'ಅಸಂಸದೀಯ ಪದ' ನೆಪದಲ್ಲಿ ಚರ್ಚೆ ಕುಂಠಿತವಾಗದಿರಲಿ

'ಅಸಂಸದೀಯ ಪದ' ನೆಪದಲ್ಲಿ ಚರ್ಚೆ ಕುಂಠಿತವಾಗದಿರಲಿ

ಮುಂದಿನ ಸೋಮವಾರದಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಇದರ ಬೆನ್ನ ಹಿಂದೆಯೇ ಅಸಂಸದೀಯ ಪದಗಳ ನಿರ್ಭಂಧ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲೋಕಸಭೆ ಕಾರ್ಯಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಅಸತ್ಯ, ಭ್ರಷ್ಟತೆ ಸೇರಿದಂತೆ ಕೆಲವೊಂದು ಪದಗಳನ್ನು ಬಳಕೆ ಮಾಡದಂತೆ ನಿರ್ಭಂಧಿಸಲಾಗಿದೆ. ವಿಪಕ್ಷಗಳ ಪ್ರಕಾರ, ಇದೊಂದು ಪ್ರಜಾಸತ್ತಾತ್ಮಕ ವಿರೋಧಿ ನಡೆಯಾಗಿದ್ದು ಸಂಸತ್ ನಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂಥ ಪರಿಸ್ಥಿತಿ ಉದ್ಭವವಾಗಬಹುದು ಎಂದು ಆರೋಪಿಸಿವೆ.

ಅಸಂಸದೀಯ ಪದ ಎಂದರೆ, ಸಂಸತ್ ನ ಘನತೆಗೆ ಧಕ್ಕೆ ತರುವ ಪದಗಳು. ದೇಶದ ಅತ್ಯುನ್ನತ ಸದನವಾಗಿ, ಜನರ ಹಿತದೃಷ್ಟಿಯಿಂದ ಶಾಸನ ರೂಪಿಸುವ ಈ ಸದನದಲ್ಲಿ ಕೀಳು ಅಭಿರುಚಿಯ ಪದಗಳನ್ನು ಸಂಸದರು ಬಳಕೆ ಮಾಡಬಾರದು ಎಂಬುದು ಈಗ ಹೊರಡಿಸಿರುವ ನಿಯಮದ ತಾತ್ಪರ್ಯ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಕೆಲವು ಪದಗಳಿಗೆ ಮಿತಿ ಹೇರುವುದು ಉತ್ತಮವೇ. ಹಾಗಂತ ತೀರಾ ದಿನನಿತ್ಯದ ರಾಜಕೀಯ ಚರ್ಚೆಯಲ್ಲಿ ಬಳಕೆ ಮಾಡುವಂಥ ಪದಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿರುವುದು ಉಚಿತವಾದ ಕ್ರಮವಲ್ಲ.

ಈ ಕುರಿತಂತೆ ವಿವಾದ ಏರ್ಪಟ್ಟ ಮೇಲೆ ಸ್ಪೀಕರ್ ಓಂ ಬಿರ್ಲಾ ಅವರೇ ಸ್ಪಷ್ಟನೆ ನೀಡಿದ್ದು, ಯಾರ ಮಾತಿಗೂ ನಿರ್ಬಂಧ ಹೇರಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಸತ್ ಘನತೆ ಕಾಪಾಡಬೇಕಾದದ್ದು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿರುವ ಸದಸ್ಯರ ಆದ್ಯ ಕರ್ತವ್ಯ ಎಂದೂ ಹೇಳಿದ್ದಾರೆ.

