ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)

ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)

ಅದನ್ನು ಕೇಳಿದ ಹೊತ್ತಲ್ಲಿ ಸೋಲುವ ಪರಿಣಾಮದ ಭೀತಿ ಒಳಗೇ ಕಾಡಿ ಮೈಯೆಲ್ಲ ನಡುಗಿದಂತಾಗಿ ಅದುರಿದ್ದ ಗೌತಮ..

ಹಿಂದೆಯೆ ತಾನು ಹೊಣೆವಹಿಸಿಕೊಂಡು ನಿಭಾಯಿಸುವ ಕೆಲಸಕ್ಕೆ ಪೂರ್ಣ ಸಹಕಾರ-ಸೌಲಭ್ಯ-ಸಹಾಯಗಳನ್ನೊದಗಿಸುತ್ತಿರುವ ಬ್ರಹ್ಮದೇವ ತೀರ ಸಂಕಟಕರ ಸ್ಥಿತಿಯಲ್ಲಿ ಕೈ ಬಿಡಲಾರ ಎನ್ನುವ ನಂಬಿಕೆ ಅವನ ಮನಸನ್ನು ತಹಬಂದಿಗೆ ತಂದಿತ್ತು.

ಆ ನಂಬಿಕೆಯಲ್ಲಿಯೆ ತನ್ನ ಕೆಲಸವಾರಂಭಿಸಿದ್ದ ಗೌತಮ, ಹೊಸದಾದ ಉತ್ಸಾಹದ ಚಿಲುಮೆಯನ್ನು ನಿರಂತರವಾಗಿ ಚೆಲ್ಲುತ್ತ.. ಆ ಹೆಗಲೇರಿದ ಹೊಣೆಯ ಮೊದಮೊದಲ ದಿನಗಳಲ್ಲೆ ಗೌತಮ ಮಾಡಿದ ಮೊದಲ ಕೆಲಸವೆಂದರೆ ಆ ಯೋಜನೆಗೊಂದು ಸ್ಪಷ್ಟ ರೂಪುರೇಷೆ ನೀಡುವ ಕ್ರಮಬದ್ಧ ಆವರಣವನ್ನೊದಗಿಸಿದ್ದು.. ಇಡಿ ಯೋಜನೆಯ ಗಮ್ಯದತ್ತ ದೃಷ್ಟಿಯಿಟ್ಟ ಹತ್ತಾರು ವ್ಯವಸ್ಥಿತ ಮತ್ತು ತಾರ್ಕಿಕ ಗುಂಪುಗಳಾಗಿ ವಿಭಜಿಸಿ ಆ ಪ್ರತಿ ಗುಂಪಿಗು ಒಬ್ಬೊಬ್ಬ ನಾಯಕನನ್ನು ಆರಿಸಿದ್ದು.

ಹೀಗಾಗಿ ಮೊದಲು ಸರಣಿ ಕ್ರಮದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗೆ ಈಗ ಹಲವು ಸಮಾನಾಂತರ ಪಥಗಳಲ್ಲೋಡುವ ಗತಿ ಪ್ರಾಪ್ತವಾಗಿತ್ತು. ಒಂದು ರೀತಿಯಲ್ಲಿ ಇದು ವೇಗವನ್ನಧಿಕವಾಗಿಸುವ ಕ್ರಮವೆಂದೆನಿಸಿದರೆ, ಮತ್ತೊಂದೆಡೆ ವಿಷಯ ಪರಿಣಿತಿಯ ಆಧಾರದ ಮೇಲೆ ವಿಂಗಡಿಸಿಟ್ಟ ಚತುರ ಕ್ರೋಢೀಕರಣವೂ ಆಗಿತ್ತು...

