ಅಸಹ್ಯಕರ ತಿರುವು ಪಡೆಯುತ್ತಿರುವ ಮೀಸಲಾತಿ ಬೇಡಿಕೆಗಳು...

ಅಸಹ್ಯಕರ ತಿರುವು ಪಡೆಯುತ್ತಿರುವ ಮೀಸಲಾತಿ ಬೇಡಿಕೆಗಳು...

" ವಸುದೈವ ಕುಟುಂಬ - ಮಾನವ ಜಾತಿ ತಾನೊಂದು ವಲಂ - ವಿಶ್ವ ಮಾನವ ಪ್ರಜ್ಞೆ - ಕುಲದ ನೆಲೆಯ ಬಲ್ಲಿರಾ - ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ - ಜಲ ಒಂದೇ ಶೌಚ ಶಮನಕ್ಕೆ.." ಹೀಗೆ ಹೇಳುತ್ತಿದ್ದವರ ಅನುಯಾಯಿಗಳ ಮುಖವಾಡಗಳು ಕಳಚಿ ಬೀಳುತ್ತಿವೆ.

ವಾಸ್ತವದಲ್ಲಿ ಶೋಷಿತರ - ಅಸ್ಪೃಶ್ಯರ ಏಳಿಗೆ ಸಹಿಸದ ಅಸೂಯೆಯ ಮನಸ್ಸುಗಳು ಬೆಂಕಿ ಕಾರುತ್ತಾ ಹೊರ ಬರುತ್ತಿವೆ. ಸಾಮಾಜಿಕ ನ್ಯಾಯ ಅಪಹಾಸ್ಯಕ್ಕೆ ಒಳಗಾಗಿ ಅವಶ್ಯಕತೆ ಇರುವವರಿಗೂ ಸಿಗಲಾರದಂತೆ ಗೊಂದಲ ಸೃಷ್ಟಿಸಿ ಸಂಪೂರ್ಣ ಮೀಸಲಾತಿ ನಿರ್ಮೂಲನೆ ಮಾಡುವ ಹುನ್ನಾರ ನಡೆಯುತ್ತಿದೆ. ಜಾತಿಯ ಶ್ರೇಷ್ಠತೆ ಉಳಿಸಿಕೊಂಡು ಲಾಭಕ್ಕಾಗಿ ಕೆಳ ಜಾತಿಯ ಪಟ್ಟ ಹೊರಲು ಸಿದ್ದರಾದ ಸಮುದಾಯಗಳ ಸ್ವಾರ್ಥ ರಾಜಕೀಯ ಮತ್ತು ಧಾರ್ಮಿಕ ಪುಡಾರಿಗಳು. ಚುನಾವಣಾ ‌ಸಮಯದಲ್ಲಿ ಬ್ಲಾಕ್ ಮೇಲ್ ತಂತ್ರಕ್ಕೆ ಶರಣಾದ ಜಾತಿ ಸಮುದಾಯಗಳ ರಾಜಕೀಯ ಮುಖಂಡರು. ತನ್ನ ಚುನಾವಣಾ ರಾಜಕೀಯ ಲಾಭಕ್ಕಾಗಿ ಜೇನುಗೂಡಿಗೆ ಕೈಹಾಕಿ ರಾಡಿ ಮಾಡುತ್ತಿರುವ ರಾಜ ಪಕ್ಷಗಳು.

ತಮ್ಮ ವ್ಯಾಪಾರದ ಲಾಭಕ್ಕಾಗಿ ಬೇಡದ ವಿಷಯಕ್ಕೆ ಪ್ರಚಾರದ ಮಹತ್ವ ನೀಡಿ ಜನರಲ್ಲಿ ಭ್ರಮೆ ಸೃಷ್ಟಿಸುತ್ತಿರುವ ಮಾಧ್ಯಮಗಳು. ಭವಿಷ್ಯದ ಅರಿವಿಲ್ಲದೆ, ದೇಶದ ಸಮಗ್ರತೆಯ ಚಿಂತನೆ ಇಲ್ಲದೇ, ಕಾನೂನಿನ ತಿಳಿವಳಿಕೆ ಇಲ್ಲದೇ, ಧರ್ಮ ಮತ್ತು ಅಮಾನವೀಯ ಕಾಳಜಿ ಇಲ್ಲದೇ, ಕುರಿಗಳಂತೆ ಸ್ವಾರ್ಥ ನಾಯಕರನ್ನು ಹಿಂಬಾಲಿಸುತ್ತಿರುವ ಮುಗ್ಧ ಮತ್ತು ಮೂರ್ಖ ಜನರು.

