ಅ ಹದಿಮೂರು ದಿನಗಳು

ಅ ಹದಿಮೂರು ದಿನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸುಧೀರ ಸಾಗರ
ಪ್ರಕಾಶಕರು
ವಟಿಕುಟೀರ ಟ್ರಸ್ಟ್, ನಾಗರಬಾವಿ, ಬೆಂಗಳೂರು. ದೂ.೯೮೮೦೬೯೫೬೫೯
ಪುಸ್ತಕದ ಬೆಲೆ
ರೂ.೧೧೦.೦೦ , ಮುದ್ರಣ: ಡಿಸೆಂಬರ್ ೨೦೨೧

೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ ವಿದೇಶಿ ಸೈನಿಕರ ಜೊತೆ ಹೋರಾಡುವುದಿದೆಯಲ್ಲ ಅದಕ್ಕೆ ಎಂಟೆದೆಯ ಗುಂಡಿಗೆ ಬೇಕು. ಬಾಂಗ್ಲಾ ದೇಶದ ವಿಮೋಚನಾ ಯುದ್ಧದ ಕಥೆಯನ್ನು ಈ ಕೃತಿಯಲ್ಲಿ ಮಾಹಿತಿಪೂರ್ಣವಾಗಿ, ಸೊಗಸಾಗಿ ವರ್ಣಿಸಿದ್ದಾರೆ.

ಪುಸ್ತಕವನ್ನು ಬರೆಯಲು ಕಾರಣವಾದ ಅಂಶಗಳ ಬಗ್ಗೆ ತಮ್ಮ ನುಡಿಯಲ್ಲಿ ಲೇಖಕರು ಬರೆಯುವುದು ಹೀಗೆ “ಐದಾರು ವರ್ಷಗಳಿಂದ ಬಹಳಷ್ಟು ಬಾರಿ ಅತ್ಯಾಪ್ತ ಬಳಗದಲ್ಲಿರೋ ಆತ್ಮೀಯರ ಇನ್ನಿಲ್ಲದ ಒತ್ತಾಯದ ಬಳಿಕವೂ ಒಂದಿಷ್ಟು ಮಣಿಯದೆ, ಪುಸ್ತಕವೊಂದನ್ನು ಬರೆಯುವ ಕೆಲಸಕ್ಕೆ ‘ನಾಳೆ ಬಾ’ ಎಂಬ ನೆಪ ಹೇಳುತ್ತಾ ಬಂದವನು, ಕೆಲವೊಮ್ಮೆ ಬರೆದೇ ಬಿಡುವ ಎಂಬ ಹುಮ್ಮಸ್ಸಿನಿಂದಲೇ ಕೈಗೆತ್ತಿಕೊಂಡರೂ, ಶುರುಮಾಡಿ ಅರ್ಧಕ್ಕೇ ಎತ್ತಿಟ್ಟ ಬಹಳಷ್ಟು ಉದಾಹರಣೆಗಳು ನನ್ನಲ್ಲಿರುವಾಗ, ನವೆಂಬರ್ (೨೦೨೧) ಎರಡನೇ ತಾರೀಖಿನ ಮಧ್ಯಾಹ್ನ ಕರೆ ಮಾಡಿ, ತುರ್ತಾಗಿ ಪುಸ್ತಕ ಬರೆದುಕೊಡಬೇಕಾಗಿದೆ, ಅದೂ ಎರಡೇ ದಿನಗಳಲ್ಲಿ ಪೂರ್ಣವಾಗಿ ಮೂರನೇ ದಿನ ಪ್ರಿಂಟಿಂಗಿಗೂ ಹೋಗಬೇಕಿದೆ ಎಂದು ಕಿರಣ್ ವಟಿ ಹೇಳಿದಾಗ್ಯೂ ಏನೊಂದೂ ಮಾತನಾಡದೇ, ಒಂದೇ ಒಂದು ಮರು ಪ್ರಶ್ನೆಯನ್ನೂ ಕೇಳದೆ, ನಾಳೆಯಿಂದಲೇ ದೀಪಾವಳಿ ಹಬ್ಬವಿದೆ ಎಂಬುದು ಗೊತ್ತಿದ್ದೂ ಒಂದೇ ಕ್ಷಣ ಮಾಡೋಣ ಬಿಡಿ ಎಂದು ಹೇಳಿದ್ದಕ್ಕೂ ಕೂಡಾ ಪುಸ್ತಕ ಬರೆಯಬೇಕಿರೋದು ೧೯೭೧ರ ಭಾರತ ಪಾಕಿಸ್ತಾನದ ಯುದ್ಧದ ಕುರಿತಾಗಿ ಎಂಬುದೇ ಮುಖ್ಯ ಕಾರಣವಾಗಿತ್ತು.

