ಅಹಲ್ಯಾ ಸಂಹಿತೆ - ೧೪ (ಬ್ರಹ್ಮದೇವನ ತರಾಟೆ)

ಅಹಲ್ಯಾ ಸಂಹಿತೆ - ೧೪ (ಬ್ರಹ್ಮದೇವನ ತರಾಟೆ)

ಅಧ್ಯಾಯ - 06
-------------------

ಬ್ರಹ್ಮದೇವನ ಆಸ್ಥಾನದಲ್ಲಿ...

ಪೆಚ್ಚು ಮುಖ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತ ದೇವೇಂದ್ರನ ಮುಖವನ್ನೆ ದಿಟ್ಟಿಸುತ್ತ ಹತ್ತಿರದಲ್ಲಿದ್ದ ಪೀಠದ ಮೇಲೆ ಕೂಡಬಹುದೊ, ಕೂಡಬಾರದೊ ಎಂಬ ಜಿಜ್ಞಾಸೆಯಲ್ಲಿ ಗೊಂದಲಕ್ಕೊಳಗಾದವಳಂತೆ ನಿಂತಿದ್ದಳು ಊರ್ವಶಿ..

ದೇವೇಂದ್ರನ ಮೇಲಿನ ಕೋಪಕ್ಕೊ ಅಥವಾ ತಾನಿದುವರೆವಿಗೂ ಸೃಷ್ಟಿಸಲಾಗದಿದ್ದಷ್ಟು ಅಪರೂಪದ ರೂಪರಾಶಿಯಾದ ಅವಳ ಅದ್ಭುತ ಸೌಂದರ್ಯ ಕಂಡು ಉಂಟಾದ ಕೀಳರಿಮೆಯ ಭಾವಕ್ಕೊ - ಚತುರ್ಮುಖನ ನಾಲ್ಕು ಮುಖಗಳು ಕೆಂಪಾಗಿ, ಸುತ್ತಲಿನ ವಾತಾವರಣಕ್ಕು ರೋಹಿತ ಲೇಪನ ಮಾಡಿಬಿಟ್ಟಿದ್ದವು... ಆ ಕುದಿಯುವ ಕೋಪವನ್ನು ಬಲವಂತದಿಂದ ತಡೆಹಿಡಿದು, ಪ್ರಯಾಸದಿಂದ ಕೇಳಿದ ಬ್ರಹ್ಮ..

"ಅಲ್ಲಯ್ಯಾ ಸುರಾಧಿಪತಿ... ನಿನಗೇನು ಕೇಡುಗಾಲ ಬಂತೆಂದು ಈ ಸಾಹಸಕ್ಕೆ ಕೈ ಹಾಕಿದೆ? ಅದೂ ಹೋಗಿ ಹೋಗಿ ದೈವಾಂಶ ಸಂಭೂತರಾಗಿ, ಲೋಕ ಕಲ್ಯಾಣದ ಸಲುವಾಗಿ ತಮ್ಮ ಜೀವಮಾನವನ್ನೆ ಮುಡಿಪಾಗಿಟ್ಟು ತಪೋನಿರತರಾಗಿರುವ ನರನಾರಾಯಣರ ತಪಸ್ಸನ್ನು ಕೆಡಿಸುವ ದುರ್ಬುದ್ಧಿ ನಿನಗೇಕೆ ಬಂತು ? ಅವರ ಇಷ್ಟು ಧೀರ್ಘ ಕಾಲದ ಸಾಧನೆಯನ್ನೆಲ್ಲ ಅದರ ಪರಮಾಂತಿಮ ಹಂತದಲ್ಲಿರುವಾಗ, ವಿವೇಚನೆಯಿಲ್ಲದೆ ಕುಲಗೆಡಿಸಿ ಅದರಿಂದಾಗಬೇಕಿದ್ದ ಫಲಿತವನ್ನೆ ಬುಡಮೇಲಾಗಿಸಿಬಿಟ್ಟೆಯಲ್ಲ ? ಏನು ಮಂಕು ಕವಿದಿದೆಯಯ್ಯ ನಿನಗೆ ?"

