ಅಹಂಕಾರದೊಳಗೊಂದು ವ್ಯಕ್ತಿತ್ವ

ಅಹಂಕಾರದೊಳಗೊಂದು ವ್ಯಕ್ತಿತ್ವ

ನಮಗೆ ನಾವು ಮಾಡಿದ್ದೆ ಸರಿ, ನಮ್ಮ ಮಾತೇ ವೇದ  ವಾಕ್ಯ ಎನಿಸುತ್ತದೆ. ಇಂದಿನ ಯುಗದ ಅನೇಕರ ಮನಸ್ಥಿತಿ ಇದೇ ಆಗಿದೆ. ಏಕೆಂದರೆ ನಾವು ಕಂಪ್ಯೂಟರ್ ಯುಗದ ಮಹಾ ಪಂಡಿತರಲ್ಲವೇ ? ಕೆಲವು ಸತ್ಯಗಳು ನಮ್ಮ ವಿರುದ್ಧವಾಗಿದ್ದರೆ ಆ ಸತ್ಯಗಳನ್ನೇ ಸುಳ್ಳನ್ನಾಗಿಸುವ ಕೌಶಲ್ಯವೂ ನಮಗೆ ಗೊತ್ತಿದೆ. ನಮ್ಮೊಳಗಿನ ಅಹಂಕಾರದ ಭಾವ ಇತರರ ಮಾತುಗಳನ್ನ ಕೇಳಿಸಿಕೊಳ್ಳುವಷ್ಟು ಅವಧಾರ್ಯದ  ಗುಣಗಳನ್ನು ಹುಟ್ಟುಹಾಕುತ್ತಿಲ್ಲ. ಒಂದು ಬಾರಿ ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿಪಕ್ಷದ ನಾಯಕರಿಗೆ ಹೇಳಿದ ಮಾತು ಯಾರು ಇತರರ ಮಾತುಗಳನ್ನು ಕೇಳುತ್ತಾರೆಯೋ, ಇನ್ನೊಬ್ಬರ ಚಿಂತನೆಗಳಿಗೆ ಗೌರವ ಕೊಡುತ್ತಾರೆಯೋ,ಅವರ ಮಾತುಗಳನ್ನು ಇತರರು ಕೇಳುತ್ತಾರೆ ಅವರ ಚಿಂತನೆಗಳಿಗೆ ಮತ್ತೊಬ್ಬರು ಗೌರವ ಕೊಡುತ್ತಾರೆ.ಇಂದು ನಾವು ಹೇಗಿದ್ದೀವಿ ಎಂದರೆ ನಮ್ಮ ಮಾತುಗಳನ್ನ ಎಲ್ಲರೂ ಕೇಳಬೇಕು,ನಮ್ಮ ಸಿದ್ಧಾಂತವನ್ನೇ ಎಲ್ಲರೂ ಒಪ್ಪಬೇಕು.ಆದರೆ ನಾವು ಮಾತ್ರ ಯಾರ ಮಾತನ್ನು ಕೇಳುವುದಿಲ್ಲ,ಯಾರ ಸಿದ್ಧಾಂತವನ್ನು ಒಪ್ಪುವುದೇ ಇಲ್ಲ. ಇದು ನಮ್ಮ ಮನಸ್ಥಿತಿ.

ಜೀವನದಲ್ಲಿ ಕೆಲವು ಬಾರಿ ಹಿಗ್ಗಬೇಕು ಕೆಲವು ಬಾರಿ ಭಾಗಬೇಕು. ಇದನ್ನು ಮರೆತ ನಾವು ಸದಾಕಾಲ ಗರ್ವದಿಂದಲೇ ಜೀವಿಸುತ್ತೇವೆ. ಎಲ್ಲರೂ ನನ್ನನ್ನೇ ಹೊಗಳಬೇಕು, ನನ್ನ ಎದುರು ಯಾರೂ ಮತ್ತೊಬ್ಬರನ್ನು ಹೊಗಳಿ ಮಾತನಾಡಬಾರದು, ಅದನ್ನು ನನ್ನಿಂದ ಸಹಿಸಿಕೊಳ್ಳಲಾಗದು. ನಾನೇ ಸರ್ವಶ್ರೇಷ್ಠ ಎಂಬ ಮದ್ದು ತಲೆಗೇರಿದೆ. ಯಾರು ನಮ್ಮ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತಾರೋ ಅವರು ಮಾತ್ರ ಒಳ್ಳೆಯವರು. ಯಾರು ನಮ್ಮ ತಪ್ಪುಗಳನ್ನ ಎತ್ತಿ ತೋರಿಸುತ್ತಿರುತ್ತಾರೆಯೋ ಅವರು ನಮ್ಮ ಅಜಾತಶತ್ರುಗಳು. ಹಾಗೆ ಒಂದು ಬಾರಿ ಯೋಚಿಸಿ ನೋಡಿ ನಾವು ಎಷ್ಟು ಜನರ ಬಗ್ಗೆ ಒಳ್ಳೆಯದನ್ನ ಬಯಸುತ್ತೇವೆ ಎಂದು,ನಮ್ಮನ್ನು ನಾವೇ ಕೇಳಿಕೊಳ್ಳೋಣ. ನಮ್ಮ ಮನಸ್ಸು ಇತರರ ಒಳ್ಳೆಯದಕ್ಕಿಂತ ಅನೇಕರ ಕೇಡುಗಳನ್ನೇ ಹೆಚ್ಚು ಬಯಸುತ್ತದೆ ಅಲ್ಲವೇ. ಜಗತ್ತಿನ ಯಾವ ಜನ ಬೇಕಾದರೂ ಬೆಳೆಯಲಿ, ಶ್ರೀಮಂತರಾಗಲಿ ನಮಗೇನು ಚಿಂತೆ ಇಲ್ಲ.ಆದರೆ ನಮ್ಮ ಅಕ್ಕ ಪಕ್ಕದ ವ್ಯಕ್ತಿಗಳು ಮಾತ್ರ ನಮಗಿಂತ ಹೆಚ್ಚು ಬೆಳೆಯಬಾರದು, ಯಾವುದೇ ಕಾರಣಕ್ಕೂ ಸಿರಿವಂತರಾಗಬಾರದು. ಒಂದು ವೇಳೆ ಆದರೆ ಹೊಟ್ಟೆಗೆ ಬೆಂಕಿಯೇ ಬಿದ್ದುಬಿಡುತ್ತದೆ.

