ಅಹಲ್ಯಾ ಸಂಹಿತೆ - ೦೪
ಜಾಣತನದಿಂದ ತನ್ನ ಕಾಳಜಿಯನ್ನು ತೋರಿದ ದೇವರಾಜನ ವಿನಯ ನೈಜ್ಯವೊ , ನಾಟಕವೊ ಅರಿವಾಗದಿದ್ದರೂ ಕನಿಷ್ಠ ಅದನ್ನು ತೋರುವ ನಿಷ್ಠೆಯಾದರೂ ಇದೆಯಲ್ಲಾ ಎಂಬ ಭಾವ ಮೂಡಿ ಸ್ವಲ್ಪ ನಿರಾಳರಾದ ನಾರದರು "ಸ್ವರ್ಗಲೋಕ ಸುಖ ತುಂಬಿ ತುಳುಕಿ ತೊಟ್ಟಿಕ್ಕುವ ಆನಂದಧಾಮ ನಿಜ ದೇವೆಂದ್ರ.. ಆದರೆ, ಬರಿ ಅದೊಂದೆ ರಾಜನ ಕರ್ತವ್ಯವಲ್ಲ.. ಆ ಸುಖ ಸುಲಭದಲ್ಲಿ ಕಳುವಾಗದಂತೆ ನೋಡಿಕೊಳ್ಳುವ ಹೊಣೆಯೂ ರಾಜನದೆ.."
"ಒಪ್ಪಿದೆ ಮುನಿವರ್ಯ.. ಮುಂದೆ ಅಚಾತುರ್ಯವಾಗದಂತೆ ನೋಡಿಕೊಳ್ಳುವ ಹೊಣೆ ನನಗಿರಲಿ....ಅದಿರಲಿ, ತಮ್ಮ ಈ ಅವಸರದ ಆಗಮನ ಕೇವಲ ಈ ಶಿಷ್ಯನ ಕಿವಿ ಹಿಂಡಿ ಬುದ್ಧಿ ಹೇಳುವ ಉದ್ದೇಶದಿಂದಂತೂ ಅಲ್ಲವೆನ್ನುವುದನ್ನು ಊಹಿಸಬಲ್ಲೆ... ಇರದಿದ್ದರೆ ಈ ನಸುಕಿನ ಹೊತ್ತಲ್ಲೆ ತಾವಿಲ್ಲಿ ಧಾವಿಸಿ ಬರುತ್ತಿರಲಿಲ್ಲ; ಸಾವಕಾಶವಾಗಿ ಬರಬಹುದಾಗಿತ್ತು..."
ದೇವರಾಜನ ವಿನಯಪೂರ್ಣ ತಪ್ಪೊಪ್ಪಿಗೆಯ ದನಿಯಿಂದ ತುಸು ತಣ್ಣಗಾದ ನಾರದ ಮುನಿಗಳು,"ಸದ್ಯ ಅಷ್ಟಾದರೂ ಆಲೋಚಿಸುವ ಛಾತಿ ಇನ್ನು ಉಳಿದಿದೆಯಲ್ಲಾ? ನೀನಿಲ್ಲಿ ಸುಖಭೋಗ ತಲ್ಲೀನತೆಯಲ್ಲಿ ಜಗವನ್ನೆ ಮರೆತಿದ್ದರೆ, ಹೊರಗೆ ನಡೆಯುತ್ತಿರುವ ವಿಷಯಗಳ ಅರಿವಾಗುವುದಾದರೂ ಹೇಗೆ? ಬಹುಶಃ ನಿನ್ನ ಪದವಿಗೆ ಧಕ್ಕೆಯಾಗುವ ಮಟ್ಟ ಮುಟ್ಟಿದ ಹೊರತೂ ನೀನು ಎಚ್ಚರಗೊಳ್ಳುವವನಲ್ಲವೆಂದು ಕಾಣಿಸುತ್ತದೆ..,"
ತನ್ನ ಜೀವಕ್ಕಿಂತ ಮಿಗಿಲಾದ ಇಂದ್ರ ಪದವಿಯ ಮಾತು ಬರುತ್ತಲೆ ತಟ್ಟನೆ ಬೆಚ್ಚಿ ಬಿದ್ದವನಂತೆ ಮೈ ಅದುರಿಸಿದ ಸುರೆಂದ್ರ..
