ಅಸಹಾಯಕರು ರೈತರೇ ವಿನಃ ಚೇರ್ಮನ್ನರಲ್ಲ

ಅಸಹಾಯಕರು ರೈತರೇ ವಿನಃ ಚೇರ್ಮನ್ನರಲ್ಲ

"ನಾನು ಅಸಹಾಯಕನೆಂದು ನನಗೆ ಅನಿಸುತ್ತಿದೆ”, ಹೀಗೆಂದವರು “ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿ”ನ (ಸಿಎಸಿಪಿ) ಚೇರ್-ಮನ್ ಟಿ. ಹಕ್. ನವಂಬರ್-ಡಿಸೆಂಬರ್ 2007ರಲ್ಲಿ ದೇಶದ ಉದ್ದಗಲದಲ್ಲಿ ಸಂಚರಿಸಿ, ರೈತರ ಸಂಘಟನೆಗಳ ಜೊತೆ ಸಂವಾದ ನಡೆಸಿದ ಹಕ್ ಹೇಳುತ್ತಾರೆ, “ಕೃಷಿ ಈಗ ಲಾಭದಾಯಕವಲ್ಲ ಎಂಬ ನೋವಿನ ಅಹವಾಲುಗಳು ಸಾಲುಸಾಲಾಗಿ ಬಂದಿವೆ.”

“ರೈತರಿಗೆ ಉತ್ತಮ ಬೆಲೆ ನೀಡಲೇ ಬೇಕು” ಎಂದವರು 18 ಡಿಸೆಂಬರ್ 2007ರಂದು ಮುಂಬೈಯಲ್ಲಿ ಜರಗಿದ ಸಭೆಯಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದರು.

ಆ ಸಭೆಯಲ್ಲಿ ವಿದರ್ಭದ ಹತ್ತಿ ಬೆಳೆಗಾರರ ಸಂಕಟದ ಪರಿಸ್ಥಿತಿಯೇ ಪ್ರಧಾನ ವಿಷಯ. ಅಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳೂ ಅಧಿಕಾರಿಗಳೂ ಹಕ್ ಅವರಿಗೆ ಹೇಳಿದ್ದಿಷ್ಟು: “ವಿವಿಧ ಬೆಳೆಗಳ ಫಸಲುಗಳಿಗೆ ನಿಮ್ಮ ಕಮಿಷನ್ ನಿಗದಿ ಪಡಿಸುತ್ತಿರುವ ಕನಿಷ್ಠ ಬೆಂಬಲ ಬೆಲೆಯೇ ರೈತರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ.”

ಅದಕ್ಕೆ ಹಕ್ ಅವರ ಪ್ರತಿಕ್ರಿಯೆ, "ನಾನು ಅಸಹಾಯಕ.” ಆ ಸಂದರ್ಭದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ನಾನಾ ಸಾಹೇಬ್ ಪಾಟೀಲ್ ಹೀಗೆಂದು ಪ್ರತಿಪಾದಿಸಿದರು, “ಒಂದು ಬೆಳೆಯ ಫಸಲಿಗೆ ರಾಷ್ಟ್ರಮಟ್ಟದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕ್ರಮ, ಕೃಷಿ ವೆಚ್ಚಗಳ ಪ್ರಾದೇಶಿಕ ವ್ಯತ್ಯಾಸಗಳನ್ನು ಪರಿಗಣಿಸುವುದಿಲ್ಲ. ಮಳೆಯಾಧಾರಿತ ಕೃಷಿ ಮತ್ತು ನೀರಾವರಿ ಕೃಷಿಯ ಬೆಳೆಗಳಿಗಾದರೂ ಪ್ರತ್ಯೇಕ ಬೆಂಬಲಬೆಲೆ ಘೋಷಿಸಬೇಕು.”

ಎಂತಹ ವಿಪರ್ಯಾಸ! ವಿದರ್ಭದ ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೆ, ಮಹಾರಾಷ್ಟ್ರದ ಹತ್ತಿ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ 2006 - 2007ರಲ್ಲಿ ರೂಪಾಯಿ 200 ಕೋಟಿ ದಾಖಲೆ ಲಾಭ ಗಳಿಸಿದೆ!

ಹತ್ತಿ ಬೆಳೆಗಾರರಿಂದಲೇ ಕನಿಷ್ಠ ಬೆಂಬಲಬೆಲೆಯಲ್ಲಿ ಹತ್ತಿ ಖರೀದಿಸುವ ಫೆಡರೇಷನ್, ಹತ್ತಿ ಬೆಳೆಗಾರರಿಗೆ ಬೋನಸ್ ಘೋಷಿಸಿ, ತನ್ನ ಲಾಭದ ಒಂದಂಶ ಹಂಚಲು ಇನ್ನೂ ನಿರ್ಧರಿಸಿಲ್ಲ.