          ನನ್ನ ಶತ್ರು ಮಿತ್ರನೆಲ್ಲಿ

          ಸಾವಿರ ಮೈಲಿ ದೂರದಲ್ಲಿಲ್ಲ

          ಎನ್ನ ಪಕ್ಕದಲ್ಲಿ ಇರುವನು

      ಯಾರು ಶತ್ರು ಯಾರು ಮಿತ್ರ ಎಂದು ತಿಳಿದು ನಡೆದರೆ

         ಜೀವನದ ಹಾದಿ ಸುಗಮಗೊಳ್ಳುವುದು.

ನಮ್ಮ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚು ನಾವು ನಮ್ಮ ಶತ್ರುಗಳ ಬಗ್ಗೆ ಯೋಚಿಸುತ್ತೇವೆ. ಅವರ ಯಶಸ್ಸಿಗೆ ಹೇಗೆ ಅಡ್ಡಗಾಲು ಹಾಕಬೇಕೆಂದು ಸದಾ ಚಿಂತಿಸುತ್ತೇವೆ.ಅದೇ ಸಮಯವನ್ನ ನಾವು ನಮಗಾಗಿ ಕಳೆದರೆ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುತ್ತೇವೆ.ನಾವು ಕೆಲವು ಬಾರಿ ಇತರರ ಗೆಲುವಿಗಾಗಿ ಸಹಕರಿಸುತ್ತೇವೆ,ಆತ ಗೆದ್ದ ಮೇಲೆ ನಮ್ಮನ್ನು ನೆನಪಿಸಿಕೊಳ್ಳದೆ ಹೋದರೆ, ಆಗ  ಎಲ್ಲರಿಗೂ ಹೇಳುತ್ತೇವೆ ಆತ ನನ್ನಿಂದಲೇ ಬೆಳೆದ ಎಂದು. ಇಂದು ನನ್ನನ್ನೇ ನೆನಪಿಸಿಕೊಳ್ಳುತ್ತಿಲ್ಲ ಅದಕ್ಕಾಗಿ ನಾನು ಮುಂದೆ ಯಾರಿಗೂ ಸಹಾಯ ಮಾಡಲು ಹೋಗುವುದೇ ಇಲ್ಲ ಎಂದು ಬಿಡುತ್ತೇವೆ. ಆತ ನಮ್ಮನ್ನ ನೆನೆದರೆ ಒಳ್ಳೆಯದು ನೆನೆಯದಿದ್ದರೆ ಇನ್ನೂ ಒಳ್ಳೆಯದು ಆ ವ್ಯಕ್ತಿಯಿಂದ ಪ್ರತಿಫಲ ಬಯಸಿದರೆ ಮಾತ್ರ ಆತ  ಸ್ಮರಿಸಿಕೊಳ್ಳದಿದ್ದರೆ  ದುಃಖವೆನಿಸುತ್ತದೆ.ಅದೇ ಪ್ರತಿಫಲ ಇಲ್ಲದ ಸಹಾಯದಲ್ಲಿ ಸುಖ-ದುಃಖಗಳೆರಡೂ ಇರುವುದೇ ಇಲ್ಲ. ಒಂದು ಮರ ನಮಗೆ ಹಣ್ಣು ನೀಡುತ್ತದೆ ಆ ಮರ ಯಾವತ್ತಾದರೂ ನಾನೇ ನಿಮ್ಮ ಹಸಿವು ನೀಗಿಸಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತದೆಯೇ? ನಾನು ಹಣ್ಣು ನೀಡಿದರು ನನ್ನನ್ನ ಯಾರು ನೆನಪಿಸಿಕೊಳ್ಳುತ್ತಿಲ್ಲ ಎಂದು ಅದು ಹಣ್ಣು ನೀಡುವುದನ್ನ ಬಿಡುತ್ತದೆಯೇ? ಈ ಮನುಷ್ಯ ಮಾತ್ರ ತಾನು ಮಾಡಿದ್ದು ಸ್ವಲ್ಪ ಹೇಳಿಕೊಂಡು ಪ್ರಚಾರ ಪಡೆಯುವುದೇ ಬಹಳ. ಕೆಲವರು ನನ್ನ ವಿರುದ್ಧ ಇರುವ ಕಾರಣಕ್ಕಾಗಿ ಅವರಿಗೆ ಕಳ್ಳನಾಯಕರ ಪಟ್ಟ ಕಟ್ಟುತ್ತೇವೆ. ಅದೇ ರೀತಿ ನಾವು ಎಷ್ಟು ಜನರ ಬದುಕಿನಲ್ಲಿ ಕಳ್ಳನಾಯಕರಾಠ ಆಡುತ್ತಿದ್ದೇವೆ ಎಂದು ಒಂದು ಬಾರಿ  ತಿರುಗಿ ನೋಡಿಕೊಳ್ಳೋಣ.

-ಶ್ರೀ ರಾಮಕೃಷ್ಣ ದೇವರು. ಮರೆಗುದ್ದಿ, ವಿಜಯಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