ಯಾಕೆಂದರೆ ಅಂದು ಭಾರತೀಯ ಸೈನಿಕರು ಕೇವಲ ಯುದ್ಧವೊಂದನ್ನು ಮಾತ್ರ ಗೆದ್ದು ಕೊಟ್ಟಿರಲಿಲ್ಲ. ಯುದ್ಧದ ಜೊತೆಜೊತೆಗೇ, ದಶಕಗಳಿಂದ ಕಳೆದುಕೊಂಡಿದ್ದ ಘನತೆ ಆತ್ಮಗೌರವಗಳನ್ನೂ ಗೆದ್ದು ಕೊಟ್ಟಿದ್ದರು. ತಮ್ಮ ಅಪ್ರತಿಮ ಶೌರ್ಯ ಸಾಹಸಗಳ ಮುಖಾಂತರ ಭಾರತ ಮಾತೆ ಜಗತ್ತಿನೆದುರು ಧೈರ್ಯವಾಗಿ ತಲೆಯೆತ್ತಿ ನಮ್ಮಿಂದ ಇದೂ ಸಾಧ್ಯ ಎಂದು ಸಾರಿ ಹೇಳುವಂತೆ ಮಾಡಿಬಿಟ್ಟಿದ್ದರು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಸ್ವಾತಂತ್ರ್ಯಾ ನಂತರದಲ್ಲಿ ಹಲವಾರು ಬಾರಿ ಅದೆಷ್ಟೋ ಸೈನಿಕರ ಬಲಿದಾನಗಳ ಪ್ರತಿಫಲವಾಗಿ ಗೆಲುವಿನ ಸಮೀಪಕ್ಕೆ ಹೋಗಿಯೂ ಕೂಡಾ ಇನ್ಯಾವುದೋ ಹಿತಾಸಕ್ತಿಗಳ ದಾಳಕ್ಕೆ ಸಿಕ್ಕು ವಿರಾಮ ಹಾಡಿದ್ದೆವು. ಚೀನಾದೆದುರು ನಮ್ಮದಲ್ಲದ ಮತ್ಯಾರದ್ದೋ ತಪ್ಪಿನಿಂದಾಗಿ ಹೀನಾಯ ಸೋಲು ಅನುಭವಿಸಿದ್ದೆವು. ಅದೆಲ್ಲಾ ನೋವು ಹತಾಶೆಗಳು ಮಡುಗಟ್ಟಿ ಭಾರತೀಯರ ಮನದೊಳಗೇ ಮೋಡಕಟ್ಟಿ ಕೂತು ಬಿಟ್ಟಿತ್ತಲ್ಲ. ಅದನ್ನೆಲ್ಲಾ ಕರಗಿಸಿ ಕುಂಬಧ್ರೋಣ ಮಳೆಯಾಗುವಂತೆ ಮಾಡಿದ್ದು ಈ ಯುದ್ಧ. ಅದೂ ಸಾಮಾನ್ಯ ಗೆಲುವಾಗಿರಲಿಲ್ಲ ಇದು.”