ಸ್ವಾತಂತ್ರ್ಯದ 75 ವರ್ಷಗಳ ನಂತರ ನಿಧಾನವಾಗಿ ಮೀಸಲಾತಿಯನ್ನೇ ಇಲ್ಲವಾಗಿಸಿ ಬಸವಣ್ಣನವರ ಜಾತಿ ರಹಿತ ಸಮ ಸಮಾಜದ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಡಬೇಕಾಗಿದ್ದ ಭಾರತೀಯ ಸಮಾಜ ಅದಕ್ಕೆ ವಿರುದ್ಧವಾಗಿ ಜಾತಿ ಪದ್ದತಿಯನ್ನು ಮತ್ತಷ್ಟು ಆಳಕ್ಕೆ ಇಳಿಸಿ ಭಾರತದ ಮೂಲ ಸಂಸ್ಕೃತಿಗೆ ಕೊಡಲಿ ಪೆಟ್ಟು ನೀಡುತ್ತಿದೆ.

ಅಸ್ಪೃಶ್ಯರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನದ ಭಾಗವಾಗಿ ಮೀಸಲಾತಿಯನ್ನು ಸಂವಿಧಾನಾತ್ಮಕವಾಗಿ ಜಾರಿಗೊಳಿಸಿದ ಮೂಲ‌ ಉದ್ದೇಶವನ್ನು ಮರೆತು ಪ್ರಬಲ ಜಾತಿಗಳು ಬಡತನದ ನೆಪದಲ್ಲಿ - ನಿರುದ್ಯೋಗದ ನೆಪದಲ್ಲಿ ಮೀಸಲಾತಿಗಾಗಿ ಮಠದ ಸ್ವಾಮೀಜಿಗಳ ನೆರವು ಪಡೆದು ಹೋರಾಟ ಮಾಡುತ್ತಿರುವುದು ಬಸವ ತತ್ವದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ದವಾಗಿದೆ. ಅದರ ಕನಿಷ್ಠ ಜ್ಞಾನವೂ ಇವರುಗಳಿಗೆ ಇಲ್ಲವಾಗಿದೆ. ನಿಷ್ಕ್ರಿಯ - ಬೇಜವಾಬ್ದಾರಿ ಸರ್ಕಾರಗಳ ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸಿ ಹೊಸ ಹೊಸ ಉದ್ಯೋಗ ಸೃಷ್ಟಿಸಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಜಾತಿ ಪದ್ದತಿಯನ್ನು ಇಲ್ಲವಾಗಿಸಿ ಸಮ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಬೇಕಾದ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವ ಅನಾಗರಿಕ ಸಮಾಜದ ಲಕ್ಷಣಗಳನ್ನು ಬಹಿರಂಗವಾಗಿ ಪ್ರೋತ್ಸಾಹಿಸಿ ಅದರ ಬೆಳವಣಿಗೆಗಾಗಿ ಶ್ರಮಿಸುತ್ತಿರುವುದು ವರ್ತಮಾನದ ವ್ಯಂಗ್ಯ.

ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಮೀಸಲಾತಿ ಮತ್ತು ಒಳ ಮೀಸಲಾತಿಗಾಗಿ ಹೋರಾಡುವುದರಲ್ಲಿ ಅರ್ಥವಿದೆ. ಆದರೆ ಶೋಷಕ ಸಮುದಾಯಗಳು ಒಟ್ಟು ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಿಸದೆ ಇಂದಿನ ಖಾಸಗೀಕರಣದ ಸಮಯದಲ್ಲಿ ಅಷ್ಟೇನು ಉಪಯುಕ್ತವಲ್ಲದ ಮೀಸಲಾತಿಗಾಗಿ ಹೋರಾಡುತ್ತಿರುವುದು ಹಾಸ್ಯಾಸ್ಪದ.