1994-95ರಿಂದ 2005ರ ತನಕ ನಷ್ಟ ಅನುಭವಿಸುತ್ತಲೇ ಬಂದ ಹತ್ತಿ ಫೆಡರೇಷನಿನ ಈ ವರೆಗಿನ ಒಟ್ಟು ನಷ್ಟ ರೂ.6,000 ಕೋಟಿ. ಅದೆಲ್ಲವನ್ನೂ ಭರಿಸಿ, ಈ ವರುಷ ಫೆಡರೇಷನ್ ಲಾಭ ಬಾಚಿಕೊಂಡಿದೆ.

ಇದು ಹೇಗೆ ಸಾಧ್ಯವಾಯಿತು? ವಿದರ್ಭ ಜನಾಂದೋಲನ ಸಮಿತಿಯ ಸಂಚಾಲಕರಾದ ಕಿಶೋರ್ ತಿವಾರಿ ಹೇಳುತ್ತಾರೆ, “ಮಾನವ ಜೀವಗಳ ಬೆಲೆ ತೆತ್ತು ಈ ಲಾಭ ಮಾಡಿಕೊಳ್ಳಲಾಗಿದೆ.” ರೈತರ ಬೆಳೆಗಳ ಫಸಲುಗಳಿಗೆ ಸಮರ್ಪಕ ಬೆಲೆ ಸಿಗಬೇಕೆಂಬ ಹಕ್ಕೊತ್ತಾಯ ಹೋರಾಟದ ಮುಂಚೂಣಿಯಲ್ಲಿರುವ ಸಂಘಟನೆ ವಿದರ್ಭ ಜನಾಂದೋಲನ ಸಮಿತಿ.

ವಿದರ್ಭದಲ್ಲಿ ರೈತರ ಸರಣಿ ಆತ್ಮಹತ್ಯೆಗಳಿಗೆ ಫೆಡರೇಷನೇ ಕಾರಣ ಎನ್ನುತ್ತಾರೆ ತಿವಾರಿ. ಅಲ್ಲಿನ ರೈತರ ಆತ್ಮಹತ್ಯೆಗಳನ್ನು ದಾಖಲಿಸಿರುವ ಸಮಿತಿಯ ಅನುಸಾರ, 2007ರಲ್ಲಿ ಸುಮಾರು ಒಂದು ಸಾವಿರ ರೈತರು ತಮ್ಮ ಪ್ರಾಣ ಬಲಿಗೊಟ್ಟಿದ್ದಾರೆ.

“ಲಾಭ ಮಾಡಿಕೊಳ್ಳುತ್ತಿದ್ದ ಫೆಡರೇಷನ್ ಹತ್ತಿ ಬೆಳೆಗಾರರಿಗೆ ಬೋನಸ್ ಕೊಡುವ ಬಗ್ಗೆ ಅಥವಾ ನ್ಯಾಯೋಚಿತ ಬೆಲೆ ಕೊಡುವ ಬಗ್ಗೆ ಯೋಚಿಸಲೇ ಇಲ್ಲ. ಅದರಿಂದಾಗಿಯೇ ಬಡ ರೈತರು ತಮ್ಮ ಜೀವ ಕಳೆದುಕೊಳ್ಳುವಂತಾಯಿತು” ಎಂದು ಅವಲತ್ತು ಕೊಳ್ಳುತ್ತಾರೆ ತಿವಾರಿ. ಹತ್ತಿಯ ಬೆಲೆ ಹೆಚ್ಚಿಸುವ ಬದಲಾಗಿ, ಕಳೆದ ವರುಷ ಬೆಲೆಯನ್ನು ಕ್ವಿಂಟಾಲಿಗೆ ರೂ.2,500ರಿಂದ ರೂ.1,700ಕ್ಕೆ ಫೆಡರೇಷನ್ ಇಳಿಸಿತು!

“ಒಂದು ಲಕ್ಷ ಬೇಲ್ ಹತ್ತಿ ನಮ್ಮ ಉಗ್ರಾಣದಲ್ಲಿ ಇನ್ನೂ ಮಾರಾಟವಾಗದೆ ಉಳಿದಿದೆ. ಹಾಗಾಗಿ, ಅಂತಿಮ ಲಾಭದ ಬಗ್ಗೆ ಈಗಲೇ ಖಚಿತವಾಗಿ ಹೇಳುವಂತಿಲ್ಲ” ಎನ್ನುತ್ತಾರೆ, ಫೆಡರೇಷನಿನ ಚೇರ್-ಮನ್ ಎನ್‌.ಪಿ. ಹಿರಾನಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯ ಏರಿಳಿತಗಳ ಅಪಾಯದಿಂದ ಫೆಡರೇಷನ್ ಪಾರಾಗುವಂತಿಲ್ಲ ಎಂಬುದು ಅದರ ಅಧಿಕಾರಿಗಳ ಅಂಬೋಣ. ಹತ್ತಿ ಬೆಲೆಯ ಇಳಿತಕ್ಕೆ ಪ್ರಮುಖ ಕಾರಣ ಅಮೆರಿಕನ್ ಹತ್ತಿಗೆ ಯುಎಸ್‌ಎ ಸರಕಾರ ನೀಡುತ್ತಿರುವ ಭಾರೀ ಸಬ್ಸಿಡಿ.