ಒಂದರೆಗಳಿಗೆ ಮಾತಾಡದೆ ಸುಮ್ಮನಿದ್ದ ದೇವರಾಜ - ಹೇಗೆ ಉತ್ತರಿಸುವುದೊಳಿತು ಎಂದು ತನ್ನೊಳಗೆ ಆಲೋಚಿಸುತ್ತ . ಇದೆಲ್ಲ ನಾರದ ಮುನಿಯ ಪ್ರೇರಣೆಯಿಂದಾದ ಅವಘಡವೆಂದು ಹೇಳಬೇಕೊ ಅಥವಾ ನಿಜಕ್ಕು ತನ್ನ ಪದವಿಗೆ ಕಂಟಕವುಂಟಾಗುವ ಸಾಧ್ಯತೆಯಿಂದಾಗಿ ಜರುಗಿಸಿದ ಕ್ರಮವೆಂಬ ತರ್ಕವನ್ನು ಮುಂದಿಟ್ಟುಕೊಂಡು ವಾದಿಸಬೇಕೊ ಎಂಬುದರ ಮಥನ ನಡೆದಿತ್ತು ಅವನ ಮನದಲ್ಲೀಗ.

ಕೊನೆಗೆ ಮೊಂಡುವಾದದ ಹಾದಿಗಿಂತ ಶರಣಾಗತ ಭಾವವೆ ಉಚಿತವೆನ್ನುವ ತೀರ್ಮಾನಕ್ಕೆ ಬಂದವನೆ, " ಕ್ಷಮಿಸು ಬ್ರಹ್ಮದೇವ... ಇದು ಈ ಮಟ್ಟಿಗಿನ ಮಹತ್ತರ ಗಹನತೆಯ ವಿಷಯವೆಂದು ನನಗರಿವಾಗದೆ ಹೋಯ್ತು.. ಅವರ ತಪಶಕ್ತಿಯ ತೇಜ ನನ್ನ ಸ್ಥಾನಕ್ಕೆ ಸಂಚಕಾರ ತಂದೀತೆಂಬ ಭೀತಿ ನನ್ನಿಂದ ಆ ಕೆಲಸ ಮಾಡಿಸಿಬಿಟ್ಟಿತು.. ಈಗಾದದ್ದಂತು ಆಯ್ತು.. ಅದನ್ನು ಬದಲಿಸುವುದು ಅಸಾಧ್ಯ.. ಈ ಪರಿಸ್ಥಿತಿಯನ್ನು ನಿಭಾಯಿಸುವುದೆಂತು ಎಂದು ಮಾರ್ಗದರ್ಶನ ನೀಡು ತಾತಾ..?" ಎಂದ.

ಪ್ರಬುದ್ಧ ವಿಚಾರವಾದಿ ಬ್ರಹ್ಮದೇವನಿಗು ಅದರ ಕುರಿತು ವಾದಿಸಿ ಫಲವಿಲ್ಲವೆಂದು ಅರಿವಿತ್ತಾಗಿ ಆ ವಾಗ್ವಾದವನ್ನು ಬೆಳೆಯಗೊಡದೆ, " ಒಳಿತೊ ಕೆಡುಕೊ ಆಗಬಾರದ್ದಂತು ಆಗಿಹೋಯ್ತು.. ಇನ್ನು ಈ ಪರಿಸ್ಥಿತಿಯ ನಿಭಾವಣೆಯೆಂತು ಎನ್ನುವುದನ್ನು ನೋಡಬೇಕು.. ಈಗ ನಶಿಸದ ಮಿಕ್ಕ ಶಕ್ತಿಬಲದಿಂದ ಸಹಸ್ರಕವಚನು ಮುಂದಿನ ಯುಗಕ್ಕೆ ರವಾನೆಯಾಗಲಿಕ್ಕೆ ರಹದಾರಿ ಸಿಕ್ಕಿಬಿಡುತ್ತದೆ.. ಆ ಯುಗದಲ್ಲಿ ಅವನು ಇನ್ನು ಅದೆಷ್ಟು ಹೆಚ್ಚು ಬಲವರ್ಧಿಸಿಕೊಂಡು ಬರುವನೊ ಏನೊ? ಸಹಸ್ರಕವಚನಂತಹವರು ವೃದ್ಧಿಸಿದಷ್ಟು ನಿನ್ನ ಪದವಿ, ನಿನ್ನ ಆಸ್ಥಾನಕ್ಕೆ ಹೆಚ್ಚು ಸಂಚಕಾರ..ನಿನ್ನ ಈ ಕಾರ್ಯದ ಫಲಶ್ರುತಿಯಾಗಿ, ಈ ಯುಗದೊಳಗೆ ಮುಗಿದುಹೋಗಬೇಕಾಗಿದ್ದ ಸಹಸ್ರಕವಚನ ಅಂತಿಮವಧೆ ಮುಂದಿನ ಯುಗಕ್ಕೆ ಸ್ಥಳಾಂತರಗೊಳ್ಳಬೇಕಾಗಿದೆ... ನರನಾರಾಯಣರು ಈ ಸಲುವಾಗಿಯೆ ಮತ್ತೆ ಜನಿಸಿ ಬರಬೇಕು " ಎಂದ ಚಿಂತಾಕ್ರಾಂತ ದನಿಯಲ್ಲಿ.