ಅಸಂಸದೀಯ ಪದ ವಿಚಾರವಾಗಿ ಇದೇ ಮೊದಲ ಬಾರಿಗೆ ಇಂಥ ನಿಯಮಗಳನ್ನೇನೂ ಹೊರಡಿಸಿಲ್ಲ. ೧೯೯೯ರಲ್ಲೇ ಇಂಥ ಪ್ರಯತ್ನ ಶುರುವಾಗಿ ೨೦೦೨ರ ಹೊತ್ತಿಗೆ ೯೦೦ ಪುಟಗಳ ಒಂದು ಪುಸ್ತಕವನ್ನೇ ಸಿದ್ಧ ಮಾಡಲಾಗಿದೆ. ಹಾಗೆಯೇ ಯುಪಿಎ ಸರಕಾರದ ಅವಧಿಯ ೨೦೧೨ರಲ್ಲಿಯೂ ಇಂಥ ಕೈಪಿಡಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಯೂ ಕೆಲವೊಂದು ಪದಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ಪಟ್ಟಿಗೆ ಈಗ ಹೊಸದಾಗಿ ೬೨ ಪದಗಳನ್ನು ಸೇರಿಸಲಾಗಿದೆ ಎಂಬುದು ಕೇಂದ್ರ ಸರಕಾರದ ಸಮಜಾಯಿಷಿ. ಆದರೆ ಈಗ ಬಹುತೇಕರ ಆಕ್ಷೇಪವಿರುವುದು ಭ್ರಷ್ಟಾಚಾರಿ, ಸುಳ್ಳುಗಾರ, ಅಸಮರ್ಥ, ಅಸತ್ಯ, ಮೋಸ, ಸುಳ್ಳು, ನಾಟಕ, ದಾರಿ ತಪ್ಪಿಸುವಿಕೆ ಸೇರಿದಂತೆ ಪ್ರಮುಖ ಪದಗಳ ಬಗ್ಗೆ. ಯಾವುದೇ ಪಕ್ಷದ ಆಡಳಿತವಿರಲಿ ಸರಕಾರದ ವಿರುದ್ಧ ಟೀಕೆ ಮಾಡುವಾಗ ವಿಪಕ್ಷಗಳು ಇಂಥ ಪದಗಳನ್ನು ಬಳಕೆ ಮಾಡಲೇ ಬೇಕು. ಆದರೆ ಈ ಪದಗಳನ್ನು ಬಿಟ್ಟು ಬೇರೆ ಯಾವ ಪದಗಳನ್ನು ಉಪಯೋಗಿಸಲಿ ಎಂಬುದು ವಿಪಕ್ಷಗಳ ಆಕ್ಷೇಪ.

ವಿಶೇಷವೆಂದರೆ, ಕೆಲವು ಅಧಿಕಾರಿಗಳು ಹೇಳುವಂತೆ, ದೇಶದ ಎಲ್ಲ ವಿಧಾನಸಭೆಗಳ ಕಡತದಿಂದ ತೆಗೆದುಹಾಕಿರುವ ಪದಗಳನ್ನು ನೋಡಿಯೇ ಈಗ ನಿರ್ಬಂಧದ ಸೂಚನೆ ನೀಡಲಾಗಿದೆ. ಅಂದರೆ ೨೦೨೧ರಲ್ಲಿ ರಾಜಸ್ಥಾನ ವಿಧಾನ ಸಭೆಯಲ್ಲಿ ಅಸತ್ಯ, ೧೯೮೦ರ ಜುಲೈನಲ್ಲಿ ಸಂಸತ್ ನಲ್ಲಿ ಭ್ರಷ್ಟ ಮತ್ತು ಭ್ರಷ್ಟಾಚಾರಿ ಪದಗಳನ್ನು ತೆಗೆದುಹಾಕಲಾಗಿದೆ. ಅಸಮರ್ಥ ಸಚಿವರು ಎಂಬ ಪದವನ್ನು ೧೯೭೬ರ ನವೆಂಬರ್ ನಲ್ಲಿ ತೆಗೆಯಲಾಗಿದೆ. 

ಈ ಸಂಗತಿಗಳನ್ನು ನೋಡಿದರೆ, ಯಾವುದೇ ಪಕ್ಷಗಳಿದ್ದರೂ ಅವುಗಳು ತಮ್ಮ ಮೂಗಿನ ನೇರಕ್ಕೆ ಇಂಥ ನಿಯಮಗಳನ್ನು ಮಾಡಿಕೊಳ್ಳುತ್ತವೆ. ಎಂಬುದು ಗೊತ್ತಾಗುತ್ತದೆ. ಆದರೆ ಏನೇ ಆಗಲಿ ಪದಗಳ ಮೇಲಿನ ನಿರ್ಬಂಧದಿಂದ ಸಂಸತ್ ಅಥವಾ ವಿಧಾನ ಸಭೆಗಳಲ್ಲಿ ಉತ್ತಮ ಚರ್ಚೆಗೆ ಅವಕಾಶ ಸಿಗದಂತೆ ಆಗಬಾರದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೫-೦೭-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