ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೧)

ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೧)

ಸಂಶೋಧಕರಾಗಲಿ, ವಿಜ್ಞಾನಿಗಳಾಗಲಿ ಸಂಶೋಧನೆಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೈಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯೂ ಆಗಬಹುದು; ಆಗದೆಯೂ ಇರಬಹುದು. ಆದರೆ ಕೆಲವೊಮ್ಮೆ ಯಾವುದೋ ನಿರ್ದಿಷ್ಟ ಪ್ರಯೋಗವನ್ನು ಕೈಗೊಂಡಿರುತ್ತಾರೆ. ಆಕಸ್ಮಿಕವಾಗಿ ಇನ್ಯಾವುದೋ ಹೊಸದೊಂದು ವಸ್ತು ಆವಿಷ್ಕಾರವಾಗಿ ಬಿಡುತ್ತದೆ. ಅಂಥ ಕೆಲವು ಆಕಸ್ಮಿಕ ಸಂಶೋಧನೆಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ಪೇಸ್ ಮೇಕರ್ (Pacemaker): ಇದೊಂದು ಪ್ರಾಣವನ್ನುಳಿಸುವ ಪುಟ್ಟ ಸಾಧನ. ಇದು ಹೃದಯದ ಬಡಿತಕ್ಕೆ ಪರ್ಯಾಯವಾಗಿ ಕೆಲಸ ಕೊಡುವ ಪುಟ್ಟ ಯಂತ್ರ. ಒಮ್ಮೆ ಅಮೇರಿಕದ ಎಂಜಿನಿಯರ್ ವಿಲ್ಸನ್ ಗ್ರೇಟ್ ಬ್ಯಾಚ್ ಹೃದಯದ ಬಡಿತವನ್ನು ದಾಖಲು ಮಾಡುವ ಎಲೆಕ್ಟ್ರಾನಿಕ್ ಮಂಡಲವನ್ನು (Circuit) ಅಭಿವೃದ್ಧಿ ಪಡಿಸುತ್ತಿದ್ದ. ಆಗ ಆ ಮಂಡಲದಲ್ಲಿ ಹತ್ತು ಸಾವಿರ ಓಮ್ ರೋಧಕವನ್ನು (resistor) ಜೋಡಿಸುವ ಬದಲಾಗಿ ಒಂದು ಮೆಗಾ ಓಂ (ಒಂದು ಲಕ್ಷ ಓಮ್ ಗಳು) ರೋಧಕವನ್ನು ಜೋಡಿಸಿಬಿಟ್ಟ. ಆಗ ಆ ಮಂಡಲ ೧.೮ ಮಿಲಿ ಸೆಕೆಂಡ್ ಗಳ ಕಾಲ (ಮಿಲಿ ಸೆಕೆಂಡ್ ಅಂದರೆ ಒಂದು ಸೆಕೆಂಡಿನ ಸಾವಿರದಲ್ಲೊಂದು ಭಾಗ) ಆವರ್ತಿಸಿ, ನಂತರ ಒಂದು ಸೆಕೆಂಡುಗಳ ಕಾಲ ನಿಂತು, ನಂತರ ಮತ್ತೆ ಆಂದೋಲನವನ್ನು ಪ್ರಾರಂಭಿಸಿತ್ತು. ಈ ಕ್ರಿಯೆ ನಿರಂತರವಾಗಿ ನಡೆದು, ಇದು ಹೊರಹೊಮ್ಮಿಸುವ ಶಬ್ಧ ಹೃದಯದ ಶಬ್ಧವನ್ನೇ ಹೋಲುತ್ತಿತ್ತು. ಇದು ಪೇಸ್ ಮೇಕರ್ ನ ಹುಟ್ಟಿಗೆ ಕಾರಣವಾಯಿತು. (ಚಿತ್ರ ೧)

