ಅಹಲ್ಯಾ ಸಂಹಿತೆ - ೨೦ (ದೇವೇಂದ್ರನ ಯೋಜನೆ)
"ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ... ಅದೇಕೊ ಅರಿಯೆ - ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು ಹೋಗುವ ಹಾಗಿವೆ.. ಸರಳರೂಪದಲ್ಲಿ ವಿವರಿಸಿದ ಕಾರಣ, ಸುಲಭದಲ್ಲಿ ಅರ್ಥವಾಗುವ ಹಾಗೆಯೂ ಇದೆ ಅನಿಸಿತು.. ಹೀಗಾಗಿ ಓದಲು ಆರಂಭಿಸಿದೆ.. ಅದು ಅಭ್ಯಾಸವಾದಂತೆ ಹವ್ಯಾಸವಾಗಿ ಬದಲಾಗಿ ಹೋಯ್ತು..!"
ಅವಳ ಮಾತು ಕೇಳುತ್ತಲೆ ದೇವೇಂದ್ರ ತನ್ನಲ್ಲೆ ಚಿಂತಿಸುತ್ತಿದ್ದ - 'ಬ್ರಹ್ಮದೇವನೇಕೆ ಈ ಸಂಶೋಧನೆಯನ್ನಿಷ್ಟು ಗುಟ್ಟಲ್ಲಿ ನಡೆಸುತ್ತಿದ್ದಾನೆ - ಅದೂ ಯಾರ ಜತೆಗಾರಿಕೆಯೂ, ಸಹಾಯವೂ ಇಲ್ಲದಂತೆ ? ಏನಿರಬಹುದಂತಹ ಗುಟ್ಟಿನ ಪ್ರಯೋಗ ? ಅದನ್ನು ತಿಳಿದುಕೊಂಡರೆ ದೇವರಾಜನಾದ ತನಗೆ ಒಳಿತಲ್ಲವೆ ?' ಎಂದು..
ಹಾಗೆ ಚಿಂತಿಸುತ್ತಲೆ ತಟ್ಟನೊಂದು ಯೋಜನೆಯೂ ಹೊಳೆದುಬಿಟ್ಟಿತು ಅವನ ಕುಟಿಲಮತಿಗೆ.. ಅದನ್ನೆ ಆಲೋಚಿಸುತ್ತ, " ಊರ್ವಶಿ... ಯಾರೂ ಸಹಾಯಕರಿಲ್ಲದೆ ನಡೆಸುತ್ತಿರುವ ಕಾರಣದಿಂದ ಸಂಶೋಧನೆ, ಪ್ರಯೋಗದ ವೇಗವೇನಾದರು ಕುಂಠಿತವಾಗುತ್ತಿದೆಯೆಂದು ನಿನಗನಿಸಿದೆಯೆ? ಪಿತಾಮಹನೇನಾದರು ಆ ಕುರಿತಾದ ಇಂಗಿತವನ್ನು, ಅಸಹನೆಯನ್ನು ತೋರಿಸಿಕೊಂಡಿರುವನೆ ?" ಎಂದು ವಿಚಾರಿಸಿದ.
" ಖಂಡಿತ... ತನಗೆ ಬೇಕಾದ ವೇಗದಲ್ಲಿ ಇದು ನಡೆಯುತ್ತಿಲ್ಲವೆಂಬ ಅಸಹನೆ ಬ್ರಹ್ಮದೇವನಿಗಿದೆ.. ಆ ಭಾವವನ್ನು ನಾನೇ ಕಣ್ಣಾರೆ ಕಂಡಿದ್ದೇನೆ... ಪ್ರತಿ ಬಾರಿಯು ಪ್ರಯೋಗ ಬಿಟ್ಟು ಹೋಗಬೇಕಾದಾಗಲೆಲ್ಲ ಅವನ ಮುಖದಲ್ಲಿ ಅದುಂಟು ಮಾಡುವ ವ್ಯಗ್ರತೆ, ಅಸಹನೆ, ಅಸಂತೃಪ್ತಿ ಎದ್ದು ಕಾಣುವಂತಿರುತ್ತದೆ.."
ಆ ಉತ್ತರವನ್ನು ಕೇಳುತ್ತಿದ್ದಂತೆ ದೇವೇಂದ್ರನ ಅಸ್ಪಷ್ಟ ಮನದಲ್ಲೊಂದು ಸ್ಪಷ್ಟಯೋಜನೆ ರೂಪುಗೊಳ್ಳುತ್ತಿತ್ತು..
