ಅಹಿಂಸೆಯ ಮೂಲ ಆಶಯವೇ ಹಿಂಸೆಯ ನಿಗ್ರಹ !

ಅಹಿಂಸೆಯ ಮೂಲ ಆಶಯವೇ ಹಿಂಸೆಯ ನಿಗ್ರಹ !

ಕೊಲ್ಲುವುದಾದರೆ ಕೊಂದು ಬಿಡಿ ನನ್ನನ್ನು, ನಾನು ನನಗೆ ತಿಳಿದ ಸತ್ಯವನ್ನು ಹೇಳಿಯೇ ತೀರುತ್ತೇನೆ. ದುಷ್ಟ ಗಲಭೆಕೋರರಿಗೆ ನೇರವಾಗಿ ಗುಂಡಿಕ್ಕಿ. ಹೌದು, ಬೈಬಲ್, ಖುರಾನ್, ಭಗವದ್ಗೀತೆ ಹೇಳಿದ ಶಾಂತಿ ಸಾಮರಸ್ಯದ ಮಂತ್ರದಂತೆ, ಬುದ್ದ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಅವರ ಆಶಯದಂತೆ, ಭಾರತದ ಸಂವಿಧಾನದ ಕರ್ತವ್ಯದಂತೆ ಯಾವುದೇ ಸಮಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ ಅಮಾಯಕರ ಜೀವಕ್ಕೆ ಅಪಾಯ ತರುವ ಸನ್ನಿವೇಶದಲ್ಲಿ ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೇ ಬೇಕು, ಅದು ಯಾರೇ ಯಾವ ‌ಧರ್ಮದವರೇ ಯಾವ ಜಾತಿಯವರೇ ಆಗಿದ್ದರು ಸಹ...

ಮನಸ್ಸಿಗೆ ಬಂದಂತೆ ಗಲಭೆ ಮಾಡಲು ಇದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ - ದೇವರುಗಳ ಧಾರ್ಮಿಕ ನಾಯಕರ ಅಪ್ಪನ ದೇಶವಲ್ಲ. ಭಾರತದ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಒಕ್ಕೂಟ - ಸರ್ವ ಧರ್ಮಗಳ ಸಮನ್ವಯದ ನಾಡು ಇದು. ಇಲ್ಲಿ ಕೇವಲ ಧಾರ್ಮಿಕ ಮತಾಂಧ ರಾಕ್ಷಸರು ಮಾತ್ರವಿಲ್ಲ, ನಮ್ಮಂತ - ನಿಮ್ಮಂತ ಸಹಜ ಮನುಷ್ಯರು ಇದ್ದೇವೆ. ಈ ದೇಶದ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಜವಾಬ್ದಾರಿ ಕೇವಲ ಓಟಿನ ರಾಜಕಾರಣಿಗಳದು ಮಾತ್ರವಲ್ಲ, ಎಲ್ಲಾ ಭಾರತೀಯ ಪ್ರಜೆಗಳಿಗು ಸೇರಿದ್ದು.