"ಬ್ರಹ್ಮದೇವ.."

"ಏನು..?"

" ಸಹಸ್ರಕವಚನ ತಪಃಶಕ್ತಿಯ ಮೂಲ ಸೂರ್ಯದೇವ.."

" ಹೂಂ... ?"

" ತನ್ನ ಅಪರಿಮಿತ ಶಕ್ತಿಯ ಮೂಲಭಾಗವನ್ನೆ ವರವಾಗಿತ್ತ ಕಾರಣ ದಾನವನಿಷ್ಟು ಬಲವಂತನಾಗಿರುವುದು... ಆ ಶಕ್ತಿಯನ್ನು ಜೈವಿಕ ಕವಚರೂಪದಲ್ಲಿ ಪ್ರಕಟವಾಗುವಂತೆ ಮಾಡಲು ಬೇಕಾದ ದೈಹಿಕ ಜೋಡಣೆ, ಅಳವಡಿಕೆ, ದಾನವಕೋಶ ಮರುವಿನ್ಯಾಸ ನಿಭಾವಣೆಯನ್ನೆಲ್ಲ ಸೂರ್ಯದೇವನ ಪ್ರಯೋಗಶಾಲೆಯಲ್ಲಿ ಶಸ್ತ್ರಕ್ರಿಯೆಯೊಂದರ ಮೂಲಕವೆ ನಡೆಸಿದ್ದಂತೆ..."

" ಅದನ್ನು ನಾನು ಬಲ್ಲೆ.. ಆದರಿಂದೇನೀಗ ದೇವರಾಜ..?"

" ಬ್ರಹ್ಮದೇವ.. ನೀನರಿತ ಹಾಗೆ ಸೂರ್ಯದೇವನನ್ನು ಮೆಚ್ಚಿ, ಒಲಿಸಿಕೊಂಡು ಅನುಗ್ರಹ ಪಡೆಯಬಯಸುವ ಮಂದಿ ಬಹಳ ಕಡಿಮೆ - ಅವನ ಸುತ್ತಲಿರುವ ಅಗಾಧ ತೇಜೊಪುಂಜದ ಸಹಿಸಲಸಾಧ್ಯ ಧಗೆಯ ಕಾರಣದಿಂದಾಗಿ.."

" ನಿಜವೆ.."

" ಅಂತಹದ್ದರಲ್ಲಿ ಈ ಸಹಸ್ರ ಕವಚ ತನ್ನ ದೇಹಬಾಧೆ ನಷ್ಟಗಳನ್ನು ಲೆಕ್ಕಿಸದೆ ತಪಸ್ಸಿಗಿಳಿದು ಮೆಚ್ಚಿಸಿದ ಬಗೆ ಸೂರ್ಯನಿಗೆ ಅತೀವ ಪ್ರೀತಿಯಾಗಿ, ದಾನವನಾಗಿದ್ದರೂ ಅವನಿಗಿಂತಹ ದುರ್ಬೇಧ್ಯವಾದ ಕವಚ ಪ್ರಸಾದಿಸಿದನೆಂದು ವದಂತಿ.. ಸಹಸ್ರಕವಚ ಯಾರದಾದರೂ ಮಾತನ್ನು ಕೇಳಬಹುದೆಂದರೆ ಅದೂ ಅವನ ಸ್ವಂತ ತಂದೆಯೆಂದೆ ಭಾವಿಸಿಕೊಂಡಿರುವ ಸೂರ್ಯದೇವನ ಮಾತು ಮಾತ್ರ ಎಂದೂ ಆಡಿಕೊಳ್ಳುತ್ತಾರೆ.."