ದೇವರಾಜನಾಗಿ ತಾನು ಸುತ್ತಮುತ್ತ ನಡೆಯುತ್ತಿರುವುದೆಲ್ಲದರ ಮೇಲೆ ನಿಗಾ ಇಡುವುದು ಅಗತ್ಯ.. ಈ ಬಾರಿ ಗೌತಮನನ್ನು ಬಳಸಿಕೊಂಡು ಆ ಕೆಲಸ ಮಾಡಿದರೆ ಹೇಗೆ..?
ತನಗೂ ಅವನಿಗು ಇರುವ ಪರಿಚಯವನ್ನೆ ಬಳಸಿಕೊಂಡು ಅವನನ್ನು ಈ ಪ್ರಯೋಗದಲ್ಲಿ ಭಾಗವಹಿಸುವಂತೆ ಮಾಡಿ ಇಲ್ಲಿ ನಿಜಕ್ಕೂ ಏನು ನಡೆಯುತ್ತಿದೆಯೆಂಬ ವಿಷಯವನ್ನು ಅರಿತುಕೊಂಡರೆ, ಅದಕ್ಕೆ ಪೂರಕವಾದ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ..
ಹೌದು..ಅದೇ ಸರಿ.. ಈ ವಿಷಯದ ಕುರಿತು ಪಿತಾಮಹನೊಂದಿಗೆ ಒಮ್ಮೆ ಮಾತಾಡಿ ನೋಡುವುದೇ ಸರಿ.. ಒಪ್ಪಲಿ ಬಿಡಲಿ ತಾನು ಕಳೆದುಕೊಳ್ಳುವುದಾದರು ಏನು ? ಒಂದು ವೇಳೆ ಅಂದುಕೊಂಡಂತೆ ನಡೆದರೆ ಅದರಿಂದ ಅನುಕೂಲವಾಗುವ ಸಾಧ್ಯತೆಯೆ ಹೆಚ್ಚಲ್ಲವೆ..?
ಅದರನುಸಾರ ಏನು ಮಾಡಬೇಕೆಂಬ ರೂಪುರೇಷೆಗಳನ್ನು ಸಿದ್ದಗೊಳಿಸತೊಡಗಿತು ದೇವರಾಜನ ಕುಶಾಗ್ರಮತಿ ಮನಸು..
****************
ಅಂದು ಎಂದಿನಂತೆ ಹೊರಡುವ ಸಿದ್ಧತೆ ನಡೆಸಿದ್ದ ಊರ್ವಶಿ, ಕೊನೆಯದಾಗಿ ತನ್ನ ತೆಳು ಪಾರದರ್ಶಕ ಚಿತ್ರವಿನ್ಯಾಸದ ಮೇಲು ಹೊದಿಕೆಯನ್ನು ಹೊದ್ದುಕೊಂಡು ಶೃಂಗಾರಖಾನೆಯಿಂದ ಹೊರಬಂದಳು. ಎಂದಿನಂತೆ ಮೇನೆಯ ಜನ ಸಿದ್ದರಾಗಿದ್ದ ಹೊತ್ತಲ್ಲೆ, ಅನತಿ ದೂರದಿಂದ ಇದ್ದಕ್ಕಿದ್ದಂತೆ ಗಾಲಿಗಳ ಸದ್ದು ಕೇಳಿಸಿತ್ತು...
'ಯಾರೊ ಬರುತ್ತಿರುವಂತಿದೆಯಲ್ಲ ?' ಎಂದುಕೊಂಡು ತಲೆಯೆತ್ತಿ ಕಣ್ಣು ಹಾಯ್ದಷ್ಟು ದೂರ ದಿಟ್ಟಿಸಿ ನೋಡಿದವಳಿಗೆ ಅದರ ಮೇಲುಭಾಗದಲ್ಲಿ ಹಾರಾಡುತ್ತಿದ್ದ ಧ್ವಜದ ಗುರುತಿನಿಂದಲೆ, ಆ ರಥ ದೇವರಾಜನದೆಂದು ಅರಿವಾಗಿ ಹೋಗಿತ್ತು. ಆದರೆ ಒಳಗೆ ದೇವೇಂದ್ರನಿದ್ದ ಹಾಗೆ ಕಾಣಿಸಲಿಲ್ಲ; ಬದಲಿಗೆ ಸಾರಥಿಯ ಆಸನದಲ್ಲಿ ವಿರಾಜಮಾನನಾಗಿದ್ದ ಮಾತಲಿ ಮಾತ್ರವೆ ಕಂಡುಬಂದ.