" ನನ್ನ ಪದವಿಯ ಮೇಲೆ ಕಣ್ಣಿಡುವಂತ ಬೆಳವಣಿಗೆಯೇನಾಯ್ತು ಮುನಿಗಳೆ? ಮತ್ತೆ ಯಾರಾದರೂ ಬಲವಾಗುತ್ತಿರುವ ಸೂಚನೆ ಕಾಣುತ್ತಿದೆಯೇನು?"
"ತಕ್ಷಣಕ್ಕೆ ಯಾರೂ ಇಲ್ಲವಾದರೂ, ಆ ಆಕಾಂಕ್ಷೆಯನ್ನು ಹೊಂದಬಲ್ಲವರು ಮತ್ತು ಅದನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವಿರುವವರಂತೂ ಸಾಕಷ್ಟು ಜನ ಹುಟ್ಟಿಕೊಂಡಿದ್ದಾರೆ..."
" ಸುಮ್ಮನೆ ಭೀತಿಗೀಡು ಮಾಡಬೇಡಿ ದೇವರ್ಷಿ..ನಿಮಗೆ ದೇವತೆಗಳ ಬಲ, ದೌರ್ಬಲ್ಯಗಳೆಲ್ಲ ಚೆನ್ನಾಗಿ ತಿಳಿದಿದೆ.. ಒಗಟಾಗಿಸದೆ ದಯಮಾಡಿ ಬಿಡಿಸಿ ಹೇಳಿ..."
"ದೇವರಾಜ..ನನಗೂ ನಿನ್ನ ಮುಂದೆ ಜಗದೆಲ್ಲಾ ಆತಂಕ, ತೊಡಕು ಹುಟ್ಟಿಸುವವರ ಪ್ರವರ ಹೇಳುತ್ತಾ ಕೂರುವಷ್ಟು ಸಮಯವಿಲ್ಲ. ಆದರೆ ತೀರಾ ಅಪಾಯಕಾರಿಯಾಗಬಲ್ಲ ಸಾಮರ್ಥ್ಯವಿರುವವರನ್ನು ಕಂಡಾಗ ದೇವತಾ ಸಹಾನುವರ್ತಿಯಾಗಿ ನಾನು ಮಾಡಬೇಕಾದ ಕನಿಷ್ಠ ಕರ್ತವ್ಯವೆಂದರೆ, ಒಂದು ಎಚ್ಚರಿಕೆಯ ಘಂಟೆಯನ್ನಾದರೂ ಬಾರಿಸಿ ಹೋಗುವುದು.. ಅದನ್ನು ಪೂರೈಸಲೆಂದೆ ನಾನಿಲ್ಲಿ ಅವಸರಿಸಿ ಬಂದದ್ದು..."
" ಹೊತ್ತಿನ ಮುಖವನ್ನೂ ನೋಡದೆ ಈ ವಿಷಯದೊಂದಿಗೆ ಧಾವಿಸಿ ಬಂದಿದ್ದಿರೆಂದ ಮೇಲೆ, ನೀವು ಕಂಡ ಆತಂಕದ ಚಿಹ್ನೆ ಬಲು ತೀಕ್ಷ್ಣವಾದದ್ದೆ ಇರಬೇಕು... ಈಗಷ್ಟೊಂದು ಪ್ರಬಲವಾಗಿ ಬೆಳೆಯುತ್ತಿರುವವರಾದರೂ ಯಾರು ಪೂಜ್ಯರೆ?"
