ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೨)




ಸ್ಯಾಕರೀನ್ (Saccharine) : ಸ್ಯಾಕರೀನ್ ಒಂದು ಕೃತಕ ಸಿಹಿ. ೧೮೭೯ರಲ್ಲಿ ಫಾಲ್ ಬರ್ಗ್ ಕೋಲ್ ಟಾರ್ ನಿಂದ ಹೊಸ ಉತ್ಪನ್ನವೊಂದನ್ನು ಕಂಡುಹಿಡಿಯುತ್ತಿದ್ದ. ಈ ಪ್ರಯೋಗದ ನಂತರ ಕೈ ತೊಳೆಯದೇ ಹಾಗೆಯೇ ಮನೆಗೆ ಬಂದ. ಬಂದವನೇ ಬ್ರೆಡ್ ರೋಲ್ ಅನ್ನು ತಿನ್ನಲು ಪ್ರಾರಂಭಿಸಿದ. ಅದು ಏಕೋ ಸಿಹಿಯೆನಿಸಿತು. ಹೆಂಡತಿಯನ್ನು ಕೇಳಿದ. ಆಕೆ ಯಾವುದೇ ಸಿಹಿ ಸೇರಿಸಿಲ್ಲವೆಂದಳು. ಆಗ ಕೈಯಲ್ಲಿ ಮೆತ್ತಿದ್ದ ಹುಡಿಯನ್ನು ಗಮನಿಸಿದ. ಅದೇ ಸ್ಯಾಕರೀನ್ ಆಗಿತ್ತು ! (ಚಿತ್ರ ೧)
ಪ್ಲಾಸ್ಟಿಕ್ (Plastic) : ೧೯೦೭ಕ್ಕಿಂತಲೂ ಮುಂಚೆ ಅರಗನ್ನು ಅವಿದ್ಯುತ್ ವಾಹಕ ಪಟ್ಟಿ (Insulator Tape) ಆಗಿ ಬಳಸುತ್ತಿದ್ದರು. ಇದು ಅತ್ಯಂತ ದುಬಾರಿ ಹಾಗೂ ಇದನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದ್ದರಿಂದ ಈ ಅರಗಿಗೆ ಪರ್ಯಾಯವಾದ ಒಂದು ಅವಿದ್ಯುತ್ ವಾಹಕ ಪಟ್ಟಿಯನ್ನು ಕಂಡುಹಿಡಿಯಬೇಕಾಗಿತ್ತು. ಇದಕ್ಕಾಗಿ ಅನೇಕ ಪ್ರಯೋಗಗಳನ್ನು ನಡೆಸಿದ ಲಿಯೋ ಹೆನ್ರಿಕ್ ಬೇಕ್ ಲ್ಯಾಂಡ್ ಬೇಕ್ ಲೈಟ್ (Bakelite) ಪ್ಲಾಸ್ಟಿಕ್ ಅನ್ನು ಕಂಡು ಹಿಡಿದ. ಇದರಿಂದ ಪಟ್ಟಿಯನ್ನು ತಯಾರಿಸಲಾಯಿತಾದರೂ ಮುಂದೆ ಸಾವಿರಾರು ವಸ್ತುಗಳನ್ನು ತಯಾರಿಸಲಾಯ್ತು. (ಚಿತ್ರ ೨)
ಗಟ್ಟಿಯಾದ ರಬ್ಬರ್ (Vulcanized Rubber) : ಚಾರ್ಲ್ಸ್ ಗುಡ್ ಇಯರ್ ಗಟ್ಟಿಯಾದ ರಬ್ಬರಿನ ಸಂಶೋಧನೆಯಲ್ಲಿ ತೊಡಗಿದ್ದ. ಹಲವಾರು ಪ್ರಯೋಗಗಳನ್ನು ನಡೆಸಿ ಸೋತಿದ್ದ. ಹೀಗೆ ಒಮ್ಮೆ ಪ್ರಯೋಗದಲ್ಲಿ ತೊಡಗಿದ್ದಾಗ ಬಿಸಿಯಾದ ರಬ್ಬರ್ ದ್ರಾವಣದಲ್ಲಿ ಬಾಟಲಲ್ಲಿಟ್ಟಿದ್ದ ಗಂಧಕ (ಸಲ್ಫರ್) ಆಕಸ್ಮಿಕವಾಗಿ ಚೆಲ್ಲಿತು. ಈ ರಬ್ಬರ್ ದ್ರಾವಣ ತಣ್ಣಗಾದ ಮೇಲೆ ನೋಡುತ್ತಾನೆ, ಅದು ಗಟ್ಟಿಯಾದ ರಬ್ಬರ್ ಆಗಿ ಮಾರ್ಪಾಡುಗೊಂಡಿತ್ತು. ಇಂದು ಈ ರಬ್ಬರ್ ಟೈರ್ ಗಳು ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿವೆ. (ಚಿತ್ರ ೩)