ಪ್ರತಿಯೊಂದು ಗುಂಪಿಗು ಅದರದೆ ಆದ ಹೊಣೆ, ಜಾವಾಬ್ದಾರಿಯನ್ನು ನಿಗದಿಪಡಿಸಿ ಹಂಚಿದ ನಂತರ ಸ್ವಯಂ ತಾನೆ, ಅದೆಲ್ಲಾ ಗುಂಪುಗಳ ಸಮನ್ವೀಕರಣದ ಹೊಣೆ ಹೊತ್ತು ಅವನ್ನೆಲ್ಲ ಒಂದು ನಿರ್ದಿಷ್ಠ ನಿಗದಿತ ಸಿದ್ದಾಂತ ಸೂತ್ರದಡಿ ನಡೆಯುವಂತೆ ಸಂಯೋಜಿಸಿದ್ದು ಬ್ರಹ್ಮದೇವನ ಗಮನಕ್ಕೆ ಬಂದು ಅವನ ಮೆಚ್ಚುಗೆಗು ಪಾತ್ರವಾಗಿತ್ತು.. ಆ ಕಾರ್ಯಾಚರಣೆಯಲ್ಲೆ ಗೌತಮನ ದೂರದೃಷ್ಟಿತ್ವ, ಯೋಜನಾಬದ್ಧ ಕಾರ್ಯಗಮನ, ವ್ಯವಸ್ಥಿತ ನಿಭಾವಣೆಯ ಸೂಕ್ಷ್ಮ ದೃಷ್ಟಿಗಳೆಲ್ಲದರ ಕುರುಹು ಗೋಚರವಾಗಿ ಅವನಿಗೆಲ್ಲಾ ಹೊಣೆ ಹೊರಿಸಿ ತಾನು ಬದಿಗೆ ಸರಿದದ್ದು ಒಳಿತೇ ಆಯಿತೆಂದು ಸಂತೃಪ್ತಿಯೂ ಆಗಿತ್ತು. ಆ ಕಾರಣದಿಂದಲೆ ಅವನಿಗೆ ಹೆಚ್ಚಿನ ಸ್ವಾತಂತ್ರ್ಯಾ ಕೊಟ್ಟು ಉತ್ತೇಜಿಸುವ ಕೆಲಸ ಮಾಡಿದ್ದು.

ಬ್ರಹ್ಮದೇವನ ಅದುವರೆಗಿನ ಕಾರ್ಯದ ಉಸ್ತುವಾರಿ ಸಮೀಕ್ಷೆ ನಡೆಸಿದ ಗೌತಮನಿಗೆ ಸಂಶೋಧನೆ ಹೆಜ್ಜೆಯಿಕ್ಕಿರುವ ದಿಕ್ಕು ಸರಿಯಾದದ್ದೆಂದು ಮನವರಿಕೆಯಾಗಲಿಕ್ಕೆ ಹೆಚ್ಚು ತಡವಾಗಲಿಲ್ಲ. ಆ ಸಿದ್ದತೆಗಳನ್ನು, ಮಾರ್ಗದರ್ಶಿ ಯೋಜನಾ ಪಥವನ್ನು ನೋಡುತ್ತಲೆ ಪಿತಾಮಹನ ಮೇಲಿನ ಭಕ್ತಿ, ಗೌರವ ನೂರ್ಮಡಿಯಾಗಿತ್ತು. ಆ ಸೂತ್ರದ ಎಳೆಯನ್ನು ಹಿಡಿದುಕೊಂಡೆ ಅದನ್ನು ಹೇಗೆ ಮುಂದಿನ ಹಂತಕ್ಕೆ ವಿಸ್ತರಿಸಿ, ವಿನ್ಯಾಸಗೊಳಿಸಬೇಕೆಂಬುದರತ್ತ ಗಮನ ಹರಿಸಿದ್ದರೆ ಸಾಕಾಗಿತ್ತು.