" ಒಬ್ಬರಲ್ಲ... ನಿನ್ನ ಸ್ಥಾನ ಕಬಳಿಸಬಲ್ಲ ಸಾಮರ್ಥ್ಯವಿರುವ ಇಬ್ಬರು ಈಗ ಹಿಮಾಲಯದ ತಪ್ಪಲಿನ ಬದರೀನಾಥದಲ್ಲಿ ತಪೋಸಾಧನೆಯಲ್ಲಿ ನಿರತರಾಗಿದ್ದಾರೆ..."
ಸೂಕ್ಷ್ಮಮತಿ ಇಂದ್ರನಿಗೆ ಅಚ್ಚರಿಯಾಯ್ತು 'ಯಾರು? ವಿಷ್ಣುವಿನ ರೂಪವಾಗಿ ದೈವಾಂಶ ಸಂಭೂತರೆಂದು ಕರೆಸಿಕೊಂಡಿರುವ ನರ ನಾರಾಯಣರೆ?"
ಆ ಕ್ಷಣದಲ್ಲೂ ಚತುರಮತಿ ದೇವೆಂದ್ರನ ಚಾಣಾಕ್ಷತೆಯನ್ನು ಮೆಚ್ಚದಿರಲಾಗಲಿಲ್ಲ ನಾರದರಿಗೆ..
"ಹೌದು.. ಅವರೆ..! ಇಡಿ ಬದರೀನಾಥವನ್ನೆ ಅಮರಾವತಿಗಿಂತ ಮಿಗಿಲಾಗಿಸಿಕೊಂಡಿರುವ ಅವರಿಬ್ಬರ ಅಪಾರ ಶಕ್ತಿ, ಸಾಮರ್ಥ್ಯಗಳ ದರ್ಶನ ಮಾಡಿಕೊಂಡೆ ನಾನಿಲ್ಲಿ ನೇರ ಬಂದದ್ದು .."
ದೇವರಾಜ ಕೊಂಚ ಗೊಂದಲದಲ್ಲಿ ಬಿದ್ದಂತೆ ಕಂಡ.."ನಾರದರೆ, ನರ ನಾರಾಯಣರು ದೈವಾಂಶ ಸಂಭೂತರು, ವಿಷ್ಣುವಿನ ಅಪರಾವತಾರವೆನಿಸಿಕೊಂಡ ಮಹಾನುಭಾವರು..ಅವರು ಬಲಿಷ್ಠರಾಗುತ್ತಿದ್ದಾರೆಂದರೆ ಏನರ್ಥ? ಅದು ದೇವತೆಗಳಿಗೆ ಅನೂಕೂಲವೆ ಅಲ್ಲವೆ?"
"ಹೌದು ದೇವತೆಗಳಿಗೇನೊ ಅನುಕೂಲವೆ ನಿಜ. ಆದರೆ ಈ ರೀತಿ ಬಲ ಪಡೆದವರ ಕಣ್ಣು ಅಧಿಕಾರಕ್ಕಾಗಿ ಹಂಬಲಿಸಿದರೆ, ಅವರ ಕಣ್ಣು ಮೊದಲು ಬೀಳುವುದು ಯಾರ ಮೇಲೆ ಗೊತ್ತೆ?"
"ಇಂದ್ರ ಪದವಿ.....? "
"ಖಂಡಿತ ನಿಜ..ಅವರು ಯಾರ ಅವತಾರವೇ ಆದರೂ, ಭುವಿಯಲ್ಲಿರುವ ತನಕ ಅವರ ನಡೆ ನುಡಿ ವರ್ತನೆಗಳು ಹೀಗೆ ಇರುವುದೆಂದು ಹೇಳ ಬರುವುದಿಲ್ಲ..."
" ನಿಮ್ಮ ಮಾತು ನಿಜ ಪೂಜ್ಯರೆ..."
"ಅಲ್ಲದೆ ಬಲಿಷ್ಠರಾದವರಿಗೆ ಇಳೆಯಲ್ಲಿ ಸಮಾನ ಬಲದ ಸಮರ್ಥರು ಕಾಣ ಸಿಗದಾಗಲೂ ಅವರ ಕಣ್ಣಿಗೆ ಬೀಳುವುದು ದೇವತೆಗಳು ಹಿಡಿದು ಕೂತ ಸ್ವರ್ಗ ಲೋಕವೆ...."
ಅದನ್ನು ಅನುಭವದಿಂದಲೆ ಚೆನ್ನಾಗಿ ಬಲ್ಲ ದೇವೇಂದ್ರನೂ ಹೌದೆಂಬಂತೆ ತಲೆಯಾಡಿಸಿದ...
"...ನಾನೀಗ ಕಂಡ ದೃಶ್ಯದ ಆಧಾರದ ಮೇಲೆ ಹೇಳುವುದಾದರೆ, ಅವರೀಗ ಎಣೆಯಿಲ್ಲದ ಅಸೀಮ ಬಲದ ಒಡೆಯರಾಗಿ ಕೂತಿದ್ದಾರೆ...ದಿನೆ ದಿನೆ ಅವರ ಶಕ್ತಿ ಹೆಚ್ಚುತ್ತಲೆ ಇದೆ....ತಮ್ಮ ಸುತ್ತ ತಮ್ಮದೆ ಆದ ಲೋಕವನ್ನು ತಾವೆ ಸೃಷ್ಟಿಸಿಕೊಳ್ಳುವ ಮಟ್ಟಕ್ಕೆ ಬೆಳೆದುಬಿಟ್ಟಿದೆ ಆ ಶಕ್ತಿ...ನನಗಿನ್ನೂ ಅಚ್ಚರಿಗೊಳಿಸಿದ್ದೆಂದರೆ ಅವರ ಯಾವ ಶಕ್ತಿಗೂ ಅವರು ಬ್ರಹ್ಮನನ್ನೊ ಅಥವ ಇನ್ನಾರನ್ನೊ ತಪ್ಪಸ್ಸು ಮಾಡಿ ಅವಲಂಬಿಸಿ ವರ ಕೇಳುತ್ತಿಲ್ಲ. ತಮ್ಮ ಸ್ವಯಂ ಶಕ್ತಿಯಲ್ಲೆ ತಮಗೆ ಬೇಕಾದ ಉತ್ಪತ್ತೋತ್ಪಾತಗಳನ್ನು ತಾವೆ ಸಿದ್ದಿಸಿಕೊಳ್ಳುತ್ತಿದ್ದಾರೆಂದರೆ, ಅವರ ಶಕ್ತಿಯೆಷ್ಟು ಘನವಾಗಿರಬೇಕು - ಊಹಿಸಿಕೊ ...! "
"... ಪೂಜ್ಯರೆ ನಿಮ್ಮ ಮಾತು ಕೇಳುತ್ತಿದ್ದಂತೆ ಯಾಕೊ, ನನಗೂ ಭೀತಿ ಹೆಚ್ಚುತ್ತಿದೆ..."
" ಅದಕ್ಕೆ ಎಚ್ಚರಿಸಲೆಂದೇ ನಾನು ಬಂದಿದ್ದು ದೇವರಾಜ...ಮುಂದೆ ಅವರಿಂದ ಆತಂಕವಿದೆಯೊ ಇಲ್ಲವೊ ಅದು ಬೇರೆಯ ವಿಷಯ - ಆದರೆ ಕಂಟಕವಾಗುವ ಸಾಧ್ಯತೆಯಂತೂ ಇದ್ದೆ ಇದೆ.."
"ನನ್ನನ್ನೀಗ ಏನು ಮಾಡೆನ್ನುತ್ತೀರಿ ಗುರುಗಳೆ?"
"ಏನು ಮಾಡುವೆಯೊ ಬಿಡುವೆಯೊ ನಿನಗೆ ಬಿಟ್ಟಿದ್ದು..ನನ್ನ ಕರ್ತವ್ಯ ಎಚ್ಚರಿಸುವುದಾಗಿತ್ತು.. ಅದನ್ನಂತೂ ಮಾಡಿದ್ದೇನೆ..ಇನ್ನು ಅದು ಹೇಗೆ ಅವರ ಮನ ಕೆಡಿಸಿ ತಪೊಧ್ಯಾನದ ಏಕಾಗ್ರತೆಯಿಂದ ಚಂಚಲವಾಗಿಸಿ, ಇಹ ಸುಖಗಳಿಗೆ ಸಿಲುಕಿಸುತ್ತಿಯೋ ಅದು ನಿನ್ನ ಹೊಣೆ.. ಆದರೆ ಅವರು ಸುಲಭದ ತುತ್ತುಗಳಲ್ಲವೆಂದು ಮಾತ್ರ ನೆನಪಿರಲಿ..."
ಹೀಗೆಂದವರೆ ಬಂದ ಕಾರ್ಯ ಮುಗಿದ ಸಂತೃಪ್ತಿಯಲ್ಲಿ 'ನಾರಾಯಣ', 'ನಾರಾಯಣ' ಎನ್ನುತ್ತ ಮೇಲೆದ್ದು ನಡೆದೆ ಬಿಟ್ಟರು ನಾರದರು...!
************
ಅಧ್ಯಾಯ - 03
ಮೋಹ, ವ್ಯಾಮೋಹವೆನ್ನುವುದು ಮಾನವನನ್ನು ಕಾಡಿದಷ್ಟೆ ಸಹಜವಾಗಿ ದೇವತೆಗಳನ್ನು ಕಾಡುವುದು ಅತಿಶಯದ ವಿಷಯವೇನಲ್ಲ; ಇದಕ್ಕೆ ದೇವರಾಜನೂ ಹೊರತೇನಲ್ಲವಲ್ಲ ? ನಿಜ ಹೇಳಬೇಕೆಂದರೆ ಅವನ ಪಾಲಿನ ಕಾಮಪಿಪಾಸೆ, ಲಾಲಸೆ, ವ್ಯಾಮೋಹ ಇತರರಿಗಿಂತ ಒಂದು ತೂಕ ಹೆಚ್ಚೆ. ತನ್ನಿಚ್ಚೆ ಬಂದಂತೆ ಸ್ವೇಚ್ಛೆಯಲ್ಲಿ ಹೆಣ್ಣು ಹೊನ್ನುಗಳ ನಡುವೆ ಮುಳುಗಿ ಸುಖಿಸಬೇಕೆಂದರೆ, ಈ ಇಂದ್ರ ಪದವಿಯ ಇರುವಿಕೆ ಬಹಳ ಮುಖ್ಯವೆಂಬುದು ಅವನು ಅರಿಯದ್ದೇನಲ್ಲ. ಹೀಗಾಗಿ ನಾರದರು ಬಂದು ಬಿಟ್ಟು ಹೋದ ಕೀಟ, ಈಗ ಕೊರೆಯುವ ಹುಳುವಾಗಿ ಕಾಡತೊಡಗಿದೆ. ನರ ನಾರಾಯಣರು ತನ್ನ ಅಧಿಕಾರಕ್ಕೆ ಕುತ್ತಾಗುವ ಕ್ಷುಲ್ಲಕ ಮಟ್ಟಕ್ಕಿಳಿಯಲಾರರು ಎಂದೆ ನಿರಾಳವಾಗಿದ್ದವನಿಗೆ ಈಗ ಇದ್ದಕ್ಕಿದ್ದಂತೆ ಸಂಶಯದ ಕೀಟ ಕೊರೆಯಹತ್ತಿದೆ. ಅಲ್ಲಿಯತನಕ ಅವರೇಕೆ ತನ್ನ ತಂಟೆಗೆ ಬಂದಾರು ? ಎಂದು ನಿರಾಳವಾಗಿದ್ದವನಿಗೆ, 'ಒಂದು ವೇಳೆ ಬಂದುಬಿಟ್ಟರೆ?' ಎನ್ನುವ ಭೀತಿ ಕಾಡತೊಡಗಿ ಕೂತಲ್ಲಿ, ನಿಂತಲ್ಲಿ ಚಿಂತಿಸುವಂತೆ ಮಾಡಿ ಕಂಗಾಲಾಗಿಸಿಬಿಟ್ಟಿದೆ. ಸುತ್ತ ನೆರೆದ ಆಪ್ತ ಮಂತ್ರಿ ಬಳಗಕ್ಕು ಅವನ ಅನ್ಯಮನಸ್ಕತೆ ಗೋಚರವಾಗಿ 'ದೇವರಾಜನಿಗಿದೇನು ಹೊಸ ಚಿಂತೆ?' ಎಂದು ತಲ್ಲಣಿಸುವಂತಾಗಿದೆ...
ಅವರಿಗೂ ಗೊತ್ತು - ಎಲ್ಲಿಯತನಕ ನರೇಂದ್ರ ಕ್ಷೇಮವೊ, ಅಲ್ಲಿಯತನಕ ಅವರ ಅಧಿಕಾರ, ವೈಭವ, ವೈಭೋಗಗಳು ಸುರಕ್ಷಿತ. ದೇವರಾಜನದೊಂದು ಒಳ್ಳೆಯ ನಡವಳಿಕೆ ಅವರಿಗೆ ಅತ್ಯಂತ ಪ್ರಿಯವಾದದ್ದು; ನರೇಂದ್ರ ತಾನು ಸುಖಿಸುವುದು ಮಾತ್ರವಲ್ಲ, ತನ್ನ ಸುತ್ತಲಿನವರಿಗು ಅವರಿಚ್ಛೆಯನುಸಾರ ಸುಖಿಸಲು ಸ್ವೇಚ್ಛೆ ನೀಡಿಬಿಟ್ಟಿದ್ದಾನೆ. ಹೀಗಾಗಿ ಅವನು ಅಧಿಕಾರದಲ್ಲಿರುವತನಕ ಅವರೆಲ್ಲರಿಗು ನಿರಾಳ. ಅವನು ಬಲಹೀನನಾಗದಂತೆ ನೋಡಿಕೊಳ್ಳುವುದರಲ್ಲೆ ಅವರ ಕ್ಷೇಮವೂ ಅಡಗಿಕೊಂಡಿದೆ. ಮತ್ತಾವನೊ ಸುರಾಧೀಶನಾಗಿ ಬಂದರೆ, ದೇವರಾಜನಂತೆ ಮುಕ್ತ ನೀತಿ ಅನುಸರಿಸುವನೆಂದು ಹೇಳಲು ಬರುವುದೆ ? ಅದಕ್ಕೆ ನರೇಂದ್ರ ಆ ಪದವಿಯಲ್ಲಿರುವುದು ಸ್ವತಃ ಅವನಿಗಿಂತ, ಅವನ ಸುತ್ತಲ ಉಪಗ್ರಹ ದೇವತೆಗಳಿಗೆ ಅತಿ ಮುಖ್ಯ. ಯಾವಾಗ ಅದಕ್ಕೆ ಧಕ್ಕೆಯೊದಗೀತೊ, ಆಗಲೆ ಅವರ ಎದೆಯಲ್ಲೂ ನಡುಕ ಶುರು.. ಈ ಬಾರಿ ಮತ್ತಾವುದಾದರು ಹೊಸ ರಾಕ್ಷಸ ಭೀತಿ ಹುಟ್ಟಿಕೊಂಡಿರಬಹುದೆ ? ಅದಕ್ಕೆ ತಮ್ಮ ರಾಜ ಚಡಪಡಿಸುತ್ತ ಚಿಂತಿತನಾಗಿರುವನೆ ?