“ಮಹಾರಾಷ್ಟ್ರದ ಹತ್ತಿ ಬೆಳೆಗಾರರಿಗೆ ಹತ್ತಿ ಬೆಲೆಯ ಏರಿಳಿತ ಎದುರಿಸಲು ಸಾಧ್ಯವೇ ಇಲ್ಲ” ಎಂಬುದು ಪುಣೆಯ “ಗೋಖಲೆ ರಾಜಕೀಯ ಮತ್ತು ಆರ್ಥಿಕ ಸಂಸ್ಥೆ”ಯ ಆರ್ಥಿಕ ತಜ್ನ ಸಿದ್ಧಾರ್ಥ ಮಿಶ್ರಾ ಅವರ ಅಭಿಪ್ರಾಯ. ರೈತರ ಆದಾಯ ಹೆಚ್ಚಿಸಬೇಕೆಂದಾದರೆ ಬಡ್ಡಿರಹಿತ ಸಾಲ ನೀಡುವುದು ಮತ್ತು ನೀರಾವರಿ ಸೌಕರ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಪ್ರೋತ್ಸಾಹಧನ ನೀಡುವುದು ಅಗತ್ಯ ಎಂದವರ ಅನಿಸಿಕೆ.

“ಬಿಟಿ ಹತ್ತಿ ಕೃಷಿಗೆ ಭಾರೀ ಪ್ರಮಾಣದ ನೀರು ಬೇಕು. ಮಳೆಯಾಧಾರಿತ ವಿದರ್ಭ ಪ್ರದೇಶದಲ್ಲಿ ರೈತರಿಗೆ ಬಿಟಿ ಹತ್ತಿ ಬೆಳೆಯಲು ಉತ್ತೇಜನ ನೀಡುವುದೆಂದರೆ ಸಾಲದ ಹಣದಲ್ಲಿ ಅವರನ್ನು ಜೂಜಾಟಕ್ಕೆ ಪ್ರಚೋದಿಸುವುದು” ಎನ್ನುತ್ತಾರೆ ಸಹಕಾರಿ ಇಲಾಖೆಯ ಕಾರ್ಯದರ್ಶಿ ಸುಧೀರ್ ಕುಮಾರ್.

ಮಹಾರಾಷ್ಟ್ರ ಸರಕಾರ ಮತ್ತು ದೇಶದ ಪ್ರಧಾನ ಮಂತ್ರಿಗಳು ವಿದರ್ಭಕ್ಕೆ ಭೇಟಿ ನೀಡಿ, “ರೈತರ ಉದ್ಧಾರ”ಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ “ಪರಿಹಾರ ಪ್ಯಾಕೇಜು"ಗಳನ್ನು ಘೋಷಿಸಿದ ನಂತರವೂ ಅಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದೆ. ಇದು ರೈತರ ಹತಾಶೆ ಮತ್ತು ಅಸಹಾಯಕತೆಯ ಸೂಚಕ.

ರೈತರು ಅಸಹಾಯಕರು ವಿನಃ ರಾಷ್ಟ್ರೀಯ ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿನ ಚೇರ್-ಮನ್ನರು ಅಸಹಾಯಕರಲ್ಲ. ಇನ್ನಾದರೂ ಅವರು ಎಚ್ಚೆತ್ತುಕೊಳ್ಳಲಿ. ರೈತರನ್ನು "ಜೂಜಾಟ"ಕ್ಕೆ ಇಳಿಸುವ ಬದಲಾಗಿ, ಸೋರಿ ಹೋಗುವ ಪರಿಹಾರ ಪ್ಯಾಕೇಜುಗಳನ್ನು ನೀಡುವ ಬದಲಾಗಿ ಹೀಗೆ ಮಾಡಲಿ: ರೈತರು ಬೆಳೆಸಿದ ಬೆಳೆಗಳ ಫಸಲುಗಳಿಗೆ ನ್ಯಾಯೋಚಿತ ಕನಿಷ್ಠ ಬೆಂಬಲಬೆಲೆ ಘೋಷಿಸಿ, ರೈತರು ತಮ್ಮದೇ ಆದಾಯದ ಬಲದಿಂದ ಆತ್ಮಗೌರವದಿಂದ ಬಾಳಲು ಅವಕಾಶ ಒದಗಿಸಲಿ.

ಫೋಟೋ 1: ಹತ್ತಿಗಿಡದಲ್ಲಿ ಬಿರಿದ ಹತ್ತಿ
ಫೋಟೋ 2: ಹತ್ತಿ ಗಿಡಗಳು
ಫೋಟೋ 3: ಹತ್ತಿಎಲೆ, ಹತ್ತಿ ಮತ್ತು ಮೊಗ್ಗು

ಫೋಟೋ ಕೃಪೆ: ಜಾಲತಾಣಗಳು