ನೆನಪಿಡಿ, ಬಾಬರಿ ಮಸೀದಿ ಕೆಡವಿದಾಗ ಇಲ್ಲಿನ ಬಹುಸಂಖ್ಯೆಯ ಜನ ಸಾಕಷ್ಟು ನೊಂದು ಕೊಂಡರು. ಇಲ್ಲಿನ ಕಾನೂನು ಅವರನ್ನು ವಿಚಾರಣೆಗೆ ಒಳಪಡಿಸಿತು. ಎನ್ ಆರ್ ಸಿ ಮತ್ತು ಸಿ ಎ ಎ ತಿದ್ದುಪಡಿ ಮಾಡಿದಾಗ ನಡೆದ ಪ್ರತಿಭಟನೆಗೆ ಸಾಕಷ್ಟು ಜನ ಬೆಂಬಲಿಸಿದರು. ಆದರೆ ಹುಬ್ಬಳ್ಳಿ, ಡಿ ಜೆ ಹಳ್ಳಿ ರೀತಿಯ  ಕ್ಷುಲ್ಲಕ ಕಾರಣಗಳಿಗಾಗಿ ನಡೆಯುವ ಹಿಂಸೆಯನ್ನು ಎಂದೂ ಸಹಿಸಬಾರದು. ನಮ್ಮ ನ್ಯಾಯದ ದಂಡ ಸದಾ ನೇರ ಮತ್ತು ಸಮಾನಾಂತರವಾಗಿರಬೇಕು. ಈ ಹಿಂಸೆಯನ್ನು ಮಾಡುವ ಯಾವುದೇ ಸಂಘಟನೆಯಾಗಿರಲಿ ಅದನ್ನು ನಿಷೇಧಿಸಬೇಕು. ಅದು ರೈತರದೇ ಆಗಿರಲಿ, ಮಹಿಳೆಯರದೇ ಆಗಿರಲಿ, ಕಾರ್ಮಿಕರದೇ ಆಗಿರಲಿ, ಹಿಂದುತ್ವದ ಹೋರಾಟವೇ ಆಗಿರಲಿ, ಮುಸ್ಲಿಮರದೇ ಆಗಿರಲಿ, ದಲಿತರದೇ ಆಗಿರಲಿ, ಕಾರ್ಮಿಕರದೇ ಆಗಿರಲಿ, ಭಾಷಾ ಸಂಘಟನೆಯೇ ಆಗಿರಲಿ, ವಿದ್ಯಾರ್ಥಿಗಳದೇ ಆಗಿರಲಿ ಯಾವ ಸಹಾನುಭೂತಿಯೂ ಇರಬಾರದು. 

ಪ್ರತಿಭಟನೆ ಮತ್ತು ಪ್ರದರ್ಶನಕ್ಕೆ ಯಾವ ವಿರೋಧವೂ ಇರಬಾರದು. ಆದರೆ ಹಿಂಸೆಗೆ ಮಾತ್ರ ಗುಂಡಿಕ್ಕಬೇಕು. ಯಾರೋ ಒಬ್ಬ ಹುಚ್ಚ ಉದ್ದೇಶಪೂರ್ವಕವಾಗಿ ಅಥವಾ ತಿಕ್ಕಲುತನದಿಂದ ಏನೋ ಒಂದು ಸಂದೇಶ ಹಾಕಿದ ಮಾತ್ರಕ್ಕೆ ಇಡೀ ಸಮೂಹ ಕೆರಳುವುದು ಅತಿರೇಕದ ಪರಮಾವಧಿ. ದೇವರನ್ನು ಮನುಷ್ಯ ರಕ್ಷಿಸಬೇಕಾದ ದುರ್ಗತಿ ಬಂದಿರುವುದಕ್ಕೆ ಎಲ್ಲಾ ದೇವರುಗಳ ಬಗ್ಗೆ ಅಯ್ಯೋ ಪಾಪ ಎನಿಸುತ್ತದೆ. ಇದು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ.

ಅಸ್ತಿತ್ವದಲ್ಲೇ ಇಲ್ಲದ ಕಾಲ್ಪನಿಕ ದೇವರುಗಳಿಗೆ ಕೊಡುವ ಮಹತ್ವ ತನ್ನ ಜೊತೆ ವಾಸಿಸುತ್ತಿರುವ ಮನುಷ್ಯನಿಗೆ ಕೊಡದ ಮೂರ್ಖರಾದೆವೇ ನಾವು. ಯಾವ ಅಲ್ಲಾ, ರಾಮ, ಜೀಸಸ್ ಕೂಡ ನಮಗೆ ಊಟ ಬಟ್ಟೆ ವಸತಿ ಕೊಡುವುದಿಲ್ಲ. ಪ್ರಾಕೃತಿಕ ಸಂಪನ್ಮೂಲಗಳು ಮುಖಾಂತರ ನಾವು ದುಡಿದು ನಾವು ತಿನ್ನಬೇಕು. ಅದಕ್ಕಾಗಿಯೇ ಹೇಳುವುದು, ಭಾರತೀಯರೇ, ದೇವರುಗಳು ಬಗ್ಗೆ ಚರ್ಚೆ ನಡೆದಾಗ, ದೇವರುಗಳ ಅಸ್ತಿತ್ವದ ಬಗ್ಗೆ ಯಾರಾದರೂ ಪ್ರಶ್ನಿಸಿದಾಗ ರಾಕ್ಷಸರಂತೆ ಅವರ ಮೇಲೆ ಮುಗಿ ಬೀಳಬೇಡಿ. ದೇವರಿಗೆ ಸ್ವತಃ ಆತನನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ. ಸಾಮಾನ್ಯರಾದ ನಾವೇಕೆ ದೇವರ ಪರ ಕಾಳಜಿ ವಹಿಸಿ ಮಾತನಾಡಬೇಕು. ದೇವರಿಗೇ ಇಲ್ಲದ ಉಸಾಬಾರಿ ನಮಗೇಕೆ?