ಅದನ್ನು ಮಾಡಹೊರಟಾಗ ಮೊದಲು ಕಣ್ಣಿಗೆ ಬಿದ್ದದ್ದು 'ಶುಕ್ಲ ಸಂಶೋಧನೆ'ಯೆಂಬ ಹೆಸರಿನಲ್ಲಿದ್ದ, ಜೀವಕೋಶ ವಿಭಾಗದ ಚಟುವಟಿಕೆಗಳು. ಆ ವಿಭಾಗದ ಮುಖ್ಯ ಭೂಮಿಕೆಯ ಹೊಣೆಗಾರಿಕೆಯನ್ನು ಯಾರಿಗೂ ವಹಿಸದೆ ತನ್ನ ಪಾಲಿಗೆ ಇಟ್ಟುಕೊಂಡ ಗೌತಮ - ಅದರ ಪ್ರಾಮುಖ್ಯತೆಯ ಕಾರಣದಿಂದ ಮತ್ತು ಆ ವಿಭಾಗದಲ್ಲಿ ತನಗಿರುವ ಪರಿಣಿತಿಯ ದೆಸೆಯಿಂದ..

ಅದುವರೆವಿಗು ಅಲ್ಲಿ ನಡೆದಿದ್ದ ಮುಖ್ಯ ಕಾರ್ಯವೆಂದರೆ ಶುಕ್ಲ (ಕೋಶ) ಮಟ್ಟದ ಸಂರಚನೆಯನ್ನು ಆಳವಾಗಿ ಅಭ್ಯಸಿಸುತ್ತ ಅದನ್ನು ಊರ್ವಶಿಯ ಕೋಶದ ಮೂಲ ಸ್ವರೂಪಕ್ಕೆ ಹೋಲಿಸಿ ನೋಡುವುದು.. ಮತ್ತವೆರಡರ ನಡುವೆ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸಿ ದಾಖಲಿಸುತ್ತ ಹೋಗುವುದು.. ಈ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದು ಕೋಶ ಮಟ್ಟದ ಹೊರ ಆವರಣದಿಂದ ಹಿಡಿದು ಆಳದಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಶುಕ್ಲಕಣಗಳವರೆಗು ಮಾಹಿತಿ, ವಿವರಗಳನ್ನು ಕಲೆ ಹಾಕಲಾಗಿತ್ತು.

ಇನ್ನು ಅದರ ಮುಂದಿನ ಹಂತವೆಂದರೆ ಅವೆರಡು ಕೋಶಗಳ ಅಂತರದ ನಿಕಟ ಮತ್ತು ನಿಖರವಾದ ವಿಶ್ಲೇಷಣೆ ನಡೆಸುತ್ತ, ಆ ವ್ಯತ್ಯಾಸದ ಸೈದ್ದಾಂತಿಕ ಮೂಲರೂಪವನ್ನು ಸಮೀಕರಿಸುವ ಕಾರ್ಯ. ನಂತರ ಆ ಸಮೀಕರಣದ ಅಂತರವನ್ನು ಅಧಿಗಮಿಸಿ ಎರಡೂ ಒಂದೆ ಮಟ್ಟದವಾಗುವಂತೆ ಆಗಿಸಲು ಏನು ಮತ್ತು ಹೇಗೆ ಮಾಡಬೇಕೆಂಬ, ಸಂಶೋಧನೆಯ ಮಹತ್ವದ ಘಟ್ಟ..

ಬಾಯಿ ಮಾತಿನಲ್ಲಿ ಕೆಲವು ಸಾಲುಗಳಲ್ಲಿ ಹೇಳಬಲ್ಲ ಈ ಅಂಶಗಳು ಸಂಶೋಧನೆಯಲ್ಲಿ ಲಕ್ಷಾಂತರ ವರ್ಷಗಳ ದೂರಕ್ಕೆ ಚಾಚಿಕೊಳ್ಳುವ ಅಗಾಧ, ವಿಶಾಲ ಬಾಹುಳ್ಯವುಳ್ಳ ವಿಷಯಗಳು. ಇವಕ್ಕೆ ಯಾವ ಕಾಯಕಲ್ಪ ಮಾಡಿದರೆ ಇವುಗಳ ವೇಗ ವರ್ಧಿಸಬಹುದು ? ಯಾವ ಕ್ರಾಂತಿಕಾರಕ ಸಂಶೋಧನೆ ಇದನ್ನು ಲಕ್ಷಾಂತರದಿಂದ ಸಹಸ್ರ ವರ್ಷಗಳ ಮಟ್ಟಕ್ಕೆ ತಂದಿರಿಸೀತು ? ಆ ಹೊತ್ತಿನಲ್ಲಿ ಗೌತಮನಲ್ಲೂ ಉತ್ತರವಿರಲಿಲ್ಲ ಆ ಪ್ರಶ್ನೆಗೆ.

