ಆ(ಅ)ರಕ್ಷಕರು

ಆ(ಅ)ರಕ್ಷಕರು

    ಕಳೆದ ವಾರ ಯಮನೂರಿನಲ್ಲಿ ನಡೆದ ಪೋಲೀಸರ  ಅಟ್ಟಹಾಸವನ್ನು ಟೀ.ವಿ. ವಾಹಿನಿಗಳಲ್ಲಿ ಕಂಡು ಛಳಿಯಲ್ಲೂ ಭಯದಿಂದ ಮೈ ಬೆವತಿತು.  `ಭಯೋತ್ಪಾದನೆ'ಯನ್ನು ಕಣ್ಣಾರೆ ಕಂಡಂತಾಯ್ತು.  ಇದನ್ನು ಕಂಡು ನಮಗೇ ಭಯ, ಅಸಹಾಯಕತೆ ಕಾಡಿದರೆ, ಅದನ್ನು ಅನುಭವಿಸಿದವರ  ಪಾಡೇನು? ಹಿಟ್ಲ‌ರ್ ನಾಜೀಗಳ ಮೇಲೆ ನಡೆಸಿದ  ಪೈಶಾಚಿಕ ಕೃತ್ಯದ ಸಮೀಪಕ್ಕೆ  ಬರುವಂಥದು ಈ ಘೋರ ಕೃತ್ಯ – ಯಮನೂರಿನ  ಪೋಲೀಸರದು.  ಇಂಥ ಪ್ರತ್ಯಕ್ಷ ಸಾಕ್ಷಿಗಳಿದ್ದಾಗ್ಯೂ, ಈ ಪೋಲೀಸರನ್ನು ಸಮರ್ಥಿಸಿಕೊಳ್ಳುವವರನ್ನು ನೋಡಿದರೆ, ಮೈ ಕೈ ಪರಚಿಕೊಳ್ಳುವಂತಾಗುತ್ತದೆ.  ಈ ದೃಶ್ಯಾವಳಿಗಳನ್ನು  ನೋಡಿದ ಯಾರಿಗಾದರೂ ಬರುವ ತೀರ್ಮಾನವೆಂದರೆ – ಈ ದುರುಳರು ಪೋಲೀಸ್ ವೃತ್ತಿಯಲ್ಲಿರಲು ಸಂಪೂರ್ಣ  ಅನರ್ಹರು.  ಅವರನ್ನು ಸರ್ಕಾರ ಮುಲಾಜಿಲ್ಲದೇ ಅಮಾನತ್ತು ಮಾಡದಿದ್ದಲ್ಲಿ, ಸರ್ಕಾರ ಇದ್ದರೂ ಸತ್ತ ಲೆಕ್ಕ.  ಹಿಂದೊಮ್ಮೆ ಪೋಲೀಸರ ಪರವಾಗಿ ಒಂದಿಷ್ಟು ಗೀಚಿದ್ದ ನನಗೆ ಈ ಘಟನೆ ಮುಜುಗರವನ್ನುಂಟು ಮಾಡಿದ್ದು ಸುಳ್ಳಲ್ಲ.  Of course, ಯಮನೂರಿನಲ್ಲಿ ನಡೆದ ಈ ಪೋಲೀಸ್ ದೌರ್ಜನ್ಯದ ಮೇಲೆ ಬೇರೆ ಪೋಲೀಸರನ್ನು ಅಳೆಯಲಾಗದು.  ಆದರೂ ಈ ಘಟನೆ ಯಾವುದೇ  ಸರಿಯಾದ ಪೋಲೀಸಿಗೂ ನಾಚಿಕೆ ತರಿಸಿರಲಿಕ್ಕೂ ಸಾಕು.

    ಯಮನೂರಿನಲ್ಲಿ ನಡೆದ ಈ ಪೋಲೀಸ್ ಆಟಾಟೋಪ, ಸಂತ್ರಸ್ತರ  ಪಾಲಿಗೆ ಸಾಕ್ಷಾತ್  `ಯಮನೂರು' ಆಯ್ತು. ಅವರ  ಈ ರಾಕ್ಷಸೀ ವರ್ತನೆ, ಪ್ರಚೋದಿತವಾದ ಕೃತ್ಯವೆಂದೆಣಿಸಿದರೂ, ಆ ಪ್ರಚೋದನೆಗೆ  ಕಾರಣವಾದವರನ್ನು ಶಿಕ್ಷಿಸಿ.  ಅವರ ಮನೆಯ  ವೃದ್ಧ /ಮಹಿಳೆ/ ಅಸಹಾಯಕರನ್ನಲ್ಲ ! ಯಾವುದೇ  ಸೈನಿಕರೂ ತಮ್ಮ ಶತ್ರುಪಾಳೆಯದ ಮೇಲೆ ಹೀಗೆ ವರ್ತಿಸಲಾರರು.  ಈ ಥರದ `ಭಯೋತ್ಪಾದನೆ'ಯ  ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದಲ್ಲಿ, ಜನಾಂದೋಲನ ರೂಪಿತವಾಗಬೇಕಾದ ಜರೂರತ್ತಿದೆ.  ಸುಮ್ಮನೆ ಕುಳಿತರೆ, ಇಂದು ಯಮನೂರಿನಲ್ಲಿ ಆದದ್ದು ನಾಳೆ ನಮಗಾಗದೆಂಬ ಗ್ಯಾರಂಟಿ ಏನಿದೆ! ನಮ್ಮ ನಿಷ್ಕ್ರಿಯತೆ, ಇಂಥ ಘನಘೋರ ಕೃತ್ಯಗಳಿಗೆ ಮತ್ತಷ್ಟು ಇಂಬು ಕೊಡುತ್ತದಷ್ಟೇ.

    ನೂರೆಂಟು ಟೀ.ವಿ. ವಾಹಿನಿಗಳ, ಮೊಬೈಲ್ ಕ್ಯಾಮರಾಗಳ ಈ ಕಾಲದಲ್ಲಿ, ತಮ್ಮೀ ನಾಚಿಕೆಗೆಟ್ಟ ಕಾರ್ಯವನ್ನು ಯಾರಾದರೂ ಚಿತ್ರೀಕರಿಸಿಯಾರು ಎನ್ನುವ ಸಣ್ಣ ಭಯವೂ ಆ ಪೋಲಿಸರಲ್ಲಿ  ಇರದಿದ್ದುದನ್ನು ನೋಡಿದರೆ, ಇದು ಸರ್ಕಾರೀ ಪ್ರಾಯೋಜಿತವೇ ಅನ್ನುವ ಅನುಮಾನ ಬಾರದಿರದು. ಹಾಗಿರಲಾರದು ಅಥವಾ ಹಾಗಂದುಕೊಂಡು ಸಮಾಧಾನಪಟ್ಟುಕೊಳ್ಳೋಣ.

    ಒಟ್ಟಿನಲ್ಲಿ ಪ್ರತ್ಯಕ್ಷ ಸಾಕ್ಷಿಯಿರುವ ಈ  ಘಟನೆಯಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಪ್ರಜಾಪ್ರಭುತ್ವಕ್ಕಾಗುವ ಘೋರ ಅಪಮಾನವಿದಾಗುತ್ತದೆ.