ಇನ್ನು ಮುಂದೆಯೂ ಎಲ್ಲಾ ದೇವರುಗಳ ಬಗ್ಗೆ ಖಂಡಿತ ಜಿಜ್ಞಾಸೆಗಳು ನಡೆಯುತ್ತಲೇ ಇರುತ್ತದೆ‌ ಮತ್ತು ಇರಬೇಕು. ಸರಳವಾಗಿ ಹೇಳುವುದಾದರೆ, ಹಿಂದುಗಳಿಗೆ ಒಬ್ಬ, ಮುಸ್ಲಿಮರಿಗೆ ಒಬ್ಬ, ಕ್ರಿಶ್ಚಿಯನ್ನರಿಗೆ ಒಬ್ಬ ದೇವರಿದ್ದಾನೆ ಎಂಬ ನಂಬಿಕೆಯೇ ದೇವರಿಲ್ಲ ಎಂಬುದಕ್ಕೆ ಇರುವ ಪ್ರಬಲವಾದ ಸಾಕ್ಷಿ. ಧರ್ಮದ ಆಧಾರದಲ್ಲಿ ಬೇರೆ ಬೇರೆ ದೇವರಿದ್ದರೆ ಆತನನ್ನು ಎಲ್ಲರೂ ತಿರಸ್ಕರಿಸಿ. 

ನಿಮ್ಮ ಭಾವನೆ, ನಿಮ್ಮ ನಂಬಿಕೆ ಆಂತರಿಕವಾದದ್ದು. ಯಾರೋ ಒಬ್ಬ ಬಾಹ್ಯವಾಗಿ ಅದನ್ನು ಘಾಸಿಗೊಳಿಸಿದ ಮಾತ್ರಕ್ಕೆ ನೀವು ಉದ್ರೇಕಗೊಳ್ಳುವುದಾದರೆ ನಿಮ್ಮ ನಂಬಿಕೆಯ ವಿಶ್ವಾಸಾರ್ಹತೆ ಮತ್ತು ಗಟ್ಟಿತನವೇ ಪ್ರಶ್ನಾರ್ಹ. ತುಂಬಾ ಸೂಕ್ಷ್ಮವಾಗಿ ಯೋಚಿಸಿ. ಒಮ್ಮೆ ಒಬ್ಬ ನನಗೆ ಸೂ... ಮಗನೇ ಎಂದ. ನನಗೆ ಏನೂ ಅನಿಸಲಿಲ್ಲ. ಕಾರಣ ಆ ಪದ ಉಪಯೋಗಿಸಿದವನ ಯೋಗ್ಯತೆ ಮತ್ತು ನನ್ನ ತಾಯಿಯ ಮೇಲಿನ ನಂಬಿಕೆ ನನಗೆ ಬಲವಾಗಿತ್ತು.

