ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 2)

ಇನ್ನೊಂದು ಕಡೆಯಲ್ಲಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ದಾಲ್ಚಿನ್ನಿ ಸೇರಿಸಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ನಂತರ ಈ ನೀರನ್ನು ಕುಡಿಯಿರಿ. ಇದು ತಕ್ಷಣ ಪಿತ್ತದ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇನ್ನು ದಿನನಿತ್ಯದ ಆಹಾರದಲ್ಲಿ ದಾಲ್ಚಿನ್ನಿ ಉಪಯೋಗಿಸುವುದು ಕೂಡ ಒಳ್ಳೆಯ ಕ್ರಮವಾಗಿದೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸಿ ಹೊಟ್ಟೆಯನ್ನು ಶಾಂತಗೊಳಿಸುವ ಗುಣವನ್ನು ದಾಲ್ಚಿನ್ನಿ ಹೊಂದಿದೆ. ದಾಲ್ಚಿನ್ನಿಯು ನೈಸರ್ಗಿಕ ಅಂಟಾಸಿಡ್ ಆಗಿದ್ದು, ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯನ್ನು ಸಹ ಇದು ನಿವಾರಿಸುತ್ತದೆಜೊತೆ ಜೊತೆಯಲ್ಲಿ
ಶುಂಠಿ ಚೂರುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಈ ದ್ರಾವಣವನ್ನು ಸೇವಿಸಿ. ಒಂದಿಷ್ಟು ಶುಂಠಿಯನ್ನು ಚೆನ್ನಾಗಿ ಅರೆದು ಇದರ ರಸ ತೆಗೆದು ಸೇವಿಸುವುದು ಕೂಡ ಪರಿಣಾಮಕಾರಿಯಾಗಿದೆ. ಶುಂಠಿಯ ಈ ರಸ ತೀರಾ ಘಾಟು ಅನಿಸಿದರೆ ಇದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಬಹುದು. ಶುಂಠಿಯು ಅನೇಕ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಅಜೀರ್ಣತೆ, ಗಂಟಲು ಕೆರೆತ ಹಾಗೂ ತಲೆನೋವು ನಿವಾರಣೆಗೂ ಶುಂಠಿ ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದ್ದು, ಜೀರ್ಣ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆಯಲ್ಲಿ ಲೋಳೆಯ ಸ್ರವಿಸುವಿಕೆಯನ್ನು ಹೆಚ್ಚಿಸುವ ಶುಂಠಿಯು ಒಟ್ಟಾರೆಯಾಗಿ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ.
ಅಲ್ಲದೆ, ಒಂದು ಲೋಟ ನೀರಿಗೆ ಎರಡು ಟೀ ಚಮಚದಷ್ಟು ಸೇಬಿನ ರಸದ ವಿನೆಗರ್ ಸೇರಿಸಿ ಕುಡಿಯುವುದರಿಂದ ಅಸಿಡಿಟಿ ಶಮನವಾಗುವುದು. ಇದಕ್ಕೆ ಒಂದು ಚಮಚೆ ಜೇನು ತುಪ್ಪ ಸೇರಿಸುವುದರಿಂದ ಇದನ್ನು ರುಚಿಯಾಗಿಸಬಹುದು. ವಿನೆಗರ್ ಕೂಡ ಒಂದು ಆಸಿಡ್ ಆಗಿರುವುದರಿಂದ ಆಸಿಡಿಟಿ ನಿವಾರಣೆಗೆ ಇದರ ಬಳಕೆ ಸೂಕ್ತವಲ್ಲ ಎಂಬುದು ನಿಜವಾದರೂ, ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಕಡಿಮೆಯಾದಾಗ ಈ ವಿಧಾನ ಉಪಯೋಗಿಸುವುದು ಪ್ರಯೋಜನಕಾರಿಯಾಗಿದೆ. ಹೊಟ್ಟೆಯಲ್ಲಿನ ಆಸಿಡ್ ಮೇಲಕ್ಕೇರದಂತೆ ವಿನೆಗರ್ ತಡೆಯುವುದರಿಂದ ಎದೆಯಲ್ಲಿನ ಉರಿಯೂತ ಕಡಿಮೆಯಾಗುತ್ತದೆ.