ಆಕಳಿಕೆ ಸಹಜವೇ, ಸಾಂಕ್ರಾಮಿಕವೇ ಅಥವಾ ಸೋಮಾರಿತನದ ಲಕ್ಷಣವೇ?

ಆಕಳಿಕೆ ಸಹಜವೇ, ಸಾಂಕ್ರಾಮಿಕವೇ ಅಥವಾ ಸೋಮಾರಿತನದ ಲಕ್ಷಣವೇ?

ಆ... ಆ… ಎಂದು ಆಕಳಿಸಿದರೆ ನಿಮ್ಮನ್ನು ಸೋಮಾರಿ ಎಂದಾರು ಅಲ್ಲವೇ? ಹಾಗಾದರೆ ಆಕಳಿಕೆ ಸೋಮಾರಿತನದ ಲಕ್ಷಣವೇ? ನಿದ್ರೆ ಬರುತ್ತಿರುವ ಲಕ್ಷಣವೇ? ಸಾಂಕ್ರಾಮಿಕವೇ? ಮತ್ತೆ ಕೆಲವರು ಹೇಳುತ್ತಾರೆ ನೀವು ಆಕಳಿಸಿದರೆ ನಿಮ್ಮನ್ನು ಯಾರೋ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು. ನಿಮ್ಮ ಬಗ್ಗೆಯೇ ಯಾರೋ ಮಾತನಾಡುತ್ತಿದ್ದಾರೆ ಎಂದೂ ನಿಮ್ಮ ಆಕಳಿಕೆಯ ಕಾರಣವನ್ನು ಅಂದಾಜಿಸುವವರೂ ಇದ್ದಾರೆ. ಇದನ್ನೆಲ್ಲಾ ಕೇಳುವಾಗ ನಮ್ಮ ಮನಸ್ಸಲ್ಲಿ ಮೂಡುವ ಪ್ರಶ್ನೆ ಎಂದರೆ ಆಕಳಿಕೆಯ ಹಿಂದೆ ಇಷ್ಟೆಲ್ಲಾ ಕಾರಣಗಳಿವೆಯಾ? 

ಆಕಳಿಕೆಯನ್ನು ಸಾಮಾನ್ಯವಾಗಿ ದಣಿದ ಅಥವಾ ಬೇಸರದ ಪ್ರತಿಕ್ರಿಯೆ ಅಂತ ಹೇಳಲಾಗುತ್ತದೆ. ಆದರೆ ಕೆಲವರು ವ್ಯಾಯಾಮ ಮಾಡುವಾಗ ಅಥವಾ ಹಾಡುವಾಗ ಕೂಡಾ ಹೆಚ್ಚಾಗಿ ಆಕಳಿಸುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಆದ್ದರಿಂದ, ಇದು ನಮಗೆ ನಿದ್ರೆ ಅಥವಾ ಬೋರ್ ಆಗುತ್ತಿರುವ ಸಂಕೇತವಲ್ಲ ಎನ್ನುವುದು ಅರಿವಾಗುತ್ತದೆ. ಅಷ್ಟೇ ಅಲ್ಲ ಆಕಳಿಕೆ ಸಾಂಕ್ರಾಮಿಕ ಎನ್ನುವ ಅನುಮಾನವೂ ಕೆಲವರಲ್ಲಿದೆ. ಯಾಕೆಂದರೆ, ಬೇರೆ ವ್ಯಕ್ತಿಗಳು ಆಕಳಿಸುವುದನ್ನು ನೋಡುವಾಗಲೂ ಕೂಡ ನಿಮಗೆ ಆಕಳಿಕೆ ಬರುತ್ತದೆ. ಅಷ್ಟೇ ಏಕೆ ಟಿವಿ ನೋಡುವಾಗ, ಈ ಬರಹವನ್ನು ಓದುತ್ತಿರುವಾಗಲೂ ನಿಮಗೆ ಆಕಳಿಕೆ ಬರುತ್ತಿರಬಹುದು ಅಲ್ಲವೇ?!