ಸ್ವತಃ ಮಾತಲಿಯೆ ಇಂದ್ರನ ರಥದೊಡನೆ ಬರುತ್ತಿರುವನೆಂದ ಮೇಲೆ ಏನೊ ಗಹನವಾದ ವಿಷಯವೆ ಇರಬೇಕೆಂದುಕೊಂಡು ಮೇನೆಯವರಿಗೆ ತುಸು ಹೊತ್ತು ಕಾಯುವಂತೆ ಹೇಳಿ ದ್ವಾರದ ಬಳಿಯೆ ನಿಂತಳು, ರಥದ ಆಗಮನವನ್ನು ನಿರೀಕ್ಷಿಸುತ್ತ.. ಮಿಂಚಿನ ವೇಗದಲ್ಲಿ ಚಲಿಸುವ ರಥ ಅವಳ ಮನೋವೇಗಕ್ಕೆ ಸ್ಪಂದಿಸುವಂತೆ ಕ್ಷಣಕಾಲದಲ್ಲೆ ಅವಳೆದುರಾಗಿ ನಿಂತಾಗ ಅದರಿಂದ ಕೆಳಗಿಳಿದು ಬಂದ ಮಾತಲಿ ವಿನಯದಿಂದ ನಮಸ್ಕರಿಸಿದ...
" ಏನು ವಿಷಯ ಮಾತಲಿ , ಎಲ್ಲಾ ಕುಶಲವೆ ? ಪ್ರಾತಃಕಾಲದಲ್ಲೆ ದೇವರಾಜನ ರಥದ ಸಮೇತ ಆಗಮಿಸಿಬಿಟ್ಟಿರುವೆ ? ಏನಾದರು ತುರ್ತಿನ ವಿಷಯವಿತ್ತೇನು ?" ಊರ್ವಶಿ ಒಂದು ವಿಧವಾದ ಕಕ್ಕುಲತೆ ಬೆರೆತ ದನಿಯಲ್ಲಿ ಪ್ರಶ್ನಿಸಿದಳು..
" ಎಲ್ಲವು ಕುಶಲವೆ ಊರ್ವಶಿದೇವಿ.. ನಿಯಮಿತ ಸೇವಾ ಕಾರ್ಯದ ಅನುವರ್ತಿಗಳಾದ ನನ್ನಂತಹವರಿಗೆ ಹೊತ್ತೇನು, ಗೊತ್ತೇನು ಬಿಡು ತಾಯಿ... ಇಂದು ನಸುಕಿನಲ್ಲಿ ದೇವರಾಜನು ಇದ್ದಕ್ಕಿದ್ದಂತೆ ನೀನು ಬ್ರಹ್ಮದೇವನ ತಾಣಕ್ಕೆ ಹೊರಡುವ ಮೊದಲೆ ನಿನ್ನಲ್ಲಿಗೆ ತಲುಪಿ, ಜತೆಯಲ್ಲಿಯೆ ಕರೆದುಕೊಂಡು ಬಾ ಎಂದು ಆಜ್ಞಾಪಿಸಿದ್ದರಿಂದ, ಕೊಂಚ ವೇಗವಾಗಿ ಅವಸರವಸರದಲ್ಲಿಯೆ ಬರಬೇಕಾಯ್ತು. ಹೀಗಾಗಿ ಮೊದಲೆ ಮುನ್ಸೂಚನೆ ಕಳಿಸಲು ಸಾಧ್ಯವಾಗಲಿಲ್ಲ.."
ಅದನ್ನು ಕೇಳುತ್ತಿದ್ದಂತೆ ಚಕಿತಳಾದ ಊರ್ವಶಿ, " ಜತೆಗೆ ಕರೆದುಕೊಂಡು ಬರಲು ಹೇಳಿದನೆ ಮಹೇಂದ್ರ? ನಾನೀಗ ಪಿತಾಮಹ ಬ್ರಹ್ಮದೇವನ ಪ್ರಯೋಗಶಾಲೆಗೆ ಹೊರಟಿರುವೆ.. ನಿನ್ನ ಜತೆ ಹೊರಟರೆ ತಡವಾಗಿಬಿಡುವುದಲ್ಲ ? ಆ ಭೇಟಿ ಮುಗಿಸಿಕೊಂಡು ಬಂದ ಮೇಲೆ ದೇವರಾಜನನ್ನು ಕಂಡರಾಗುವುದಿಲ್ಲವೆ ?" ಎಂದು ಕೇಳಿದಳು.