ಟೆಫ್ಲಾನ್ (Teflon) : ಇಂದು ಅಂಟಿಕೊಳ್ಳದ ತವಾಗಳು ಹಾಗೂ ಪಾತ್ರೆಗಳು ಯಾರಿಗೆ ಗೊತ್ತಿಲ್ಲ? ತರುಣ ವಿಜ್ಞಾನಿ ರಾಯ್ ಪ್ಲಾಂಟೆಕ್ ಹೊಸ ಸಿ ಎಫ್ ಸಿ - ಕ್ಲೋರೋ ಫ್ಲೋರೋ ಕಾರ್ಬನ್ ಗಳ ಸಂಶೋಧನೆಯಲ್ಲಿ ತೊಡಗಿದ್ದ. ಇದಕ್ಕಾಗಿ ಸಂಬಂಧಿಸಿದ ಅನಿಲವನ್ನು ಒತ್ತಡದಲ್ಲಿ ತಂಪು ಮಾಡಿ ಮುಚ್ಚಿಟ್ಟಿದ್ದ. ನಂತರ ಇದನ್ನು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಬೆರೆಸಿ ಕಾದು ನೋಡಿದ. ಏನೂ ಬದಲಾವಣೆ ಕಾಣಲಿಲ್ಲ. ತಕ್ಷಣವೇ ಬೆಸರದಿಂದ ಅತ್ತ ಎಸೆದ. ನಂತರ ಎಸೆದ ಆ ಪೊಟ್ಟಣದಲ್ಲಿ ಬಿಳಿಯ ಹುಡಿ ಕಂಡು ಬಂತು. ಇದು ಅತ್ಯಂತ ನುಣುಪಾದ ಟೆಫ್ಲಾನ್ ಹುಡಿಯೇ ಆಗಿತ್ತು.
ಕೋಕ್ (Coke) : ಬೇಸಿಗೆಯ ಕಾಲದಲ್ಲಿ ಯುವ ಜನಾಂಗಕ್ಕೆ ‘ಕೊಕಾ ಕೋಲಾ’ ಕುಡಿಯುವ ತವಕ. ಅಟ್ಲಾಂಟಾದ ಔಷಧ ತಯಾರಕ ಜಾನ್ ಪಂಬರ್ ಟನ್ ತಲೆನೋವಿಗಾಗಿ ಔಷಧಿಯನ್ನು ಕಂಡುಹಿಡಿಯುತ್ತಿದ್ದ. ಇದಕ್ಕಾಗಿ ಅನೇಕ ಮಿಶ್ರಣಗಳನ್ನು ಸಿದ್ಧಪಡಿಸಿ ಸೇರಿಸಿದ. ಅದು ತಲೆನೋವಿನ ಔಷಧವಾಗಲಿಲ್ಲ, ಬದಲಿಗೆ ಜನಪ್ರಿಯ ಪಾನೀಯ ಕೊಕಾಕೋಲಾ ಆಯ್ತು. ಇಂದಿಗೂ ಇದರ ತಯಾರಿಕೆ ರಹಸ್ಯ ಅತ್ಯಂತ ಗುಟ್ಟಾಗಿದೆ ! (ಚಿತ್ರ ೪)
ಸ್ಮಾರ್ಟ್ ಡಸ್ಟ್ (Smart Dust) : ಇಂದು ಈ ಸ್ಮಾರ್ಟ್ ಡಸ್ಟ್ ಅನ್ನು ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಹಾಗೂ ನಾಶಪಡಿಸಲು ಬಳಸುತ್ತಿದ್ದಾರೆ. ಜೆಮಿಲಿಂಕ್ ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿನಿ. ಅವಳು ಪ್ರಯೋಗವೊಂದನ್ನು ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಸಿಲಿಕಾನ್ ಚಿಪ್ ಒಂದು ಸಿಡಿಯಿತು. ಇದರ ಚೂರುಗಳೇ ಸ್ಮಾರ್ಟ್ ಡಸ್ಟ್ ಕಣಗಳು. ಇವು ಕ್ಯಾನ್ಸರ್ ನ ಪರಮ ಶತ್ರು !
(ಮುಗಿಯಿತು)
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣಗಳು