ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?
ಎಲ್ಲರೂ ಒಮ್ಮೆ ಇಂದಿನ ಕನ್ನಡಪ್ರಭ (ಪುಟ-೭) ನೋಡಿ. ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಹೋರಾಟಕ್ಕೆ ಇಳಿದಿರುವ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿಯವರ ಸಂದರ್ಶನವಿದೆ. ಈ ಹೋರಾಟದ ನೇತೃತ್ವ ಇವರದ್ದೇ. ಅಂದರೆ ಉಳಿದ ಸಾಹಿತಿಗಳನ್ನು, ಕನ್ನಡ ಹೋರಾಟಗಾರರನ್ನು ಸೇರಿಸಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೋರಾಟಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಆಮರಾಣಾಂತ ಉಪವಾಸ ಮಾಡುತ್ತಾರಂತೆ!
ಸರಿ ಇವರ ಕನ್ನಡ ಕಾಳಜಿ ಮತ್ತು ಹೋರಾಟವನ್ನು ಮೆಚ್ಚೋಣ. ಆದರೆ ಸಂದರ್ಶನದಲ್ಲಿ ಇವರೇ ಬಾಯಿ ಬಿಟ್ಟಿರುವಂತೆ ಇವರ ಇಬ್ಬರು ಮಕ್ಕಳು ಓದಿದ್ದು ಒಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ!! ಅದಕ್ಕೆ ಇವರು ನೀಡಿರುವ ಕಾರಣ "ನಗರದಲ್ಲಿ ಸುಸಜ್ಜಿತ ಕನ್ನಡ ಮಾಧ್ಯಮ ಶಾಲೆಗಳು ಇಲ್ಲದ್ದರಿಂದ ಹಾಗೆ ಮಾಡಬೇಕಾಯ್ತಂತೆ!" ಎಂಥಹಾ ಕುಚೋಧ್ಯ ನೋಡಿ. ಅಲ್ಲಾ, ಇವರು ಯಾರ ಕಿವಿ ಮೇಲೆ ಹೂವಿಡಲು ಹೊರಟಿದ್ದಾರೆ ? ನಗರದಲ್ಲಿ ಸುಸಜ್ಜಿತ ಕನ್ನಡ ಶಾಲೆ ಸಿಗಲಿಲ್ಲ ಅಂತ ಇವರು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರು. ಅಂದರೆ ಇವರ ಪ್ರಕಾರ ಹಳ್ಳಿಗಳ ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿವೆಯೇ ? ಇವರು ಯಾವುದಾದರೂ ಉತ್ತರ ಕರ್ನಾಟಕದ ಹಳ್ಳಿಯ ಶಾಲೆಯನ್ನು ನೋಡಿದ್ದಾರಾ ? ಇದನ್ನು ಯಾರೂ ಪ್ರಶ್ನಿಸಬಾರದಂತೆ. "ಸಾರ್ವತ್ರಿಕ ವಿಷಯವನ್ನು ಆ ರೀತಿ ವೈಯಕ್ತಿಕವಾಗಿ ನೋಡಬಾರದು" ಎಂಬ ಫಾರ್ಮಾನು ಬೇರೆ. ಇವರ ಮಕ್ಕಳದ್ದು ವೈಯಕ್ತಿಕ ವಿಷಯ. ಹಳ್ಳಿಯ ಬಡ ಮಕ್ಕಳದ್ದು ಸಾರ್ವತ್ರಿಕ ವಿಷಯ! ಹೇಗಿದೆ ನೋಡಿ ಇವರ ಹೋರಾಟದ ಪರಿ!
