ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ

ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ

ಚೈತ್ರ ಮಾಸ ಶುಕ್ಲಪಕ್ಷದ ತ್ರಯೋದಶಿಯಂದು ಬುವಿಯ ಬೆಳಕನ್ನು ಕಂಡ ಮಹಾವೀರನು ಜೈನ ಪರಂಪರೆಯವರು ಆರಾಧಿಸುವ ೨೪ನೆಯ ತೀರ್ಥಂಕರ.ಜೈನ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ನವವಸ್ತ್ರ ಧರಿಸಿ ಸಂಭ್ರಮಿಸುವರು. ತೀರ್ಥಂಕರರ ಜೊತೆ ಮಹಾವೀರರ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವುದೂ ಇದೆ. ಕ್ರಿ.ಪೂರ್ವ ೫೯೯ರಲ್ಲಿ ಬಿಹಾರದ ವೈಶಾಲಿ ಬಳಿಯ ಕುಂದ ಗ್ರಾಮದಲ್ಲಿ ತಾಯಿ ತ್ರಿಶಲಾದೇವಿ ತಂದೆ ಸಿದ್ದಾರ್ಥರಿಗೆ ಜನಿಸಿದ ಮಹಾ ವೀರರ ಬಾಲ್ಯಕಾಲದ ಹೆಸರು ವರ್ಧಮಾನ. ಯಶೋಧರಾ ಪತ್ನಿ. ಸಂಸಾರಿಯಾದರೂ ಜೈನ ತತ್ವಗಳಿಗೆ ಮಾರು ಹೋಗಿ, ಪ್ರಾಪಂಚಿಕ ವಿಷಯಾಸಕ್ತಿ ಇಲ್ಲದಾಯಿತು. ಮನೆಯನ್ನು ಬಿಟ್ಟು ೧೨ ವರುಷಗಳ ಕಾಲ ತಪವನ್ನಾಚರಿಸಿದರು. "ಕೈವಲ್ಯ ಜ್ಞಾನ"ತನ್ನದಾಗಿಸಿಕೊಂಡು, ಮಹಾವೀರರಾದರು. ಜೈನಮತ ಉಪದೇಶವನ್ನುಗೈದವರು.

"ಅಹಿಂಸಾತತ್ವದ ಪ್ರತಿಪಾದಕರು, ಹಿಂಸೆಯನ್ನು ಬಿಡಬೇಕು, ಆಸೆ ತ್ಯಜಿಸಬೇಕು, ದುರಾಸೆ ಯಾಕೆ? ತನ್ನ ಜೀವನಕ್ಕೆ ಬೇಕಾದಷ್ಟೇ ಸಂಪಾದಿಸಿ, ಖರ್ಚು ಮಾಡಬೇಕು, ಅಹಿಂಸಾಪಾಲನೆ ವ್ರತವಾಗಬೇಕು, ಸ್ವಯಂ ಮನಸ್ಸಿನ ನಿಯಂತ್ರಣವಿರಬೇಕು, ದ್ವೇಷ ಸಲ್ಲದು ಎಂದು ಬೋಧಿಸಿದರು. "ಆತ್ಮಶುದ್ಧಿಯಿರಲಿ."ಅಪರಿಗ್ರಹ ತತ್ವ "ನಾನು ನನ್ನದು ಬಿಟ್ಟುಬಿಡು, ವ್ಯಾಮೋಹ ತ್ಯಜಿಸು, ಅತಿಯಾದ ಮಮಕಾರ ಬದುಕಿಗೆ ಮಾರಕವೆಂದರು. ಶಾಂತಿ ಮತ್ತು ಸಾಮರಸ್ಯವನ್ನು ಅನುಸರಿಸಬೇಕು, ಸ್ವಯಂ ಆಚರಿಸಬೇಕು.

ಓರ್ವ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿ, ತನ್ನ ತತ್ವಗಳಿಂದ ಅನುಯಾಯಿಗಳನ್ನು ಸಂಪಾದಿಸಿದವರು. ಜನಕಲ್ಯಾಣ ಇವರ ಮನೋಭಿಲಾಷೆಯೂ, ಗುರಿಯೂ ಆಗಿತ್ತು. ಈ ದಿನ ಉಪವಾಸ, ಧ್ಯಾನ, ಪ್ರಾರ್ಥನೆ, ದೇವಾಲಯ ಭೇಟಿ ಮಾಡುವರು. ಜೈನಬಸದಿಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುವರು. ಜೈನರ ಆರಾಧ್ಯ ದೇವನಾದ ಭಗವಾನ್ ಮಹಾವೀರರು ಲೋಕಕ್ಕೆ ಒಳ್ಳೆಯದನ್ನು ಮಾಡಲಿ.

(ಸಂಗ್ರಹ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