ಅದು ಪ್ರಾಯೋಗಿಕವಾಗಿ ಅಷ್ಟು ಸರಳವೂ ಅಲ್ಲ. ಕಾನೂನಾತ್ಮಕವಾಗಿ ಜಾರಿಯಾಗಲು  ಅನೇಕ ಅಡೆತಡೆಗಳು ಇವೆ. ಒಂದು ವೇಳೆ ಈಗಿನ ಪ್ರತಿಭಟನೆಗಳಿಗೆ ಮಣಿದು ಈ ಸಮುದಾಯಗಳಿಗೆ  ಮೀಸಲಾತಿ ದೊರೆಯಿತು ಎಂದು ಭಾವಿಸಿ. ಆಗ ಇನ್ನಷ್ಟು ಸಮುದಾಯಗಳು ಪ್ರತಿಭಟಿಸುತ್ತವೆ. ಜೊತೆಗೆ ಇದರ ದುಷ್ಪರಿಣಾಮ ಈಗ ಮೀಸಲಾತಿಯ ಹೆಚ್ಚು ಅನುಕೂಲ ಇರುವ ಜಾತಿಗಳ ಮೇಲೆ ಬೀರುತ್ತದೆ. ಆಗ ಅವರು ಇನ್ನೊಂದು ರೀತಿಯಲ್ಲಿ ಪ್ರತಿಭಟಿಸುತ್ತಾರೆ.

ಇದೆಲ್ಲವೂ ಪರಿಹಾರವಾಯಿತು ಎಂದಿಟ್ಟುಕೊಳ್ಳಿ. ಆಗ ಈ ಎಲ್ಲಾ ಸಮುದಾಯಗಳು ಈ ಮೀಸಲಾತಿಯಿಂದ ಅಭಿವೃದ್ಧಿ ಹೊಂದುತ್ತಾರೆಯೇ? ಖಂಡಿತ ಇಲ್ಲ. ಈ ಸಂಕುಚಿತ ಮನೋಭಾವದ, ಭ್ರಷ್ಟ, ಜಾತಿವಾದಿಗಳಿಂದ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಚುನಾವಣಾ ರಾಜಕೀಯ ಕಲುಷಿತವಾಗುತ್ತದೆ. ಜನ ಪ್ರತಿನಿಧಿಗಳ ಗುಣಮಟ್ಟ ಪ್ರಪಾತಕ್ಕೆ ಕುಸಿಯುತ್ತದೆ.

ಶಿಕ್ಷಣ, ಆರೋಗ್ಯ, ಕಲಬೆರಕೆ ಆಹಾರ, ರೈತರ ಸಮಸ್ಯೆ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಯಾವುದೇ ಪ್ರತಿಭಟನೆ ಮಾಡಿ ಪರಿವರ್ತನೆಗಾಗಿ ಪ್ರಯತ್ನಿಸದೆ ಕೇವಲ ಅಷ್ಟೇನು ಉಪಯುಕ್ತವಲ್ಲದ, ದೀರ್ಘಕಾಲದಲ್ಲಿ ಆಧುನಿಕ ಜಗತ್ತಿನ ಸ್ಪರ್ಧೆ ಮತ್ತು ವೇಗ ಎದುರಿಸಲು ಸಾಧ್ಯವಾಗದ ಮೀಸಲಾತಿಗಾಗಿ ಹೊಡೆದಾಡುತ್ತಿರುವುದು ತೀರಾ ನಾಚಿಕೆಗೇಡು. 

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳು ರೂಪಿಸಿದ ಮೀಸಲಾತಿ ನೀತಿ ಅತ್ಯಂತ ವೈಜ್ಞಾನಿಕ. ಅನಂತರ ನೀಡಿದ ಬಹುತೇಕ ಮೀಸಲಾತಿಗಳು ರಾಜಕೀಯ ಕುಟಿಲತೆ ಮತ್ತು ಅವೈಜ್ಞಾನಿಕ. ಮೀಸಲಾತಿಗೆ ಯಾವುದೇ ರೀತಿಯ ಶೋಷಿತರು ಮಾತ್ರ ಅರ್ಹರು. ಶೋಷಕರಲ್ಲ. ದಯವಿಟ್ಟು ಯೋಚಿಸಿ. ನಮ್ಮ ಶ್ರಮ ಮತ್ತು ಆಕ್ರೋಶ ಯಾವುದಕ್ಕೆ ಉಪಯೋಗವಾಗಬೇಕೆಂದು...

-ವಿವೇಕಾನಂದ ಎಚ್. ಕೆ. ಬೆಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