ಆಂತರಿಕ ಭದ್ರತೆಗೆ ಮಾರಕ

ಆಂತರಿಕ ಭದ್ರತೆಗೆ ಮಾರಕ

ಖಲಿಸ್ತಾನಿ ಭಯೋತ್ಪಾದಕರು ದೇಶದ ಆಂತರಿಕ ಭದ್ರತೆಗೆ ಹೊಸ ಸವಾಲಾಗಿ ಪರಿಣಮಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪಂಜಾಬಿನ ಗುರುದಾಸಪುರ್ ದಲ್ಲಿ ಪೋಲೀಸರ ಮೇಲೆಯೇ ಗ್ರೆನೇಡ್ ಎಸೆದ ಪ್ರಕರಣದಲ್ಲಿ ಈ ಉಗ್ರರ ಎನ್ ಕೌಂಟರ್ ನಡೆದಿದೆ. ಈ ಮೂವರೂ ಉಗ್ರರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಪಡೆ (ಕೆ ಝಡ್ ಎಫ್) ಸಂಘಟನೆಯ ಭಾಗವಾಗಿದ್ದರು ಎಂದು ಪಂಜಾಬ್ ಪೋಲೀಸರು ತಿಳಿಸಿದ್ದಾರೆ.

ಇದರ ಬೆನ್ನಲ್ಲೆ ಉಗ್ರ ಗುರುಪಂತ ಸಿಂಗ್ ಪನ್ನು ಬೆದರಿಕೆಯೊಡ್ಡಿದ್ದು, ಜನವರು ಹಾಗೂ ಫೆಬ್ರವರಿಯಲ್ಲಿ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯಲಿರುವ ಕುಂಭಮೇಳದ ಹೊತ್ತಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ. ಪನ್ನು ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೇನಲ್ಲ. ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಯ ಮುನ್ನವೂ ಇಂಥ ಬೆದರಿಕೆಯನ್ನು ಒಡ್ಡಿದ್ದ. ಹಾಗಾಗಿ, ಇಂಥ ಘಟನೆಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಖಲಿಸ್ಥಾನಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಖಲಿಸ್ತಾನಿ ಸಂಘಟನೆಗಳನ್ನು ಪಾಕಿಸ್ತಾನ ಈ ಹಿಂದೆಯೂ ಪೋಷಿಸಿಕೊಂಡು ಬಂದಿದೆ. ಈಗಲೂ ಪೋಷಿಸುತ್ತಿದೆ. ಭಾರತವನ್ನು ದುರ್ಬಲಗೊಳಿಸಬೇಕು ಎಂದು ಅದು ಒಂದಲ್ಲ ಒಂದು ರೀತಿಯಲ್ಲಿ ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಪ್ರತ್ಯೇಕತೆಯ ಕೂಗು ಎಂದಿಗೂ ಅಪಾಯಕಾರಿಯೇ. ಪ್ರತ್ಯೇಕತೆಯ ಕೂಗು ೧೯೪೭ರಲ್ಲಿ ಏನೆಲ್ಲಾ ಅನಾಹುತ ಸೃಷ್ಟಿಸಿತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸಿಖ್ಖರು ಧೈರ್ಯವಂತರು. ಶೌರ್ಯವಂತರು ಮತ್ತು ತುಂಬ ಸ್ವಾಭಿಮಾನಿಗಳು ಕೂಡ ಹೌದು. ಅವರು ಕಠಿಣ ಪರಿಶ್ರಮ, ಬದ್ಧತೆ ಮೂಲಕ ತಮ್ಮದೇ ಅಸ್ಮಿತೆಯನ್ನು ಕಂಡುಕೊಂಡಿರುವುದು ಸಾಧಾರಣ ಸಂಗತಿಯೇನಲ್ಲ. ಆದರೆ, ಕೆನಡಾ ಸರ್ಕಾರ ರಾಜಕೀಯ ಹಿತಾಸಕ್ತಿಗಾಗಿ ಸಿಖ್ಖರನ್ನು ದಾರಿ ತಪ್ಪಿಸುತ್ತಿದೆ. ಅಷ್ಟಕ್ಕೂ ಎಲ್ಲ ಸಿಖ್ಖರು ಖಲಿಸ್ತಾನಿಗಳ ಪರವಾಗಿಲ್ಲ. ಅವರಿಗೆ ಭಾರತದ ಬಗ್ಗೆ ಶ್ರದ್ಢೆ ಮಾತ್ರವಲ್ಲ ಅಭಿಮಾನವೂ ಇದೆ. ಆದರೆ, ಒಂದೆಡೆ ಕೆನಡಾ ಸರ್ಕಾರ, ಮತ್ತೊಂದೆಡೆ ಪಾಕಿಸ್ತಾನ ಹೀಗೆ ಹಲವು ಶಕ್ತಿಗಳು ಸೇರಿ ಖಲಿಸ್ತಾನ ಚಳುವಳಿಗೆ ನೀರು, ಗೊಬ್ಬರ ಒದಗಿಸುತ್ತಿರುವುದು ರಹಸ್ಯವೇನಲ್ಲ. ಹೀಗಾಗಿಯೇ, ಖಲಿಸ್ತಾನ್ ಭಯೋತ್ಪಾದಕರು ಇತ್ತೀಚೆಗೆ ಬಹಿರಂಗವಾಗಿ ಬೆದರಿಕೆಯೊಡ್ಡುವ ದುಸ್ಸಾಹಸ ಮಾಡುತ್ತಿದ್ದಾರೆ. ಹೀಗಾಗಿ, ಖಲಿಸ್ತಾನ್ ಭಯೋತ್ಪಾದನೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿದೆ. ಈ ಬಗೆಯ ಸಂಘಟನೆಗಳಲ್ಲಿ ತೊಡಗಿದವರು, ಅವರಿಗೆ ಬೆಂಬಲವಾಗಿ ನಿಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ.

ಭಾರತದ ವಿಕಾಸದ ವೇಗಕ್ಕೆ ತಡೆ ಹಾಕಲು ಅನೇಕ ರಾಷ್ಟ್ರಗಳು ಹವಣಿಸುತ್ತಿವೆ. ಇದಕ್ಕಾಗಿ ಅವು ಯಾವುದೇ ಶಸ್ತ್ರ-ಅಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ. ಈಗ ಖಲಿಸ್ತಾನಿಗಳನ್ನು ನೆಪವಾಗಿ ಇರಿಸಿಕೊಂಡು ಭಾರತ ವಿರೋಧಿ ಭಾವನೆಯನ್ನು ಬಿತ್ತುವ ಕಾರ್ಯಗಳು ನಡೆಯುತ್ತಿವೆ. ಭಾರತದ ವಿದೇಶಾಂಗ ಇಲಾಖೆ ಈ ಹಿಂದೆಯೇ ಕೆನಡಾ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಆದರೆ, ಟ್ರೂಡೋ ಸರ್ಕಾರ ತನ್ನ ನೀತಿಯನ್ನು ಬದಲಿಸಿಲ್ಲ. ಹೀಗಾಗಿ, ಖಲಿಸ್ತಾನಿ ಸಂಘಟನೆಗಳ ಅಬ್ಬರ ಜೋರಾಗಿದ್ದು, ಇದನ್ನು ಮಟ್ಟಹಾಕಲು ಸೂಕ್ತ ಕಾರ್ಯ ಯೋಜನೆ ಕೈಗೊಳ್ಳಬೇಕಿದೆ. ಆಂತರಿಕ ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಬೇಕಾಗಿರುವುದು ಈಗಿನ ಅಗತ್ಯ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೬-೧೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