ಹಳೆ ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆ ವಿವೇಚನಾ ರಹಿತವಾದುದು. ಅದರ ಸಮರ್ಥನೆ ಇನ್ನೂ ಅಪಾಯಕಾರಿ. ಸಾಮಾಜಿಕ ಜಾಲತಾಣದಲ್ಲಿ ದೇವರ ನಿಂದನೆ ಯಾರೋ ಕಿಡಿಗೇಡಿಯ ಕೆಲಸ. ಅದನ್ನು ಮುಸ್ಲಿಂ ಸಮುದಾಯ ಅರಿಯದೇ ಹೀಗೆ ಉದ್ರೇಕಕಾರಿಯಾಗಿ ವರ್ತಿಸುವುದು ತುಂಬಾ ಅಪಾಯಕಾರಿ. ತಮ್ಮ ಮೇಲೆ ಇರುವ ಗಲಭೆಕೋರರು ಎಂಬ ಆರೋಪಗಳನ್ನು ಅಲ್ಲಗಳೆಯ ಬೇಕಾದ ಸಂದರ್ಭದಲ್ಲಿ ಈ ರೀತಿಯ ಅದಕ್ಕೆ ಮತ್ತಷ್ಟು ಪುಷ್ಟಿ ಕೊಡುವಂತೆ ವರ್ತಿಸುವುದು ಸರಿಯಲ್ಲ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯ ಸಂದರ್ಭದಲ್ಲಿ ಹಿಂದೂಗಳಿಂದ ನಡೆದ ಸಾರ್ವಜನಿಕ ಗಲಭೆಯೂ ತಪ್ಪು.

ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧಿ ಹತ್ಯೆಯ ಸಂದರ್ಭದಲ್ಲಿ ನಡೆದ ಚಿತ್ಪಾವನ ಬ್ರಾಹ್ಮಣರ ಹತ್ಯೆಗಳಾಗಲಿ, ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಸಿಖ್ಖರ ಹತ್ಯೆಯಾಗಲಿ, ಕಾಶ್ಮೀರ ಪಂಡಿತರ ಹತ್ಯೆಗಳಾಗಲಿ, ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆದ ಹತ್ಯೆಗಳಾಗಲಿ, ದಲಿತರ ಮೇಲೆ ನಡೆಯುತ್ತಿರುವ ಅಸಂಖ್ಯಾತ ಹತ್ಯೆಗಳಾಗಲಿ ಯಾವುದು, ಯಾವ‌ ದೃಷ್ಟಿಕೋನದಿಂದಲೂ ಸಮರ್ಥನೀಯವಲ್ಲ. ಕಾಲ್ಪನಿಕ ದೇವರುಗಳು ಒಂದು ನಂಬಿಕೆಯೇ ಹೊರತು ವಾಸ್ತವವಲ್ಲ. ಹಾಗೆಯೇ ಪ್ರತಿಮೆಗಳು ಒಂದು ಸಾಂಕೇತಿಕವೇ ಹೊರತು ಜೀವಂತ ಮನುಷ್ಯರಲ್ಲ. ಯಾವನೋ ಒಬ್ಬ ತಲೆತಿರುಕ ಅಂಬೇಡ್ಕರ್ ಗಾಂಧಿ ಬಸವಣ್ಣ ಮುಂತಾದವರ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದರೆ ರಾಜ್ಯ ಹೊತ್ತಿ ಉರಿಯುತ್ತದೆ.

ಇನ್ಯಾವನೋ ಒಬ್ಬ ಮತಾಂಧ ಹಸುವಿನ ತಲೆ ತಂದು ದೇವಸ್ಥಾನದ ಬಳಿ ಎಸೆದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ. ಮತ್ಯಾವನೋ ಒಬ್ಬ ಧರ್ಮಾಂಧ ಹಂದಿಯ ಮಾಂಸವನ್ನು ಮಸೀದಿಯ ಬಳಿ ಎಸೆದರೆ ರಾಜ್ಯ ಕೋಮುದಳ್ಳುರಿಯಲ್ಲಿ ಬೇಯುತ್ತದೆ. ಅದ್ಯಾವನೋ ಮೀರ್ ಸಾದಕ ಪಾಕಿಸ್ತಾನ್ ಜಿಂದಾಬಾದ್ ಎಂದರೆ ರಾಜ್ಯದಲ್ಲಿ ಪ್ರತಿಭಟನೆ ಮುಷ್ಕರಗಳಾಗುತ್ತವೆ. ಕುಡುಕನೊಬ್ಬನ್ಯಾರೋ ಭಾರತಕ್ಕೆ ದಿಕ್ಕಾರ ಎಂದರೆ ಸೋಷಿಯಲ್ ಮೀಡಿಯಾಗಳು ಘರ್ಜಿಸುತ್ತವೆ. ವಿಕೃತನೊಬ್ಬನ ಫೇಕ್ ಪೋಟೋಷಾಪ್ ಗೆ ಜನಸಮೂಹ ಹುಚ್ಚರಂತೆ ಪ್ರತಿಕ್ರಿಯಿಸುತ್ತದೆ. ಏನು ಇದೆಲ್ಲಾ, ? ನಾವೆಲ್ಲ ಯಾವ ವ್ಯವಸ್ಥೆಯಲ್ಲಿ ಇದ್ದೇವೆ ?