ಪೆನ್ಸಿಲಿನ್ (Pencillin) : ಪೆನ್ಸಿಲಿನ್ ಇಂದು ಯಾರಿಗೆ ಗೊತ್ತಿಲ್ಲ ಹೇಳಿ? ಹೋದ ಶತಮಾನದಲ್ಲಂತೂ ಇದು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದೆ. ಇದೊಂದು ಅದ್ಭುತ ಆಂಟಿ-ಬಯಾಟಿಕ್. ೧೯೨೮ರಲ್ಲಿ ಒಂದು ದಿನ ಅಲೆಕ್ಸಾಂಡರ್ ಫ್ಲೆಮಿಂಗ್ ತನ್ನ ಪ್ರಯೋಗಶಾಲೆಯನ್ನು ಶುದ್ಧೀಕರಣಗೊಳಿಸದೇ ಹಾಗೆಯೇ ಹೋಗಿಬಿಟ್ಟ. ಒಂದು ಬಟ್ಟಲಲ್ಲಿ ಜೈವಿಕ ವಸ್ತುವೊಂದನ್ನು ಹಾಗೆಯೇ ಬಿಟ್ಟುಹೋಗಿದ್ದ. ಮಾರನೇ ದಿನ ಬಂದು ನೋಡಿದಾಗ ಆ ಬಟ್ಟಲಿನ ಜೈವಿಕ ವಸ್ತುವಿನ ಮೇಲೆ ಹೊಸ ಫಂಗಸ್ ಮೇಲ್ಭಾಗದಲ್ಲಿ ಹರಡಿರುವುದನ್ನು ಗಮನಿಸಿದ. ಈ ಹೊಸ ಬ್ಯಾಕ್ಟೀರಿಯಾಗಳು ಬಟ್ಟಲಿನ ಜೈವಿಕ ವಸ್ತುವಿನ ಬೆಳವಣಿಗೆಯನ್ನು ನಿಯಂತ್ರಿಸಿದ್ದವು. ಆ ಹೊಸ ಫಂಗಸ್ಸೇ ಲಕ್ಷಾಂತರ ಜನರಿಗೆ ಜೀವದಾನ ನೀಡಿದ ಪೆನ್ಸಿಲಿನ್ ! (ಚಿತ್ರ ೨)

ಮಾವ್ (Mauve) - ವಿಶೇಷ ಕೃತಕ ಬಣ್ಣ : ೧೮ ವರ್ಷದ ತರುಣ ರಸಾಯನಶಾಸ್ತ್ರಜ್ಞ ವಿಲಿಯಂ ಸರ್ಕಿನ್, ಮಲೇರಿಯಾ ರೋಗದ ಔಷಧ ಕ್ವಿನೈನ್ (Quinine) ಅನ್ನು ಕೃತಕವಾಗಿ ತಯಾರಿಸುವ ಪ್ರಯೋಗಕ್ಕೆ ಕೈಹಾಕಿದ್ದ. ಈ ತಯಾರಿಕೆಯಲ್ಲಿ ಅದ್ಭುತವಾದ ಹೊಸಬಣ್ಣದ ಪುಡಿಯೊಂದು ಉತ್ಪನ್ನವಾಯಿತು. ಇದು ಜಗತ್ತಿನ ಮೊಟ್ಟಮೊದಲ ಕೃತಕ ಬಣ್ಣವಾಗಿತ್ತು. ಇದು ಅತ್ಯುತ್ತಮ ಅಳಿಸಲಾರದ ಬಣ್ಣವಾಗಿತ್ತು. ಮೊಟ್ಟಮೊದಲು ರಸಾಯನ ಶಾಸ್ತ್ರದಲ್ಲಿ ಹಣದ ಹೊಳೆ ಹರಿದಿದ್ದು ಈ ಕೃತಕ ಬಣ್ಣ ‘ಮಾವ್' ನಿಂದ. (ಚಿತ್ರ ೩)

ವಿಕಿರಣ ಪಟುತ್ವ (Radio Activity) : ೧೮೯೬ರಲ್ಲಿ ಹೆನ್ರಿ ಬೆಕ್ವಿರಲ್ ತಮಗೆ ತಾವೇ ಹೊಳೆಯುವ (Fluorescence) ವಸ್ತುಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದ. ಗೋಚರ ಬೆಳಕು ತಾಗದಂತೆ ಚೆನ್ನಾಗಿ ಸುತ್ತಿಟ್ಟಿದ್ದ ಛಾಯಾಚಿತ್ರ ಫಲಕವನ್ನು ಸ್ವಲ್ಪ ದೂರದಲ್ಲಿಟ್ಟಿದ್ದ. ಅದರ ಪಕ್ಕದಲ್ಲಿ ಯುರೇನಿಯಂ ಪುಡಿಯೊಂದಿಗೆ ಸಂಶೋಧನೆ ನಡೆಸುತ್ತಿದ್ದ. ಮಾರನೇ ದಿನ ಫಲಕವನ್ನು ಬಿಚ್ಚಿ ನೋಡಿದಾಗ ಅದು ಬೆಳ್ಳಗಾಗಿದ್ದು ಕಂಡುಬಂತು. ಅಂದರೆ ಯುರೇನಿಯಂ ವಸ್ತುವಿನಿಂದ ವಿಶೇಷ ಶಕ್ತಿಯ ಕಿರಣಗಳು ಹೊರಹೊಮ್ಮುತ್ತಿವೆ ಎಂದು ಕಂಡುಹಿಡಿದ. ಇದೇ ವಿಕಿರಣ ಪಟುತ್ವ. (ಚಿತ್ರ ೪)

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣಗಳು