ್ರಕೆ
ಹೇಳಿಕೊಂಡು ನಗಲ್ಯಾರ ಹತ್ತಿರ?
ಹಸಿವಲೆಸೆದನ್ನವೆ ತಾತ ಭಯಂಕರ!
ಪ್ರಗತಿಯ ತಾಯತಿ ಹಿಡಿದು ಬಂದರು
ಬಗಲಲಿ ಖಾಲಿ ಜೋಳಿಗೆ ಭಾರ
ತಂದರೊ ತಿಂದರೊ ತಿನಿಸಿದರೊ ಒಗಟೆ;
ಸ್ವಂತ ಕಾಲಲೆ ನಿಲದೀ ಪ್ರಗತಿ ಬಟ್ಟೆ
ತುಂಬಿಸಲಿದೆಯೆ ಭವಿತದ ಹೊಟ್ಟೆ?
ಪ್ರಗತಿ ಹೆಸರನೆ ಪ್ರಗತಿಸುವ ಪ್ರಗತಿ
ಮುಚ್ಚಿಟ್ಟೀತೆ ಒಣಕೆಮ್ಮಿನಧೋಗತಿ ತಾತ
ಪ್ರಗತಿಸಿವೆ ಹೆಸರಲಿ ದರ ದರ ಬೆಲೆ
ಹಿಡಿಯನ್ನಾ ಮಣ್ಣು ಹೊನ್ನು ಮಿಂಚಿನ ಶೂಲೆ
ಏರಬೇಕಿತ್ತಲ್ಲವೆ ಮಟ್ಟ ಬೆಲೆಯಿಳಿಸುತ್ತ ಅಕಟಾ!
ಮುಳುಗುವ ಹಡಗಿಂದ ಓಡುವ ಇಲಿಗಳೆ ಹೆಚ್ಚು
ತಂದು ಹಾಕಿದ ದುಡ್ಡು ಧರ್ಮಕಲ್ಲ, ಲಾಭದ ಪಟ್ಟು
ತಂದು ತಿನ್ನುವ ಸುಖ ಬದಿಗಿಟ್ಟು ಇಲ್ಲೆ ಹುಡುಕುತ
ಸಾಲ ಸರ್ವಜ್ಞನ ನೆನೆದು ಸಾಲ ಕೊಡುವ ತವಕ
ಪ್ರಭುತ್ವಕೆ ಬಂದೀತೆ ಸಂಗತ, ಹೇಳು ಚಿಂಕರ ತಾತ!
- ನಾಗೇಶ ಮೈಸೂರು
Comments
ಅಸಂಗತ ಕವನ ಓದಿದ ಗೆಳೆಯ ಸುರೇಶ