ಆಕರ್ಷಣೆಗಳು ದಾರಿ ತಪ್ಪಿಸುತ್ತವೆ !
ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು. ವಿದೇಶದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಸುಂದರಳಾದ ಮಗಳು ಇದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ತಂದೆ ಮಗಳನ್ನು ಕರೆದು ಕೇಳಿದ, "ನಿನಗೆ ಎಂತಹ ವರ ಬೇಕು...?" ಅದಕ್ಕೆ ಆಕೆ ಹೇಳಿದಳು. ನನ್ನ ಜೊತೆ ಓಡಬೇಕು. ಯಾರು ನನ್ನನ್ನು ಸೋಲಿಸುತ್ತಾರೋ ಅವರ ಜೊತೆ ನನ್ನ ಮದುವೆ ಎಂದಳು. ಆಕೆಯ ಬೇಡಿಕೆಯಂತೆ ಡಂಗೂರ ಸಾರಲಾಯಿತು. ಒಂದು ದಿನ ಸ್ಪರ್ಧೆಗೆ ನಿಗದಿಯಾಯಿತು. ಗ್ರಾಮಗಳಿಂದ, ನಗರಗಳಿಂದ ಯುವಕರ ತಂಡ ಬಂದಿತ್ತು. ಆಕೆ ಓಟದಲ್ಲಿ ಪರಿಣಿತಿಯಾಗಿದ್ದಳು. ಮಿಂಚಿನ ವೇಗದಲ್ಲಿ ಓಡುತ್ತಿದ್ದಳು. ಬಂದ ಎಲ್ಲಾ ಯುವಕರು ಸೋತು ಸಪ್ಪೆ ಮೊರೆ ಹಾಕಿಕೊಂಡು ತಮ್ಮ ತಮ್ಮ ಊರಿಗೆ ಹೋದರು. ರಾಜನಿಗೆ ದುಃಖವಾಯಿತು. ಆಗ ಒಂದು ಹಳ್ಳಿಯ ಯುವಕನಿಗೆ ಇದನ್ನು ಕೇಳಿ ಬೇಸರವಾಯಿತು. ಆತ ಒಬ್ಬ ಸನ್ಯಾಸಿಯತ್ತ ಹೋದ. ಗುರುಗಳೇ, ನನಗೆ ರಾಜಕುಮಾರಿಯನ್ನು ವಿವಾಹವಾಗಬೇಕೆಂದು ಆಸೆ ಇಲ್ಲ. ನಾನು ಓಟದಲ್ಲಿ ಗೆಲ್ಲಬೇಕು. ಇಲ್ಲದಿದ್ದರೆ ನಮ್ಮ ಯುವ ಸಮಾಜ ತಲೆತಗ್ಗ ಬೇಕಾಗುತ್ತದೆ. ಇದಕ್ಕೆ ಏನಾದರೂ ಉಪಾಯ ಹೇಳಿ ಎಂದು ಕೇಳಿದ. ಅದೇ ಸಮಯಕ್ಕೆ ರಾಜನು ಆ ಸನ್ಯಾಸಿ ಬಳಿ ಬಂದಿದ್ದನು. ಆಗ ಸನ್ಯಾಸಿ ಗುರು ಹೇಳಿದ. ಮೂರು ಚಿನ್ನದ ಗುಂಡನ್ನು ವಿವಿಧ ಕೆತ್ತನೆಯಿಂದ ಮಾಡಿಸಿಕೊಂಡು ಬಾ ಎಂದನು. ಆಗ ರಾಜನೇ ಆ ಮೂರು ಗುಂಡನ್ನು ಮಾಡಿಸಿಕೊಡುವುದಾಗಿ ಹೇಳಿದ ಹಾಗೂ ಒಪ್ಪಿದ. ಆಗ ಗುರು ಉಪಾಯ ಹೇಳಿದ. ಓಟ ಶುರುವಾಗಿ ಸ್ವಲ್ಪ ದೂರ ಓಡಿದ ತಕ್ಷಣ, ಆಕೆಯ ಮುಂಭಾಗದಿಂದ ಎಡಕ್ಕೆ ಒಂದು ಗುಂಡು ಎಸೆಯಬೇಕು. ಮತ್ತೆ ಮಧ್ಯ ದಾರಿ ಸಾಗಿದಾಗ ಆಕೆ ಮುಂದುಗಡೆಯಿಂದ ಬಲಗಡೆ ಮತ್ತೊಂದು ಗುಂಡನ್ನು ಎಸೆಯಬೇಕು. ಹಾಗೆ ಕೊನೆ ಸಮೀಪಿಸುವಾಗ ಕೊನೆಯ ಗುಂಡನ್ನು ಹಾಗೆ ಮುಂಭಾಗದಿಂದ ಹಿಂದಕ್ಕೆ ಎಸೆಯಬೇಕು. ಆಗ ನೀನು ಆಟದಲ್ಲಿ ಗೆಲ್ಲುತ್ತಿ ಎಂದನು.
