ಅಸೂಯೆ ಎಂಬ ಭಾವ ಕಡಿಮೆಯಾಗಲಿ...

ಅಸೂಯೆ ಎಂಬ ಭಾವ ಕಡಿಮೆಯಾಗಲಿ...

ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ  ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?

ಪ್ರೀತಿ........ ಉತ್ತಮ,

ದ್ವೇಷ........ ಮಧ್ಯಮ,

ಕೋಪ........ ಸ್ವಲ್ಪ ಹೆಚ್ಚು,

ಕಾಮ......ಸಮಾಧಾನಕರ,

ಕರುಣೆ...... ಪರವಾಗಿಲ್ಲ,

ತ್ಯಾಗ.......ಸುಮಾರಾಗಿದೆ,

ಧೈರ್ಯ....... ಕಡಿಮೆ,

ಅಹಂಕಾರ.... ಒಂದಷ್ಟುಇದೆ,

ತಾಳ್ಮೆ...... ಸ್ವಲ್ಪ ಕಡಿಮೆ,

ಸಹಕಾರ.... ಓ ಕೆ,

ಭಕ್ತಿ........ಹೆಚ್ಚು,

ನಂಬಿಕೆ.... ಅಪಾರ,

ಹಾಸ್ಯ..... ಉತ್ತಮ,

ಆದರೆ. ಇದನ್ನೆಲ್ಲಾ ಮೀರಿದ ಅತಿಹೆಚ್ಚು ಭಾವ, ನನಗೆ ತಿಳಿದಂತೆ “ಅಸೂಯೆ". ಬಹುಶಃ ನಮ್ಮ ರಕ್ತದಲ್ಲಿಯೇ ಅಡಕವಾಗಿರಬೇಕು ಎನಿಸುತ್ತದೆ. ಮೇಲ್ನೋಟಕ್ಕೆ ಮತ್ತು ನೇರವಾಗಿ ಅದು ಗೋಚರಿಸದಿದ್ದರೂ ಪರೋಕ್ಷವಾಗಿ ಅದು ತುಂಬಿ ತುಳುಕುತ್ತಿರುತ್ತದೆ.

ಕೆಲವರಿಗೆ ಮುಖದ ಮೇಲೆಯೇ ಕಾಣಿಸಿದರೆ, ಮತ್ತೆ ಕೆಲವರ ನಗುವಿನಲ್ಲಿ ಕಾಣುತ್ತದೆ. ಮತ್ತೆ ಕೆಲವರಲ್ಲಿ ಅವರ ದೇಹ ಭಾಷೆಯಿಂದ, ಅವರ ನಡವಳಿಕೆಯಿಂದ, ಅಪರೂಪವಾಗಿ ಅವರ ಮಾತು ಮತ್ತು ಮೌನದಿಂದ, ಆಗಾಗ ಅವರ ಕಣ್ಣೋಟದಿಂದ, ಇದು ವ್ಯಕ್ತವಾಗುತ್ತದೆ.

ಅಸೂಯೆ ಅಥವಾ ಮಾತ್ಸರ್ಯ ನಮ್ಮ ಸುತ್ತಮುತ್ತಲಿನ ಮತ್ತು  ಮುಖ್ಯವಾಗಿ ಹತ್ತಿರದ ವಿವಿಧ ಸಂಬಂಧಗಳ ನಡುವೆಯೇ ಹೆಚ್ಚು ಉಂಟಾಗುತ್ತದೆ. ಹೇಳಲೂ ಆಗದ ಅನುಭವಿಸಲೂ ಆಗದ ಈ ಮಾನಸಿಕತೆಯನ್ನು ಆಡು ಭಾಷೆಯಲ್ಲಿ ಹೊಟ್ಟೆ ಉರಿ ಎಂದು ಕರೆಯಲಾಗುತ್ತದೆ.

ಅಸೂಯೆಯಿಂದಾಗಿಯೇ ಭಾರತೀಯರ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ‌ಸಾಧ್ಯವಾಗುತ್ತಿಲ್ಲ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದೆ ಅನೇಕ ಪ್ರತಿಭೆಗಳು ನಾಶವಾಗುತ್ತಿವೆ.

ನನ್ನನ್ನೂ ಸೇರಿ ಈ ಅಸೂಯೆ ಎಂಬ ಸ್ಥಿತಿಯನ್ನು ಮೀರುವ ಆತ್ಮಸಾಕ್ಷಿಯ ಪ್ರಯತ್ನದ ಅವಶ್ಯಕತೆ ಇದೆ. ನಮ್ಮ ವೈಯಕ್ತಿಕ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಸೂಯೆ ಎಂಬ ಭಾವ ಕಡಿಮೆಯಾದಲ್ಲಿ ನಿಜಕ್ಕೂ ನಮ್ಮ ಪ್ರಬುದ್ದತೆಯ ಮಟ್ಟ ಸಹಜವಾಗಿಯೇ ಹೆಚ್ಚುತ್ತದೆ. ಈ ಕ್ಷಣದಿಂದಲೇ ಆ ಪ್ರಯತ್ನ ಪ್ರಾರಂಭವಾಗಲಿ ಎಂದು ಆಶಿಸುತ್ತಾ...

  • ಆಂಧ್ರಪ್ರದೇಶದ ಗಡಿ ದಾಟಿದ ಜ್ಞಾನ ಭಿಕ್ಷಾ ಪಾದಯಾತ್ರೆ. ನಿನ್ನೆ 26/9/2021 ಭಾನುವಾರ 330 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ ಬರಗೂರು ಗ್ರಾಮದಿಂದ ಸುಮಾರು 21 ಕಿಲೋಮೀಟರ್ ದೂರದ ಪಾವಗಡ ಮಾರ್ಗದ ಆಂದ್ರಪ್ರದೇಶ ರಾಜ್ಯದ ಗುಡಿಬಂಡ ಗ್ರಾಮ ತಲುಪಿತು. ಇಂದು 27/9/2021 ಸೋಮವಾರ 331 ನೆಯ ದಿನ ನಮ್ಮ ಕಾಲ್ನಡಿಗೆ  ತುಮಕೂರು ಜಿಲ್ಲೆಯ ಪಾವಗಡ ಮಾರ್ಗದ ಆಂದ್ರಪ್ರದೇಶ ರಾಜ್ಯದ ಗುಡಿಬಂಡ ಗ್ರಾಮದಿಂದ ಸುಮಾರು 32 ಕಿಲೋಮೀಟರ್ ದೂರದ ಪಾವಗಡ ತಾಲ್ಲೂಕು ತಲುಪಲಿದೆ. ನಾಳೆ 28/9/2021 ಮಂಗಳವಾರ 332 ನೆಯ ದಿನ ನಮ್ಮ ಪ್ರಯಾಣ ಆಂದ್ರಪ್ರದೇಶ ರಾಜ್ಯದ ಮಡಕಶಿರ  ತಾಲ್ಲೂಕಿನ ಕಡೆಗೆ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