"ದೇವೇಂದ್ರ, ಯಾಕೊ ವ್ಯಾಕುಲನಾದಂತಿದೆಯಲ್ಲ?" ಅವನ ಬಂಗಾರದ ಬಟ್ಟಲಿಗೆ ಸುರೆಯನ್ನು ತುಂಬಿಸುತ್ತ ಕೇಳಿದ ವರುಣ..
ಪಾನಗೋಷ್ಠಿಯಲ್ಲಿ ಜತೆ ಸೇರಿರುವ ವಾಯುದೇವ, ಅಗ್ನಿದೇವರು ಸೇರಿದಂತೆ ಶಿಷ್ಠ ಚತುಷ್ಠಯದ ನಾಲ್ವರು ಮಾತ್ರ ಮಂತ್ರಾಲೋಚನೆಯಲ್ಲಿ ಖಾಸಗಿ ಮಂದಿರವೊಂದರಲ್ಲಿ ಸೇರಿಕೊಂಡಿದ್ದಾರೆ. ಮಾಮೂಲಿನ ಗೋಷ್ಟಿಗಳಾದರೆ ಹೀಗಿರುವುದಿಲ್ಲ; ಇಡೀ ಸಭಾಮಂದಿರದ ತುಂಬೆಲ್ಲ ತುಂಬಿಕೊಂಡ ಹಿರಿದೇವತೆಗಳಿಂದ ಹಿಡಿದು, ಪುಡಿ ದೇವತೆಗಳವರೆಗೆ, ಯಕ್ಷಾದಿ ಕಿನ್ನರ ಅಪ್ಸರೆಯರ ಸಾಂಗತ್ಯದಲ್ಲಿ ಎಲ್ಲರೂ ಮುಕ್ತವಾಗಿ ನೃತ್ಯಪಾನಗಾನ ಗೋಷ್ಟಿಯಲ್ಲಿ ನಿರತರಾಗಿಬಿಡುತ್ತಾರೆ. ಆ ಹೊತ್ತಲಿ ಪಾನಮತ್ತರಾಗಿ ಅಲ್ಲೆ ಸರಸ ಸಲ್ಲಾಪದಲಿ ತೊಡಗಿಕೊಂಡವರದೆಷ್ಟೊ.. ಅಪ್ಪುಗೆಯಲಿ ಮೈ ಮರೆತವರಿನ್ನೆಷ್ಟೊ.. ಆದರೆ ಇಂದಿನ ಗೋಷ್ಠಿಯ ವಿಭಿನ್ನತೆಯೆ ವಿಚಾರ ಗಹನವಾದುದ್ದೆಂದು ಸೂಚಿಸುವಂತಿದೆ. ಅದಕ್ಕೆ ಈ ರಹಸ್ಯದ, ಆಪ್ತ ಮಂತ್ರಾಲೋಚನೆ.
ವರುಣನ ಮಾತಿಗೆ ಪ್ರತಿಯಾಡದೆ ತನ್ನ ಬಟ್ಟಲಿನ ಸುರೆಯನ್ನು ಒಂದೆ ಗುಟುಕಿಗೆ ಮುಗಿಸಿದ ಸುರೇಂದ್ರನನ್ನೆ ಆಳವಾಗಿ ನೋಡುತ್ತ ನುಡಿದ ವಾಯುದೇವ..
"ಸುರೇಂದ್ರ.. ನಿನ್ನನ್ನೇನೊ ಬಾಧಿಸುತ್ತಿರುವುದೆಂದು ನಾವರಿಯಬಲ್ಲೆವಾದರು ನೀನಾಗಿ ಹೇಳದೆ ಅದೇನೆಂದು ಅರಿಯುವ ಬ್ರಹ್ಮಜ್ಞಾನ ನಮ್ಮಲಿಲ್ಲ.. ಅದೇನೆಂದು ಬಿಚ್ಚಿ ಹೇಳಬಾರದೆ ? ಆಗ ನಮ್ಮ ಕೈಲಾದ ಉಪಾಯ, ಉತ್ತರಗಳನ್ನು ನೀಡಲಾದೀತೊ ಏನೊ...?"