ರಾಜ ಓಟದ ದಿನ ನಿಗದಿಪಡಿಸಿದ. ಸ್ಪರ್ಧೆ ಪ್ರಾರಂಭವಾಯಿತು. ಮಿಂಚಿನ ವೇಗದಲ್ಲಿ ತರುಣಿ ಓಡುತ್ತಿದ್ದಳು. ಆಗ ಒಂದು ಚಿನ್ನದ ಗುಂಡನ್ನು ಆಕೆಯ ಮುಂದಿನಿಂದ ಎಡಬದಿಗೆ ಎಸೆದನು. ಚಿನ್ನದ ಗುಂಡು ಫಳಫಳ ಹೊಳೆಯುತ್ತಿತ್ತು. ತರುಣಿ ಅದನ್ನು ಗಮನಿಸಿದಳು. ಓಟದ ದಾರಿಯಿಂದ ಬಂದು ಗುಂಡನ್ನು ತೆಗೆದುಕೊಂಡು ಓಡಲು ಶುರು ಮಾಡಿದಳು. ಅಷ್ಟರಲ್ಲಿ ಮಧ್ಯ ದಾರಿಯನ್ನ ತರುಣ ಸಮೀಪಿಸಿದ್ದ. ಕ್ಷಣದಲ್ಲಿ ಬಂದಳು. ಆಗ ಎರಡನೇ ಚಿನ್ನದ ಗುಂಡನ್ನು ಆಕೆಯ ಮುಂದಿನಿಂದ ಬಲಬದಿಗೆ ಎಸೆದನು. ಅದು ಇನ್ನೂ ಚೆನ್ನಾಗಿ ಹೊಳೆಯುತ್ತಿತ್ತು. ಅದನ್ನು ತರುಣಿ ನೋಡಿದಳು. ತಕ್ಷಣ ಓಟದಿಂದ ಸರಿದು ಆ ಗುಂಡನ್ನು ಎತ್ತಿಕೊಂಡು ಕ್ಷಣಮಾತ್ರದಲ್ಲಿ ಈತನನ್ನು ಹಿಂದಿಕ್ಕಿದಳು. ಆಗ ಗುರಿಯ ದಾರಿ ಸಮೀಪ ಇತ್ತು. ಆಗ ಕೊನೆಯ ಚಿನ್ನದ ಗುಂಡನ್ನು ಆಕೆಯ ಮುಂದಿನಿಂದ ಹಿಂದಕ್ಕೆ ಬರುವಂತೆ ಎಸೆದನು. ಅದು ಇನ್ನೂ ಚೆನ್ನಾಗಿ ಹೊಳೆಯುತ್ತಿತ್ತು. ಆಕೆ ಹಿಂದೆ ಬಂದು ಆ ಚೆಂಡನ್ನ ತೆಗೆದುಕೊಂಡು ಮಿಂಚಿನ ವೇಗದಲ್ಲಿ ಓಡುತ್ತಿದ್ದಳು. ಅಷ್ಟರಲ್ಲಿ ಯುವಕ ಗುರಿ ಮುಟ್ಟಿದ್ದನು. ರಾಜನಿಗೆ ತುಂಬಾ ಸಂತೋಷವಾಯಿತು. ಆಕೆಗೂ ಸಂತೋಷವಾಯಿತು. ಈಗಲಾದರೂ ಮದುವೆ ಆಗಬಹುದಲ್ಲ ಎಂದು.