"ಇವೆಲ್ಲ ನಾನೂ ಕೇಳಿ ಬಲ್ಲೆ... ನೀನು ಹೇಳಬೇಕಾದ ವಿಷಯಕ್ಕೆ ನೇರ ಬರಬಾರದೆ ? .."

"ನಾನು ಹೇಳ ಹೊರಟಿದ್ದು ಇಷ್ಟೆ .. ನಾವು ಸೂರ್ಯದೇವನ ಜತೆ ಮಾತಾಡಿ ಈಗ ಆಗಿರುವ ಅನಾಹುತದ ಪರಿಣಾಮ ತೀರಾ ಅತಿರೇಕಕ್ಕೆ ಹೋಗದ ಹಾಗೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬಹುದೆ ಎನ್ನುವ ಆಲೋಚನೆ ಬಂತು...?"

ಬೇರೆಲ್ಲ ದೇವತೆಗಳ ಹಾಗೆ ಸೂರ್ಯದೇವ ನೇರ ದೇವೇಂದ್ರನ ಅಧೀನದಲಿಲ್ಲ..

ಅವನ ಖಾತೆ ಸ್ವತಂತ್ರ ನಿರ್ವಹಣೆಯದಾಗಿ ಅವನು ನೇರ ಬ್ರಹ್ಮದೇವನ ಅಧಿಕಾರದಧೀನ, ದೇವೇಂದ್ರನ ಹಾಗೆ.. ದೇವರಾಜನಷ್ಟು ರಾಜಕೀಯವಾಗಿ ಬಲವಂತನಿರದಿದ್ದರೂ ಅವನು ತನಗೆ ಬೇಕಾದ ಹಾಗೆ ನಡೆಯಲು ಇರಬೇಕಾದ ಸ್ವೇಚ್ಛೆ, ಸ್ವಾತಂತ್ರ ಅವನ ಖಾತೆಯಲ್ಲಿದೆ.. ಹೀಗಾಗಿ ಅಧಿಕಾರ ಸ್ತರದಲ್ಲಿ ಒಂದೆ ಮಟ್ಟದಲ್ಲಿರುವ ದೇವೇಂದ್ರ ಅವನ ಮೇಲೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ.. ಅದಕ್ಕೆ ಸಲಹೆಯ ರೂಪದಲ್ಲಿ ಬ್ರಹ್ಮನಿಗೆ ಇಂಗಿತ ನೀಡುತ್ತಿದ್ದಾನೆ...

ಬ್ರಹ್ಮದೇವನಿಗು ಸದ್ಯಕ್ಕೆ ಅದೊಂದೆ ಉಚಿತ ಮಾರ್ಗವಾಗಿ ಕಂಡಿತು.. ಸರಿ, ಅದನ್ನು ಈಗಲೆ ಮುಗಿಸಿಬಿಡುವ ಎಂದುಕೊಂಡು ತನ್ನ ಹಸ್ತದಲ್ಲಿದ್ದ ಸಂಪರ್ಕ ಸಾಧನದ ಮೇಲೆ ಮೆದುವಾಗಿ ನಾಲ್ಕು ಬಾರಿ ಒತ್ತಡ ಹಾಕಿದ... ಆ ಕ್ರಿಯೆಗೆ ಹಸ್ತವೆ ಪಾರದರ್ಶಕ ಪರದೆಯಂತಾಗಿ ಅದರಲ್ಲಿನ ಆ ಬದಿಯಲ್ಲಿದ್ದ ಸೂರ್ಯದೇವ ಕಾಣಿಸಿಕೊಂಡ. ಅವನ ಜತೆ ಮೊದಲೊಂದೆರಡು ಕುಶಲದ ಮಾತಾಡಿದ ನಂತರ ತನ್ನಲ್ಲಿಗೆ ಕೊಂಚ ಹೊತ್ತಿನ ಮಟ್ಟಿಗೆ ಬಂದು ಹೋಗಲು ಸಾಧ್ಯವೆ ? ಎಂದು ಕೇಳಿದ..