ಇದು ಹಾಲಂಬಿಯೊಬ್ಬರ ಕಥೆಯಲ್ಲ, ಬಹುತೇಕ ಎಲ್ಲಾ ಸಾಹಿತಿಗಳ ಒಳ ಹೂರಣವೂ ಇದೇನೆ. ಇನ್ನೊಬ್ಬರು ಪ್ರಸಿದ್ಧ ಸಾಹಿತಿ ಒಮ್ಮೆ ಕನ್ನಡಿಗರನ್ನೇ ತರ್ಲೆಗಳು ಅಂದರು. ಹಾಗೂ ಸಂಸ್ಕೃತ ಮಾಧ್ಯಮ ಬರಬೇಕು, ಸಂಸ್ಕೃತ ವಿದ್ಯಾಲಯ ಆಗಬೇಕು. ಕನ್ನಡವನ್ನು ಸರಿಯಾಗಿ ಮಾತಾಡಲು ಸಂಸ್ಕೃತ ಕಲಿಯಬೇಕು ಎಂದೆಲ್ಲಾ ತಮ್ಮ ಪಾಂಡಿತ್ಯ ಹೇರಿದ್ದರು. ಅವರಿಂದು "ಆಂಗ್ಲ ಮಾಧ್ಯಮ ಬೇಡ" ಎಂದು ಮತ್ತೆ ಬಡ ಮಕ್ಕಳಿಂದ ಆಂಗ್ಲವನ್ನು ದೂರವಿಡುವ ಕಾರ್ಯ ಮಾಡುತ್ತಿದ್ದಾರೆ. ಹಿಂದೆ ರಾಜಾಜಿಯವರು "ಕನ್ನಡವು ತೆಲುಗಿನಿಂದ ಆಂಗ್ಲರು ತಿರುಚಿದ ಭಾಷೆ" ಎಂದು ಹೇಳಿದಾಗ ಅದನ್ನೂ ಅಂದಿನ ಇಬ್ಬರು ಪ್ರಮುಖ ಸಾಹಿತಿಗಳು ಹೌದು ಎಂದು ಒಪ್ಪಿಕೊಂಡಿದ್ದರಂತೆ. ಅಂದರೆ ಇವರ ಸಾಹಿತ್ಯಕ್ಕೂ ಮನೋಭಾವಕ್ಕೂ ವ್ಯತ್ಯಾಸವಿರುತ್ತೆ ಅನ್ನೋದು ಅಂದಿನಿಂದಲೂ ಇರುವ ವಿಷಯವೇ.
ಇಲ್ಲಿ ನಡೆದಿರುವುದಿಷ್ಟು... ಹಾಲಂಬಿಯವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುತ್ತಿರುವಂತೆಯೇ ಸೋತ ಚಂಪಾ ಇವರನ್ನು ಕಿಚಾಯಿಸಿದರು. ಇದರಿಂದ ಏನಾದರೂ ಮಾಡಿ ಚಮಪಾರಿಗೆ ಒಂದು ಟಾಂಗ್ ಕೊಟ್ಟು "ನನ್ನ ಶಕ್ತಿ ಹೀಗಿದೆ ನೋಡಿ" ಎಂದು ತೋರಿಸಲು ಕಾದಿದ್ದವರಿಗೆ ತಕ್ಷಣವೇ ಕಂಡಿದ್ದು ಸರ್ಕಾರಿ ಆಂಗ್ಲ ಮಾಧ್ಯಮದ ಆದೇಶ. ಹಿಂದು ಮುಂದು ಯೋಚಿಸದೇ ಈ ಹೋರಾಟಕ್ಕೆ ಕೈ ಹಾಕಿದ್ದಾರೆ.
ಆದರೆ ಹಾಲಂಬಿಯವರೇ ನಿಮ್ಮ ಅರ್ಥವಿಲ್ಲದ ಈ ಹೋರಾಟವ್ನನು ಕೈಬಿಡಿ. ನಿಮ್ಮ ಬಿಟ್ಟಿ ಪ್ರಚಾರಕ್ಕಾಗಿ ಬಡತನದೊಂದಿಗೆ ಆಟವಾಡಬೇಡಿ. ಬಡ ಮಕ್ಕಳೂ ಅಷ್ಟಿಷ್ಟು ಆಂಗ್ಲ ಕಲಿತು ( ಅವರೇನೂ ಕನ್ನಡ ಮರೆತು ಆಂಗ್ಲ ಕಲಿಯುತ್ತಿಲ್ಲ, ಐದನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿರುತ್ತಾರೆ) ಸಾಮರ್ಥ್ಯಾನುಸಾರ ಕೆಲಸ ಗಿಟ್ಟಿಸಲಿ. ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಲು ಏನು ಮಾಡಬೇಕು ಅನ್ನುವುದನ್ನು ಸಾಹಿತಿಗಳನ್ನೆಲ್ಲಾ ಕೂರಿಸಿಕೊಂಡು ಮಾತನಾಡಿ. ಅದಕ್ಕೆ ಬೇಕಾದ ಹೋರಾಟ ರೂಪಿಸಿ. ಅದು ಬಿಟ್ಟು ಈ ರೀತಿ ಕನ್ನಡ ಉಳಿಸುವ ಬರದಲ್ಲಿ ಬಡ ಮಕ್ಕಳಿಗೆ ದ್ರೋಹ ಮಾಡಬೇಡಿ.
Comments
ಉ: ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?
In reply to ಉ: ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ? by venkatb83
ಉ: ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?
ಉ: ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?