ಒಂದಂತೂ ನಿಜವಿತ್ತು - ಈ ಹೋಲಿಕೆ ತುಲನೆಯಲ್ಲಿ ಅವೆರಡಕ್ಕಿರುವ ಅಂತರ ಕಂಡುಹಿಡಿಯುವುದೇನು ದೊಡ್ಡ ವಿಷಯವಾಗಿರಲಿಲ್ಲ.. ಆದರೆ ಹಾಗೆ ಕಂಡುಹಿಡಿದುದ್ದನ್ನು ಅದರ ಮೂಲತತ್ವರೂಪಕ್ಕಿಳಿಸಿ, ಅವು ಹೊಸತಿನ ಬದಲಾವಣೆಯನ್ನು ನೈಸರ್ಗಿಕವಾಗಿ ಅಳವಡಿಸಿಕೊಂಡು, ಮೂಲವಂಶವಾಹಿ ಜೀವಕಣಗಳೊಂದಿಗೆ ಸಹಜವಾಗಿ ಮಿಳಿತವಾಗುವಂತೆ ಸೃಜಿಸಬೇಕು...

ಕೋಶಗಳ ಅಂತರಾಳದ ಮಟ್ಟದಲ್ಲಿ ಅದನ್ನು ಸಾಧಿಸಬಲ್ಲ ಕಾರ್ಯವಿನ್ಯಾಸ ರಚನೆಯದೆ ದೊಡ್ಡ ಅಡಚಣೆಯಾಗಿತ್ತು..!

************

ಏಕಾಗ್ರತೆಯಿಂದ ಬದರಿಕಾಶ್ರಮದಲ್ಲಿ ತಪೋನಿರತನಾಗಿದ್ದ ನರನ ಆಂತರ್ಯವಿನ್ನು ಮೊದಲಿನ ನಿರಾಳ ಲಹರಿಗೆ ಪೂರ್ತಿಯಾಗಿ ತಲುಪಿರಲಿಲ್ಲ.

ದೇವರಾಜನ ಕಿತಾಪತಿಯ ದೆಸೆಯಿಂದ, ಮನಸನ್ನು ಸಡಿಲಬಿಡದೆ ಸಂಯಮದಿಂದಿರಬೇಕೆಂಬ ಅತ್ಯುಗ್ರ ಛಲದ ಕೋಟೆಯಲ್ಲು ಸಣ್ಣದೊಂದು ಬಿರುಕಾದಂತಾಗಿ ಊರ್ವಶಿಯೆಂಬ ಸೃಷ್ಟಿ-ರೂಪಾಂತರದಲ್ಲಿ ಪರ್ಯಾವಸಾನವಾಗಿ ಹೋಗಿತ್ತು.

ಬರಿಯ ಸೃಷ್ಟಿಯ ಮಾತಾಗಿದ್ದರೆ ಅದೇನು ದೊಡ್ಡ ವಿಷಯವಾಗುತ್ತಿರಲಿಲ್ಲ.. ಆದರೆ ಆ ಹೊತ್ತಿನ ಅದಾವುದೊ ಹುಮ್ಮಸ್ಸಿನಲ್ಲಿ, ಆ ಅಪ್ಸರೆಯರಿಗಿಂತ ಸಾವಿರಪಟ್ಟು ಶ್ರೇಷ್ಠವಾದ ಸೃಷ್ಟಿಯಾಗಿಸಬೇಕೆನ್ನುವ ಪ್ರಲೋಭನೆಯಾಗಿ, ತನ್ನರಿವಿಗೆ ನಿಲುಕುವ ಮೊದಲೆ ಅಗತ್ಯಕ್ಕಿಂತ ಹೆಚ್ಚು ಶಕ್ತಿ ವ್ಯಯಿಸಿ ಬಿಟ್ಟಿದ್ದ.. !