" ಇಲ್ಲಾ ತಾಯಿ.. ಏನೊ ಅವಸರದ ವಿಷಯವೆ ಇರುವಂತಿದೆ.. ಪಿತಾಮಹರತ್ತ ಹೋಗುವ ಮೊದಲೆ ನಿನ್ನನ್ನು ತಲುಪಿ, ಜತೆಗೆ ಕರೆದುಕೊಂಡು ಶೀಘ್ರವಾಗಿ ಬರಬೇಕೆಂದು ಸ್ಪಷ್ಟವಾಗಿ ಅಣತಿಯಿತ್ತಿದ್ದಾನೆ.. ಬಹುಶಃ ತಡವಾದರೆ ಬ್ರಹ್ಮದೇವನಿಗೆ ಅವನೆ ಕಾರಣ ಹೇಳಿಕೊಳ್ಳಬಹುದು.. ನೀನು ಹೇಗೂ ಸಿದ್ದವಾಗಿಯೆ ನಿಂತಿರುವೆಯಲ್ಲ.. ಹೊರಡು ತಾಯಿ, ಇಲ್ಲಿ ಕಾಲಹರಣ ಮಾಡುವ ಬದಲು ಅವನನ್ನೆ ನೇರ ಕೇಳಿ ಬಿಡಬಹುದು ವಿಷಯವೇನೆಂದು..." ಎಂದ ಅನುಭವಸ್ಥ ಮಾತಲಿ..
ಇನ್ನು ಹೆಚ್ಚು ಮಾತಾಡಿ ವೃಥಾ ಸಮಯ ವ್ಯಯಿಸುವ ಬದಲು ಅವನ ಮಾತಿನಂತೆ ನಡೆಯುವುದೆ ಕ್ಷೇಮಕರವೆಂದು ಭಾವಿಸಿದ ಊರ್ವಶಿ, ಮರು ಮಾತಾಡದೆ ರಥವನ್ನೇರಲು ಹೊರಟಳು. ಆ ಹೊತ್ತಲ್ಲೆ ಮೇನೆಯೊಡನೆ ಸಿದ್ದರಾಗಿದ್ದ ಭದ್ರರಿಗೆ ಆ ದಿನದ ಸೇವೆಯ ಅಗತ್ಯವಿಲ್ಲವೆಂದು ಸುದ್ದಿ ನೀಡಿದ ಮಾತಲಿ ತನ್ನ ರಥವನ್ನು ದೌಡಾಯಿಸಿದ್ದ ದೇವರಾಜನ ವಸತಿಯ ಕಡೆಗೆ...
ಮನೋವೇಗದಷ್ಟೆ ಕ್ಷಿಪ್ರಗತಿಯಲ್ಲಿ ಬಂದು ತಲುಪಿದ ರಥದ ನಿರೀಕ್ಷೆಯಲ್ಲಿ, ತನ್ನ ವಸತಿಯಂಗಳದ ಹೆಬ್ಬಾಗಿಲಲ್ಲೆ ನಿಂತು, ಯಾರೊ ವಿಶೇಷ ಅತಿಥಿಗಳನ್ನು ಬರಮಾಡಿಕೊಳ್ಳುವವನಂತೆ ನಿಂತಿದ್ದ ಶಚೀಂದ್ರ. ಅವನು ಧರಿಸಿದ್ದ ಉಡುಗೆ ತೊಡುಗೆ ಮತ್ತಿತರ ಸಿದ್ದತೆಗಳನ್ನು ಗಮನಿಸಿದರೆ, ಅವನೂ ಕೂಡ ಎಲ್ಲಿಗೊ ಹೊರಡಲು ಸಿದ್ದನಾಗಿ ನಿಂತಂತೆ ಕಂಡಿತ್ತು..
ರಥವು ಅವನ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದಂತೆ, ಊರ್ವಶಿಯನ್ನಲಿ ಇಳಿಯಬಿಡದೆ ತಾನೆ ನೇರ ರಥದ ಬಳಿ ಬಂದು ಒಳ ಹತ್ತಲು ಮೆಟ್ಟಿಲಿಗೆ ಕಾಲಿರಿಸಿದ. ಅದನ್ನು ನೋಡುತ್ತಿದ್ದಂತೆ ದೇವರಾಜನು ಆ ದಿನ ತನ್ನ ಜತೆಯಾಗಿಯೆ ಪಿತಾಮಹನಲ್ಲಿಗೆ ಹೊರಟಿರುವನೆಂದು ಅರಿವಾಗಿ, ಏನು ಪ್ರಶ್ನೆ ಕೇಳದೆ ಪಕ್ಕಕ್ಕೆ ಸರಿದು ಅವನು ಕೂಡಲು ಅನುಕೂಲವಾಗುವಂತೆ ಜಾಗ ಮಾಡಿಕೊಟ್ಟಳು. ಸ್ವಸ್ಥವಾಗಿ ಏರಿ ಮೆತ್ತನೆಯ ಸುಖಾಸೀನದಲ್ಲಿ ಕೂರುತ್ತಿದ್ದಂತೆ ಆದೇಶವಿತ್ತಿದ್ದ ದೇವೇಂದ್ರ..