ಈ ಕಥೆಯನ್ನು ವಿಶ್ಲೇಷಣೆ ಮಾಡಿದರೆ ಆಕೆ ಓಡುವುದರಲ್ಲಿ ಅಸಮರ್ಥತೆ ಇರಲಿಲ್ಲ. ಆಕೆಯನ್ನು ಸೋಲಿಸಿದ್ದು ದೈಹಿಕ ಅಸಮರ್ಥತೆ ಅಲ್ಲ. ಆಕರ್ಷಣೆ ಆಕೆಯನ್ನು ಸೋಲಿಸಿತು. ಆಕೆ ಆಟದಲ್ಲಿ ಸೋತಳು. ಅವಳನ್ನು ಸೋಲಿಸಿದ್ದು ಆಕರ್ಷಣೆ. ನಾವು ಜೀವನದಲ್ಲಿ ಯಾವುದೋ ಗುರಿ ಹಾಕಿಕೊಂಡು ನಡೆಯುತ್ತಿರುತ್ತೇವೆ. ಆ ಗುರಿಯಿಂದ ವಿಮುಖವಾಗುವಂತೆ ಮಾಡುವುದೇ ಈ ಆಕರ್ಷಣೆಗಳು. ಅಲ್ಲಿ ನಾವು ಮೂರು ಗುಂಡುಗಳನ್ನು ನೋಡಿದೆವು. ನಮ್ಮ ಮುಂದೆ ಐದು ಆಕರ್ಷಣೆ ಗುಂಡುಗಳಿವೆ. ಅವು ನಮ್ಮ ದಾರಿ ತಪ್ಪಿಸುತ್ತದೆ. ನಮಗೆ ದೈಹಿಕ ಸಾಮರ್ಥ್ಯ ಇಲ್ಲ ಅಂತಲ್ಲ. ಬುದ್ಧಿ ಸಾಮರ್ಥ್ಯ ಇಲ್ಲ ಅಂತಲ್ಲ. ಮಾನಸಿಕ ಸಾಮರ್ಥ್ಯ ಇಲ್ಲ ಅಂತ ಅಲ್ಲ. ಇವೆಲ್ಲ ಇದ್ದರೂ ಕೂಡ ಈ ಆಕರ್ಷಣೆಗಳು ನಮ್ಮನ್ನ ದಾರಿ ತಪ್ಪಿಸುತ್ತದೆ. ಅವು ಯಾವುವೆಂದರೆ
1. ರೂಪ ಮತ್ತು ಸೌಂದರ್ಯಕ್ಕೆ ಸೋಲುತ್ತೇವೆ.
2. ಭೂಮಿಗೆ ಸೋಲುತ್ತೇವೆ.
3. ಹಣಕ್ಕೆ ಸೋಲುತ್ತೇವೆ.
4. ಅಧಿಕಾರ ಕುರ್ಚಿಗಾಗಿ ಸೋಲುತ್ತೇವೆ .
5. ಪ್ರಶಸ್ತಿ ಗೌರವಕ್ಕಾಗಿ ಸೋಲುತ್ತೇವೆ.
ಈ ಐದಕ್ಕೆ ಸೋತವನು ಜೀವನದ ಗುರಿಯನ್ನು ಮುಟ್ಟುವುದಿಲ್ಲ. ಮಕ್ಕಳೇ, ನಾವು ಈ ಒಟ್ಟು ಆಕರ್ಷಣೆಗೆ ಸೋಲದೆ ಇದ್ದರೆ ಗುರಿಯನ್ನು ತಲುಪೇ ತಲುಪುತ್ತೇವೆ ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