ಇನ್ನುಅಸಿಡಿಟಿ ಸಮಸ್ಯೆ ನಿವಾರಣೆಗೆ ಲವಂಗ ಸಹ ಬಹಳ ಉಪಯುಕ್ತವಾಗಿದೆ. ಬಾಯಲ್ಲಿ ಲವಂಗವನ್ನಿಟ್ಟುಕೊಂಡು ಅದು ರಸ ಬಿಡುವವರೆಗೂ ಚೆನ್ನಾಗಿ ಜಗಿಯಬೇಕು. ಇದರಿಂದಲೂ ಪಿತ್ತವನ್ನು ನಿವಾರಿಸಬಹುದು. ಸಮಪ್ರಮಾಣದಲ್ಲಿ ಲವಂಗ ಹಾಗೂ ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸುವುದು ಸಹ ಒಳ್ಳೆಯದು. ಇದು ಪಿತ್ತಶಮನ ಮಾಡುವುದಲ್ಲದೆ, ಬಾಯಲ್ಲಿನ ದುರ್ಗಂಧವನ್ನು ಸಹ ನಿವಾರಿಸುತ್ತದೆ.ಮತ್ತೆ ಪ್ರತಿ ದಿನ ಬಾಳೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಅಂಟಾಸಿಡ್ ಗುಣಗಳಿಂದ ತುಂಬಿರುವ ಬಾಳೆಹಣ್ಣು ನೈಸರ್ಗಿಕವಾಗಿ ಪಿತ್ತ ಶಮನ ಮಾಡುವ ಗುಣಗಳನ್ನು ಹೊಂದಿದೆ. ದೇಹಕ್ಕೆ ಅತಿ ಅವಶ್ಯವಾಗಿರುವ ಪೊಟ್ಯಾಶಿಯಂ ಖನಿಜವನ್ನು ಹೇರಳವಾಗಿ ಹೊಂದಿರುವ ಬಾಳೆ ಹಣ್ಣು ಹೊಟ್ಟೆಯಲ್ಲಿನ ಆಮ್ಲದ ಪ್ರಮಾಣವನ್ನು ಸಮತೋಲಿತವಾಗಿಸಲು ಸಹಕಾರಿಯಾಗಿದೆ.
ತಾಜಾ ತೆಂಗಿನ ಎಳೆನೀರು ಸೇವನೆ ಅಸಿಡಿಟಿ ನಿವಾರಣೆಗೆ ಉತ್ತಮ ಔಷಧಿಯಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಎಳೆನೀರು ಸೇವಿಸುವುದರಿಂದ ಆಗಾಗ ಪಿತ್ತವಾಗುವುದು ಕಡಿಮೆಯಾಗುತ್ತದೆ. ಹೀಗೆ ಹಲವು ವಿವಿಧ ರೀತಿಯ ಮನೆಮದ್ದುಗಳನ್ನು ಉಪಯೋಗಿಸುವ ಮೂಲಕ ನಮ್ಮ ಅಸಿಡಿಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಔಷಧಗಳಿಗಿಂತ ಮನೆ ಮದ್ದುಗಳಿಂದಲೇ ಅಸಿಡಿಟಿ ಶಮನ ಮಾಡಿಕೊಳ್ಳಲು ಬಯಸುವಿರಾದರೆ ಕೆಲ ಪ್ರಮುಖ ಪಿತ್ತ ನಿವಾರಕ ವಿಧಾನಗಳು ಹೀಗಿವೆ:
1. ಮುಂಜಾನೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ನಿಂಬೆ ಹಣ್ಣಿನ ರಸ ಬೆರಸಿದ ಬಿಸಿ ನೀರನ್ನು ಕುಡಿಯುವುದು. ಇದರಿಂದ ನಿಮ್ಮ ಹೊಟ್ಟೆ ಶುಚಿಯಾಗುವುದು ಹಾಗೂ ಅಧಿಕ ತೂಕ ನಿಯಂತ್ರಣವಾಗುವುದು.
2. ಅತಿ ಖಾರದ, ಅತಿ ಎಣ್ಣೆಯ ಹಾಗೂ ರಸ್ತೆ ಬದಿಯ ಫಾಸ್ಟ್ ಫುಡ್ ಗಳನ್ನು ಸೇವಿಸದೇ ಇರುವುದು.