ಸಾಕ್ಷೀ ಟ್ರಸ್ಟ್, ಬೆಂಗಳೂರು ಇದರ ಡಾ. ರ.ವಿ.ಜಹಾಗೀರದಾರ ಅವರು ಮುನ್ನುಡಿಯಲ್ಲಿ ಬರೆಯುತ್ತಾ “ಒಂದು ಪುಸ್ತಕದ ಆತ್ಮ ಅದರಲ್ಲಿರುವ ಮಾಹಿತಿ. ಆದರೆ ಪುಸ್ತಕದ ಹೃದಯವೆಂದರೆ ವಿಷಯ ನಿರೂಪಣೆ. ಹೃದಯ ಬಡಿತವೇ ಜೀವಂತಿಕೆಯ ಲಕ್ಷಣ. ಅಂತೆಯೇ ನಿರೂಪಣಾ ಶೈಲಿ ಒಂದು ಪುಸ್ತಕವನ್ನು ಜೀವಂತವಾಗಿರಿಸುವುದು, ಅದನ್ನು ಗೆಲ್ಲಿಸುವುದು ಈ ಪುಸ್ತಕ ಒಂದು ಯುದ್ಧದ ಘಟನೆಯನ್ನು ಚಿತ್ರವತ್ತಾಗಿ ನಮ್ಮ ಮುಂದೆ ಇರಿಸುತ್ತದೆ. ಅತಿಶಯೋಕ್ತಿಗೆ ಮರುಳಾಗದೆ ಸೂಕ್ತ ಶಬ್ಧಗಳ ಕೊರತೆಗೂ ಈಡಾಗದೆ ಸಮತೋಲನವಾಗಿ ವರ್ಣಿಸಿರುವುದು ಇಲ್ಲಿನ ವಿಶೇಷ.” ಎಂದಿದ್ದಾರೆ. ಪ್ರಕಾಶಕರಾದ ಕಿರಣ ವಟಿ ಇವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ಪುಸ್ತಕವನ್ನು ೧೮ ಅಧ್ಯಾಯಗಳಾಗಿ ವಿಂಗಡಿಸಿರುವುದರಿಂದ ಓದಲು ಸುಲಭವಾಗಿದೆ. ಸೂಕ್ತವಾದ ಛಾಯಚಿತ್ರಗಳನ್ನೂ ನೀಡಿರುವುದು ಪುಸ್ತಕದ ಹೈಲೈಟ್ ಎನ್ನಬಹುದು. ಪುಸ್ತಕದ ಕೊನೆಯ ಅಧ್ಯಾಯವಾದ ‘ಮಹಾವೀರರು’ ಇದರಲ್ಲಿ ಅಂದಿನ ಯುದ್ಧದಲ್ಲಿ ಪಾಲ್ಗೊಂಡು ವಿಜಯಕ್ಕೆ ಕಾರಣರಾದ ಹಲವಾರು ಯೋಧರ ವಿವರಗಳನ್ನು ಚುಟುಕಾಗಿ ನೀಡಿದ್ದಾರೆ. ಇದರಿಂದಾಗಿ ಆ ಯೋಧರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ದೊರೆತಂತಾಗಿದೆ.  ೧೦೪ ಪುಟಗಳ ಈ ಪುಟ್ಟ ಪುಸ್ತಕವನ್ನು ಒಂದೇ ಏಟಿಗೆ ಓದಿ ಮುಗಿಸಲು ಸಾಧ್ಯ. ಈ ಪುಸ್ತಕವನ್ನು ಲೇಖಕರಾದ ಸುಧೀರ ಸಾಗರ ಇವರು ತಮ್ಮ ಅಮ್ಮ ಮಾಧವಿ ಹಾಗೂ ಪತ್ನಿ ಸುಧಾರಿಗೆ ಅರ್ಪಿಸಿದ್ದಾರೆ.