ಆಂತರಿಕ ಭದ್ರತೆಗೆ ಸವಾಲು

ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್ ಪ್ರದೇಶದಲ್ಲಿ ಹಿಂಸಾಚಾರ ಏರ್ಪಟ್ಟು, ಮೂವರು ಪ್ರಾಣ ಕಳೆದುಕೊಂಡರು. ಅಲ್ಲದೆ, ಹಲವರ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಲಾಗಿದೆ. ಮಹಿಳೆಯರಿಗೆ ಬೆದರಿಕೆ ಒಡ್ಡಲಾಗಿದೆ. ಹೀಗಾಗಿ, ಆತಂಕಗೊಂಡ ನೂರಾರು ಹಿಂದುಗಳು ಮುರ್ಶಿದಾಬಾದನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿಂಸಾಚಾರದ ಪ್ರಾಥಮಿಕ ತನಿಖೆಯ ವೇಳೆ ಇದರ ಹಿಂದೆ ಬಾಂಗ್ಲಾ ನುಸುಳುಕೋರರು ಇರುವುದು ದೃಢಪಟ್ಟಿದೆ.
ಭಾರತ-ಬಾಂಗ್ಲಾದೇಶದ ನಡುವೆ ೪೦೯೬ ಕಿಲೋಮೀಟರ್ ಉದ್ದದ ಗಡಿ ಇದ್ದು, ಇದು ಬೆಟ್ಟಗುಡ್ಡ, ಕಣಿವೆ, ಅರಣ್ಯ ಮತ್ತು ನದಿಗಳ ನಡುವೆ ಹಾದುಹೋಗುತ್ತದೆ. ಬಾಂಗ್ಲಾ ನುಸುಳುಕೋರರು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಇಂಥ ನುಸುಳುಕೋರರ ಸಂಖ್ಯೆ ೨ ಕೋಟಿಯಷ್ಟಿದೆ ಎಂದು ಕೇಂದ್ರ ಸರ್ಕಾರ ೨೦೧೬ರಲ್ಲೇ ಹೇಳಿತ್ತು. ಈಗ ಆ ಸಂಖ್ಯೆ ೪ರಿಂದ ೫ ಕೋಟಿಗೆ ಹೆಚ್ಚಿದೆ ಎನ್ನುತ್ತವೆ ಮೂಲಗಳು. ಹೀಗಿದ್ದರೂ, ಕೆಲ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕುಮ್ಮಕ್ಕಿನಿಂದ ಗಡಿಭಾಗದಲ್ಲಿ ನುಸುಳುವಿಕೆ ಮುಂದುವರಿದಿದೆ. ಬಾಂಗ್ಲಾದೇಶದ ನಾಗರಿಕರಿಗೆ ಭಾರತದ ಗಡಿಯೊಳಗೆ ಪ್ರವೇಶ ಕಲ್ಪಿಸುವ ರಾಜಕೀಯ ಏಜೆಂಟರ ದೊಡ್ಡಜಾಲವೇ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲ, ಇಂಥ ನುಸುಳುಕೋರರು ಭಾರತದಲ್ಲಿ ನೆಲೆಸಿದ ಮೇಲೆ ಅವರಿಗೆ ಅಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಮಹತ್ವದ ದಾಖಲೆಗಳನ್ನು ಮಾಡಿಕೊಡುವ ಭ್ರಷ್ಟಜಾಲವೂ ಇದೆ. ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರಿಗಳು ಆಗಾಗ ಕಾರ್ಯಾಚರಣೆ ನಡೆಸಿ, ಇಂಥ ಏಜೆಂಟ್ ಗಳನ್ನು ಮತ್ತು ಬಾಂಗ್ಲಾದೇಶದ ನಾಗರಿಕರನ್ನು ಬಂಧಿಸಿದ್ದಾರೆ. ಆದರೆ, ಈ ಹಾವಳಿಯ ವ್ಯಾಪ್ತಿ ಹೆಚ್ಚುತ್ತಲೇ ಸಾಗಿದ್ದು ನುಸುಳುಕೋರರಿಂದ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಭೌಗೋಳಿಕ ಸಮೀಕರಣಗಳು ಬದಲಾಗಿವೆ. ಈ ನುಸುಳುಕೋರರು ಭಾರತದ ಅರ್ಥ ವ್ಯವಸ್ಥೆ, ರಾಜಕೀಯ ಹಾಗೂ ಸುರಕ್ಷತೆಗೆ ಅಪತ್ತಾಗಿ ಪರಿಣಮಿಸಿದ್ದಾರೆ. ಬಂಗಾಳದಲ್ಲಿ ನುಸುಳುಕೋರರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾದಾಗಲೆಲ್ಲ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಥ ಕ್ರಮಗಳನ್ನು ಮತಬ್ಯಾಂಕ್ ರಾಜಕೀಯಕ್ಕಾಗಿ ತಡೆದಿದ್ದಾರೆ ಎಂಬುದು ವಿಪರ್ಯಾಸ, ದೇಶದ ೨೫ ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ೧೨೦ ವಿಧಾನಸಭಾ ಕ್ಷೇತ್ರಗಳಲ್ಲಿ ಈ ನುಸುಳುಕೋರರ ಮತಗಳೇ ಪ್ರಮುಖ ಪಾತ್ರ ವಹಿಸುತ್ತಿರುವುದು ಟಿಎಂಸಿಯಂಥ ಪಕ್ಷಗಳ ತುಷ್ಟಿಕರಣ ರಾಜಕೀಯಕ್ಕೆ ಕಾರಣ. ಈಗಂತೂ, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿಯ ನಾಗರಿಕರು. ಅಕ್ರಮವಾಗಿ ಭಾರತದಲ್ಲಿ ಬಂದು ನೆಲೆಸುವ ಸಂಖ್ಯೆ ಹೆಚ್ಚುತ್ತಿದೆ.
ಆದ್ದರಿಂದ, ಇಂಥ ಅಕ್ರಮದ ವಿರುದ್ಧ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಹೋದಲ್ಲಿ ಭಾರಿ ಬೆಲೆ ತೆತ್ತಬೇಕಾಗುತ್ತದೆ. ಹಾಗಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೭-೦೪-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