ನಾವೇಕೆ ಆಕಳಿಸುತ್ತೇವೆ? : ವಿಜ್ಞಾನಿಗಳ ಪ್ರಕಾರ ಮೆದುಳಿನಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಆಕಳಿಕೆ ಉಂಟಾಗುತ್ತದೆ. ಮೆದುಳು ನಿಧಾನಗೊಂಡಾಗ ಮತ್ತು ದೇಹಕ್ಕೆ ಆಮ್ಲಜನಕದ ಅವಶ್ಯಕತೆ ಕಾಡಿದಾಗ ಈ ಆಕಳಿಕೆಯ ಸಂಕೇತಗಳು ಹೊರಹೊಮ್ಮುತ್ತವೆ. ‘ಸೈಕಾಲಜಿ ಆಂಡ್ ಬಿಹೇವಿಯರ್’ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಬರಹದ ಪ್ರಕಾರ ಅಧ್ಯಯನವೊಂದರಲ್ಲಿ ಸುಮಾರು ೧೨೦ ಮಂದಿ ಜನರ ಆಕಳಿಕೆಯನ್ನು ಪರಿಶೀಲನೆ ಮಾಡಲಾಯಿತು. ಅದರ ಪ್ರಕಾರ ಚಳಿಗಾಲದಲ್ಲಿ ಆಕಳಿಕೆಯ ಪ್ರಮಾಣ ಕಡಿಮೆ. ದೇಹವು ಸ್ವತಃ ಎಚ್ಚರವಾಗಿರಲು ಬಯಸಿದಾಗ ಶ್ವಾಸಕೋಶಗಳು ಮತ್ತು ಅವುಗಳ ಅಂಗಾಂಶವನ್ನು ವಿಸ್ತರಿಸಲು ಆಕಳಿಕೆಯು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಆಕಳಿಕೆ ಸಾಂಕ್ರಾಮಿಕವೇ? : ಕೆಲವು ಅಧ್ಯಯನಗಳ ಪ್ರಕಾರ ಆಕಳಿಕೆಯು ಸಾಂಕ್ರಾಮಿಕವಾಗಿದೆ. ತಜ್ಞರು ಆಕಳಿಕೆಯನ್ನು ಎರಡು ವಿಧದಲ್ಲಿ ವರ್ಗೀಕರಿಸುತ್ತಾರೆ. ಸ್ವತಃ ಸಂಭವಿಸುವ ಆಕಳಿಕೆ ಮತ್ತು ಬೇರೆಯವರು ಆಕಳಿಸಿದ ಬಳಿಕ ಉಂಟಾಗುವ ಆಕಳಿಕೆ. ಮೊದಲನೆಯದ್ದನ್ನು ಸ್ವಯಂ ಪ್ರೇರಿತ ಆಕಳಿಕೆ ಎಂದರೆ ಎರಡನೆಯದ್ದನ್ನು ಸಾಂಕ್ರಾಮಿಕ ಆಕಳಿಕೆ ಎನ್ನಬಹುದಾಗಿದೆ. ಯಾರಾದರೂ ಆಕಳಿಸುವುದನ್ನು ಕಂಡಾಗ ನಿಮ್ಮಲ್ಲೂ ಆಕಳಿಸಬೇಕು ಎನ್ನುವ ಭಾವ ಮೂಡುವ ಸಾಧ್ಯತೆ ಇದೆ. ಒಂದು ಸಂಶೋಧನೆಯ ಪ್ರಕಾರ ಮೆದುಳಿನ ತಾಪಮಾನವನ್ನು ನಿಯಂತ್ರಿಸುವಲ್ಲಿ ಆಧಾರವಾಗಿರುವ ಕಾರ್ಯವಿಧಾನದಿಂದ ಸ್ವಾಭಾವಿಕ ಮತ್ತು ಸಾಂಕ್ರಾಮಿಕ ಆಕಳಿಕೆಗಳು ಉದ್ಭವಿಸುತ್ತವೆ. ಈ ಕಾರಣದಿಂದ ಸಾಂಕ್ರಾಮಿಕ ಆಕಳಿಕೆಯು ಒಂದು ಹಾನಿಕಾರಕವಲ್ಲದ ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಒಬ್ಬರು ಆಕಳಿಸುವುದನ್ನು ನೋಡಿದ ನೀವು ಆಕಳಿಸಲು ಶುರು ಮಾಡಿದರೆಂದಾದರೆ ನೀವಿಬ್ಬರೂ ಒಂದೇ ಸಮಯ ಒಂದೇ ರೀತಿಯ ಹವಾಮಾನದಲ್ಲಿ, ಒಂದೇ ಪ್ರದೇಶದಲ್ಲಿ ಇದ್ದೀರಿ ಎಂದರ್ಥ. ಈ ಕಾರಣದಿಂದ ನಿಮ್ಮ ಇಬ್ಬರ ಮೆದುಳುಗಳು ತಾಪಮಾನದ ಹೊಂದಾಣಿಕೆಗೆ ಪ್ರತಿಕ್ರಿಯಿಸುತ್ತವೆ.