" ಬ್ರಹ್ಮದೇವ, ನನ್ನ ಈ ಭರಿಸಲಸದಳ ಶಕ್ತಿತೇಜದ ಹೊದಿಕೆಯನ್ನು ಕಳಚಿ, ನಿನಗೆ ಸಹನೀಯವಾಗುವಂತೆ ಸ್ನಾನಾದಿ ಕಾರ್ಯ ಮುಗಿಸಿ ತಂಪಾಗಿ ಬರಬೇಕೆಂದರೆ ಕನಿಷ್ಠ ಒಂದು ಘಂಟೆಯಾದರೂ ಬೇಕು... ಅದು ತಡವೆಂದರೆ, ಇಲ್ಲಿಂದಲೆ ಮಾತನಾಡುವ.. ಸರಿಯೆಂದರೆ ನಾನೀಗಲೆ ಸಿದ್ದನಾಗಲಿಕ್ಕೆ ಹೊರಡುವೆ.." ಎಂದ ದಿನಕರ.

ಇದು ದೂರ ಕುಳಿತು ನಿಭಾಯಿಸದೆ ಹತ್ತಿರ ಮಾತಾಡಿ ಪರಿಹರಿಸಬೇಕಾಗಿದ್ದ ಸಮಸ್ಯೆಯೆಂದು ಅರಿತಿದ್ದ ಬ್ರಹ್ಮ, ಹೊರಟು ಬರುವಂತೆ ಆದೇಶಿಸಿದ. ತನ್ನ ಸಾರಥಿ ಅರುಣನಿಗೇನೊ ಅಣತಿ ಕೊಡುತ್ತಿದ್ದ ರವಿಯ ಚಿತ್ರ ನೋಡುತ್ತಲೆ ಪರದೆಯನ್ನು ನಿಷ್ಕ್ರಿಯಗೊಳಿಸಿ ತಲೆಯೆತ್ತಿದ ಬ್ರಹ್ಮದೇವ..

ಆಗ ಅವನ ಗಮನ ಹರಿದಿದ್ದು ಅಲ್ಲೆ ನಿಂತಿದ್ದ ಅಪರೂಪದ ಲಾವಣ್ಯವತಿ ಊರ್ವಶಿಯ ಮೇಲೆ...

ಆ ದೃಷ್ಟಿಯೆ ಅಹಲ್ಯೆಯೆಂಬ ಮತ್ತೊಂದು ಅದ್ಬುತ ರೂಪದ ಹೆಣ್ಣಿನ ಜನನಕ್ಕೆ ಕಾರಣವಾದೀತೆಂದು ಆ ಹೊತ್ತಿನಲ್ಲಿ ಅವನಿಗು ಗೊತ್ತಿರಲಿಲ್ಲ ಆ ಹೊತ್ತಿನಲ್ಲಿ...!

****************

ಸೂರ್ಯದೇವ ಬರಲಿನ್ನು ಕಾಲಾವಕಾಶವಿದ್ದ ಕಾರಣ ಬ್ರಹ್ಮದೇವನ ಕುತೂಹಲ ದೇವರಾಜನ ಜತೆಗೆ ಬಂದು ನಿಂತಿದ್ದ ಮನಮೋಹಿನಿ ಊರ್ವಶಿಯತ್ತ ತಿರುಗಿತ್ತು..

ಬ್ರಹ್ಮನ ಮೂಲ ಕೆಲಸವೆ ಸೃಷ್ಟಿ ತಾನೆ ? ಸೃಷ್ಟಿಕಣಗಳ ಪುರುಷ-ಪ್ರಕೃತಿತತ್ವಗಳನ್ನು ಸಂಯೋಗಿಸಿ ಹೊಸಜೀವವನ್ನಾಗಿಸುವುದು ಅವನ ಮುಖ್ಯ ವ್ಯವಹಾರ. ಆ ಪ್ರಕ್ರಿಯೆಯನ್ನು ನಡೆಸುತ್ತಲೆ ಅದೆಷ್ಟು ತರತರದ ವೈವಿಧ್ಯಪೂರ್ಣ ಪ್ರಯೋಗಗಳನ್ನು ಮಾಡಿ ನೋಡಿರುವನೆಂದು ಸ್ವತಃ ಅವನೇ ಲೆಕ್ಕವಿಟ್ಟಿಲ್ಲ...