(ಇನ್ನೂ ಇದೆ)
Comments
ಉ: ಅಹಲ್ಯಾ ಸಂಹಿತೆ - ೦೪
3 ಕಂತುಗಳನ್ನು ಓದಿದೆ. ವಿಶೇಷ ರೀತಿಯಲ್ಲಿ ಸಾಗುತ್ತಿದೆ. 'ಇಂದ್ರ' ಪದವಿ ಉಳಿಸಿಕೊಳ್ಳುವ ವಿಚಾರ ಪುರಾಣಗಳ ವಿಶೇಷ ಕಲ್ಪನೆಯಾಗಿದೆ. ರಾಗ-ವಿರಾಗಗಳ ಸಂಘರ್ಷವಿದು.
In reply to ಉ: ಅಹಲ್ಯಾ ಸಂಹಿತೆ - ೦೪ by kavinagaraj
ಉ: ಅಹಲ್ಯಾ ಸಂಹಿತೆ - ೦೪
ಕವಿಗಳೇ ನಮಸ್ಕಾರ ಮತ್ತು ಧನ್ಯವಾದಗಳು.. :-)
ಪೌರಾಣಿಕದ ಎಳೆಯನ್ನೇ ಹಿಡಿದು ಹೊರಟರೂ, ಅದಕ್ಕೊಂದು 'ವೈಜ್ಞಾನಿಕ' ಮತ್ತು 'ಫ್ಯಾಂಟಸಿ'ಯ ಲೇಪನ ಹಚ್ಚಿ ವಿಭಿನ್ನವಾಗಿ ಕಾಣುವಂತೆ ಮಾಡುವ ಒಂದು ಯತ್ನ. ನನಗೆ ಅಹಲ್ಯೆ ಕೇವಲ ಒಂದು ಪುರಾಣದ ಪಾತ್ರಧಾರಿಯಾಗಿ ಕಾಣದೆ ಒಂದು ಬೃಹತ್ ಪ್ರಯೋಗದ ಬಲು ಮುಖ್ಯ ಪಾತ್ರಧಾರಿಯಾಗಿ ಕಾಣಿಸಿತು. ಅದರಿಂದಲೆ ನರನಾರಾಯಣರ ಪ್ರಸಂಗ, ಊರ್ವಶಿಯ ಸೃಷ್ಟಿಗಳು ಅವಳ ಹುಟ್ಟಿಗೆ ಮೂಲಕಾರಣವಾಗಿರಬಹುದಾದ ಕಲ್ಪನೆಯೂ ಸಹ. ಜೊತೆಗೆ ಅಹಲ್ಯೆಯ ಕಥಾನಕದ ಹಿನ್ನಲೆಯಲ್ಲಿರಬಹುದಾದ 'ಬಿಗ್ ಕ್ಯಾನ್ವಾಸ್ ' ಏನಿರಬಹುದೆಂಬ ಮತ್ತೊಂದು ಊಹೆ...
ಪರಿಚಿತತೆಯ ದೃಷ್ಟಿಯಿಂದ ಪೌರಾಣಿಕ ಶೈಲಿಯಲ್ಲೇ ಕಥೆ ಹೇಳುತ್ತ ಇವೆಲ್ಲವನ್ನೂ ಸಂಗಮಿಸಬಹುದೆ ಎಂಬ ಪ್ರಯತ್ನ ಸಹ. ನೋಡೋಣ, ಆಸಕ್ತಿ ಉಳಿಸಿಕೊಂಡೀತೊ ಇಲ್ಲ ಸುಪರ್ ಫ್ಲಾಫ್ ಆದೀತೋ ಎಂದು :-)