ಅಹ್ಮದಾಬಾದ್ ವಿಮಾನ ದುರಂತ : ಸುರಕ್ಷೆಗಿರಲಿ ಜಾಗತಿಕ ಆದ್ಯತೆ

ಗುರುವಾರ ಅಪರಾಹ್ನ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಹೃದಯ ವಿದ್ರಾವಕ ಮತ್ತು ತೀರಾ ಆಘಾತಕಾರಿ ಘಟನೆ. ಈ ದುರ್ಘಟನೆ ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಜನರಲ್ಲಿ ದಿಗ್ಧಮೆ ಮೂಡಿಸಿದ್ದೇ ಅಲ್ಲದೆ ಆತಂಕಕ್ಕೀಡು ಮಾಡಿದೆ. ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಕ್ಕೀಡಾಗಿರುವುದು ತೀರಾ ಕಳವಳಕಾರಿ ಬೆಳವಣಿಗೆ - ಭಾರತೀಯ ವಿಮಾನಯಾನ ಚರಿತ್ರೆಯ ಒಂದು ಕರಾಳ ಅಧ್ಯಾಯ. ಇದೇ ವೇಳೆ ವಿಮಾನಯಾನದ ಸುರಕ್ಷೆಯ ಕುರಿತಂತೆ ಮತ್ತೊಮ್ಮೆ ವಿಶ್ವವ್ಯಾಪಿಯಾಗಿ ಪ್ರಶ್ನೆಗಳು ಎದ್ದಿದ್ದು ಈ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.
ಗುಜರಾತ್ ನ ಅಹದಾಬಾದ್‌ನಿಂದ ಲಂಡನ್‌ನತ್ತ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾದ ಎಐ-171 ವಿಮಾನವು ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅನತಿ ದೂರದಲ್ಲಿ ಪತನಕ್ಕೀಡಾಗಿ ಸ್ಥಳೀಯ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದು ಸಂಪೂರ್ಣ ಸುಟ್ಟು ಕರಕಲಾಯಿತು. ಈ ಭೀಕರ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಬಹುತೇಕರು ಸಾವಿಗೀಡಾದದ್ದೇ ಅಲ್ಲದೆ ವಿಮಾನ ಪತನಕ್ಕೀಡಾದ ಹಾಸ್ಟೆಲ್ ಕಟ್ಟಡದಲ್ಲಿದ್ದ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ರೆಸಿಡೆಂಟ್ ವೈದ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ದುರಂತ ನಡೆದ ಕೆಲವೇ ನಿಮಿಷಗಳಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ದುರ್ಘಟನೆಯ ದೃಶ್ಯಾವಳಿಗಳು ಇಡೀ ದೇಶದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಬೋಯಿಂಗ್ 787-8 ಗ್ರೀಮ್ ಲೈನರ್ ದುರಂತಕ್ಕೀಡಾದ ನತದೃಷ್ಟ ವಿಮಾನವಾಗಿದೆ. ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಪೈಲಟ್ ತುರ್ತು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ ತತ್ ಕ್ಷಣವೇ ವಿಮಾನ ಪತನಕ್ಕೀಡಾಗಿದೆ. ವಿಮಾನವು ಟೇಕಾಫ್ ಆದ ಸಂದರ್ಭದಲ್ಲಿ ನಿಗದಿತ ವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದು ಹೀಗಾಗಿ ತಾಂತ್ರಿಕ ದೋಷದಿಂದಾಗಿಯೇ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ವಿಮಾನಯಾನ ತಜ್ಞರು ವಿಶ್ಲೇಷಿಸಿದ್ದಾರೆ. ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್ ಬಾಕ್ಸ್ ಲಭಿಸಿದಾಗ ದುರಂತದ ನಿಖರ ಕಾರಣವನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ.
ಅತಿವೇಗದ ಸಾರಿಗೆ ವ್ಯವಸ್ಥೆಯಾಗಿರುವ ವಿಮಾನಯಾನ ಕ್ಷೇತ್ರ ಇತ್ತೀಚಿನ ದಶಕಗಳಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ದೇಶೀಯ ಸಾರಿಗೆ ವ್ಯವಸ್ಥೆಯಲ್ಲೂ ವಿಮಾನಯಾನ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತಿದೆ. ಇಂತಹ ಸ್ಥಿತಿಯಲ್ಲಿ ವಿಮಾನಯಾನಿಗಳ ಸುರಕ್ಷೆಯ ಬಗೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಇಂದಿನ ದುರಂತ ಸಾರಿ ಹೇಳಿದೆ. ಅರೆಕ್ಷಣದ ನಿರ್ಲಕ್ಷ್ಯ, ಸಣ್ಣ ತಾಂತ್ರಿಕ ದೋಷ ಕೂಡ ಬಲುದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದು ಪ್ರತಿಯೊಂದು ವಿಮಾನ ದುರಂತ ಸಂಭವಿಸಿದಾಗಲೂ ಸಾಬೀತಾಗಿದೆ. ಇಂತಹ ದುರಂತ ಸಂಭವಿಸಿದಾಗಲೆಲ್ಲ ಯಾನಿಗಳ ಸುರಕ್ಷೆಯ ಬಗೆಗೆ ಒಂದಿಷ್ಟು ಚರ್ಚೆ, ಪರ್ಯಾಯ ಮಾರ್ಗೋಪಾಯಗಳ ಬಗೆಗೆ ಚಿಂತನ-ಮಂಥನ ನಡೆದು ಒಂದಿಷ್ಟು ಉಪಕ್ರಮಗಳನ್ನು ಕೈಗೊಂಡರೂ ವಿಮಾನ ದುರಂತಗಳಿಗೆ ಕಡಿವಾಣ ಹಾಕುವಲ್ಲಿ ಇವು ಪರ್ಯಾಪ್ತವಾಗಿಲ್ಲ ಎಂಬುದಕ್ಕೆ ಪದೇಪದೆ ನಡೆಯುತ್ತಿರುವ ದುರಂತಗಳೇ ಸಾಕ್ಷಿ
ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿಮಾನಯಾನದ ಸುರಕ್ಷೆಯನ್ನು ಶತ ಪ್ರತಿಶತ ಖಾತರಿಪಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಚರ್ಚೆ ನಡೆದು ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವ ಅಗತ್ಯವಿದೆ. ವಿಮಾನ ತಯಾರಕ ಸಂಸ್ಥೆಗಳು, ನಿರ್ವಹಣ ಸಂಸ್ಥೆಗಳು, ಆಯಾಯ ದೇಶಗಳ ವಿಮಾನಯಾನ ನಿರ್ದೇಶನಾಲ ಯಗಳು ಇತ್ತ ಆದ್ಯತೆಯ ಗಮನ ಹರಿಸಬೇಕಿರುವುದು ಈಗಿನ ತುರ್ತು. ಇಲ್ಲವಾದಲ್ಲಿ ಇಂತಹ ದುರಂತಗಳು ಇಡೀ ವಿಮಾನಯಾನ ಕ್ಷೇತ್ರಕ್ಕೆ ಬಲುದೊಡ್ಡ ಕಳಂಕವಾಗಿ ಪರಿಣಮಿಸಲಿದ್ದು ಅದರ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೩-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