ಆದರೆ ಆ ನಿರಂತರ ಪ್ರಯೋಗದಲ್ಲೊಂದು ಹಂಬಲಿಕೆ ಕೈಗೆಟುಕದ ಮರೀಚಿಕೆಯಾಗಿ ಅವಿರತ ಕಾಡಿದೆ; ಯಾಕೊ ಎಷ್ಟು ಪ್ರಯತ್ನಿಸಿದರೂ ಇದುವರೆವಿಗು ಯಶ ಸಿಕ್ಕಿಲ್ಲ.. ಕೋಟಿ ಕೋಟಿ ಸಂಖ್ಯೆಯಲ್ಲಿ ಹುಟ್ಟುತ್ತಿದ್ದ ಮಾನವ ಜೀವರಾಶಿಯ ಆ ಅಪರಿಮಿತ ಸಂಖ್ಯಾಸ್ಪೋಟದಲ್ಲು ಇದುವರೆವಿಗು ಅವನಂದುಕೊಂಡ ಹಾಗಿರುವ - ಅದ್ಭುತ ಸೌಂದರ್ಯ, ಪರಿಶುದ್ಧ ವರ್ಣ, ಸೂಕ್ತ ಪ್ರಮಾಣಬದ್ದ ಮೈಕಟ್ಟು ಇತ್ಯಾದಿ ನಿಖರ ನಿರ್ದಿಷ್ಠವಾದ ರೂಪುರೇಷೆಯಿರುವ ಸ್ವಯಂನಿಯಂತ್ರಿತ ಪ್ರಕ್ರಿಯೆಯ ಮಾನವಜೀವಿಯನ್ನು ಹುಟ್ಟಿಸಲಾಗಿಲ್ಲ..

ಪ್ರತಿ ಸೃಷ್ಟಿಯಲ್ಲೂ ಸೊಗಸಾಗಿರುವ ಸೃಜನಶೀಲತೆಯ ನೂರೆಂಟು ಆಯಾಮಗಳು ಕಂಡು ಬರುತ್ತಿದ್ದರು, ಇದು ಪರಿಪೂರ್ಣವಾದ ಪರಮಾಂತಿಮ ಸೌಂದರ್ಯ ಸೃಷ್ಟಿ ಎಂದು ಮನಃ ತೃಪ್ತಿಯಾಗುವಂತೆ ಹೇಳಬಹುದಾದ ಸೃಷ್ಟಿಯನ್ನು ಇದುವರೆಗೂ ಸೃಜಿಸಲಾಗಿಲ್ಲ.. ಪ್ರತಿಯೊಂದರಲ್ಲು ಒಂದಲ್ಲಾ ಒಂದು ಕುಂದು-ಕೊರತೆ, ದೋಷಗಳಿದ್ದೆ ಇವೆ... ಬೇರೆಯವರ ಕಣ್ಣಿಗೆ ಅವೆಷ್ಟೆ ಅದ್ಭುತದಂತೆ ಕಂಡರು ಅದರ ಮೂಲ ಸೃಷ್ಟಿಕರ್ತನಾದ ಅವನಿಗೆ ಚೆನ್ನಾಗಿ ಗೊತ್ತು - ಪರಿಪೂರ್ಣತೆಯಿಂದ ಅವು ಗಾವುದ-ಗಾವುದ ದೂರ. ಇಷ್ಟು ವರ್ಷಗಳ ಅವಿರತ ಪ್ರಗತಿಯೂ ಅವನನ್ನು ಕೆಲವೆ ಕೆಲವು ಹಂತಗಳಷ್ಟು ಮೇಲೇರಿಸಿವೆಯೆ ಹೊರತು ಸಂಪೂರ್ಣ ಪರಿಪಕ್ವತೆಯ ಮಟ್ಟಕ್ಕಲ್ಲ.

(ಇನ್ನೂ ಇದೆ)