ಅನಪೇಕ್ಷಿತ ಆಕಳಿಕೆಯನ್ನು ಕಡಿಮೆ ಮಾಡಲು ಏನು ಮಾಡಬೇಕು? : ಹಲವಾರು ಬಾರಿ ನಾವು ಸಭೆಯಲ್ಲಿ, ಸಮಾರಂಭಗಳಲ್ಲಿ ಪಾಲ್ಗೊಂಡಿರುವಾಗ ಬೇಡ ಬೇಡವೆಂದರೂ ಆಕಳಿಕೆ ಬಂದು ಬಿಡುತ್ತದೆ. ಇದರಿಂದ ನಾವು ಉಳಿದವರ ಎದುರು ತೀರಾ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಭಾಷಣ ಮಾಡುತ್ತಿರುವ ವ್ಯಕ್ತಿ ನಮ್ಮ ಆಕಳಿಕೆಯನ್ನು ನೋಡಿದರಂತೂ ವಿಪರೀತ ಬೇಜಾರು ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಆಕಳಿಕೆಯನ್ನು ಬಾರದಂತೆ ಮಾಡಲು ಸಾಧ್ಯವಿಲ್ಲವಾದರೂ, ಅದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿಡಲು ಕೆಲವು ಸುಲಭ ವಿಧಾನಗಳು ಇವೆ…

* ನೀವು ಅತಿಯಾದ ದಣಿವು ಮತ್ತು ನಿದ್ರಾಹೀನತೆಯನ್ನು ಅನುಭವಿಸಿದರೆ, ಆಳವಾದ, ದೀರ್ಘವಾದ ಉಸಿರನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಮೂಗಿನ ಮೂಲಕ ವ್ಯಾಯಾಮ ಮಾಡಲು ಪ್ರಯತ್ನಿಸಿ. ನಿರಂತರ ಆಕಳಿಕೆಯು ನಿಮ್ಮ ದೇಹಕ್ಕೆ ಆಮ್ಲಜನಕದ ಅವಶ್ಯಕತೆ ಇದೆ ಎನ್ನುವುದನ್ನು ತಿಳಿಸುವುದರ ಸಂಕೇತ.

* ವೈದ್ಯರ ಪ್ರಕಾರ, ನಿರ್ಜಲೀಕರಣ ಮತ್ತು ನಿಶ್ಯಕ್ತಿಯು ಸುಸ್ತು ಅಥವಾ ಆಕಳಿಕೆಗೆ ಕಾರಣವಾಗಬಹುದು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಅಥವಾ ದ್ರವಾಹಾರಗಳನ್ನು ಸೇವಿಸುತ್ತಾ ಇರುವುದು ಉತ್ತಮ. ಈ ಜಲ ಸಂಚಲನವು ನಿಮ್ಮ ಆಕಳಿಕೆಯ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ.

* ಸೋಮಾರಿತನವನ್ನು ಆದಷ್ಟು ಮಟ್ಟಿಗೆ ಕೈಬಿಟ್ಟು ಏನಾದರೂ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರಿ. ಸಕ್ರಿಯವಾಗಿ ಕಾರ್ಯ ನಿರ್ವಹಣೆ ಮಾಡುವುದರಿಂದ ನಿಮ್ಮ ಮೆದುಳು ಉತ್ತೇಜಿತ ಸ್ಥಿತಿಯಲ್ಲಿ ಇರುತ್ತದೆ. ಈ ಕಾರಣದಿಂದ ಆಕಳಿಸುವುದು ಕಡಿಮೆಯಾಗುತ್ತದೆ. ನಿಮ್ಮ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಸಣ್ಣ ವಾಕಿಂಗ್ ಅಥವಾ ಜಾಗಿಂಗ್ ಉತ್ತಮ.

* ಪ್ರತೀ ದಿನ ೬ ರಿಂದ ೮ ಗಂಟೆ ನಿದ್ರೆ ಮಾಡಿ. ಚೆನ್ನಾದ ನಿದ್ರೆ ನಿಮ್ಮ ದೇಹದ ದಣಿವನ್ನು ನಿವಾರಿಸಿ ಆಕಳಿಕೆ ಬಾರದಂತೆ ನೋಡಿಕೊಳ್ಳುತ್ತದೆ. ನಿದ್ರೆಯ ಕೊರತೆ ಅನೇಕ ಮಾರಣಾಂತಿಕ ರೋಗಗಳಿಗೂ ಕಾರಣವಾಗುತ್ತದೆ. ಈ ಕಾರಣದಿಂದ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಉತ್ತಮ. ತಂಪಾದ ಆಹಾರಗಳ ಬಳಕೆಯಿಂದ ಸ್ವಲ್ಪ ಮಟ್ಟಿನ ಆಕಳಿಕೆಯನ್ನು ತಡೆಗಟ್ಟಬಹುದಂತೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