ಆ ಶಕ್ತಿಪಾತದ ತರುವಾಯ ಮತ್ತದನ್ನು ಗಳಿಸಿಕೊಳ್ಳದೆ ಪೂರ್ಣ ಯುದ್ಧ ಸಾರುವಂತಿಲ್ಲವಾಗಿ, ಮತ್ತದೆಷ್ಟು ವರ್ಷಗಳ ಕಾಲ ದೂಡಬೇಕೊ ಎನ್ನುವ ಚಿಂತನೆ ಕಾಡತೊಡಗಿ, ಉಗ್ರ ಏಕಾಗ್ರತೆಯ ನಡುವಲ್ಲಿಟ್ಟ ಅನಗತ್ಯ ಚಂಚಲತೆಯ ದೃಷ್ಟಿಬೊಟ್ಟಾಗಿ ಪರಿಣಮಿಸಿಬಿಟ್ಟಿತ್ತು. ಆದರೂ ತನ್ನ ಮನೋ ಅಸ್ತಿತ್ವದ ಬಹುತೇಕ ಭಾಗವನ್ನು ಭೌತಿಕ ಶರೀರದ ಜತೆ ಧ್ಯಾನಾಸಕ್ತಿಯಲ್ಲಿ ಕೇಂದ್ರೀಕರಿಸಿ, ಮಿಕ್ಕುಳಿದ ಅರೆ ಪಾರ್ಶ್ವಭಾಗವನ್ನು ಮಾತ್ರ ಈ ಚಂಚಲ ಚಿತ್ತದ ಉಸ್ತುವಾರಿಯಡಿ ಬಿಟ್ಟು ದ್ವಂದ್ವಯಾನದಲ್ಲಿ ತೊಡಗಿಸಿಕೊಂಡಿದ್ದ ನರ - ತನ್ನ ಅದೇ ಶಕ್ತಿಯ ಮತ್ತೊಂದು ಪಾರ್ಶ್ವಭಾಗದ ತುಣುಕನ್ನು ಆ ದ್ವಂದ್ವದ ಸರಿದೂಗಿಸುವಿಕೆಯ ಸರಕಾಗಿ ಬಳಸುತ್ತ...

ಆ ಹೊತ್ತಿನಲ್ಲಿ ಮನೋಕೇಂದ್ರದ ಮೂಲೆಯೊಂದರಲ್ಲಿ ಏನೊ ಬೆಳಕು ಹೊತ್ತಿಕೊಂಡಂತಹ ಸಂವೇದನೆಯ ಅನುಭವವಾಗತೊಡಗಿತು.. ಅದು ಸಾಧಾರಣ, ನಾರಾಯಣನು ನರನ ಜತೆ ಸಂಪರ್ಕಿಸಬೇಕಾಗಿ ಬಂದಾಗ ಕಳಿಸುವ ಮನೋಸಂಕೇತ ಸಂಜ್ಞೆ. ಆ ಮಾನಸ ಮೂಲೆಯ ಅಧಿಕೃತ ಭಾಗವೊಂದನ್ನು ಕೇವಲ ತಮ್ಮಿಬ್ಬರ ಸಂಭಾಷಣೆ, ಸಂಪರ್ಕಕ್ಕೆ ಮೀಸಲಿರಿಸಿಕೊಂಡು ಅದರನುಸಾರ ಆ ಭಾಗವನ್ನು ಶೃತಿಗೊಳಿಸಿಬಿಟ್ಟಿದ್ದಾರೆ.. ಅಲ್ಲಿಂದ ಹೊರಟು ವಿನಿಮಯವಾಗುವ ನಿಶ್ಚಿತ ತರಂಗಾಂತರದ ಅದೃಶ್ಯ ಅಲೆಗಳು ಕೇವಲ ಅದೊಂದು ಆಯಾಮದಲ್ಲಿ ಮಾತ್ರ ಪ್ರವಹಿಸುವುದರಿಂದ ಮಾತುಕಥೆಯ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳ ಹೊರತಾಗಿಯು ಅವರು ಸುಲಭದಲ್ಲಿ ಸಂಪರ್ಕಿಸಬಹುದು... ಶಬ್ದ ಮತ್ತು ಬೆಳಕಿನ ನೆರವಿಲ್ಲದೆಯೂ ಸಂಭಾಷಿಸಬಹುದು..ಮಾಧ್ಯಮರಹಿತ ನಿರ್ವಾತದಲ್ಲೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು.. ಅದೂ ಸಹ ಅವರ ಸಂಶೋಧನೆಯೆ...!