3. ಮನಸ್ಸನ್ನು ಉಲ್ಲಾಸ ಭರಿತವಾಗಿ ಇರಿಸಿಕೊಳ್ಳುವುದು
4. ಮುಂಜಾನೆಯ ಉಪಹಾರನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
5. ಆಹಾರವನ್ನು ಚೆನ್ನಾಗಿ ಜಗಿದು ಆಸ್ವಾದಿಸಿಸುತ್ತಾ ತಿನ್ನಬೇಕು. ಇದರಿಂದ ಲಾಲಾರಸ, ಪಿತ್ತ ರಸದ ಉತ್ಪಾದನೆ ಸರಿಯಾದ ಕ್ರಮದಲ್ಲಿ ಆಗುತ್ತದೆ.
6. ಹೆಚ್ಚಾಗಿ ನಾರು ಬೆರತ ಸೊಪ್ಪು ತರಕಾರಿ ಹಣ್ಣುಗಳ ಸೇವನೆ ಮಾಡಬೇಕು
7. ಕಾಫಿ, ಟೀ ಸೇವನೆಯನ್ನು ಕಡಿಮೆ ಮಾಡುವುದು.
8. ಆಹಾರ ಸೇವಿಸಿ ಕೂಡಲೇ ನಿದ್ದೆ ಮಾಡಬಾರದು.
9. ಆಹಾರ ಸೇವಿಸಿ ನಂತರ 30 ನಿಮಿಷದ ನಂತರ ಹೆಚ್ಚಾಗಿ ನೀರು (ಬಿಸಿ) ಕುಡಿಯಬೇಕು.
10. ಆಹಾರ ಸೇವಿಸುವ ಒಂದು ಗಂಟೆಯ ಮೊದಲು ಒಂದು ಗ್ಲಾಸ್ ನೀರು ಕುಡಿಯಬೇಕು.
11. ಮಾಂಸಾಹಾರವನ್ನು ಸೇವಿಸಿದ್ದರೆ ತಪ್ಪದೇ ಬಿಸಿ ನೀರನ್ನು ಕುಡಿಯ ಬೇಕು.
12. ಹೆಚ್ಚುಕಾಲ ಹಸಿದಿರುವುದು
13. ಟೊಮೆಟೋ, ಚಾಕೋಲೇಟ್ ಸೇವನೆ ಕಡಿಮೆ ಮಾಡುವುದು
14. ಮಲಗುವ ಮುಂಚೆ ತಣ್ಣನೆಯ ಹಸುವಿನ ಹಾಲನ್ನು ಕುಡಿಯುವುದು.
15. ಶುಂಠಿಯನ್ನು ಜಗಿಯುವುದು ಅಥವಾ ಆಹಾರದಲ್ಲಿ ಬೆರೆಸಿ ಸೇವಿಸುವುದು
16. ಸೀಬೆ ಹಣ್ಣಿನ ಸೇವನೆಯಿಂದ ಅಸಿಡಿಟಿ ನಿಯಂತ್ರಿಸಬಹುದು.
ಕೊನೆಯ ಮಾತು : ಅಸಿಡಿಟಿ ಸಮಸ್ಯೆಗೆ ಬಹುತೇಕ ಸಂದರ್ಭಗಳಲ್ಲಿ ನಾವು ಸೇವಿಸುವ ಆಹಾರವೇ ಪ್ರಮುಖ ಕಾರಣವಾಗಿರುತ್ತದೆ. ಹೀಗಾಗಿ ಜಂಕ್ ಫುಡ್ ಆದಷ್ಟು ಕಡಿಮೆ ಮಾಡಿ ಸಾತ್ವಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಆಗಾಗ ಆಸಿಡಿಟಿ ಆಗುವುದರಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ನಿಯಮಿತವಾಗಿ ಆಹಾರ ಸೇವನೆ ಕೂಡ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ಆದರೂ ಅಸಿಡಿಟಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಗೆ ಓಡಿ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮೇಲೆ ತಿಳಿಸಿದ ಮನೆ ಮದ್ದುಗಳನ್ನು ಬಳಸಿ ನೈಸರ್ಗಿಕವಾಗಿಯೇ ಪಿತ್ತ ಶಮನ ಮಾಡಿಕೊಳ್ಳಲು ಪ್ರಯತ್ನಿಸಬಹುದು ಏನಂತೀರಿ?
- ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ.
ಚಿತ್ರ ಕೃಪೆ: ಇಂಟರ್ನೆಟ್ ತಾಣ