ಅಸಹಾಯಕ ಸ್ಥಿತಿ

ಅಸಹಾಯಕ ಸ್ಥಿತಿ

ಕವನ

ಸೂರ್ಯ ಕಿರಣದ 

ತಾಪದಲಿ ಬೆಂದು,ನೊಂದೆ !

ಬುವಿಯು ಬಿರುಕೊಡೆದು ನಲುಗಿ ,

ಒಣಗಿ ಬಾಯ್ಬಿಟ್ಟಿತು ಅನ್ನದಾತನ ಕಣ್ಣೀರು ನಿಟ್ಟುಸಿರು ಕಾಣದೆ, 

ಕೇಳದೆ ಹೋಯಿತು

ಆಗಸದೆಡೆಗೆ ದೃಷ್ಟಿ ನೆಟ್ಟು ಹತಾಶನಾಗಿ,ಕುಳಿತನು

ಮಾನವನ ಸ್ವಾರ್ಥದ ಜೇಬು,

ಭರ್ತಿಯಾದರೂ ಇಂಗಿಲ್ಲ ದಾಹ

ಹಸಿವು ನೀರಡಿಕೆ ಇಂಗಿಹೋಗಿ ಫಲಕಾಣದ,ಅಸಹಾಯಕ ಸ್ಥಿತಿ !

 

ಪರಿಹಾರ ರೂಪದಿ ಅಕ್ಟೋಪಸ್ ಗಳ ,ಹಿಡಿತದಲಿ ನಲುಗಿ

ಗೊಣಗಾಟ ನರಳಾಟ ಸಾಕ್ಷಿಗಳ,ಹುಡುಕಾಟದಿ ;

ಆಪತ್ರ ಈ ಪತ್ರ ತನ್ನಿ ಆಸ್ತಿಪತ್ರ ಧ್ವನಿ

ಎಡರು ತೊಡರುಗಳ ಸಾಗರವ ದಾಟಿ ಬಂದರೂ,  ಅಸಹಾಯಕ ಸ್ಥಿತಿ !

 

ಕಛೇರಿಯ 

ಗೋಡೆಗಾನಿಸಿ ಬೆವರ ಕಮಟು 

ವಾಸನೆ ಬಂದರೂ;

ಬಾನಂಚಿನ ಭಾಸ್ಕರ ಜಾರಿ ನಿಶೆ ಆವರಿಸಿ,ಬರಲು

ನಾಳೆ ಬನ್ನಿ ಎಂಬ ಉದ್ಘೋಷದಿ 

ಅಡಗಿಹ ಸತ್ಯ

ಕೈಚಾಚುವ ಹದ್ದಿನಂತೆ 

ಕುಕ್ಕುವ ಗಟ್ಟಿ ಕುಳಗಳ ಮೇಳ

ಹರಿದ ಕಿಸೆಯ ಕಾಸಿಗೆ 

ಜೊಲ್ಲು ಸುರಿಸುವ

ಇಲಿ 

ಹೆಗ್ಗಣಗಳಂತಿರುವ ಧನಪಿಶಾಚಿಗಳ,

ಬಲೆಯಲಿ ಅಸಹಾಯಕ ಸ್ಥಿತಿ!

 

ಬೇರೆಯವರ ಹೊಟ್ಟೆ 

ಹಸಿವಿನ ಮೇಲೆ, ಬಾಳೆಲೆ 

ಹಾಸಿ ಉಂಬರು!

ತಿಂದು ತೇಗುವ ಜಾಯಮಾನ ಹೊದ್ದು ಮಲಗಿದೆ

ಅದಾಗಲೇ ವಕ್ಕರಿಸಿತು ಮಹಾಮಾರಿ ಕಾಳ್ಗಿಚ್ಚಿನಂತೆ

ಒಂದೊಂದೇ ಕೊಂಡಿ 

ಕಳಚಿ ನೀರವ ಮೌನ

ಬಿಟ್ಟರೂ ಬಿಡದೆಂಬ ಕರಿನೆರಳ ಛಾಯೆ,ಮಸಣವಾಯಿತು

ಹರ ಸಾಹಸದಲಿ ನೀಡಿದ ದಾಖಲೆಗಳು ಮೂಲೆಸೇರಿದ,ಅಸಹಾಯಕ ಸ್ಥಿತಿ !

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್