ಸಹಸ್ರಕವಚನ ಜತೆಗಿನ ಒಂಭೈನೂರ ತೊಂಭತ್ತೊಂಬತ್ತನೆ ಕದನದಲ್ಲಿ ನಿರತನಾಗಿರುವ ನಾರಾಯಣನು ಯುದ್ಧಭೂಮಿಯಿಂದಲೆ ಸಂಪರ್ಕಿಸಲೆತ್ನಿಸುತ್ತಿದ್ದಾನೆಂದರೆ ಅದೊಂದು ತಾತ್ಕಾಲಿಕ ಕದನವಿರಾಮದ ಗಳಿಗೆಯಿರಬೇಕು... ಪ್ರತಿ ಬಾರಿಯ ಕದನವಿರಾಮದ ಹೊತ್ತಲ್ಲು ಹೀಗೆ ಸಂಪರ್ಕಕ್ಕೆ ಬಂದು ಪರಸ್ಪರ ಮಾಹಿತಿ, ಸ್ಥಿತಿಗತಿಯ ವಿನಿಮಯ, ಪರಾಮರ್ಶೆ ನಡೆಸುವುದು ಅವರಿಬ್ಬರು ತಪ್ಪದೆ ನಡೆಸಿಕೊಂಡು ಬಂದಿರುವ ಸಾಮಾನ್ಯ ಕ್ರಮ.

ಒಬ್ಬ ಸಹಸ್ರವರ್ಷದ ಕದನದಲ್ಲಿ ಮತ್ತೊಬ್ಬ ಅದೇ ಸಹಸ್ರವರ್ಷಗಳ ತಪದಲ್ಲಿ ನಿರತನಾಗಿದ್ದಾಗ ಪರಸ್ಪರ ಮುಖತಃ ಭೇಟಿಯಾಗುವುದಾದರೂ ಎಲ್ಲಿ ಬಂತು ? ಆ ಪ್ರತಿ ಸಹಸ್ರವರ್ಷದ ಘಟ್ಟ ಮುಗಿದು ಮುಂದಿನದರ ಆರಂಭವಾಗುವ ಸಂಧಿಕಾಲದಲಷ್ಟೆ ಅವರಿಬ್ಬರ ಮುಖಾಮುಖಿ, ಕ್ಷಿಪ್ರಭೇಟಿ ಸಾಧ್ಯ. ಅದು ಬಿಟ್ಟರೆ ಮತ್ತೆಲ್ಲ ಮಾನಸಿಕ ಆಯಾಮದಲ್ಲೇ ವ್ಯವಹರಿಸಿಕೊಳ್ಳಬೇಕು.