ಕೇವಲ 4-5 ಜನರ ದುಷ್ಟ ಶಕ್ತಿ ಕೋಟ್ಯಂತರ ಜನರ ಭಾವನೆ ಕೆರಳಿಸಿ ರೊಚ್ಚಿಗೆಬ್ಬಿಸುತ್ತದೆ ಎಂದರೆ ನಮ್ಮ ಮಾನಸಿಕ ಸ್ಥಿತಿಗತಿಯ ಬಗ್ಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ನಂಬಿಕೆ ಭಕ್ತಿ ಭಾವನೆಗಳು ಕೆಟ್ಟ ಕೊಳಕ ಮನಸ್ಥಿತಿಯವರ ಪ್ರತಿಕ್ರಿಯೆಯಿಂದ ಉದ್ವೇಗಗೊಳ್ಳುತ್ತದೆ ಎಂದರೆ ಅದು ನಮ್ಮ ಅರಿವಿನ ಆಳದ ಡಾಂಬಿಕತನ ಎಂದೆನಿಸುವುದಿಲ್ಲವೆ ?

ಕೆಲವೇ ಜನರ ಕಿಡಿಗೇಡಿ ಕೃತ್ಯಗಳನ್ನು ಪೋಲಿಸ್ ವ್ಯವಸ್ಥೆಗೆ ಒಪ್ಪಿಸಿ ಅದೊಂದು ಕ್ರಿಮಿನಲ್ ಅಪರಾಧ ಎಂದು ಕಾನೂನಿನ ತೆಕ್ಕೆಗೆ ನೀಡಿ ಅದನ್ನು ನಿರ್ಲಕ್ಷಿಸದೆ ಸಿನಿಕತನದಿಂದ ವರ್ತಿಸಿ ಅನೇಕ ಅಮಾಯಕ ಬಡಜನರ ಸಾವುನೋವುಗಳಿಗೆ, ಅಪಾರ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗುವ ನಮ್ಮ ಸಾಮಾಜಿಕ ವ್ಯವಸ್ಥೆ ಅದು ಹೇಗೆ ನಾಗರಿಕ ಸಮಾಜ ಎಂದೆನಿಸಿಕೊಳ್ಳುತ್ತದೆ. ಕೇವಲ ಲಕ್ಷಕ್ಕೊಬ್ಬರ ಮನೆಮುರುಕತನ ಉಳಿದೆಲ್ಲ ಜನರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮಗಳ ತಿಳಿವಳಿಕೆಯ ಗಟ್ಟಿತನವನ್ನು ಪ್ರಶ್ನೆಮಾಡಿಕೊಳ್ಳಲೇ ಬೇಕು. ಇದು ಸಾಮಾಜಿಕ ಸಮಸ್ಯೆಯೋ, ರಾಜಕೀಯ ಸಮಸ್ಯೆಯೋ, ಆರ್ಥಿಕ ಸಮಸ್ಯೆಯೋ ಅಥವಾ ನಮ್ಮಗಳ ಮಾನಸಿಕ ಸಮಸ್ಯೆಯೋ ಅರ್ಥವಾಗುತ್ತಿಲ್ಲ. ಕನಿಷ್ಠ ನಾವುಗಳಾದರೂ ಈ ದುಷ್ಟಕೂಟದ ಸಂಚಿಗೆ ಬಲಿಯಾಗದೆ ಪ್ರಬುದ್ಧತೆಯೆಡಗೆ ಹೆಜ್ಜೆ ಇಡೋಣ. ನಮ್ಮ ಮಕ್ಕಳ ಕಾಲಕ್ಕಾದರೂ ನೆಮ್ಮದಿಯ ಶಾಂತಿಯುತ ಸಮಾಜ ಕಟ್ಟೋಣ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