" ಮಾತಲಿ ನೇರ ಪಿತಾಮಹರ ಪ್ರಯೋಗಶಾಲೆಗೆ ನಡೆ.."
ಹಾದಿ ಕ್ರಮಿಸಲಾರಂಭವಾಗುತ್ತಿದ್ದ ಹಾಗೆಯೆ ಕುತೂಹಲದಿಂದ ಮೈಯೆಲ್ಲ ಕಿವಿಯಾದಂತಿದ್ದ ಊರ್ವಶಿಯತ್ತ ತಿರುಗಿದ ದೇವರಾಜ, " ಇದೇನು ಇಂದು ನಾನು ನಿನ್ನ ಜತೆಗೆ ಹೊರಟಿರುವೆನೆಂದು ಅಚ್ಚರಿಯಾಗುತ್ತಿದೆಯೆ ಊರ್ವಶಿ ?"ಎಂದ ಮಾತಿನಾರಂಭಕ್ಕೆ ಪೀಠಿಕೆ ಹಾಕುತ್ತ..
" ನೀನು ಬ್ರಹ್ಮದೇವನನ್ನು ನೋಡ ಹೊರಡುವುದೇನು ಅಸಹಜವಲ್ಲ.. ದೈನಂದಿನ ಕಾರ್ಯ ಕಾರಣಗಳ ಸಲುವಾಗಿ ದಿನಕೆಷ್ಟು ಬಾರಿ ನೋಡುವೆಯೊ, ಮಾತಾಡುವೆಯೊ ನನಗರಿವಿರದಿದ್ದರು ಅದು ಸಾಕಷ್ಟು ಬಾರಿಯೆಂದು ಊಹಿಸಬಲ್ಲೆ... ಆದರೆ ನೀನೀದಿನ ಇಷ್ಟು ಬೆಳಗಿನ ಹೊತ್ತಲ್ಲೆ ನನ್ನ ಜತೆಗೆ ಹೊರಟಿದ್ದು ಮಾತ್ರ ಅಚ್ಚರಿಯೆ..!"
ಅವಳ ಮಾತಿಗೆ ನಸುನಕ್ಕ ಇಂದ್ರ, " ಅದಕ್ಕೆ ಕಾರಣವಿಲ್ಲದಿಲ್ಲ ಊರ್ವಶಿ.. ನೀನು ಪಾಲ್ಗೊಂಡಿರುವ ಈ ವಿಜ್ಞಾನ ಯಜ್ಞಕ್ಕೆ ಸಂಬಂಧಿಸಿದಂತೆ ನನಗೊಂದು ಮುಖ್ಯ ಕೆಲಸವಿದೆ.. ಅದರ ಸಲುವಾಗಿ ನಿನ್ನ ಜತೆಯೆ ಹೊರಟೆ.. ಅದರ ಕುರಿತು ನಿನಗು ಅರಿವಿರಲೆಂಬ ಭಾವನೆಯಿಂದಲೆ ಜತೆಗೆ ಬಂದೆ.. ನನ್ನ ಸಲಹೆಯನ್ನೇನಾದರು ಪಿತಾಮಹನು ಅಂಗೀಕರಿಸಿದರೆ, ನೀನು ವಹಿಸಬೇಕಾದ ಪಾತ್ರವು ಈಗಿನದಕ್ಕಿಂತ ಹೆಚ್ಚು ಗಹನದ್ದಾಗಬಹುದು. ಅದಕ್ಕೆ ನೀನೂ ಜತೆಗಿದ್ದರೆ ಚೆನ್ನವೆಂದು ಭಾವಿಸಿ ಈ ಯೋಜನೆ ಮಾಡಿದೆ.." ಎಂದ ತಿಳಿಯಾಗಿ ನಗುತ್ತ.
(ಇನ್ನೂ ಇದೆ)