ಅದಕ್ಕೇ ಹಾಗೆಂದು ಆ ಕೊರತೆಯಡಿ ಕೊರಗುತ್ತ ಕೂರದ ಹಾಗೆ ತಮ್ಮ ನಡುವಿನ ಸಂವಹನಕ್ಕೊಂದು ದಾರಿ ಕಂಡುಕೊಂಡಿದ್ದಾರೆ.. ಮಸ್ತಿಷ್ಕ ಮತ್ತು ನಾಸಿಕಕರ್ಣಾಕ್ಷಿಗಳ ಪ್ರೇಷಕ-ಗ್ರಾಹಕ-ನಿರ್ವಾಹಕ ಶುಕ್ಲಕಣಗಳ ಮೂಲ ತಂತುವನ್ನು ಬೇಪಡಿಸಿ, ಅದನ್ನೆಲ್ಲ ಸಂಕಲಿಸಿದ ಸಂಯೋಜಿತ ಜೀವಕಣವೊಂದನ್ನು ಸೃಷ್ಟಿಸಿ ಸಂವಹನದ ಹೊಸ ವಿಧಿಯನ್ನೆ ಅವಿಷ್ಕರಿಸಿಬಿಟ್ಟಿದ್ದ ನರ... !

ಅದನ್ನು ಮತ್ತಷ್ಟು ಪರಿಷ್ಕರಿಸಿ ಸೂಕ್ಷ್ಮರೂಪದ ಸ್ವತಂತ್ರ ಅಂಗವಾಗಿ ಕಾರ್ಯ ನಿರ್ವಹಿಸುವಂತೆ ಮಾರ್ಪಡಿಸಿ ಮೆದುಳಿನ ಜಾಲದ ಕೊಂಡಿಯೊಂದಕ್ಕೆ ಜೋಡಿಸುವ ಮೂಲಕ ಇಬ್ಬರಲ್ಲು ನಡೆವ ಸಂವಹನಕ್ಕೆ ಸಂಪೂರ್ಣ ದೃಶ್ಯ-ಶ್ರಾವ್ಯ ಮಾಧ್ಯಮದ ಆಯಾಮ ನೀಡಿಬಿಟ್ಟಿದ್ದ ನಾರಾಯಣ...!!

ಇಬ್ಬರಲ್ಲು ಈಗ ಅಂತರ್ಗತವಾಗಿ ಬೆಸೆದುಕೊಂಡ ಈ ಕೃತಕ ಜೈವಿಕ ವ್ಯವಸ್ಥೆಯಿಂದಾಗಿ ಇಬ್ಬರೂ ಪರಸ್ಪರರಿಗೆ ಏನಾಗುತ್ತಿದೆಯೆಂದು ಒಂದೇ ಸಮಯದಲ್ಲಿ, ಅದು ನಡೆಯುತ್ತಿದ್ದ ಹೊತ್ತಿನಲ್ಲಿಯೆ ನೋಡಬಹುದಾಗಿತ್ತು. ಕದನದ ಹೊತ್ತಲ್ಲಿ ಅಲ್ಲೇನು ನಡೆದಿದೆಯೆಂದು ನಾರಾಯಣನ ದೃಷ್ಟಿ ಮತ್ತು ಮನಸತ್ವದನುಸಾರ ನರ ನೋಡಬಹುದಾದರೆ, ತಪದ ಆಳದಲ್ಲೇನು ನಡೆದಿಯೆಂದು ನರನ ಮನಸತ್ವದಲ್ಲಿ ನಾರಾಯಣನೂ ಕಾಣುವಂತೆ. ಇದೊಂದು ಗಂಢಭೇರುಂಡದ ರೀತಿಯದೆ ಆದ ಅದ್ಭುತ..

ಒಂದೇ ವ್ಯತ್ಯಾಸವೆಂದರೆ ಗಂಢಭೇರುಂಡದ ಎರಡು ತಲೆಗಳು ಬೇರ್ಪಟ್ಟಿದ್ದರು, ದೇಹಗಳು ಮಾತ್ರ ಅಂಟಿಕೊಂಡೆ ಇರುತ್ತವೆಯಾಗಿ ಎಲ್ಲವನ್ನು ಜತೆಜತೆಯೆ ನಿರ್ವಹಿಸಬೇಕು. ಆದರೆ ನರ ನಾರಾಯಣರ ವಿಷಯದಲ್ಲಿ ಇಬ್ಬರೂ ದೂರಾಗಿ ಬೇರೆಬೇರೆಯೆ ಇದ್ದರು ಅದೆ ಫಲಿತವನ್ನು ಸಾಧಿಸಬಹುದು - ನಿಯಮಿತ ಪರಿಮಿತಿಯ ಪರಿಧಿಯೊಳಗೆ. ಆ ಕಾರಣದಿಂದಲೆ ಬದರಿಕಾಶ್ರಮದ ತಾಣವನ್ನು ಆಯ್ದುಕೊಂಡು ತಪಕ್ಕೆ ಕುಳಿತದ್ದು - ಸಂವಹನದಲ್ಲಿ ಸಹಕಾರಿಯಾಗಿರಲೆಂದು.

"ತಪೋಧ್ಯಾನ ಹೇಗೆ ನಡೆದಿದೆ ನರ..?" ಅತ್ತಕಡೆಯಿಂದ ಮೆಲುದನಿಯಲ್ಲಿ ಕೇಳಿಬಂತು ನಾರಾಯಣನ ಸ್ವರ.

" ಅದರ ಮಾತಿರಲಿ.. ಕದನದ ಮಾತಾಡು ನಾರಾಯಣ.. ಎಲ್ಲಾ ಸುಗಮವಾಗಿ ನಡೆದಿದೆಯಲ್ಲವೆ ?" ಮರುಪ್ರಶ್ನಿಸಿದ ನರ ತನ್ನೆಲ್ಲ ಪೂರ್ತಿ ಗಮನವನ್ನು ಈ ಸಂಭಾಷಣೆಯತ್ತ ವರ್ಗಾಯಿಸುತ್ತ.

ಈ ಪ್ರಕ್ರಿಯೆಯಲ್ಲಿಯೆ ಯುದ್ದ ಸಮಯದಲ್ಲಿ ಖರ್ಚಾದ ನಾರಾಯಣನ ಶಕ್ತಿಮೂಲವನ್ನು, ನರನ ತಪಃಶಕ್ತಿಯ ಮೂಲದ್ರವ್ಯದಿಂದ ಆಯ್ದುಕೊಂಡು ಮತ್ತಷ್ಟು ಚೇತರಿಕೆ ಪಡೆಯುವುದು, ಪರಸ್ಪರ ಅನುಕ್ರಮಣಿಕೆಯಲ್ಲಿ ಅವರಿಬ್ಬರೂ ನಡೆಸಿಕೊಂಡು ಬಂದ ಕ್ರಮ.

" ಕದನವೇನೊ ಯೋಜನೆಯಂತೆ ನಡೆದಿದೆ ಇದುವರೆವಿಗೆ... ಇನ್ನೇನು ಈ ಬಾರಿಯ ಕವಚ ಛೇಧನದಲ್ಲಿ ಯಶಸ್ವಿಯಾಗಿಬಿಟ್ಟರೆ ಮಿಕ್ಕುಳಿದುದು ಒಂದೆ ಒಂದು ಕವಚ - ನಿನ್ನ ಪಾಲಿನ ಕಡೆಯ ಕದನವದು... ಆದರೆ, ನನಗೇಕೊ ತುಸು ಏರುಪೇರಾದಂತೆ ಕಾಣುತ್ತಿದೆಯಲ್ಲ?"

ನರನ ಶಕ್ತಿಮೂಲಕ್ಕೆ ಕೈಹಾಕುತ್ತಿದ್ದಂತೆಯೆ ಅಲ್ಲೇನೋ ಅಚಾತುರ್ಯ ನಡೆದಿದೆಯೆಂದು ಗ್ರಹಿಸಿಬಿಟ್ಟಿತ್ತು ಸೂಕ್ಷ್ಮಗ್ರಾಹಿ ನಾರಾಯಣನ ಮನ..!

(ಇನ್ನೂ ಇದೆ)